ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

M J Akbar Column: ಇರಾನ್‌ʼನ ಅಲಿ ಖಮೇನಿ ಸಾವಿನ ನಂತರದ ಜಗತ್ತು

ಯುದ್ಧ ಆರಂಭಿಸುವ ನಿರ್ಧಾರದ ಹಿಂದೆ ಲಾಜಿಕ್ ಇರಬೇಕು, ಇಲ್ಲದಿದ್ದರೆ ಅದರಿಂದ ನಷ್ಟವೇ ಹೆಚ್ಚು ಎಂಬುದು ಅನುಭವಿ ಜನರಲ್‌ಗಳಿಗೆ ತಿಳಿದಿದೆಯಾದರೂ, ಸೋಲಿನ ಆತಂಕದಿಂದ ಭಯಗೊಂಡು ಯುದ್ಧ ಘೋಷಿಸುವ ಅಥವಾ ಅದ್ಭುತವಾದ ಜಯದ ಕನಸಿನೊಂದಿಗೆ ಯುದ್ಧ ಸಾರುವ ಆತುರಗೆಟ್ಟ ಬಲಿಷ್ಠ ನಾಯಕರು ಯಾವಾಗಲೂ ತರ್ಕಬದ್ಧವಾಗಿ ಯೋಚಿಸುತ್ತಾರೆ ಎಂದೇನೂ ಇಲ್ಲ.

ಇರಾನ್‌ʼನ ಅಲಿ ಖಮೇನಿ ಸಾವಿನ ನಂತರದ ಜಗತ್ತು

-

Ashok Nayak
Ashok Nayak Mar 14, 2026 11:35 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಮಹಾಯುದ್ಧಗಳು ನಿರಂತರವಾಗಿ ನಡೆಯುವುದರ ಬದಲು ಸುದೀರ್ಘ ಅವಧಿಯವರೆಗೆ ನಡೆಯುವುದೇ ಹೆಚ್ಚು. ಅವು ತಲೆಮಾರುಗಳನ್ನು ದಾಟಿ ಹೋಗುತ್ತವೆ. ಯುದ್ಧ ನಡೆಸು‌ ತ್ತಿರುವ ದೇಶಗಳಲ್ಲಿ ಸಂಪನ್ಮೂಲ ಸಂಪೂರ್ಣ ಖಾಲಿಯಾದಾಗ ಅಥವಾ ಯುದ್ಧ ನಡೆಸು ವವರೇ ಖಾಲಿಯಾದಾಗ ಅವು ನಿಲ್ಲುತ್ತವೆ.

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಈಗಿನ್ನೂ 55 ವರ್ಷಗಳಾಗಿವೆ. ಯುದ್ಧ ಆರಂಭವಾದಾಗ ಮುಂಚೂಣಿಯಲ್ಲಿ ಇದ್ದವರು ಸಯಿದ್ ಅಲಿ ಹುಸೇನಿ ಖಮೇನಿ. ಆಗಷ್ಟೇ 1979ರ ಇಸ್ಲಾಮಿಕ್ ಕ್ರಾಂತಿ ನಡೆದಿತ್ತು. ಮುಸ್ಲಿಂ ಜಗತ್ತಿನಲ್ಲಿ ಅಮೆರಿಕದ ಪ್ರಮುಖ ಮಿತ್ರ ನಾಗಿದ್ದ ಇರಾನ್‌ನ ರಾಜ ಮೊಹಮ್ಮದ್ ರೇಜಾ ಪಹ್ಲಾವಿಯನ್ನು ಆ ಕ್ರಾಂತಿಯಲ್ಲಿ ಅಧಿಕಾರದಿಂದ ಇಳಿಸಲಾಗಿತ್ತು.

ಈಗ ನಡೆಯುತ್ತಿರುವ ಸಂಘರ್ಷದ ಲಕ್ಷಣಗಳು ವಿಶಿಷ್ಟವಾಗಿವೆ. ಇರಾನ್ ಮತ್ತು ಅಮೆರಿಕ ಎರಡೂ ದೇಶಗಳನ್ನು ‘ಸುಪ್ರೀಂ ಲೀಡರ್ ಗಳು’ ಆಳುತ್ತಿದ್ದಾರೆ. ಆದರೆ ಇರಾನ್‌ನ ಮುಖ್ಯಸ್ಥ ನನ್ನು ಮಾತ್ರ ಆ ಹೆಸರಿನಿಂದ ಕರೆಯಲಾಗುತ್ತದೆ. ಅಯೊತೊಗಳು ಕಾಯ್ದೆಬದ್ಧವಾಗಿ ಆ ಹೆಸರಿನಿಂದ ಗುರುತಿಸಲ್ಪಟ್ಟರೆ, ಡೊನಾಲ್ಡ್ ಟ್ರಂಪ್ ತಮ್ಮನ್ನು ದೈವಪುತ್ರನೆಂಬಂತೆ ಬಿಂಬಿಸಿಕೊಂಡು ‘ಸುಪ್ರೀಂ’ ನಾಯಕತ್ವ ತನ್ನ ಹಕ್ಕು ಎಂಬಂತೆ ದರ್ಬಾರು ಮಾಡು ತ್ತಿದ್ದಾರೆ.

ನಿಮಗೆ ಇದರ‌ಲೇನಾದರೂ ಅನುಮಾನವಿದ್ದರೆ, ಯಾವುದೇ ನಿರ್ಧಾರವನ್ನು ಪ್ರಕಟಿಸು ವಾಗ ಟ್ರಂಪ್ ‘ನಾನು’ ಎನ್ನುತ್ತಾರೆಯೇ ಹೊರತು ‘ನಾವು’ ಎನ್ನುವುದಿಲ್ಲ ಎಂಬುದನ್ನು ಗಮನಿಸಿ. ಎರಡೂ ದೇಶಗಳಲ್ಲೂ ಆಡಳಿತದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳು ವಾಗ ಸಾಂಸ್ಥಿಕ ಮೂಗುದಾರಗಳು ಇವೆಯಾದರೂ ಸುಪ್ರೀಂ ನಾಯಕನ ವಿರುದ್ಧವಾಗಿ ಅವು ಕೆಲಸ ಮಾಡಲಾರವು.

ಇದನ್ನೂ ಓದಿ: MJ Akbar: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂಜೆ ಅಕ್ಬರ್‌ ನೂತನ ಕೃತಿ ಬಿಡುಗಡೆ

ಯುದ್ಧ ಆರಂಭಿಸುವ ನಿರ್ಧಾರದ ಹಿಂದೆ ಲಾಜಿಕ್ ಇರಬೇಕು, ಇಲ್ಲದಿದ್ದರೆ ಅದರಿಂದ ನಷ್ಟವೇ ಹೆಚ್ಚು ಎಂಬುದು ಅನುಭವಿ ಜನರಲ್‌ಗಳಿಗೆ ತಿಳಿದಿದೆಯಾದರೂ, ಸೋಲಿನ ಆತಂಕದಿಂದ ಭಯಗೊಂಡು ಯುದ್ಧ ಘೋಷಿಸುವ ಅಥವಾ ಅದ್ಭುತವಾದ ಜಯದ ಕನಸಿನೊಂದಿಗೆ ಯುದ್ಧ ಸಾರುವ ಆತುರಗೆಟ್ಟ ಬಲಿಷ್ಠ ನಾಯಕರು ಯಾವಾಗಲೂ ತರ್ಕಬದ್ಧವಾಗಿ ಯೋಚಿಸುತ್ತಾರೆ ಎಂದೇನೂ ಇಲ್ಲ.

ವೈಯಕ್ತಿಕ ಪ್ರತಿಷ್ಠೆಯೂ ಅಲ್ಲಿ ಕೆಲಸ ಮಾಡಬಹುದು. ಟ್ರಂಪ್ ಯಾವಾಗ ‘ಆಪರೇಷನ್ ಎಪಿಕ್ ಫ್ಯೂರಿ’ ಆರಂಭಿಸುತ್ತಾರೆಂಬುದು ಯಾರಿಗೂ ಗೊತ್ತಿರಲಿಲ್ಲ. ಹಾಗೆಯೇ, ಇರಾನ್‌ನ ‘ಆಪರೇಷನ್ ಟ್ರೂ ಪ್ರಾಮಿಸ್’ ಎಲ್ಲಿಯವರೆಗೆ ನಡೆಯುತ್ತದೆ ಎಂಬುದೂ ಯಾರಿಗೂ ಗೊತ್ತಿಲ್ಲ. ಭಾರಿ ಅನಾಹುತದ ಬಗ್ಗೆ ಪುಕ್ಕಟೆ ಭವಿಷ್ಯ ಹೇಳುವುದು ಸುಲಭ. ಆದರೆ, ಅವಶೇಷಗಳ ಅಡಿಯಿಂದ ಬದಲಾವಣೆಯೆಂಬುದು ಮತ್ತೆ ಎದ್ದು ಬರುತ್ತದೆಯೇ ಎಂಬು ದನ್ನು ದೇವರೇ ಹೇಳಬೇಕು.

