IPL 2025: ಕರುಣ್ ನಾಯರ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿರಾಟ್ ಕೊಹ್ಲಿಯನ್ನು ಟೀಕಿಸಿದ ಇರ್ಫಾನ್ ಪಠಾಣ್!
ಮುಂಬೈ ಇಂಡಿಯನ್ಸ್ ವಿರುದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕಮ್ಬ್ಯಾಕ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ ಅವರನ್ನು ಶ್ಲಾಘಿಸಿದ್ದ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಒಬ್ಬ ಆಟಗಾರನಿಗೆ ದೇಶಿ ಕ್ರಿಕೆಟ್ ಎಷ್ಟು ಮುಖ್ಯ ಎಂಬುದನ್ನು ಕರುಣ್ ನಾಯರ್ ತೋರಿಸಿಕೊಟ್ಟಿದ್ದಾರೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



ಕೊಹ್ಲಿಯನ್ನು ಟೀಕಿಸಿದ ಇರ್ಫಾನ್ ಪಠಾಣ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕರುಣ್ ನಾಯರ್ ಅವರನ್ನು ಶ್ಲಾಘಿಸಿದ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಕನ್ನಡಿಗನಿಗೆ ಹೋಲಿಕೆ ಮಾಡುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.

ಭಾರತ ತಂಡಕ್ಕೆ ಕೊಹ್ಲಿ ಬೇಕಾ?
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಈ ಸರಣಿಯ ವೇಳೆ ಕಾಮೆಂಟರಿ ಮಾಡಿದ್ದ ಇರ್ಫಾನ್ ಪಠಾಣ್ ವಿರಾಟ್ ಕೊಹ್ಲಿಯನ್ನು ಸತತವಾಗಿ ಟೀಕಿಸಿದ್ದರು. "2014ರಲ್ಲಿ ಪ್ರಥಮ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಸರಾಸರಿ ಕೇವಲ 15 ರಷ್ಟಿತ್ತು. ಕಳೆದ 5 ವರ್ಷಗಳಲ್ಲಿ ಅವರ ಸಂಖ್ಯೆಗಳನ್ನು ನೋಡಿದಾಗ, 30ಕ್ಕಿಂತ ಕಡಿಮೆ ಇದೆ. ಹಾಗಾಗಿ ಭಾರತ ತಂಡಕ್ಕೆ ಕೊಹ್ಲಿ ಅರ್ಹರಾ?" ಎಂದು ಪಠಾಣ್ ಹೇಳಿದ್ದರು.

ದೇಶಿ ಕ್ರಿಕೆಟ್ ಆಡದ ವಿರಾಟ್ ಕೊಹ್ಲಿ
"ಭಾರತ ತಂಡಕ್ಕೆ ಸೂಪರ್ ಸ್ಟಾರ್ ಸಂಸ್ಕೃತಿ ಅಗತ್ಯವಿಲ್ಲ, ಅವರಿಗೆ ತಂಡದ ಸಂಸ್ಕೃತಿಯ ಅಗತ್ಯವಿದೆ. ವಿರಾಟ್ ಕೊಹ್ಲಿ ಬಿಡುವಿನ ಸಮಯದಲ್ಲಿ ಕೊನೆಯ ಬಾರಿ ದೇಶಿ ಕ್ರಿಕೆಟ್ ಆಡಿದ ಉದಾಹರಣೆಯನ್ನು ಒಮ್ಮೆ ನೀವು ಹೇಳಿ. ಕೊನೆಯ ಬಾರಿ ಇದು ಯಾವಾಗ ನಡೆದಿತ್ತು? ಬರೋಬ್ಬರಿ ಒಂದು ದಶಕ ಕಳೆದಿದೆ," ಎಂದು ಪಠಾಣ್ ತಿಳಿಸಿದ್ದರು.

5 ಟೆಸ್ಟ್ಗಳಿಂದ 190 ರನ್
ಆಸ್ಟ್ರೇಲಿಯಾ ವಿರುದ್ದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಅವರು ಒಂದು ಶತಕ ಸಿಡಿಸಿದ ಹೊರತಾಗಿಯೂ ಈ ಟೂರ್ನಿಯಲ್ಲಿ ಗಳಿಸಿದ್ದು ಕೇವಲ 190 ರನ್ಗಳು ಮಾತ್ರ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು ಹಾಗೂ ಮೂರನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅರ್ಹತೆ ಪಡೆದಿರಲಿಲ್ಲ.

ಆರ್ಸಿಬಿಗೆ ಗರಿಷ್ಠ ಸ್ಕೋರರ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 6 ಪಂದ್ಯಗಳಿಂದ ಮೂರು ಅರ್ಧಶತಕಗಳು ಸೇರಿದಂತೆ 248 ರನ್ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಆರ್ಸಿಬಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ.

100 ಟಿ20 ಅರ್ಧಶತಕ ಸಿಡಿಸಿದ ಕೊಹ್ಲಿ
ರಾಜಸ್ಥಾನ್ ರಾಯಲ್ಸ್ ವಿರುದ್ದದ ತನ್ನ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದರು. ಆ ಮೂಲಕ ತಮ್ಮ ಟಿ20 ವೃತ್ತಿ ಜೀವನದಲ್ಲಿ 200 ಅರ್ಧಶತಕಗಳನ್ನು ಪೂರ್ಣಗೊಳಿಸಿದ್ದರು. ಅಂದ ಹಾಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 9 ವಿಕೆಟ್ಗಳ ಭರ್ಜರಿ ಗೆಲುವು ಪಡೆದಿತ್ತು.

ಕರುಣ್ ಬಗ್ಗೆ ಟ್ವೀಟ್ ಮಾಡಿ ಕೊಹ್ಲಿಯನ್ನು ಟೀಕಿಸಿದ ಪಠಾಣ್
ಕರುಣ್ ನಾಯರ್ ಅವರನ್ನು ಶ್ಲಾಘಿಸುವ ಮೂಲಕ ಇರ್ಫಾನ್ ಪಠಾಣ್, ವಿರಾಟ್ ಕೊಹ್ಲಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. "ದೇಶಿ ಕ್ರಿಕೆಟ್ ಆಡುವುದು ಹಾಗೂ ಸದ್ಯದ ಫಾರ್ಮ್ ಎಷ್ಟು ಮುಖ್ಯ ಎಂಬುದನ್ನು ಕರುಣ್ ನಾಯರ್ ನಮೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ," ಎಂದು ಟ್ವೀಟ್ ಮಾಡಿದ ಇರ್ಫಾನ್ ಪಠಾಣ್, ಕೊಹ್ಲಿಯನ್ನು ಪರೋಕ್ಷವಾಗಿ ಎಳೆದಿದ್ದಾರೆ.

7 ವರ್ಷಗಳ ಅರ್ಧಶತಕ ಸಿಡಿಸಿದ ಕರುಣ್
ಕಳೆದ ಭಾನುವಾರ (ಏಪ್ರಿಲ್ 13) ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ ಕರುಣ್ ನಾಯರ್ 40 ಎಸೆತಗಳಲ್ಲಿ 89 ರನ್ಗಳನ್ನು ಸಿಡಿಸಿದ್ದರು. ಆ ಮೂಲಕ 7 ವರ್ಷಗಳ ಬಳಿಕ ಐಪಿಎಲ್ ಟೂರ್ನಿಯಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಆದರೂ ಈ ಪಂದ್ಯದಲ್ಲಿ ಡೆಲ್ಲಿ ಸೋಲು ಅನುಭವಿಸಿತ್ತು.