ISRO: 100ನೇ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು; ಐತಿಹಾಸಿಕ ಸಾಧನೆಗೆ ಕೌಂಟ್‌ಡೌನ್ ಶುರು
ಇಸ್ರೋ 100ನೇ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಮಹತ್ವದ ವಿದ್ಯಮಾನ ಇದಾಗಿದ್ದು, ಜನವರಿ 29ಕ್ಕೆ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್ 02 ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಸ್ರೋ ಹೊಸ ಅಧ್ಯಕ್ಷರಾದ ವಿ ನಾರಾಯಣ್ ಅವರ ನೇತೃತ್ವದಲ್ಲಿ ಈ ಉಪಗ್ರಹ ಉಡಾವಣೆಯಾಗಲಿದೆ.

ISRO

ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಇಸ್ರೋ(ISRO) 100ನೇ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಶ್ರೀಹರಿಕೋಟಾದ(Sriharikota) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (Satish Dawan Space Centre) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ 100ನೇ ಉಪಗ್ರಹ ಉಡಾವಣೆಯ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಇಡುತ್ತಿದೆ. ಜನವರಿ 29 ರಂದು ಉಪಗ್ರಹ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಇಸ್ರೋ 100ನೇ ಉಪಗ್ರಹ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜನವರಿ 29 ರ ಬೆಳಗ್ಗೆ 6.23 ಕ್ಕೆ ಶ್ರೀಹರಿಕೋಟಾದಿಂದ 2,250 ಕೆಜಿ ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್15 ಮೂಲಕ ಕಳುಹಿಸಲು ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಇದು ಜಿಎಸ್‌ಎಲ್‌ವಿ ಉಡಾವಣಾ ವಾಹನದ 17ನೇ ಹಾರಾಟವಾಗಲಿದ್ದು, ಕ್ರಯೋಜೆನಿಕ ಎಂಜಿನ್ ಬಳಸುತ್ತಿರುವ 11ನೇ ವಾಹನವಾಗಿದೆ. 19 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸಲಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಮಟ್ಟಿಗೆ ಇದು ಮಹತ್ವದ ಮೈಲಿಗಲ್ಲು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋಗೆ ಇದು ಹೆಮ್ಮೆಯ ವಿಚಾರವಾಗಿದೆ.
Milestone Moment for India!
— Narottam Sahoo (@narottamsahoo) January 26, 2025
ISRO's 100th launch from #Sriharikota is set for Jan 29, 6:23 PM, with the NaviC-2 satellite aboard the #GSLV rocket.
Highlights:
✨ 100 missions at SHAR
✨ 9th NaviC satellite
✨ 17th GSLV mission
✨ Powered by an indigenous cryogenic engine
A… pic.twitter.com/2pSqAYEzlL
ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್ 02
ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಜನವರಿ 29ಕ್ಕೆ ಜಿಎಸ್‌ಎಲ್‌ವಿ-ಎಫ್15 ಉಡಾವಣಾ ವಾಹನದ ಮೂಲಕ ಎನ್‌ವಿಎಸ್ 02 ಮಿಷನ್ ಅನ್ನು ಕಕ್ಷೆಗೆ ಸೇರಿಸಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು, ಅಂತಿಮ ಹಂತದ ತಯಾರಿ ನಡೆದಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಈ ಸಂದರ್ಭಕ್ಕೆ ಅನುಗುಣವಾಗಿ ನೆನಪಿಸಿಕೊಳ್ಳುವುದಾದರೆ, ಎರಡನೇ ತಲೆಮಾರಿನ ಮೊದಲ ಉಪಗ್ರಹವಾದ NVS-01 ಅನ್ನು ಜಿಎಸ್‌ಎಲ್‌ವಿ ಎಫ್ 12 ಉಡಾವಣಾ ವಾಹನದ ಮೂಲಕ 2023ರ ಮೇ 29 ರಂದು ಕಕ್ಷೆಗೆ ಸೇರಿಸಲಾಗಿತ್ತು.