ಎರಡು ವರ್ಷಗಳ ಭೀಕರ ದಾಳಿಗಳ ನಂತರವೂ ಗಾಜಾದಲ್ಲಿ ಹಮಾಸ್ ಅನ್ನು ನಿರ್ನಾಮ ಮಾಡಲು ಇಸ್ರೇಲ್‌ಗೆ ಸಾಧ್ಯವಾಗಲಿಲ್ಲ. ಆದರೆ ಫೆಬ್ರವರಿ 28ರ ಶನಿವಾರ ಬೆಳಗ್ಗೆ ತೆಹ್ರಾನ್‌ನ ಕಾಲಮಾನ 9 ಗಂಟೆಗೆ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲದ ಬಗ್ಗೆ ಯಾರೂ ಮೊದಲೇ ಊಹಿಸಿರಲಿಲ್ಲ.

ಕೆಲ ವಾಸ್ತವಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮನುಷ್ಯನ ಇತಿಹಾಸದ ಅತ್ಯಂತ ಶಕ್ತಿಶಾಲಿಯಾದ ಶಸ್ತ್ರಾಸ್ತ್ರಗಳನ್ನು ಅಮೆರಿಕ ಹೊಂದಿದೆ. ಸಾಮಾನ್ಯವಾಗಿ ಇಂಥ ಸಂಪನ್ಮೂಲಗಳೇ ಯುದ್ಧದಲ್ಲಿ ಮೇಲುಗೈ ಸಾಧಿಸುತ್ತವೆ. ಆದರೆ ಇತಿಹಾಸದಲ್ಲಿ ಕೆಲ ಅಪವಾದಗಳೂ ಇವೆ.

ಇಸ್ರೇಲ್ ಬಳಿ ವರ್ತಮಾನದ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವಾಯುಪಡೆ ಮತ್ತು ಅತ್ಯುನ್ನತ ಗುಣಮಟ್ಟದ ರಕ್ಷಣಾ ಮೂಲಸೌಕರ್ಯವಿದೆ. ಹೀಗಾಗಿ ಈ ಎರಡೂ ದೇಶಗಳ ಮೈತ್ರಿ ಶಕ್ತಿಶಾಲಿಯಾಗಿದೆ.

ಇರಾನ್ ಬಳಿ ಭಾರಿ ತೂಕದ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಾಗಿ ಹಗುರ ತಂತ್ರಜ್ಞಾನದ‌ ಶಸ್ತ್ರಗಳು ಹೆಚ್ಚಿವೆ. ಹಗುರ ಶಸ್ತ್ರಾಸ್ತ್ರಗಳ ತಂತ್ರಜ್ಞಾನವನ್ನು ಇರಾನ್ ಕರಗತ ಮಾಡಿಕೊಂಡಿದೆ. ಉದಾಹರಣೆಗೆ ಕಮಿಕೇಜ್ ಶಾಹಿದ್ ಡ್ರೋನ್‌ಗಳು. ಅವುಗಳ ಬೆಲೆ 20000 ದಿಂದ 50000 ಡಾಲರ್ ಮಾತ್ರ.

ಆಕಾಶದ ಎಕೆ-47 ಎಂದೇ ಇವುಗಳನ್ನು ಕರೆಯುತ್ತಾರೆ. ಆದರೆ ಈ ಡ್ರೋನ್‌ಗಳನ್ನು ಹೊಡೆ ದುರುಳಿಸುವ ಅಮೆರಿಕದ ಪ್ರತಿ ಇಂಟರ್‌ಸೆಪ್ಟರ್‌ನ ಬೆಲೆ 1 ದಶಲಕ್ಷ ಡಾಲರ್. ಏಕೆಂದರೆ ಪಾಶ್ಚಾತ್ಯ ದೇಶಗಳ ಖಾಸಗಿ ರಕ್ಷಣಾ ಕ್ಷೇತ್ರದ ಉದ್ದಿಮೆಗಳಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ಷೇರು ಮಾರುಕಟ್ಟೆಯಲ್ಲಿನ ತಮ್ಮ ಷೇರುಗಳ ಬೆಲೆ ಮುಖ್ಯ. ಇರಾನ್‌ನ ಈ ತಾಂತ್ರಿಕ ತಾಕತ್ತನ್ನು ಅಮೆರಿಕವೇ ಮೆಚ್ಚಿಕೊಂಡಿದೆ.

ತನ್ನ ಡ್ರೋನ್‌ಗಳಿಗಾಗಿ ಸ್ವತಃ ಪೆಂಟಗಾನ್ ಇರಾನ್‌ನಿಂದ ಶಾಹಿದ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಈಗ ತಾನು ಸುದೀರ್ಘ ಯುದ್ಧಕ್ಕೆ ಸಿದ್ಧನಿರುವುದಾಗಿ ಹೇಳಿಕೊಂಡಿರುವ ಇರಾನ್‌ಗೆ ತನ್ನ ಸಶಸ್ತ್ರ ಪಡೆಗಳಿಗಿರುವ ಬದ್ಧತೆ ಮತ್ತು ಸ್ಪೂರ್ತಿಯ ಬಗ್ಗೆ ವಿಶ್ವಾಸವಿದೆ.

ಯುದ್ಧ ಆರಂಭವಾದ 48 ಗಂಟೆಗಳ ಇರಾನ್ ತಾನು ವೆನಿಜುವೆಲಾ ಅಲ್ಲ ಎಂಬುದನ್ನು ತೋರಿಸಿಕೊಟ್ಟಿತು. ಒಂದು ದೇಶದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಟ್ರಂಪ್ ಹಾಕಿಕೊಂಡ ಮಾದರಿಯೆಂದರೆ ವೆನಿಜುವೆಲಾ. ಆದರೆ ವೆನಿಜುವೆಲಾವನ್ನು ನಕಲಿ ಸಮಾಜವಾದಿಗಳು ಆಳುತ್ತಿದ್ದರು.

ಅದಕ್ಕೆ ವ್ಯತಿರಿಕ್ತವಾಗಿ, ಇರಾನನ್ನು ಆಳುತ್ತಿರುವವರು ನಕಲಿ ಶಿಯಾಗಳಲ್ಲ. ಶಿಯಾಗಳು ಸುದೀರ್ಘ ಸ್ಮರಣೆಯೊಂದರಿಂದ ಸೂರ್ತಿ ಪಡೆಯುತ್ತಾರೆ. ಪ್ರತಿ ವರ್ಷ ಮುಹರಂನ ಮೊದಲ ಹತ್ತು ದಿನಗಳ ಕಾಲ ಅವರು 680 ಸಿ.ಇ.ಯಲ್ಲಿ ತಮ್ಮ ಇಮಾಮ್, ಪ್ರವಾದಿ ಮೊಹಮ್ಮದರ ಮೊಮ್ಮಗ ಹುಸೇನ್ ಇಬ್ನ್ ಅಲಿ ಮತ್ತು ಡಮಾಸ್ಕಸ್‌ನಿಂದ ಆಡಳಿತ ನಡೆಸುತ್ತಿದ್ದ ಸುನ್ನಿ ಉಮಯ್ಯಾದ್ ಸಾಮ್ರಾಜ್ಯದ ಉತ್ತರಾಧಿಕಾರಿ ಯಜಿದ್ ನಡುವೆ ನಡೆದ ಕರ್ಬಾಲಾ ಯುದ್ಧದ ಫಲಿತಾಂಶದ ಕುರಿತು ಶೋಕಾಚರಣೆಮಾಡುತ್ತಾರೆ.

ಯುದ್ಧ ಆರಂಭವಾದ 48 ಗಂಟೆಗಳ ಅಮೆರಿಕ ತನ್ನ ಯುದ್ಧದ ಉದ್ದೇಶವನ್ನು ಒಂದಕ್ಕಿಂತ ಹೆಚ್ಚು ಬಾರಿ ಬದಲಾಯಿಸಿತ್ತು. ಶನಿವಾರ ಬೆಳಗ್ಗೆ 100ಕ್ಕೂ ಹೆಚ್ಚು ಯುದ್ಧ ವಿಮಾನಗಳು ಟೊಮಾಹಾಕ್ ಕ್ಷಿಪಣಿಗಳ ಬೆಂಬಲದೊಂದಿಗೆ ಸಾಗಿ ಇರಾನ್‌ನ ಪರಮೋಚ್ಚ ನಾಯಕ ಅಯೊತೊ ಸಯಿದ್ ಅಲಿ ಹುಸೇನಿ ಖಮೇನಿಯನ್ನೂ, ಅವರ ಪತ್ನಿ ಮತ್ತು ಹತ್ತಿರದ ಸಲಹೆಗಾರರನ್ನೂ ಕೊಂದು ಹಾಕಿದಾಗ ಶ್ವೇತಭವನದಲ್ಲಿ ವಿಜಯೋತ್ಸಾಹ ಮನೆ ಮಾಡಿತ್ತು.

ಕ್ಯಾರಕಾಸ್ ನಂತೆಯೇ ತೆಹ್ರಾನನ್ನೂ ಸುಲಭವಾಗಿ ಮುಗಿಸುತ್ತೇನೆಂಬ ಆತ್ಮವಿಶ್ವಾಸದಿಂದ ಟ್ರಂಪ್ ಇರಾನ್‌ನ ಸೇನೆಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಕ್ಷಮಾದಾನ ಪಡೆಯುವಂತೆ ಸೂಚನೆ ನೀಡಿದ್ದರು. ಇದಕ್ಕೆ ತಪ್ಪಿದರೆ ಹಿಂದೆಂದೂ ಕೇಳರಿಯದ ರೀತಿಯಲ್ಲಿ ದಾಳಿ ನಡೆಸಿ ಶಿಕ್ಷೆ ನೀಡುತ್ತೇನೆಂದೂ ಎಚ್ಚರಿಕೆ ನೀಡಿದ್ದರು. ಅದಕ್ಕೆ ಧ್ವನಿಗೂಡಿಸಿದ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಇಸ್ಲಾಮಿಕ್ ಆಡಳಿತವನ್ನು ಕೊನೆಗಾಣಿಸಲು ಸ್ವತಃ ಇರಾನಿ ಯನ್ನರೇ ಎದ್ದು ನಿಲ್ಲುವ ಸಮಯ ಬಂದಿದೆ’ ಎಂದು ಹೇಳಿದ್ದರು.

