ಕೋಲ್ಕತಾ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ (RCB vs KKR) ತಂಡಗಳು ಮಾರ್ಚ್ 22 ರಂದು ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಹದಿನೆಂಟನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಆರ್‌ಸಿಬಿ, ಹಾಲಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಕಾಣಲು ಎದುರು ನೋಡುತ್ತಿದೆ. ಮತ್ತೊಂದೆಡೆ ತವರು ಅಭಿಮಾನಿಗಳಿಗೆ ಮೊದಲ ಗೆಲುವಿನ ಉಡುಗೊರೆಯನ್ನು ನೀಡಲು ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ಹಾತೊರೆಯುತ್ತಿದೆ.
ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ, ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಆಟಗಾರರನ್ನು ಖರೀದಿಸಿದೆ. ಫಾಫ್ ಡು ಪ್ಲೆಸಿಸ್ ನಿರ್ಗಮನದಿಂದ ತೆರವಾಗಿರುವ ಆರ್‌ಸಿಬಿ ನಾಯಕತ್ವಕ್ಕೆ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರನ್ನು ನೇಮಿಸಲಾಗಿದೆ. ಒಟ್ಟಾರೆಯಾಗಿ ಮೂರೂ ಸ್ವರೂಪದಲ್ಲಿ ಅತ್ಯುತ್ತಮ ಕಾಂಬಿನೇಷನ್ ಹೊಂದಿರುವ ಆರ್‌ಸಿಬಿ, ಹೊಸ-ಹೊಸ ರಣತಂತ್ರದೊಂದಿಗೆ ಕಣಕ್ಕೆ ಇಳಿಯಲಿದೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ರಜತ್ ಪಾಟಿದಾರ್ ಒಳಗೊಂಡಂತೆ ಬಲಿಷ್ಠವಾಗಿದ್ದರೆ, ಬೌಲಿಂಗ್ ವಿಭಾಗದಲ್ಲಿ ಜಾಶ್ ಹೇಝಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖರು ಇದ್ದಾರೆ. ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮ್ಯಾರಿಯೊ ಶೆಫರ್ಡ್, ಟಿಮ್ ಭೆಥೆಲ್ ಸೇರಿದಂತೆ ಸ್ಟಾರ್ ಆಲ್‌ರೌಂಡರ್‌ಗಳು ತಂಡದಲ್ಲಿದ್ದಾರೆ.
IPL 2025: ಆರ್‌ಸಿಬಿ vs ಕೆಕೆಆರ್ ನಡುವಣ ಪಂದ್ಯಕ್ಕೆ ಮಳೆ ಭೀತಿ! ಹವಾಮಾನ ವರದಿ ಹೇಗಿದೆ?
ಇನ್ನು ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಆದರೂ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ. ಕಕೆಆರ್ ತಂಡದಲ್ಲಿಯೂ ಅತ್ಯುತ್ತಮ ಸ್ಟಾರ್ ಆಟಗಾರರಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕ್ವಿಂಟನ್ ಡಿ ಕಾಕ್, ರೆಹಮಾನುಲ್ಲಾ ಗುರ್ಬಾಜ್, ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಮನೀಷ್ ಪಾಂಡೆ ಇದ್ದಾರೆ. ಇನ್ನು ಸುನೀಲ್ ನರೇನ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಸ್ಟಾರ್ ಆಲ್‌ರೌಂಡರ್‌ಗಳಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಎನ್ರಿನ್ ನೊರ್ಕಿಯಾ, ಹರ್ಷಿತ್ ರಾಣಾ ಇದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದಾರೆ.
ಪಿಚ್ ರಿಪೋರ್ಟ್
ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯುವ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿನ ಪಿಚ್ ಫ್ಲ್ಯಾಟ್ ಆಗಿದ್ದು, ಬೌನ್ಸ್ ಕೂಡ ಇರಲಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮೊತ್ತವನ್ನು ನಾವು ಇಲ್ಲಿ ನಿರೀಕ್ಷೆ ಮಾಡಬಹುದು. ಪಂದ್ಯ ಸಾಗುತ್ತಿದ್ದಂತೆ ಪಿಚ್ ನಿಧಾನವಾಗಲಿದ್ದು, ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 93 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ್ದ ತಂಡಗಳು 33ರಲ್ಲಿ ಗೆಲುವು ಪಡೆದಿದ್ದರೆ, ಚೇಸಿಂಗ್ ತಂಡಗಳು 55ರಲ್ಲಿ ಗೆಲುವು ಪಡೆದಿವೆ.
ಹವಾಮಾನ ವರದಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಣ ಪಂದ್ಯಕ್ಕೆ ಮಳೆಯ ಭೀತಿ ಇದೆ. ಪಂದ್ಯಕ್ಕೂ ಮುನ್ನ ಇಲ್ಲಿ ಶೇ 65 ರಷ್ಟು ಮಳೆ ಬೀಳುವ ಸಾಧ್ಯತೆ ಇದೆ.
IPL 2025: ಆರ್‌ಸಿಬಿಗೆ ಅವಮಾನ ಮಾಡಿದ್ರಾ ಎಸ್ ಬದ್ರಿನಾಥ್? ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ ವಿಡಿಯೊ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ (ನಾಯಕ), ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್/ಸುಯಾಶ್ ಶರ್ಮಾ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್
ಕೋಲ್ಕತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ಸುನೀಲ್ ನರೇಣ್, ವೆಂಕಟೇಶ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ಮನೀಷ್ ಪಾಂಡೆ, ರಿಂಕು ಸಿಂಗ್, ಆಂಡ್ರೆ ರಸೆಲ್, ಎನ್ರಿಕ್ ನೊರ್ಕಿಯಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಹಾಗೂ ವೈಭವ್ ಅರೋರಾ
IPL 2025: ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳಿಗೆ ಬಿಸಿ ತುಪ್ಪವಾದ ತವರಿನ ಪಂದ್ಯಗಳ ಟಿಕೆಟ್ ದರ
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 34
ಆರ್‌ಸಿಬಿ ಗೆಲುವು: 20
ಕೆಕೆಆರ್ ಗೆಲುವು: 14
ಪಂದ್ಯದ ವಿವರ
ಆರ್‌ಸಿಬಿ vs ಕೆಕೆಆರ್
2025ರ ಐಪಿಎಲ್ ಟೂರ್ನಿಯ ಮೊದಲನೇ ಪಂದ್ಯ
ದಿನಾಂಕ: ಮಾರ್ಚ್ 22, 2025
ಸಮಯ: ಸಂಜೆ 07: 30ಕ್ಕೆ ಆರಂಭ
ಸ್ಥಳ: ಈಡನ್ ಗಾರ್ಡನ್ಸ್ ಕ್ರೀಡಾಂಗಣ, ಕೋಲ್ಕತಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ, ಡಿಸ್ನಿ ಹಾಟ್‌ಸ್ಟಾರ್