ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Israel- Iran War: ಇಸ್ರೇಲ್-‌ ಇರಾನ್‌ ನಡುವೆ ಸಂಪೂರ್ಣ ಕದನವಿರಾಮ ಒಪ್ಪಂದ: ಡೊನಾಲ್ಡ್ ಟ್ರಂಪ್‌ ಘೋಷಣೆ

‌Israel- Iran War: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದ ಅಮೆರಿಕ, ದಾಳಿ ನಡೆಸಿದ ಬೆನ್ನಲ್ಲೇ ಈ ಕದನ ವಿರಾಮ ಘೋಷಣೆಯನ್ನು ಟ್ರಂಪ್ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇರಾನ್-ಇಸ್ರೇಲ್ ಹೇಳಿಕೆ ನೀಡಿಲ್ಲ.

ಇಸ್ರೇಲ್-‌ ಇರಾನ್‌ ನಡುವೆ ಕದನವಿರಾಮ ಒಪ್ಪಂದ: ಡೊನಾಲ್ಡ್ ಟ್ರಂಪ್‌ ಘೋಷಣೆ

-

ಹರೀಶ್‌ ಕೇರ ಹರೀಶ್‌ ಕೇರ Jun 24, 2025 7:29 AM

ಅಮೆರಿಕ: ಇಸ್ರೇಲ್ ಮತ್ತು ಇರಾನ್ (Israel- Iran War) ನಡುವೆ ಸಂಪೂರ್ಣ ಕದನ ವಿರಾಮ (ceasefire) ಒಪ್ಪಂದವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಆ ಮೂಲಕ 12 ದಿನಗಳ ಯುದ್ಧವು ಕೊನೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದ ಅಮೆರಿಕ, ದಾಳಿ ನಡೆಸಿದ ಬೆನ್ನಲ್ಲೇ ಈ ಕದನ ವಿರಾಮ ಘೋಷಣೆಯನ್ನು ಟ್ರಂಪ್ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇರಾನ್-ಇಸ್ರೇಲ್ ಹೇಳಿಕೆ ನೀಡಿಲ್ಲ.

ಟ್ರಂಪ್ ಟ್ರುತ್ ಸೋಶಿಯಲ್ ಮಾಧ್ಯಮದಲ್ಲಿ ಈ ವಿಷಯವನ್ನು ಘೋಷಿಸಿದ್ದು, "ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇಸ್ರೇಲ್ ಮತ್ತು ಇರಾನ್ ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಮುಗಿಸಿದ ನಂತರ, ಸುಮಾರು 6 ಗಂಟೆಗಳಲ್ಲಿ ಕದನ ವಿರಾಮ ಪ್ರಾರಂಭವಾಗುತ್ತದೆ. 12 ಗಂಟೆಗಳ ಕಾಲ ಇದು ನಡೆಯುತ್ತದೆ. ನಂತರ ಯುದ್ಧವು ಮುಕ್ತಾಯವಾಗುತ್ತದೆ! ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಜಗತ್ತು ಇದನ್ನು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ, ಎರಡೂ ಕಡೆಯವರು ಶಾಂತವಾಗಿ ಮತ್ತು ಗೌರವದಿಂದ ಇರುತ್ತಾರೆ" ಎಂದು ಟ್ರಂಪ್ ಹೇಳಿದ್ದಾರೆ.

"ಎಲ್ಲವೂ ಸರಿಯಾಗಿ ನಡೆದರೆ, ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ಈ ಯುದ್ಧವನ್ನು ಕೊನೆಗೊಳಿಸುವ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ತೋರಿಸಿವೆ. ಈ ಯುದ್ಧವು ವರ್ಷಗಳವರೆಗೆ ಮುಂದುವರಿಯಬಹುದಿತ್ತು. ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಹಾಗಾಗಲಿಲ್ಲ. ಮುಂದೆ ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು, ಇರಾನ್ ಅನ್ನು, ಮಧ್ಯಪ್ರಾಚ್ಯವನ್ನು, ಅಮೆರಿಕವನ್ನು ಮತ್ತು ಇಡೀ ಜಗತ್ತನ್ನು ಆಶೀರ್ವದಿಸಲಿ!" ಎಂದು ಟ್ರಂಪ್ ಹೇಳಿದ್ದಾರೆ.

ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಮಂಗಳವಾರ ಮುಂಜಾನೆ ಟೆಹ್ರಾನ್‌ನಲ್ಲಿ ಭಾರಿ ಸರಣಿ ಸ್ಫೋಟಗಳು ಸಂಭವಿಸಿವೆ. ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿವೆ. ಬೆಳಗಿನ ಜಾವ 3:00 ಗಂಟೆಗೆ (2330 GMT) ಇರಾನ್‌ನ ರಾಜಧಾನಿಯ ಉತ್ತರ ಮತ್ತು ಮಧ್ಯ ಭಾಗದಲ್ಲಿ ಸ್ಫೋಟಗಳು ಸಂಭವಿಸಿದವು.