ಕೆಲಸ ಆಯಿತು. ಕೇವಲ ಖಮೇನಿಯ ಸಾವೇ ಅಮೆರಿಕಕ್ಕೆ ಸಾಕಾಗಿದ್ದಿದ್ದರೆ ಯುದ್ಧ ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುತ್ತಿತ್ತು. ಆದರೆ ಇರಾನ್‌ನ ಬೀದಿಗಳಲ್ಲಿ ಜನರು ಸೇರಿ ಆಡಳಿತದ ವಿರುದ್ಧ ದಂಗೆ ನಡೆಸಲಿಲ್ಲ. ಅದರ ಬದಲಿಗೆ ಅವರು ಅಯೊತೊ ನೇತೃತ್ವದ ಆಡಳಿತಕ್ಕೇ ಬೆಂಬಲ ಸೂಚಿಸಿದರು. ಇದು ವೈರುಧ್ಯವೆನಿಸಿದರೂ, ದಾಳಿಯ ನಂತರ ಬಹಳ ಬೇಗ ಇರಾನ್‌ನ ಆಡಳಿತ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಯಿತು.

ವಯಸ್ಸು, ಆರ್ಥಿಕ ವೈಫಲ್ಯ ಹಾಗೂ ಅತಿಯಾದ ಸಾಮಾಜಿಕ ಉತ್ಸಾಹದಿಂದ ಇರಾನ್‌ನ ಆಡಳಿತದ ಮೇಲೆ ತುಂಬಾ ಒತ್ತಡವಿತ್ತು. ಯುದ್ಧ ಆರಂಭವಾದ ಕೆಲವೇ ಸಮಯದಲ್ಲಿ ಅದು ನಿವಾರಣೆಯಾಯಿತು.

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಮತ್ತು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಕೋರ್‌ನ (ಐಆರ್‌ಜಿಸಿ) ಬದ್ಧತೆಯನ್ನು ಕೀಳಂದಾಜು ಮಾಡಿದ್ದವು ಎಂಬುದು ಬಹಳ ಬೇಗ ಎಲ್ಲರಿಗೂ ತಿಳಿಯಿತು. ಶನಿವಾರ ಮಧ್ಯಾಹ್ನದ ಹೊತ್ತಿಗೆ ಇರಾನ್ ಬಹಳ ಹಿಂದಿನಿಂದ ಎಚ್ಚರಿಸುತ್ತಾ ಬಂದಿದ್ದಂತೆ ಕ್ಷಿಪಣಿ‌ ಗಳನ್ನು ಬಳಸಿ ಮಧ್ಯಪ್ರಾಚ್ಯದಲ್ಲಿ ಬೆಂಕಿಯ ಮಳೆಗರೆಯಿತು.

ಕೊಲ್ಲಿ ರಾಷ್ಟಗಳಲ್ಲಿರುವ ಅಮೆರಿಕದ ಬಹುತೇಕ ಸೇನಾನೆಲೆಗಳು ಹೊತ್ತಿ ಉರಿದವು. ಅಲ್ಲಿನ ಪೆಟ್ರೋಲಿಯಂ ರಿಫೈನರಿಗಳಿಗೆ ಬೆಂಕಿ ಬಿತ್ತು. ಇಸ್ರೇಲ್‌ನ ನಗರಗಳು ದಾಳಿಗೆ ತುತ್ತಾದವು. ಇರಾನ್‌ನ ಡ್ರೋನ್ ದಾಳಿಯ ನಿಖರತೆಯನ್ನು ಕಂಡು ಸ್ವತಃ ಅಮೆರಿಕ ಮತ್ತು ಇಸ್ರೇಲ್ ಅಚ್ಚರಿಗೊಂಡವು.

ನೀವು ನಿಂತಿರುವ ನೆಲವೇ ಸಡಿಲಗೊಂಡಾಗ ಸಮತೋಲನ ಕಾಪಾಡಿಕೊಳ್ಳಲು ಭಂಗಿ ಬದಲಿಸಬೇಕಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಭೂಮಿ ಕಂಪಿಸಿದಾಗ ವಾಷಿಂಗ್ಟನ್‌ನಲ್ಲಿ ಜಿಗ್‌ ಜಾಗ್ ಶುರುವಾಯಿತು. ಮೊದಲು ಇರಾನ್‌ನ ಆಡಳಿತವನ್ನು ಬದಲಿಸುವುದೇ ನಮ್ಮ ಗುರಿ ಎಂದು ಹೇಳಿದ್ದ ಟ್ರಂಪ್ ಈಗ ‘ಆಡಳಿತದಲ್ಲಿ ಹೊಂದಾಣಿಕೆ’ ಮಾಡಿಕೊಳ್ಳಬೇಕು ಎಂದು ಅಪ್ಪಣೆ ಹೊರಡಿಸಿ ಕೊಂಚ ಸಡಿಲವಾದರು.

‘ಇರಾನ್‌ನ ಉತ್ತರಾಧಿಕಾರಿ ನಾನು ಹೇಳುವ ಮೂವರಲ್ಲಿ ಒಬ್ಬರಾಗಬೇಕು’ ಎಂದು ಷರತ್ತು ವಿಧಿಸಿ, ಆ ಮೂವರ ಹೆಸರನ್ನು ಹೇಳಲಿಲ್ಲ. ಐಆರ್‌ಜಿಸಿಯಿಂದ ನಾಮ ನಿರ್ದೇಶನ ಗೊಳ್ಳುವ ವ್ಯಕ್ತಿಯನ್ನು ಕೂಡ ಪರಿಗಣಿಸಲು ಅವರು ಸಿದ್ಧರಾಗಿದ್ದರು. ಭಾನುವಾರದ ಹೊತ್ತಿಗೆ ಟ್ರಂಪ್ ‘ಮಾತುಕತೆಗೆ ಮುಕ್ತನಿದ್ದೇನೆ’ ಎಂಬಲ್ಲಿಗೆ ಬಂದಿದ್ದರು.

ಆದರೂ ತಮ್ಮ ಎಂದಿನ ಶೈಲಿಯಲ್ಲಿ ಇರಾನ್ ವಿರುದ್ಧ ಬೆಂಕಿಯುಗುಳುತ್ತಾ, ‘ಅಮೆರಿಕ ನ್ನರು ಕಠಿಣ ಪರಿಸ್ಥಿತಿ ಎದುರಿಸಲು ಸಿದ್ಧರಿರಬೇಕು’ ಎಂದು ಹೇಳಿದರು. ‘ಯುದ್ಧ 30 ದಿನಗಳವರೆಗೆ ಮುಂದುವರಿಯಬಹುದು, ಏಕೆಂದರೆ ಇರಾನ್ ದೊಡ್ಡ ದೇಶ’ ಎಂದೂ ಹೇಳಿದರು. ‘ಎಪಿಕ್ ಫ್ಯೂರಿ’ (ರುದ್ರಕೋಪ) ಪ್ರದರ್ಶನಕ್ಕೂ ಮೊದಲೇ ಇರಾನ್ ದೊಡ್ಡ ದೇಶ ಎಂಬುದು ಪೆಂಟಗನ್‌ಗೆ ಗೊತ್ತಿರಬೇಕಿತ್ತು.

ಆದರೆ ತಾನು ಚೌಕಾಸಿಗೆ ಬಿಲ್‌ಕುಲ್ ಸಿದ್ಧನಿಲ್ಲ ಎಂಬ ಸಂದೇಶವನ್ನು ಇರಾನ್ ತೀಕ್ಷ್ಣ ವಾಗಿಯೇ ರವಾನಿಸಿತು. ‘ಅಮೆರಿಕ ಕೆಂಪು ಗೆರೆ ದಾಟಿದೆ. ತನ್ನ ಸಾವಿನ ವಾರಂಟ್ ತಾನೇ ಬರೆದುಕೊಂಡಿದೆ. ಅಮೆರಿಕ ತನ್ನ ಅಣ್ವಸ್ತಗಳನ್ನು ಪ್ರಯೋಗಿಸಿದರೂ ಇರಾನ್ ಜಗ್ಗುವು ದಿಲ್ಲ’ ಎಂದು ಅಯೊತೊಗಳು ಇರಾನ್‌ನ ಧರ್ಮಗುರುವಿನಿಂದ ಬಹಿರಂಗ ಹೇಳಿಕೆ ಕೊಡಿಸಿದರು. ಆದರೆ ಮಾತಿನ ಪರಿಣಾಮ ಸೀಮಿತ. ತಾನೇನು ಮಾಡಬಲ್ಲೆ ಎಂಬುದನ್ನು ಇರಾನ್ ಸೋಮವಾರದ ಹೊತ್ತಿಗೆ ಪ್ರತ್ಯಕ್ಷವಾಗಿಯೇ ತೋರಿಸಿತು.