ಜಿಎಸ್‌ಎಲ್‌ವಿ-ಎಫ್15 ವಿಶೇಷ
ಸ್ಥಳೀಯ ಕ್ರಯೋಜೆನಿಕ್ ಹಂತದ ಜಿಎಸ್ಎಲ್ವಿ-ಎಫ್ 15 ಎನ್ವಿಎಸ್ -02 ಉಪಗ್ರಹವನ್ನು ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ ಸೇರಿಸಲಿದೆ. ಉಪಗ್ರಹ ಉಡಾವಣೆಯು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಜಿಎಸ್ಎಲ್ವಿ-ಎಫ್ 15 ಉಡಾವಣಾ ವಾಹಕವು ಭಾರತದ ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹನಗಳ ಪೈಕಿ 17 ನೇಯದ್ದು. ಸ್ವದೇಶಿ ಕ್ರಯೋ ಸ್ಟೇಜ್ ಹೊಂದಿರುವ 11 ನೇ ಉಡಾವಣಾ ವಾಹಕವಾಗಿದೆ. ಇದು ಸ್ಥಳೀಯ ಕ್ರಯೋಜೆನಿಕ್ ಹಂತದೊಂದಿಗೆ ಜಿಎಸ್‌ಎಲ್‌ವಿ ನಡೆಸುತ್ತಿರುವ 8 ನೇ ಕಾರ್ಯಾಚರಣೆಯ ಹಾರಾಟ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ಹೇಳಿದೆ.
ಈ ಸುದ್ದಿಯನ್ನೂ ಓದಿ:SpaDeX Mission: ಇಸ್ರೋದಿಂದ ಮತ್ತೊಂದು ಇತಿಹಾಸ ಸೃಷ್ಟಿ ; ಸ್ಪ್ಯಾಡೆಕ್ಸ್ ಮಿಷನ್ ಅಡಿಯಲ್ಲಿ ಡಾಕಿಂಗ್ ಪೂರ್ಣಗೊಳಿಸಿದ ಬಾಹ್ಯಾಕಾಶ ಸಂಸ್ಥೆ
ಎನ್‌ವಿಎಸ್ 02 ಉಪಗ್ರಹ ವಿಶೇಷ
ನಕ್ಷತ್ರ ಪುಂಜಗಳ ನ್ಯಾವಿಗೇಷನ್ ಮಾಡುವುದಕ್ಕಾಗಿ, ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯ ಭಾಗ ಇದು. ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯದ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಭೂಪ್ರದೇಶ ಮೀರಿ ಸುಮಾರು 1,500 ಕಿ.ಮೀ ವಿಸ್ತಾರವಾದ ಪ್ರದೇಶವು ಅದರ ಪ್ರಾಥಮಿಕ ಸೇವಾ ಪ್ರದೇಶವಾಗಿದೆ.
ಎನ್‌ವಿಎಸ್ -02 ಎಂಬುದು ಎನ್‌ವಿಎಸ್ ಸರಣಿಯ ಎರಡನೇ ಉಪಗ್ರಹ. ಇದನ್ನು ಸಿ ಬ್ಯಾಂಡ್‌ನ ಪೇಲೋಡ್‌ಗೆ ಹೊರತಾಗಿ ಎಲ್1, ಎಲ್5 ಮತ್ತು ಎಸ್ ಬ್ಯಾಂಡ್ ಪೇಲೋಡ್‌ಗಳ ಜತೆಗೆ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ. ಎನ್‌ವಿಎಸ್ -01 ಉಪಗ್ರಹವನ್ನು ಸಿ ಬ್ಯಾಂಡ್‌ಗೆ ಹೊಂದಿಕೆಯಾಗುವಂತೆ ರಚಿಸಲಾಗಿತ್ತು. ಈ ಉಪಗ್ರಹವು ಐಆರ್‌ಎನ್‌ಎಸ್‌ಎಸ್ -1 ಇ ಜಾಗವನ್ನು ತುಂಬಲಿದೆ ಎಂದು ಇಸ್ರೋ ಹೇಳಿದೆ.