ಡೊನಾಲ್ಡ್ ಟ್ರಂಪ್ ಅವರ ಪ್ರಕಾರ, ಇರಾನ್ ಏಕಪಕ್ಷೀಯವಾಗಿ ತನ್ನೆಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿದೆ. 04: 00 GMT ವೇಳೆಗೆ ಕದನ ವಿರಾಮ ಜಾರಿಗೆ ಬರಬೇಕಿತ್ತು. ಅದಕ್ಕೂ ಕೆಲವೇ ಗಂಟೆಗಳ ಮೊದಲು ಈ ಸ್ಫೋಟ ಸಂಭವಿಸಿದೆ.

ನಿನ್ನೆ ತಡರಾತ್ರಿ ರಷ್ಯಾದಿಂದ ಅಗತ್ಯ ಶಸ್ತ್ರಾಸ್ತ್ರ ಪೂರೈಕೆ ಭರವಸೆ ದೊರೆತ ಬೆನ್ನಲ್ಲೇ ಇರಾನ್‌ ಕತಾರ್‌ನ ದೋಹಾ, ಇರಾಕ್‌ನಲ್ಲಿರುವ ಅಮೆರಿಕದ ವಾಯು ಪಡೆ ಶಿಬಿರಗಳ ಮೇಲೆ ಖಂಡಾಂತರ ಕ್ಷಿಪಣಿಗಳನ್ನು ಅಪ್ಪಳಿಸಿದೆ. ಇದರ ಬೆನ್ನಿಗೆ ಮುನ್ನೆಚ್ಚರಿಕೆ ನೀಡಿರುವ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಭಾರತೀಯ ನಿವಾಸಿಗರು ಸುರಕ್ಷಿತ ನೆಲೆಗಳಿಗೆ ತೆರಳುವಂತೆ ಸೂಚನೆ ನೀಡಲಾಗಿತ್ತು.

48 ಗಂಟೆಯಲ್ಲಿ ಅಮೆರಿಕ ಪಡೆಗಳ ವಿರುದ್ಧ ದಾಳಿ ನಡೆಸಲು ಸಿದ್ಧತೆ ನಡೆಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ‘ಆಪಧಿರೇಷನ್‌ ಮಿಡ್‌ನೈಟ್‌ ಹ್ಯಾಮರ್‌’ಗೆ ಪ್ರತೀಕಾರವಾಗಿ ಮಧ್ಯಪ್ರಾಚ್ಯ ವಲಯದ ಇರಾಕ್‌, ಸಿರಿಯಾ, ಕುವೈತ್‌, ಸೌದಿ ಅರೇಬಿಯಾ, ಬಹ್ರೇನ್‌, ಕತಾರ್‌ ಸೇರಿ ಹಲವು ಪ್ರದೇಶಗಳಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.

ಇರಾನ್‌ನ ವಾಯುನೆಲೆ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಇಸ್ರೇಲ್‌ ಸೋಮವಾರ ವಾಯುದಾಳಿ ನಡೆಸಿದೆ. ‘‘ಇರಾನ್‌ ಸರಕಾರದ ಪ್ರಮುಖ ಆಯಕಟ್ಟಿನ ಸ್ಥಳಗಳು, ಸೇನಾ ಹಾಗೂ ವಾಯು ನೆಲೆಗಳು, ಅಣು ಸ್ಥಾವರದ ಮೇಲೆ ದಾಳಿ ನಡೆಸಲಾಗಿದೆ. ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ನಾಶಗೊಳಿಸಿದೆ. ಇಸ್ರೇಲ್‌ ನಾಗರಿಕರ ಮೇಲೆ ದಾಳಿ ನಡೆಸಿದ ಸರ್ವಾಧಿಕಾರಿ (ಖಮೇನಿ) ಯನ್ನು ಶಿಕ್ಷಿಸಲು ದಾಳಿ ನಡೆಸಲಾಗಿದೆ,’’ ಎಂದು ಇಸ್ರೇಲ್‌ ರಕ್ಷಣಾ ಪಡೆ ಹೇಳಿಕೊಂಡಿತ್ತು. ಭಾನುವಾರ ಅಮೆರಿಕದಿಂದ ದಾಳಿಗೊಳಗಾಗಿದ್ದ ಫೋರ್ಡೊ ಪರಮಾಣು ಕೇಂದ್ರದ ಮೇಲೆ ಇಸ್ರೇಲ್‌ ಸೋಮವಾರ ದಾಳಿ ನಡೆಸಿದೆ.ಇದೇ ವೇಳೆ ಇರಾನ್‌, ಇಸ್ರೇಲ್‌ನ ಆರು ವಿಮಾನ ನಿಲ್ದಾಣ ಹಾಗೂ ವಾಯು ನೆಲೆಗಳ ಮೇಲೆ ದಾಳಿ ನಡೆಸಿದೆ.

ಇದನ್ನೂ ಓದಿ: Donald Trump: ಅಂದು ಒಬಾಮಾ ಮೇಲೆ ಗೂಬೆ ಕೂರಿಸಿದ್ದ ಟ್ರಂಪ್‌ ಇಂದು ಮಾಡಿದ್ದೇನು? ನೆಟ್ಟಿಗರಿಂದ ಪ್ರಶ್ನೆ; ವೈರಲ್‌ ಆಗ್ತಿದೆ 2011ರ ಟ್ವೀಟ್‌!