ಕುವೈತ್‌ನ ಆಗಸದಿಂದ ಮೂರು ಅಮೆರಿಕನ್ ಯುದ್ಧ ವಿಮಾನಗಳು ತೊಪತೊಪನೆ ಪತನಗೊಂಡ ಬ್ರೇಕಿಂಗ್ ಸುದ್ದಿ ಬಂತು. ಅದರ ವಿಡಿಯೋ ವೈರಲ್ ಆಯಿತು. ಮುಸ್ಲಿಂ ಆಡಳಿತದ ಬಗ್ಗೆ ಯಾವ ಕರುಣೆಯನ್ನೂ ಹೊಂದಿಲ್ಲದ ಲಂಡನ್‌ನ ‘ಟೈಮ್ಸ್’ ಪತ್ರಿಕೆ ಸೋಮವಾರದ ತನ್ನ ಸಂಚಿಕೆಯಲ್ಲಿ ಪ್ರಕಟಿಸಿದ ‘ಇರಾನ್ ಸಂಘರ್ಷ‌ ತೀವ್ರ, ಕುವೈತ್‌ನಲ್ಲಿ ಅಮೆರಿಕದ ಯುದ್ಧವಿಮಾನಗಳ ಪತನ’, ‘ಹಲವು ಎಫ್-15 ವಿಮಾನಗಳು ಪತನಗೊಂಡಿ ರುವ ಶಂಕೆ,‌ ಸೈಪ್ರಸ್‌ನ ಆರ್‌ಎಎಫ್ ನೆಲೆಯ ಮೇಲೆ ಕಮಿಕೇಜ್ ಡ್ರೋನ್ ದಾಳಿ’‌ ಎಂಬ ಬ್ಯಾನರ್ ಹೆಡ್‌ಲೈನ್‌ಗಳು ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾದವು.

ಶಾಹಿದ್ ಡ್ರೋನ್ ಮತ್ತು ಕ್ಷಿಪಣಿಗಳು ಇಸ್ರೇಲ್ ನ ಟೆಲ್ ಅವಿವ್, ಹೈಫಾ ಮತ್ತು ಪೂರ್ವ ಜೆರುಸಲೆಂಗೂ ಹೋಗಿ ಅಪ್ಪಳಿಸಿದವು. ಯೆಮನ್, ಇರಾಕ್ ಮತ್ತು ಲೆಬನಾನ್ ನಡುವೆ ತಾನು ಸಾಕಿರುವ ಉಗ್ರರ ಮೂಲಕ ಇರಾನ್ ‘ರಿಂಗ್ ಆಫ್ ಫಾರ್’ ಹೊತ್ತಿಸಿತು.

ಸೌದಿಯ ಅರಾಮ್ಕೋ ರಿಫೈನರಿಯ ಕೆಲ ಭಾಗಗಳು ಹೊತ್ತಿ ಉರಿದವು. ಹೀಗಾಗಿ ಇನ್ನುಳಿದ ಎಲ್ಲಾ ರಿಫೈನರಿಗಳು ಬಂದ್ ಆದವು. ರಿಯಾಧ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ದೂತಾವಾಸಗಳು ಹಾಗೂ ದುಬೈನಲ್ಲಿನ ಕಾನ್ಸುಲೇಟ್ ಕಚೇರಿಗಳ ಮೇಲೆ ನೇರ ದಾಳಿಗಳು ನಡೆದವು.

ಬುಧವಾರ ಬೆಳಗ್ಗೆ ಕತಾರ್‌ನ ಅಲ್ ಉದೀದ್‌ನಲ್ಲಿರುವ ಅಮೆರಿಕದ ಬಹುಕೋಟಿ ಡಾಲರ್ ಮೌಲ್ಯದ ಅತ್ಯಾಧುನಿಕ ರಾಡಾರ್ ವ್ಯವಸ್ಥೆಯ ಮೇಲೆಯೇ ಇರಾನ್ ದಾಳಿ ನಡೆಸಿತು. ಅತ್ತ ಇಸ್ರೇಲ್ ನಲ್ಲಿ ಇನ್ನೊಂದು ಸುತ್ತಿನ ಕ್ಷಿಪಣಿ ದಾಳಿಯ ಸೈರನ್‌ಗಳು ಮೊಳಗಿದವು.

ಹೆಜ್ಬೊ ಖಂಡಾಂತರ ಕ್ಷಿಪಣಿಗಳು ಉತ್ತರ ಇಸ್ರೇಲ್ ಮೇಲೆ ಹಾಗೂ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಮುಖ್ಯ ಕಚೇರಿಯ ಮೇಲೆ ಹೋಗಿ ಬಿದ್ದವು. ಎಮಿರೇಟ್ಸ್ ಕರಾವಳಿಯಲ್ಲಿ ಒಂದು ಟ್ಯಾಂಕರ್ ನಿಷ್ಕಿಯಗೊಂಡಿತು. ತನ್ನ ಶತ್ರುವಿಗೆ ಗಣನೀಯವಾದ ಸಾಮರ್ಥ್ಯವಿದೆ ಎಂದು ಇಸ್ರೇಲ್ ಒಪ್ಪಿಕೊಂಡಿತು. ಆವರೆಗೆ ನಾವು ಇಸ್ರೇಲ್ ಮಿಲಿಟರಿಯ ಅಟಾಟೋ ಪವನ್ನಷ್ಟೇ ಕೇಳಿದ್ದೆವು. ಆದರೆ ಈ ಯುದ್ಧಕ್ಕೆ ಎರಡು ಬದಿಗಳಿದ್ದವು.

ಯುದ್ಧದಲ್ಲಿ ವದಂತಿಗಳು ಸಾಮಾನ್ಯ. ಆದರೆ ನೆತನ್ಯಾಹು ಅವರ ಕಚೇರಿಯ ಮೇಲೆ ನಡೆದ ದಾಳಿ ಕೇವಲ ವದಂತಿ ಎಂದು ಇಸ್ರೇಲ್ ಹೇಳಿಕೊಂಡರೂ ಅದು ವದಂತಿಯಾಗಿರಲಿಲ್ಲ. ಅದಕ್ಕೆ ಸಾಕ್ಷ್ಯವಿತ್ತು. ಯಾವತ್ತೂ ಸತ್ಯವು ಯುದ್ಧದಲ್ಲಿ ಮೊದಲು ಬಲಿಯಾಗುತ್ತದೆ.

ಹೀಗಾಗಿ ಎಲ್ಲಾ ಹೇಳಿಕೆಗಳೂ ಜರ್ಮನಿಯ ನಾಯಕ ಬಿಸ್ಮಾರ್ಕ್ ಹೇಳಿದ ಟೆಸ್ಟ್‌ಗೆ ಒಳಗಾಗ ಬೇಕು. ‘ರಾಜಕೀಯದಲ್ಲಿ ಯಾವುದನ್ನೂ ಥಟ್ಟನೆ ನಂಬಬಾರದು. ಅಧಿಕೃತವಾಗಿ ನಿರಾಕರಿಸಿದ ಮೇಲಷ್ಟೇ ನಂಬಬೇಕು’ ಎಂಬ ಬಿಸ್ಮಾರ್ಕ್ ಹೇಳಿಕೆ ಬಹಳ ಪ್ರಸಿದ್ಧ. ನೆತನ್ಯಾಹು ಕಚೇರಿಯ ಮೇಲೆ ನಡೆದ ದಾಳಿಯನ್ನು ಇಸ್ರೇಲ್ ನಿರಾಕರಿಸಿತು. ಆದರೆ ಮೊಬೈಲ್ ಕ್ಯಾಮೆರಾಗಳು ಅದನ್ನು ಸೆರೆ ಹಿಡಿದಿದ್ದವು.

ನಂತರ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಬಹುತೇಕ ನಿಂತು ಹೋಯಿತು. ಸಿಕ್ಕಿಬಿದ್ದಿರುವ ಟ್ಯಾಂಕರ್‌ಗಳಿಗೆ ಅಮೆರಿಕದ ನೌಕಾಪಡೆಯ ಹಡಗುಗಳು ಭದ್ರತೆ ನೀಡಿ ಜಲಸಂಧಿಯನ್ನು ದಾಟಿಸುತ್ತವೆ ಎಂದು ಟ್ರಂಪ್ ಭರವಸೆ ನೀಡಿದ ಬೆನ್ನ ಬುಧವಾರ ಬೆಳಗ್ಗೆ ಐಆರ್‌ಜಿಸಿಯವರು ಸಂಪೂರ್ಣ ಜಲಮಾರ್ಗದ ಮೇಲೆ ತಾವು ಹಿಡಿತ ಸಾಧಿಸಿದ್ದೇವೆ ಎಂದು ಘೋಷಣೆ ಮಾಡಿದರು.

