ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs PAK: ʻಬಾಬರ್‌ ಆಝಮ್‌ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿ!

Shoaib Akhtar Slams Babar Azam: ಭಾರತದ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಮಾಜಿ ನಾಯಕ ಬಾಬರ್‌ ಆಝಮ್‌ ವಿರುದ್ಧ ಪಾಕಿಸ್ತಾನ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಕಿಡಿಕಾರಿದ್ದಾರೆ. ಬಾಬರ್‌ ಆಝಮ್‌ ಒಬ್ಬ ಮೋಸಗಾರ. ವಿರಾಟ್‌ ಕೊಹ್ಲಿ ಜೊತೆ ಹೋಲಿಕೆ ಮಾಡಬಾರದು ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಆಗ್ರಹಿಸಿದ್ದಾರೆ.

ವಿರಾಟ್‌ ಕೊಹ್ಲಿಗೆ ಬಾಬರ್‌ ಆಝಮ್‌ ಹೋಲಿಕೆ ಇಲ್ಲವೇ ಇಲ್ಲ: ಅಖ್ತರ್‌!

ಬಾಬರ್‌ ಆಝಮ್‌ರನ್ನು ಟೀಕಿಸಿದ ಶೋಯೆಬ್‌ ಅಖ್ತರ್‌.

Profile Ramesh Kote Feb 24, 2025 7:03 PM

ನವದೆಹಲಿ: ಭಾರತದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ ವಿರುದ್ಧ ಪಾಕ್‌ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ 26 ಎಸೆತಗಳನ್ನು ಆಡಿದ್ದ ಆಝಮ್‌, 23 ರನ್‌ಗಳನ್ನು ಗಳಿಸಿ ಹಾರ್ದಿಕ್‌ ಪಾಂಡ್ಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಸೋಲಿನೊಂದಿಗೆ ಆತಿಥೇಯ ತಂಡ, ಟೂರ್ನಿಯಿಂದ ಬಹುತೇಕ ಹೊರ ಬಿದ್ದಿದೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಶೋಯೆಬ್‌ ಅಖ್ತರ್‌, "ನಾವು ಯಾವಾಗಲೂ ವಿರಾಟ್‌ ಕೊಹ್ಲಿಗೆ ಬಾಬರ್‌ ಆಝಮ್‌ ಅವರನ್ನು ಹೋಲಿಕೆ ಮಾಡುತ್ತೇವೆ. ವಿರಾಟ್‌ ಕೊಹ್ಲಿಯ ಹೀರೋ ಎಲ್ಲಿ ಎಂದು ಈಗ ನೀವು ಹೇಳಿ?ಸಚಿನಹ್‌ ತೆಂಡೂಲ್ಕರ್‌ 100 ಶತಕಗಳನ್ನು ಸಿಡಿಸಿದ್ದಾರೆ ಹಾಗೂ ವಿರಾಟ್‌ ಕೊಹ್ಲಿ ಚೇಸ್‌ ಮಾಸ್ಟರ್‌ ಆಗಿದ್ದಾರೆ. ಆದರೆರ, ಬಾಬರ್‌ ಆಝಮ್‌ ಏನು?" ಎಂದು ಪ್ರಶ್ನೆ ಮಾಡಿದ್ದಾರೆ.

IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

"ನೀವು ತಪ್ಪಾದ ಹೀರೋಗಳನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಯೋಚನೆಯ ಪ್ರಕ್ರಿಯೆ ತಪ್ಪಾಗಿದೆ. ನೀವು ಆರಂಭದಿಂದಲೇ ಮೋಸಗಾರರಾಗಿದ್ದೀರಿ. ಪಾಕಿಸ್ತಾನ ಕ್ರಿಕೆಟ್‌ ತಂಡದ ಬಗ್ಗೆ ಮಾತನಾಡಲು ಕೂಡ ನನಗೆ ಇಷ್ಟವಿಲ್ಲ. ನಾನು ಈ ಕೆಲಸವನ್ನು ಮಾಡುತ್ತಿರುವುದು ಕೇವಲ ಹಣಕ್ಕಾಗಿ ಮಾತ್ರ," ಎಂದು ಮಾಜಿ ವೇಗಿ ತಿಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಒಡಿಐ ವೃತ್ತಿ ಜೀವನದ 51ನೇ ಶತಕ ಸಿಡಿಸಿದ ವಿರಾಟ್‌ ಕೊಹ್ಲಿಯನ್ನು ಶೋಯೆಬ್‌ ಅಖ್ತರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆ ಮೂಲಕ ಭಾರತ ತಂಡದ ಆರು ವಿಕೆಟ್‌ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



