U19 Women's T20 World Cup: ತ್ರಿಷಾ ಅಮೋಘ ಶತಕ; ಭಾರತಕ್ಕೆ 150 ರನ್ ಗೆಲುವು
ತ್ರಿಷಾ ಚೊಚ್ಚಲ ಶತಕ ಬಾರಿಸುವ ಮೂಲಕ ಮಹಿಳಾ ಅಂಡರ್-19 ವಿಶ್ವಕಪ್(U19 Women's T20 World Cup) ಇತಿಹಾಸದಲ್ಲೇ ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು.
ಕ್ವಾಲಾಲಂಪುರ: ಐಸಿಸಿ ಅಂಡರ್-19 ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ತ್ರಿಷಾ ಗೊಂಗಡಿ ಐತಿಹಾಸಿಕ ಶತಕದ ಸಾಧನೆ ಮಾಡಿದ್ದಾರೆ. ಇವರ ಈ ಶತಕ ಸಾಧನೆಯಿಂದ ಭಾರತ ತಂಡ ಸ್ಕಾಟ್ಲೆಂಡ್ ವಿರುದ್ಧ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭರ್ಜರಿ 150 ರನ್ ಅಂತರದ ಗೆಲುವು ಸಾಧಿಸಿದೆ.
ಮಂಗಳವಾರ ನಡೆದ ಒಂದನೇ ಗುಂಪಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭಿಕರಾದ ತ್ರಿಷಾ ಗೊಂಗಡಿ ಮತ್ತು ಜಿ. ಕಮಲಿನಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ ಒಂದು ವಿಕೆಟ್‌ಗೆ 208 ರನ್ ಬಾರಿಸಿತು. ಜವಾಬಿತ್ತ ಸ್ಕಾಟ್ಲೆಂಡ್ 58ರನ್‌ಗೆ ಸರ್ವಪತನ ಕಂಡಿತು. ಭಾರತ ಲೀಗ್ ಸೇರಿ ಸೂಪರ್ ಸಿಕ್ಸ್‌ನಲ್ಲಿ ಆಡಿದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.
ತ್ರಿಷಾ ಶತಕ ದಾಖಲೆ
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ತ್ರಿಷಾ ಹಾಗೂ ಕಮಲಿನಿ ಎದುರಾಳಿ ತಂಡದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಉಭಯ ಆಟಗಾತ್ರಿಯರು 13.3 ಓವರ್ ತನಕ ಬ್ಯಾಟಿಂಗ್ ನಡೆಸಿ ಮೊದಲ ವಿಕೆಟ್‌ಗೆ 147 ರನ್ ರಾಶಿ ಹಾಕಿದರು. ತ್ರಿಷಾ 59 ಎಸೆತಗಳಲ್ಲಿ 13 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ಅಜೇಯ 110 ರನ್ ಗಳಿಸಿದರೆ, ಇವರ ಜತೆಗಾರ್ತಿ ಕಮಲಿನಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 51 ರನ್ ಬಾರಿಸಿದರು. ಸಾನಿಕಾ ಚಲ್ಕೆ 29 ರನ್ ಬಾರಿಸಿ ಅಜೇಯರಾಗಿ ಉಳಿದರು.
An Impressive 💯
— BCCI Women (@BCCIWomen) January 28, 2025
Trisha G is making a name for herself 👏
Updates ▶️ https://t.co/feBJlxclkZ#TeamIndia | #INDvSCO | #U19WorldCup pic.twitter.com/9Rldc8kB6e
ತ್ರಿಷಾ ಚೊಚ್ಚಲ ಶತಕ ಬಾರಿಸುವ ಮೂಲಕ ಮಹಿಳಾ ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ತ್ರಿಷಾ 2 ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ವೆಚ್ಚದಲ್ಲಿ ಪ್ರಮುಖ ಮೂರು ವಿಕೆಟ್ ಕಿತ್ತರು. ಇವರ ಈ ಆಲ್‌ರೌಂಡರ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
ಆಯುಷಿ ಶುಕ್ಲಾ 3 ಓವರ್ ಬೌಲಿಂಗ್ ನಡೆಸಿ ಕೇವಲ 8 ರನ್ ವೆಚ್ಚದಲ್ಲಿ 4 ವಿಕೆಟ್ ಉಡಾಯಿಸಿದರೆ, ವೈಷ್ಣವಿ ಶರ್ಮಾ 5 ಕ್ಕೆ 3 ವಿಕೆಟ್ ಪಡೆದರು. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ವಿಫಲವಾದ ಸ್ಕಾಟ್ಲೆಂಡ್ ಪರ ಆರಂಭಿಕರಿಬ್ಬರು ಗಳಿಸಿದ ತಲಾ 12 ರನ್ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವಾಯಿತು. ಮೂರು ಮಂದಿ ಶೂನ್ಯ ಸುತ್ತಿದರು.