2025ರಲ್ಲಿ ಸುಮಾರು 3000 ಹಡಗುಗಳು 20 ಮಿಲಿಯನ್ ಬ್ಯಾರಲ್‌ನಷ್ಟು ತೈಲ ಮತ್ತು ಅನಿಲವನ್ನು ಇರಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಹಾಗೂ ಯುಎಇಯಿಂದ ಇದೇ ಮಾರ್ಗದ ಮೂಲಕ ಜಗತ್ತಿಗೆ ಸಾಗಿಸಿದ್ದವು. ಅದರ ಮೌಲ್ಯ 600 ಬಿಲಿಯನ್ ಡಾಲರ್. ಇದು ಜಗತ್ತಿನ ಅತ್ಯಂತ ಬ್ಯುಸಿ ಜಲಸಂಧಿ. ಕೇವಲ 33 ಕಿ.ಮೀ. ಅಗಲವಿದೆ. ಭಾರತ, ಚೀನಾ, ಜಪಾನ್ ಮತ್ತು ಇನ್ನಿತರ ದೇಶಗಳಿಗೆ ಹೊರ್ಮುಜ್ ಸಂಧಿಯ ಮೂಲಕವೇ ತೈಲದ ಹಡಗು ಗಳು ಬರಬೇಕು.

ಹೀಗಾಗಿ ಇರಾನ್‌ನ ಮನವೊಲಿಸಲು ಅಮೆರಿಕಕ್ಕಿಂತ ಹೆಚ್ಚಾಗಿ ಚೀನಾ ಯತ್ನಿಸಬಹುದು. ಈಗಾಗಲೇ ಅದು ತೈಲದ ಹರಿವು ನಿಲ್ಲಿಸಬೇಡಿ ಎಂದು ಇರಾನ್‌ಗೆ ಹೇಳಿದೆ. ತೈಲದ ಹಡಗು ಗಳು ಬಾರದಿದ್ದರೆ ದೊಡ್ಡ ಸಮಸ್ಯೆಯಾಗುವುದು ಚೀನಾಕ್ಕೆ. ಅತಿ ಹೆಚ್ಚು ತೈಲದ ಮೇಲೆ ಅವಲಂಬಿತವಾಗಿರುವ ದೇಶವದು. ಇರಾನ್ ನಡೆಸಿದ ಪ್ರತಿದಾಳಿಯಿಂದ ಅಮೆರಿಕ ಮತ್ತು ಇಸ್ರೇಲ್ ಗೆ ದೊಡ್ಡ ನಷ್ಟವಾಗಿದೆ ಎಂಬುದಕ್ಕೆ ಅವು ಇರಾನ್ ಮೇಲೆ ನಡೆಸಿದ ತೀಕ್ಷ್ಣ ದಾಳಿಯೇ ಸಾಕ್ಷಿ.

ಇಸಹಾನ್ ಮತ್ತು ಇನ್ನಿತರ ಕಡೆ ಇರುವ ಕ್ಷಿಪಣಿ ಸಂಗ್ರಹಾಗಾರಗಳ ಮೇಲೇ ಇಸ್ರೇಲ್ ದಾಳಿ ನಡೆಸಿದೆ. ನತಾಂಜ್‌ನಲ್ಲಿರುವ ಇರಾನ್‌ನ ಅಣ್ವಸ್ತ್ರ ಘಟಕಕ್ಕೂ ಹಾನಿಯಾಗಿದೆ. ಸೇಡಿನ ಫೋಕಸ್ ಬದಲಾಗಿದೆ.

‘ರುದ್ರಕೋಪ’ (ಎಪಿಕ್ ಫ್ಯೂರಿ) ಆರಂಭವಾದ ನಂತರ ಸರಿಯಾಗಿ 57 ತಾಸಿಗೆ ಅಮೆರಿಕದ ಯುದ್ಧ ಸಚಿವ ಪೆಟೆ ಹೆಗ್ಸೆತ್ ಪತ್ರಿಕಾಗೋಷ್ಠಿ ನಡೆಸಿ, ‘ಯುದ್ಧದ ಉದ್ದೇಶ ಇರಾನ್‌ನ ಅಣ್ವಸ್ತ್ರ ಘಟಕ ಮತ್ತು ಅಣ್ವಸ್ತ್ರ ಕ್ಷಿಪಣಿಗಳನ್ನು ನಾಶಪಡಿಸುವುದೇ ಹೊರತು ಅಲ್ಲಿನ ಆಡಳಿತವನ್ನು ಬದಲಾಯಿಸುವುದಲ್ಲ’ ಎಂದು ಹೇಳಿದರು. ಅದರ ಬೆನ್ನ ಅವರು ಇನ್ನೊಂದು ಆತಂಕವನ್ನು ಎದುರಿಸಬೇಕಿತ್ತು.

ಸಾಮಾನ್ಯವಾಗಿ ಯುದ್ಧದ ವೇಳೆ ಅಮೆರಿಕನ್ನರಿಂದ ಸರಕಾರಕ್ಕೆ ಯಾವ ರೀತಿಯ ಬೆಂಬಲ ವ್ಯಕ್ತವಾಗುತ್ತಿತ್ತೋ ಆ ಬೆಂಬಲ ಈ ಬಾರಿ ಕಾಣಿಸಲಿಲ್ಲ. ಎಪಿಕ್ ಫ್ಯೂರಿಯ ಬಳಿಕ ರಾಯಿ ಟರ್ಸ್ ಸುದ್ದಿಸಂಸ್ಥೆ ನಡೆಸಿದ ಮೊದಲ ಜನಮತ ಸಂಗ್ರಹ ವಾಷಿಂಗ್ಟನ್‌ನ ಯುದ್ಧೋತ್ಸಾಹಿಗಳಿಗೆ ತಣ್ಣೀರು ಎರಚುವಂತಿತ್ತು.

ಕೇವಲ ಶೇ.27ರಷ್ಟು ಅಮೆರಿಕನ್ನರು ಯುದ್ಧವನ್ನು ಬೆಂಬಲಿಸಿದ್ದರು. ಶೇ.43ರಷ್ಟು ಜನರು ವಿರೋಧಿಸಿದ್ದರು. ಶೇ.56ರಷ್ಟು ಜನರು ‘ಟ್ರಂಪ್ ಮಿಲಿಟರಿ ಬಲ ಬಳಕೆ ಮಾಡಲು ಹಾತೊರೆಯುತ್ತಿದ್ದಾರೆ’ ಎಂದು ಹೇಳಿದ್ದರು. ಟ್ರಂಪ್‌ಗೆ ನಿಷ್ಠರಾಗಿರುವ ರಿಪಬ್ಲಿಕನ್ನರು ಕೂಡ ಯುದ್ಧದ ವಿಷಯದಲ್ಲಿ ಭಿನ್ನಾಭಿಪ್ರಾಯಹೊಂದಿದ್ದರು. ಅವರಲ್ಲಿ ಶೇ.42ರಷ್ಟು ಜನರು ಯುದ್ಧದಲ್ಲಿ ಅಮೆರಿಕದ ಸೈನಿಕರು ಮೃತಪಟ್ಟರೆ ಟ್ರಂಪ್‌ಗೆ ತಾವು ಬೆಂಬಲ ನೀಡುವುದು ಅನುಮಾನ ಎಂದು ಹೇಳಿದರು.

ಮೂರು ದಿನಗಳ ಬಳಿಕ ಇನ್ನೊಂದು ಜನಮತ ಸಂಗ್ರಹ ನಡೆಯಿತು. ಆಗಲೂ ಫಲಿತಾಂಶ ಹೆಚ್ಚೇನೂ ಬದಲಾಗಿರಲಿಲ್ಲ. ಶೇ.60ರಷ್ಟು ಜನರು ಯುದ್ಧವನ್ನು ವಿರೋಧಿಸಿದ್ದರು. ಉಪಾಧ್ಯಕ್ಷ ಜೆ.ಡಿ.ವಾ ಎರಡು ದಿನಗಳ ಕಾಲ ಮೌನ ವಹಿಸಿದ್ದರು. ಅವರು 2028ರಲ್ಲಿ ಅಧ್ಯಕ್ಷೀಯ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ.

ರಿಪಬ್ಲಿಕನ್ನರು ಟ್ರಂಪ್‌ಗೆ ಮತ ಹಾಕಿದ್ದು ಕಡಿಮೆ ಸಂಘರ್ಷ ಮತ್ತು ದರ ಇಳಿಕೆಗಾಗಿಯೇ ಹೊರತು ಯುದ್ಧ ಮಾಡುವುದಕ್ಕಲ್ಲ ಎಂಬುದು ಅವರಿಗೆ ಗೊತ್ತಿದೆ. ಹೆಗ್ಸೆತ್ ಮತ್ತು ಅವರ ಸಂಪುಟ ಸಹೋದ್ಯೋಗಿ ಮಾಕ್ರೋ ರೂಬಿಯೋ ಅಮೆರಿಕನ್ನರಿಗೆ, ‘ಇದೇನೂ ಅಂತ್ಯ ವಿಲ್ಲದ ಯುದ್ಧವಾಗುವುದಿಲ್ಲ ಅಥವಾ ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಆದಂತೆ ಬಹಳ ವರ್ಷಗಳವರೆಗೆ ನಡೆಯುವ ಯುದ್ಧವೂ ಆಗುವುದಿಲ್ಲ.

