#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ISRO: ಇಸ್ರೋದಿಂದ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ (ಜ. 29) ಐತಿಹಾಸಿಕ ಸಾಧನೆ ಮಾಡಿದ್ದು, ಬೆಳಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -02 ಹೊತ್ತ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋದಿಂದ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ರಾಕೆಟ್‌ ಯಶಸ್ವಿ ಉಡಾವಣೆ

ರಾಕೆಟ್‌ ಉಡಾವಣೆ.

Profile Ramesh B Jan 29, 2025 9:04 AM

ಅಮರಾವತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ (ಜ. 29) ಐತಿಹಾಸಿಕ ಸಾಧನೆ ಮಾಡಿದ್ದು, ಬೆಳಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -02 (NVS-02) ಹೊತ್ತ ಜಿಎಸ್‌ಎಲ್‌ವಿ-ಎಫ್ 15 (GSLV-F15) ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ನಡೆಸಿದ100ನೇ ಯೋಜನೆ ಇದಾಗಿದ್ದು, ಈ ಮೂಲಕ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.

ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಿ.ನಾರಾಯಣನ್ (V Narayanan) ಅವರಿಗೆ ಇದು ಮೊದಲ ಯೋಜನೆ ಎನ್ನುವುದು ವಿಶೇಷ. ಜತೆಗೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಎನಿಸಿಕೊಂಡಿದೆ. 27.30 ಗಂಟೆಗಳ ಕ್ಷಣಗಣನೆ ಮುಗಿಯುತ್ತಿದ್ದಂತೆ 50.9 ಮೀಟರ್ ಎತ್ತರದ ರಾಕೆಟ್ ಶ್ರೀಹರಿಕೋಟಾದ 2ನೇ ಉಡಾವಣಾ ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿತು.

ಜಿಎಸ್ಎಲ್‌ವಿ-ಎಫ್ 15 ಯೋಜನೆ ಭಾರತದ ಜಿಎಸ್‌ಎಲ್‌ವಿಯ 15ನೇ ಹಾರಾಟವಾಗಿದ್ದು, ಭಾರತೀಯ ನಿರ್ಮಾಣದ ಕ್ರಯೋಜನಿಕ್ ಎಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ (ಒಟ್ಟಾರೆ 11ನೇ ಹಾರಾಟ) ಎನಿಸಿಕೊಂಡಿದೆ.



2023ರ ಮೇ 29ರಂದು 2ನೇ ತಲೆಮಾರಿನ ಉಪಗ್ರಹಗಳಲ್ಲಿ ಮೊದಲನೆಯದಾದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -01 ಅನ್ನು ಯಶಸ್ವಿಯಾಗಿ ಹೊತ್ತೊಯ್ದ ಜಿಎಸ್‌ಎಲ್‌ವಿ-ಎಫ್ 12 ಮಿಷನ್ ಅನ್ನು ಜಿಎಸ್ಎಲ್‌ವಿ-ಎಫ್ 15 ಮಿಷನ್ ಅನುಸರಿಸಲಿದೆ.

ಜಿಎಸ್‌ಎಲ್‌ವಿ-ಎಫ್ 15 ರಾಕೆಟ್‌ನ ಪ್ರಯೋಜನಗಳು

ನಿಖರ ಮಿಲಿಟರಿ ಕಾರ್ಯಾಚರಣೆ, ಭೂಮಿ, ಆಕಾಶ ಮತ್ತು ಸಮುದ್ರಗಳ ನಿಖರ ಮಾಹಿತಿ ಸಂಗ್ರಹ, ನಿಖರ ಕೃಷಿ ಮತ್ತು ವ್ಯವಸಾಯ ಚಟುವಟಿಕೆ, ಭೂ, ನಕಾಶೆ ಮತ್ತು ಭೂಮಿತಿ ಆಧಾರಿತ ಸಮೀಕ್ಷೆ, ತುರ್ತು ಪರಿಸ್ಥಿತಿ, ವಿಪತ್ತುಗಳು ಸಂಭವಿಸಿದಾಗ ತುರ್ತು ನೆರವು, ನಿಖರವಾದ ಉಪಗ್ರಹ ಕಕ್ಷಾ ವೀಕ್ಷಣೆಗೆ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್‌ ಬಳಸಲಾಗುತ್ತದೆ.



ಅಭಿನಂದನೆ

ಇಸ್ರೋದ ಈ ಐತಿಹಾಸಿಕ ಸಾಧನೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಅಭಿನಂದನೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, "ಶ್ರೀಹರಿಕೋಟಾದಿಂದ 100ನೇ ಉಡಾವಣೆಯ ಹೆಗ್ಗುರುತನ್ನು ಸಾಧಿಸಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ಜಿಎಸ್ಎಲ್‌ವಿ-ಎಫ್ 15 / ಎನ್‌ವಿಎಸ್‌ -02 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ನೀವು ನಮ್ಮನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ್ದೀರಿʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ISRO: 100ನೇ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು; ಐತಿಹಾಸಿಕ ಸಾಧನೆಗೆ ಕೌಂಟ್‌ಡೌನ್‌ ಶುರು

2ನೇ ಉಪಗ್ರಹ

1,500 ಕಿ.ಮೀ. ವ್ಯಾಪ್ತಿಯ ಪ್ರದೇಶ ದಿಕ್ಸೂಚಿ ಸೇವೆ ಒದಗಿಸಲು ನೆರವಾಗುವ ಈ ಉಪಗ್ರಹ ನ್ಯಾವಿಗೇಶನ್‌ ವಿತ್‌ ಇಂಡಿಯನ್‌ ಕನ್ಸಸ್ಟಲೇಶನ್‌ (ನಾವಿಕ್‌) ಸರಣಿಯ 2ನೇ ಉಪಗ್ರಹವಾಗಿದೆ. ಈ ಉಡಾವಣೆಯು ಭಾರತದ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯನ್ನು ನಾಲ್ಕರಿಂದ ಐದು ಉಪಗ್ರಹಗಳಿಂದ ನವೀಕರಿಸಲು ಸಹಾಯ ಮಾಡುತ್ತದೆ ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ (Nilesh Desai) ಹೇಳಿದ್ದಾರೆ.