"ವಿರಾಟ್‌ ಕೊಹ್ಲಿಯ ಈ ಆಟವನ್ನು ನಾವು ಈ ಹಿಂದೆ ನೋಡಿದ್ದೇವೆ. ಪಾಕಿಸ್ತಾನ ವಿರುದ್ಧ ಆಡಿದರೆ, ವಿರಾಟ್‌ ಕೊಹ್ಲಿ ಶತಕ ಸಿಡಿಸಲಿದ್ದಾರೆಂದು ನೀವು ನೇರವಾಗಿ ಹೇಳಬಹುದು. ಅವರಿಗೆ ಹ್ಯಾಟ್ಸಾಪ್‌, ಅವರು ಸೂಪರ್‌ ಸ್ಟಾರ್‌! ಅವರು ವೈಟ್‌ಬಾಲ್‌ ರನ್‌ ಚೇಸರ್‌! ಆಧುನಿಕ ಕ್ರಿಕೆಟ್‌ನ ದಿಗ್ಗಜ! ಇದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಈ ಎಲ್ಲಾ ಶ್ಲಾಘನೆಗೆ ಅರ್ಹರಾಗಿದ್ದಾರೆ," ಎಂದು ಶೋಯೆಬ್‌ ಅಖ್ತರ್‌ ಹೊಗಳಿದ್ದಾರೆ.

ತಮ್ಮದೇ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ನಾಕ್‌ಔಟ್‌ ರೇಸ್‌ನಿಂದ ಬಹುತೇಕ ಹೊರ ಬಿದ್ದಿದೆ. ಸೋಮವಾರ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಸೋತರೆ, ಪಾಕ್‌ ಅಧಿಕೃತವಾಗಿ ಟೂರ್ನಿಯಿಂದ ಹೊರ ಬೀಳಲಿದೆ.

IND vs PAK: ಐಸಿಸಿ ಟೂರ್ನಿಯಲ್ಲಿ ದಾಖಲೆ ಬರೆದ ಬಾಬರ್‌ ಅಜಂ

ಪಾಕ್‌ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಬುದ್ದಿ ಇಲ್ಲ: ಅಖ್ತರ್‌

ಭಾರತದ ವಿರುದ್ಧ ಪಾಕಿಸ್ತಾನ ಆಡಿಸಿದ್ದ ಪ್ಲೇಯಿಂಗ್‌ XI ಬಗ್ಗೆ ಶೋಯೆಬ್‌ ಅಖ್ತರ್‌ ಟೀಕಿಸಿದ್ದಾರೆ ಹಾಗೂ ಪಾಕ್‌ ಟೀಮ್‌ಮ್ಯಾನೇಜ್‌ಮೆಂಟ್‌ಗೆ ಬುದ್ದಿ ಇಲ್ಲವೆಂದು ದೂರಿದಿದ್ದಾರೆ.

"ಟೀಮ್‌ ಇಂಡಿಯಾ ಎದುರು ಪಾಕಿಸ್ತಾನದ ಸೋಲಿನಿಂದ ನನಗೆ ಯಾವುದೇ ಬಗೆಯ ನಿರಾಶೆಯಾಗಿಲ್ಲ, ಏಕೆಂದರೆ ಇದರ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಪಾಕಿಸ್ತಾನ ಹೆಚ್ಚಿನ ಆಲ್‌ರೌಂಡರ್‌ಗಳನ್ನು ಆಡಿಸುವ ಮೂಲಕ ಪೂರ್ಣ ಪ್ರಮಾಣದ ಬೌಲರ್‌ಗಳನ್ನು ಆಡಿಸುತ್ತಿಲ್ಲ. ಇವರು ಯಾವುದನ್ನು ಯೋಚಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ತಂಡದಲ್ಲಿ ಯಾವ ಆಟಗಾರರನ್ನು ಆಡಿಸಬೇಕು ಮತ್ತು ಯಾರನ್ನು ಆಡಿಸಬಾರದೆಂದು ಅವರಿಗೆ ತಿಳಿದಿಲ್ಲ. ಅಂದ ಹಾಗೆ ಪಾಕಿಸ್ತಾನ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಬುದ್ದಿ ಇಲ್ಲ," ಎಂದು ಶೋಯೆಬ್‌ ಅಖ್ತರ್‌ ಕಿಡಿಕಾರಿದ್ದಾರೆ.