ಇರಾನಿನ ನೆಲದಲ್ಲಿ ಅಮೆರಿಕನ್ನರ ಬೂಟಿನ ಹೆಜ್ಜೆ ಕಾಣಿಸುವುದಿಲ್ಲ’ ಎಂದು ಭರವಸೆ ನೀಡಿದರು. ಏಕೆಂದರೆ ಅಮೆರಿಕನ್ನರಿಗೆ ತಮ್ಮ ಮಕ್ಕಳು ಯಾವುದೋ ದೇಶಕ್ಕೆ ಹೋಗಿ ತಮಗೆ ಸಂಬಂಧವಿಲ್ಲದ ವಿಚಾರಕ್ಕೆ ಸಾಯುವುದು ಇಷ್ಟವಿಲ್ಲ. ಇಸ್ರೇಲ್ ತನ್ನ ಬೂಟು ಗಳನ್ನು ಲೆಬನಾನ್‌ಗೆ ನುಗ್ಗಿಸಿತು; ಏಕೆಂದರೆ ಇರಾನ್ ತುಂಬಾ ದೂರದಲ್ಲಿತ್ತು. ಅದರಿಂದಾಗಿ ಐಆರ್‌ಜಿಸಿಗೆ ಯುದ್ಧದ ತಯಾರಿಯಿಂದ ಬಿಡುಗಡೆ ಲಭಿಸಿತು.

ಡೆಮಾಕ್ರೆಟ್‌ಗಳು ಟ್ರಂಪ್ ವಿರುದ್ಧ ತಿರುಗಿ ಬಿದ್ದರು. ಅದರಲ್ಲೂ, ಮಾರ್ಚ್ 2ರಂದು ಪೆಂಟಗನ್ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿ, ‘ಇರಾನ್ ಯಾವತ್ತೂ ಅಮೆರಿಕಕ್ಕೆ ನೇರವಾಗಿ ಅಪಾಯಕಾರಿ ಆಗಿರಲಿಲ್ಲ. ಅದರ ಭಯ ಇದ್ದುದು ಇಸ್ರೇಲ್‌ಗೆ ಮಾತ್ರ’ ಎಂದು ಹೇಳಿದ ಮೇಲಂತೂ ಯುದ್ಧಕ್ಕೆ ಅವರ ವಿರೋಧ ಜಾಸ್ತಿಯಾಯಿತು.

ಸೆನೆಟರ್ ಮಾರ್ಕ್ ವಾರ್ನರ್ ಈ ಬಗ್ಗೆ ಸಿಎನ್‌ಎನ್ ಜತೆ ಮಾತನಾಡಿ, ‘ಅಮೆರಿಕದ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಒಂದೇ ಒಂದು ಗುಪ್ತಚರ ವರದಿಯನ್ನೂ ನಾನು ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೆಲ್ಲ ನೋಡಿ ಟ್ರಂಪ್ ಚಡಪಡಿಸಿದ್ದಾರೆ. ‘ಟ್ರುತ್ ಸೋಷಿಯಲ್’ನಲ್ಲಿ ಅವರು ಮಾಡಿದ ಪೋಸ್ಟ್ ಇದಕ್ಕೆ ಸಾಕ್ಷಿ. ‘ಇವರ‍್ಯಾರಿಗೂ ತಲೆ ಸರಿಯಿಲ್ಲ. ಇವರು ಏನೇ ಬಾಯಿ ಬಡಿದುಕೊಂಡರೂ ಅಮೆರಿಕ ಈಗ ದೊಡ್ಡದಾಗಿದೆ, ಸುಧಾರಣೆಯಾಗಿದೆ, ಹಿಂದೆಂದಿಗಿಂತ ಶಕ್ತಿಶಾಲಿಯಾಗಿದೆ. ಮೇಕ್ ಅಮೆರಿಕ ಗ್ರೇಟ್ ಅಗೇನ್!’ ಎಂದು ಅವರು ಇಂಗ್ಲಿಷ್‌ನ ಕ್ಯಾಪಿಟಲ್ ಲೆಟರ್‌ಗಳಲ್ಲಿ ಪೋಸ್ಟ್ ಮಾಡಿದರು.‌

ಇನ್ನೊಂದೆಡೆ ಮಾರ್ಚ್ 2 ರಂದು ಅಮೆರಿಕದ ಜನರಲ್‌ಗಳಿಗೆ ‘ಎಚ್ಚರಿಕೆಯಿಂದಿರಿ. ಗದ್ದಲ‌ ಕ್ಕೆ ಕಿವಿಗೊಡಬೇಡಿ’ ಎಂದು ಹೇಳಿದ್ದರು. ಯಾವುದರ ಗದ್ದಲ? ಅವರೇ ಆರಂಭಿಸಿದ ಯುದ್ಧ ದಿಂದ ಕೇಳಿಸುವ ಗದ್ದಲವೇ? ಯುದ್ಧದ ಗುರಿಯ ಬಗ್ಗೆ ಸಂಬಂಧಪಟ್ಟವರಿಗೆ ಸ್ಪಷ್ಟತೆ ಯಿರಬೇಕು.

ಅದರಲ್ಲಿ ಪಾಲ್ಗೊಂಡವರ ನಿರೀಕ್ಷೆಗಳು ಅವರವರ ಸಾಮರ್ಥ್ಯಕ್ಕೆ ಹೊಂದುವಂತಿರಬೇಕು. ಇದು ಇರಾನ್‌ಗೂ ಅನ್ವಯಿಸುತ್ತದೆ. ನೋವು ಹಾಗೂ ಸಿಟ್ಟಿನಿಂದ ಕುದಿಯುತ್ತಿರುವ ಅಯೊತೊಗಳು ತಮ್ಮ ರೀಚ್ ಮತ್ತು ಓವರ್‌ರೀಚ್ ನಡುವಿನ ವ್ಯತ್ಯಾಸವನ್ನು ಅರಿಯ ಬಲ್ಲರೇ? ಅವರು ಕೊಲ್ಲಿ ದೇಶಗಳಿಗೆ ಹಿಂಸಾತ್ಮಕ ಸಂದೇಶವನ್ನು ಕಳುಹಿಸುವುದು ಅನಿವಾರ್ಯವೆಂದೇ ಭಾವಿಸಿದ್ದಿರಬಹುದು.

ಏಕೆಂದರೆ, ಮಾತುಕತೆ ಇನ್ನೇನು ಯಶಸ್ವಿಯಾಗಲಿದೆ ಎಂಬ ಹಂತದಲ್ಲಿ ಖಮೇನಿ ಮೇಲೆ ದಾಳಿ ನಡೆಸಬೇಕು ಎಂದು ಟ್ರಂಪ್‌ರ ಮನವೊಲಿಸಿದವರೇ ಸೌದಿಯವರು ಎಂದು ಒಮಾನ್‌ನ ಮಧ್ಯವರ್ತಿಗಳು ಹೇಳಿದ್ದಾರೆ. ಹೀಗಾಗಿ ಕೊಲ್ಲಿಯ ಮೇಲೆ ಸೇಡು ತೀರಿಸಿ ಕೊಳ್ಳಲು ಇರಾನ್ ಹೊರಟಿದ್ದರ ಹಿಂದೆ ಕಾರಣವಿದೆ. ಆದರೆ, ಅರಬ್ ಕೊಲ್ಲಿಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇದ್ದರೆ ಆಗ ಇರಾನ್ ಏಕಾಂಗಿಯಾಗ ಬೇಕಾಗುತ್ತದೆ ಮತ್ತು ಅದರ ವಿರುದ್ಧ ಎಲ್ಲರೂ ತಮ್ಮ ತಮ್ಮ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ತಿರುಗಿ ನಿಲ್ಲುತ್ತಾರೆ ಎಂಬುದೂ ಅಷ್ಟೇ ನಿಜ.

ಇನ್ನು ಇಸ್ರೇಲ್‌ಗೆ ಈ ಯುದ್ಧ ವಿಶೇಷ ಬೋನಸ್ ಇದ್ದಂತೆ. ಅದು ಅಮೆರಿಕದ ದೈತ್ಯ ಸಾಮರ್ಥ್ಯವನ್ನು ಇರಾನ್ ಮೇಲೆ ಮುಗಿ ಬೀಳುವಂತೆ ಮಾಡಿದೆ. ಕೊಲ್ಲಿ ದೇಶಗಳು ಯುದ್ಧದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುವಂತೆ ಮಾಡಿದೆ. ಲೆಬನಾನ್‌ನಲ್ಲಿರುವ ಹೆಜ್ಬುಗಳ ಮೇಲೆ ದಾಳಿ ನಡೆಸಲು ಇನ್ನೊಂದು ಅವಕಾಶ ಮಾಡಿಕೊಟ್ಟಿದೆ. ಆದರೆ ಇಸ್ರೇಲ್ ಕೂಡ ತನ್ನ ರೀಚ್ ಮತ್ತು ಓವರ್ ರೀಚ್‌ನ ಅಂತರವನ್ನು ಲೆಕ್ಕ ಹಾಕಿಕೊಳ್ಳಬೇಕು.

ತಪ್ಪು ಲೆಕ್ಕಾಚಾರ ಮಾಡಿದರೆ ದೊಡ್ಡ ಅಪಾಯಕ್ಕೆ ಸಿಲುಕಬಹುದು. ಟ್ರಂಪ್ ಅವರಂತೂ ಪತ್ರಿಕಾಗೋಷ್ಠಿಗಳ ಮೂಲಕ ಆಡಳಿತ ನಡೆಸುತ್ತಾರೆ. ಕಳೆದ ವಾರವಿಡೀ ಅವರು ಹೇಳದೆ ಇರುವುದಕ್ಕಿಂತ ಹೇಳಿದ್ದೇ ಹೆಚ್ಚು. ಅರಬ್ ದೇಶಗಳ ಮೇಲೆ ಇರಾನ್ ದಾಳಿ ನಡೆಸುವ ನಿರೀಕ್ಷೆ ತಮಗಿರಲಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಅವರಿಗೆ ಸ್ಪರ್ಧೆಯಲ್ಲಿ ಅವಶೇಷಗಳ ಅಡಿಯಿಂದ ಎದ್ದುಬಂದು ಎರಡನೇ ಸ್ಥಾನ ಗಳಿಸುವುದಕ್ಕೆ ಇಷ್ಟವಿಲ್ಲ.

ಹಾಗೇನಾದರೂ ಆದರೆ ಇಂಧನ ಬೆಲೆ ಏರಿಕೆ ಹಾಗೂ ಜಾಗತಿಕ ಹಣಕಾಸು ಮಾರುಕಟ್ಟೆ ಯಲ್ಲಿ ಆತಂಕದ ಪರಿಸ್ಥಿತಿಯಂಥ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅನಿರೀಕ್ಷಿತ ವಿದ್ಯಮಾನಗಳು ಘಟಿಸಿ ಯುದ್ಧ ಬೂಮರಾಂಗ್ ಆದರೆ ಅದನ್ನೆದುರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ವಾಷಿಂಗ್ಟನ್‌ನ ‘ವಾರ್ ರೂಮ್’ ಸಾಕಷ್ಟು ಯೋಚನೆ ಮಾಡಿದಂತಿಲ್ಲ.

ಯುದ್ಧಕ್ಕೆ ಅಮೆರಿಕದ ನೆಲದ ಜನರಿಂದ ವಿರೋಧ ವ್ಯಕ್ತವಾಗಿ, ಅದು ಹೊರಗೂ ಹರಿದು ಮಿತ್ರದೇಶಗಳು ಯುದ್ಧವನ್ನು ವಿರೋಧಿಸತೊಡಗಿವೆ. ಪಾಕಿಸ್ತಾನದ ಬೀದಿಗಳು ಬಹಳ ದಿನಗಳ ನಂತರ ಮೈಮುರಿದು ಎದ್ದು ಹಿಂಸಾಚಾರ, ಸಾವು ಮತ್ತು ಕರ್ಫ್ಯೂಗೆ ಸಾಕ್ಷಿ ಯಾಗಿವೆ.

ಅಮೆರಿಕದ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಡಜನ್‌ಗಟ್ಟಲೆ ಪಾಕಿಸ್ತಾನಿ ಗಳನ್ನು ಕೊಂದು ಹಾಕಿದ್ದಾರೆ. ಟ್ರಅಪ್ ಅವರ ಫೇವರಿಟ್ ಜನರಲ್ ಮತ್ತು ಪಾಕಿಸ್ತಾನದ ಡಿಫೆಕ್ಟೋ ಆಡಳಿತಗಾರನಾಗಿರುವ ಆಸಿಮ್ ಮುನಿರ್ ಈಗ ತನ್ನ ಸ್ನೇಹಿತನಿಂದಾಗಿಯೇ ಪಾಪಪ್ರe ಅನುಭವಿಸುವಂತಾಗಿದೆ.

ಇರಾನ್ ಮೇಲೆ ಅಮೆರಿಕ ಯುದ್ಧ ಸಾರಿದ ಬಳಿಕ ನಡೆದ ಬೆಳವಣಿಗೆಗಳು ಪಾಕಿಸ್ತಾನದ ನೀತಿ ನಿರೂಪಕರಲ್ಲಿ ಮೂಡಿರುವ ವ್ಯೂಹಾತ್ಮಕ ಗೊಂದಲಗಳನ್ನು ಎತ್ತಿ ತೋರಿಸು ವಂತಿವೆ. ಯುದ್ಧ ಶುರುವಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವು ಅಮೆರಿಕದ ವಿರುದ್ಧ ಇರಾನ್‌ಗೆ ಬೆಂಬಲ ಘೋಷಿಸಿತು. ಆದರೆ ಸೌದಿ ಅರೇಬಿಯಾದ ಪರ ನಿಂತು ಇರಾನ್‌ಗೆ ವಿರೋಧ ವ್ಯಕ್ತಪಡಿಸಿತು!

ಸೌದಿಯ ಅರಾಮ್ಕೋ ತೈಲ ಘಟಕಗಳ ಮೇಲೆ ಹಾಗೂ ರಿಯಾಧ್ ಮೇಲೆ ಇರಾನ್‌ನ ಡ್ರೋನ್ ಗಳು ಬಂದು ಅಪ್ಪಳಿಸಿದರೂ ಪಾಕಿಸ್ತಾನವು ಸೌದಿಗೆ ಯಾವುದೇ ರೀತಿಯ ಸೇನಾ ನೆರವು ನೀಡಲು ಧಾವಿಸಲಿಲ್ಲ. ಹಾಗಿದ್ದರೆ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ಇರುವ ಮಿಲಿಟರಿ ಒಪ್ಪಂದಗಳು ಶಾಂತಿಕಾಲದ ಒಪ್ಪಂದಗಳೇ? ಬುಧವಾರ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಇರಾನ್, ಅಫ್ಘಾನಿಸ್ತಾನ ಮತ್ತು ಭಾರತ ದೇಶಗಳು ಪಾಕಿಸ್ತಾನವನ್ನು ಮುಗಿಸಲು ರಹಸ್ಯ ಒಪ್ಪಂದ ಮಾಡಿಕೊಂಡಿರುವುದನ್ನು ಪತ್ತೆಹಚ್ಚಿ‌ ದ್ದಾರೆ!

ಅಮೆರಿಕದ ಸೇನಾನೆಲೆಗಳು ಅತ್ಯಂತ ಸುರಕ್ಷಿತ ತಾಣಗಳು ಎಂಬ ಆತ್ಮವಿಶ್ವಾಸ ಇಷ್ಟು ದಿನ ಕೊಲ್ಲಿ ದೇಶಗಳಿಗಿತ್ತು. ಆದರೆ ಭದ್ರತೆಯ ವಿಷಯದಲ್ಲಿ ಅವುಗಳಿಗಿಂತ ಇಸ್ರೇಲ್ ಮುಂದಿದೆ ಎಂಬುದು ಕೊಲ್ಲಿಗೀಗ ಗೊತ್ತಾಗಿದೆ. ಪ್ರವಾಸೋದ್ಯಮದಿಂದ ಹಿಡಿದು ತೆರಿಗೆಯವರೆಗೆ ಎಲ್ಲದಕ್ಕೂ ಕೊಲ್ಲಿ ದೇಶಗಳು ಅತ್ಯಂತ ಸುರಕ್ಷಿತ ಎಂಬ ಜಾಗತಿಕ ನಂಬಿಕೆಗೀಗ ಪೆಟ್ಟು ಬಿದ್ದಿದೆ. ಮಧ್ಯಪ್ರಾಚ್ಯದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದರೆ ಅದು ರಾಜಕೀಯ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತದೆ.

ಈಗ ಯುರೋಪ್ ಜತೆಗಿನ ಅಮೆರಿಕದ ಮೈತ್ರಿಯೂ ಡೋಲಾಯಮಾನವಾಗಿದೆ. ಆಕಾಶ ದಿಂದ ಯಾವುದೇ ದೇಶದ ಆಡಳಿತವನ್ನು ಬದಲಿಸಲು ಆಗದು ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ ನಂತರ ಬ್ರಿಟನ್ ಜತೆಗಿನ ವಿಶೇಷ ಸಂಬಂಧ ಮುಗಿಯಿತು ಎಂದು ಟ್ರಂಪ್ ಘೋಷಿಸಿದ್ದಾರೆ. ಖಮೇನಿಯ ಹತ್ಯೆ ಅನೈತಿಕ ಎಂದು - ಹೇಳಿದೆ. ಅಲ್ಲಿನ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ತಮ್ಮ ದೇಶದ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಹೆಚ್ಚಿಸಿಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ.

ಅಮೆರಿಕದ ಅಣ್ವಸ್ತ್ರಗಳ ಛತ್ರಿಯಡಿ ಆಶ್ರಯ ಸಿಗುತ್ತದೆ ಎಂದು ನಂಬಲಾಗದು ಎಂಬುದು ಅವರ ಮಾತಿನ ಅರ್ಥ. ದುಃಖಪಡಲು ಯುರೋಪ್ ಗೆ ಕಾರಣವಿದೆ. ರಷ್ಯಾ ವಿರುದ್ಧ ಉಕ್ರೇನ್‌ಗೆ ಟ್ರಂಪ್ ಹಣ ಮತ್ತು ಶಸ್ತ್ರಾಸ್ತ್ರ ನೀಡುತ್ತಾರೆ ಎಂದು ಅವು ನಿರೀಕ್ಷಿಸಿದ್ದವು. ಆದರೆ ಅದನ್ನು ಬಿಟ್ಟು ಅಮೆರಿಕ ಸ್ವತಃ ತಾನೇ ಇರಾನ್ ವಿರುದ್ಧ ಇನ್ನೂ ದೊಡ್ಡ ಯುದ್ಧ ಆರಂಭಿಸಿಬಿಟ್ಟಿದೆ.

ಈ ಯುದ್ಧದಲ್ಲಿ ಅನಿರೀಕ್ಷಿತವಾಗಿ ಲಾಭ ಮಾಡಿಕೊಳ್ಳುವುದು ರಷ್ಯಾದ ವ್ಲಾದಿಮಿರ್ ಪುಟಿನ್. ಅವರಿಗಿದು ಬಯಸದೆಯೇ ಬಂದ ಭಾಗ್ಯ. ಇದ್ದಕ್ಕಿದ್ದಂತೆ ರಷ್ಯಾ ವಿರುದ್ಧ ಯುದ್ಧ ಮಾಡಲು ಉಕ್ರೇನ್ ಗೆ ಶಸ್ತ್ರಾಸ್ತ್ರಗಳ ಪೂರೈಕೆ ನಿಂತು ಹೋಗಿದೆ. ಏಕೆಂದರೆ ಎಲ್ಲಾ ಶಸ್ತ್ರಾಸ್ತ್ರಗಳೂ ಪಶ್ಚಿಮ ಏಷ್ಯಾಕ್ಕೆ ಹೋಗುತ್ತಿವೆ.

ರಷ್ಯಾ ಮೇಲಿನ ನಿರ್ಬಂಧಗಳೆಲ್ಲ ಈಗ ಅರ್ಥ ಕಳೆದುಕೊಂಡಿವೆ. ಏಕೆಂದರೆ ತೈಲದ ಬೆಲೆ ಹೆಚ್ಚುತ್ತಿರುವುದರಿಂದ ತಮಗಿಷ್ಟವಾದ ದೇಶದಿಂದ ತೈಲ ಖರೀದಿಸಲು ಎಲ್ಲಾ ದೇಶಗಳೂ ಈಗ ಸ್ವತಂತ್ರವಾಗಿವೆ. ರಷ್ಯಾದ ಬಳಿ ಸಾಕಷ್ಟು ತೈಲವಿರುವುದರಿಂದ ಮಾಸ್ಕೋದ ಬೊಕ್ಕಸಕ್ಕೆ ಹಣ ಹರಿಯುತ್ತದೆ.

ಒಬ್ಬ ಮನುಷ್ಯನ ಸಾವು ಈ ಜಗತ್ತನ್ನು ಇಷ್ಟು ಬೇಗ ಇಷ್ಟು ದೊಡ್ಡ ಪ್ರಮಾಣದಲ್ಲಿ ಬದಲಿಸುತ್ತದೆ ಎಂದು ಯಾರು ತಾನೇ ನಿರೀಕ್ಷಿಸಿದ್ದರು? ಅಯೊತೊ ಖಮೇನಿ ಯುವಕ ನಾಗಿದ್ದಾಗ ಪರ್ಷಿಯನ್ ಕವಿತೆಗಳನ್ನು ಪ್ರೀತಿಸುತ್ತಿದ್ದರು. ‘ತಾರ್’ ಎಂಬ ಸಾಂಪ್ರದಾಯಿಕ ವಾದ್ಯವನ್ನು ನುಡಿಸುತ್ತಿದ್ದರು.

ಧರ್ಮಗುರು ಹಾಗೂ ರಾಜಕಾರಣಿಯಾಗಿ ಯುದ್ಧವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿ ದ್ದರು. 1980ರ ದಶಕದಲ್ಲಿ ಇರಾಕ್ ಜತೆಗಿನ ಯುದ್ಧದುದ್ದಕ್ಕೂ ಅವರು ಇರಾನ್‌ನ ಅಧ್ಯಕ್ಷರಾಗಿದ್ದರು. ಆ ಯುದ್ಧದಲ್ಲಿ ಇರಾನ್ ಐದು ಲಕ್ಷಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿತ್ತು.

ಎಷ್ಟೇ ಕಷ್ಟ ಅನುಭವಿಸಿದರೂ ಸದ್ದಾಂ ಹುಸೇನ್‌ಗೆ ಅದು ಶರಣಾಗಲಿಲ್ಲ. ನಂತರ ಅಮೆರಿಕದ ಬೆಂಬಲದೊಂದಿಗೆ ಯುದ್ಧದಲ್ಲಿ ಗೆದ್ದಿತು. 1981ರಲ್ಲಿ ಖಮೇನಿ ಹೆಚ್ಚುಕಮ್ಮಿ ಸತ್ತೇಹೋಗಿದ್ದರು. ತೆಹ್ರಾನ್‌ನ ಅಬುಜಾರ್ ಮಸೀದಿಯಲ್ಲಿ ಟೇಪ್ ರೆಕಾರ್ಡರ್‌ನಲ್ಲಿ ಬಾಂಬ್ ಇರಿಸಿ ಅವರ ಹತ್ಯೆಗೆ ರಾಜಕೀಯ ಗುಂಪೊಂದು ಯತ್ನಿಸಿತ್ತು. ಆ ದಾಳಿಯಲ್ಲಿ ಅವರ ಕೈ, ಶ್ವಾಸಕೋಶ, ಧ್ವನಿ ವ್ಯವಸ್ಥೆಗೆ ಹಾನಿಯಾಗಿತ್ತು. ಆದರೂ ಬದುಕುಳಿದಿದ್ದರು. ಹೀಗಾಗಿ ದೇವರು ತನ್ನನ್ನು ಇನ್ನೂ ದೊಡ್ಡ ಉದ್ದೇಶಕ್ಕಾಗಿ ಉಳಿಸಿದ್ದಾನೆ ಎಂದೇ ಅವರು ಭಾವಿಸಿದ್ದರು.

ಇರಾನ್ ನ ನಾಯಕರು ಯುದ್ಧದಲ್ಲಿ ಸಾಯುವುದನ್ನು ಇಷ್ಟಪಡುತ್ತಾರೆ. ಏಕೆಂದರೆ ಹಾಗೆ ಶಹಾದತ್ ಅಥವಾ ಹುತಾತ್ಮರಾದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯಿದೆ. ಶಿಯಾ ಜನಾಂಗದಲ್ಲಿ ಶಹೀದ್ ಎಂಬುದು ಅತ್ಯುನ್ನತ ಪಟ್ಟ. ಕಳೆದ ಬಾರಿ ನಾನು ತೆಹರಾನ್ ಗೆ ಹೋದಾಗ ಅಲ್ಲಿನ ಬೀದಿ ಬೀದಿಗಳಲ್ಲಿ ಹುತಾತ್ಮ ಜನರಲ್ ಕಾಸಿಮ್ ಸುಲೇಮಾನಿಯ ಕಟೌಟ್‌ಗಳಿದ್ದವು. ಅದಕ್ಕಿಂತ ಒಂದೂವರೆ ವರ್ಷದ ಹಿಂದೆ 2020ರ ಜನವರಿ 3ರಂದು ಟ್ರಂಪ್ ನಡೆಸಿದ ವಾಯುದಾಳಿಯಲ್ಲಿ ಕಾಸಿಮ್ ಮೃತಪಟ್ಟಿದ್ದರು.

ಅವರು ಸ್ವರ್ಗಕ್ಕೆ ಹೋಗಿ ಸೇರಿದ್ದಾ ರೆಂದು ಬಿಂಬಿಸುವ ಪೋಸ್ಟರ್‌ಗಳು ಒಂದೂವರೆ ವರ್ಷದ ನಂತರವೂ ತೆಹರಾನ್‌ನಲ್ಲಿ ರಾರಾಜಿಸುತ್ತಿದ್ದವು. ಈಗ ಖಮೇನಿ ರಂಜಾನ್‌ನ 10ನೇ ದಿನ ಮೃತಪಟ್ಟಿದ್ದಾರೆ. ಅದು ಬಹುದೊಡ್ಡ ಗೌರವದ ಸಾವು ಎಂದು ಇರಾನಿಗಳು ನಂಬಿದ್ದಾರೆ.

ಇರಾನ್ ಮತ್ತು ಇಸ್ಲಾಮ್‌ನ ಇತಿಹಾಸದಲ್ಲಿ ಅವರೊಬ್ಬ ಸ್ಪೂರ್ತಿದಾಯಕ ದಂತಕತೆ ಎಂದು ಹೊಗಳಲಾಗುತ್ತಿದೆ. ‘ಹಂತಕರಿಗೆ ಶಾಶ್ವತವಾಗಿ ಅವರು ದುಸ್ವಪ್ನವಾಗಿ ಕಾಡಲಿದ್ದಾರೆ’ ಎಂದು ಇರಾನ್ ನ ಅIಈಧಕೃತ ಹೇಳಿಕೆಯಲ್ಲಿ ಒಕ್ಕಣೆಯಿದೆ. ಯುದ್ಧದಿಂದ ಅವ್ಯವಸ್ಥೆ ಉಂಟಾಗುತ್ತದೆ. ಆದರೆ ಆ ಅವ್ಯವಸ್ಥೆಗೆ ಗಡಿಗಳಿಲ್ಲ. ಪಶ್ಚಿಮ ಏಷ್ಯಾ ದೇಶಗಳ ಆಡಳಿತ ವ್ಯವಸ್ಥೆ ಒಂದು ರೀತಿಯಲ್ಲಿ ಯಥಾಸ್ಥಿತಿಯ ಕಂಫರ್ಟ್ ಜೋನ್‌ನಲ್ಲಿತ್ತು. ಈಗ ಯುದ್ಧದಿಂದ ಯಥಾಸ್ಥಿತಿ ನಾಶವಾದರೆ ಬದಲಾವಣೆಯೆಂಬುದು ವೈರಲ್ ಆಗಬಹುದು.

(ಲೇಖಕರು ಹಿರಿಯ ಪತ್ರಕರ್ತರು)