Vishweshwara Bhat: ಕನ್ನಡ ಪುಸ್ತಕೋದ್ಯಮದ ಭವಿಷ್ಯ ಉಜ್ವಲ: ವಿಶ್ವೇಶ್ವರ ಭಟ್
ಪುಸ್ತಕಗಳನ್ನು ಜನರ ಹತ್ತಿರ ತೆಗೆದುಕೊಂಡು ಹೋಗುವ ಕಲಸವನ್ನು ವಿಧಾನಸಭಾ ಅಧ್ಯಕ್ಷರು ಮಾಡಿರುವುದು ಸ್ತುತ್ಯರ್ಹ ಕೆಲಸ. ಅವರ ಆಶಯವನ್ನು ನಿಜವಾಗಿಸಲು ಎಲ್ಲ ಕನ್ನಡಿಗರೂ ತಿಂಗಳಿಗೊಂದು ಪುಸ್ತಕವನ್ನು ಖರೀದಿಸಿ ಓದಿದರೂ ಸಾಕು ಎಂದು ವಿಶ್ವೇಶ್ವರ ಭಟ್ ಶ್ಲಾಘಿಸಿದರು.

ಪುಸ್ತಕ ಮೇಳದ ಗೋಷ್ಠಿಯಲ್ಲಿ ವಿಶ್ವೇಶ್ವರ ಭಟ್ ಮಾತನಾಡಿದರು.

ಬೆಂಗಳೂರು: ಕನ್ನಡದಲ್ಲಿ ಎಲ್ಲ ಬಗೆಯ, ಎಲ್ಲ ಓದುಗರಿಗೆ ಬೇಕಾದ ಪುಸ್ತಕಗಳು ಬರುತ್ತಿವೆ. ಪ್ರತಿವರ್ಷ 8000ಕ್ಕೂ ಹೆಚ್ಚು ಪುಸ್ತಕಗಳು (Kannada books) ಇಲ್ಲಿ ಬಿಡುಗಡೆಯಾಗುತ್ತಿವೆ. 800ಕ್ಕೂ ಅಧಿಕ ಪ್ರಕಾಶಕರಿದ್ದಾರೆ. ಮೊದಲಿಗಿಂತ ಹೆಚ್ಚು ಜನರು ಈಗ ಸಮಾಜದ ಎಲ್ಲ ವಲಯಗಳಿಂದ ಬಂದು ಬರೆಯುತ್ತಿದ್ದಾರೆ. ಅದೃಶ್ಯ ಓದುಗರು ಲೇಖಕರನ್ನು ಪೊರೆಯುತ್ತಿದ್ದಾರೆ. ಹೀಗಾಗಿ ಕನ್ನಡ ಪುಸ್ತಕೋದ್ಯಮದ ಭವಿಷ್ಯ ಮೊದಲಿಗಿಂತ ಉಜ್ವಲವಾಗಿದೆ ಎಂದು ಹಿರಿಯ ಪತ್ರಕರ್ತ, ಲೇಖಕ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwara Bhat) ನುಡಿದರು.
ರಾಜಧಾನಿಯ ವಿಧಾನಸೌಧದಲ್ಲಿ ಏರ್ಪಡಿಸಲಾಗಿದ್ದ ʼಪುಸ್ತಕ ಮೇಳʼದ (Pustaka Mela) ಎರಡನೇ ದಿನ ನಡೆದ ʼಕನ್ನಡ ಪುಸ್ತಕೋದ್ಯಮದ ಸವಾಲುಗಳುʼ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪುಸ್ತಕಗಳನ್ನು ಜನರ ಹತ್ತಿರ ತೆಗೆದುಕೊಂಡು ಹೋಗುವ ಕಲಸವನ್ನು ವಿಧಾನಸಭಾಧ್ಯಕ್ಷರು ಮಾಡಿರುವುದು ಸ್ತುತ್ಯರ್ಹ ಕೆಲಸ. ಅವರ ಆಶಯವನ್ನು ನಿಜವಾಗಿಸಲು ಎಲ್ಲ ಕನ್ನಡಿಗರೂ ತಿಂಗಳಿಗೊಂದು ಪುಸ್ತಕವನ್ನು ಖರೀದಿಸಿ ಓದಿದರೂ ಸಾಕು. ವಿದ್ಯಾರ್ಥಿ ಜೀವನದಲ್ಲಿ ಓದುವ ಪುಸ್ತಕಗಳ ನೆನಪು ಸದಾ ಚಿರಸ್ಥಾಯಿಯಾಗಿರುತ್ತದೆ. ನಾನು ಶಾಲಾ ಜೀವನದಲ್ಲಿ ಓದಿದ ಪುಸ್ತಕಗಳ ನೆನಪು ನನಗೆ ಇಂದಿಗೂ ಇದೆ ಎಂದರು.
ಕನ್ನಡದಲ್ಲಿ ಪುಸ್ತಕಗಳು ಇತರ ಭಾಷೆಗೆ ಹೋಲಿಸಿದರೆ ಅಗ್ಗವಾಗಿ ಸಿಗುತ್ತವೆ. ಇಂದು ಒಂದು ಸಿನಿಮಾ ನೋಡಲು ಹೋದರೆ ಕನಿಷ್ಠ 300 ರೂಪಾಯಿ ತೆರಬೇಕು. ಆದರೆ 300 ರೂಪಾಯಿಗೆ ಮೂರು ಪುಸ್ತಕ ಖರೀದಿಸಬಹುದು. ಪುಸ್ತಕದಂಥ ಒಳ್ಳೆಯ ಸಂಗಾತಿ ಬೇರೆ ಯಾರೂ ಇಲ್ಲ. ಜಗತ್ತಿನಲ್ಲಿರುವ ಎಲ್ಲ ವಿಷಯಗಳ ಬಗ್ಗೆಯೂ ಕನ್ನಡದಲ್ಲಿ ಪುಸ್ತಕಗಳು ಬಂದಿವೆ. ಆಫ್ರಿಕಾದ ಸಾಹಿತ್ಯದ ಬಗ್ಗೆ, ಅಮೆರಿಕದ ಸಾಹಿತ್ಯದ ಬಗ್ಗೆ, ಎಐ ಬಗ್ಗೆ, ಬ್ರಿಟಿಷ್ ಸಾಹಿತ್ಯದ ಬಗ್ಗೆ ಹೀಗ ಯಾವುದರ ಬಗ್ಗೆ ಹುಡುಕಿದರೂ ವಿಪುಲವಾಗಿ ಸಿಗುತ್ತವೆ. ಕನ್ನಡದಲ್ಲಿ ಇದುವರೆಗೂ 3 ಲಕ್ಷ ಪುಸ್ತಕಗಳು ಬಂದಿರಬಹುದು. ಪ್ರತಿವರ್ಷ 8000 ಪುಸ್ತಕ ಹೊರಬರುತ್ತವೆ. ನಮ್ಮಲ್ಲಿ 50 ವರ್ಷಗಳಿಂದಲೂ ಸಮಸ್ಯೆಗಳನ್ನು ಹೇಳಿಕೊಂಡು ಬರಲಾಗುತ್ತಿದೆ. ಆದರೆ ಕನ್ನಡ ಪುಸ್ತಕೋದ್ಯಮಕ್ಕೆ ಸಮಸ್ಯೆಗಳಿಲ್ಲ ಎಂಬುದನ್ನು ಈ ಅಂಕಿಸಂಖ್ಯೆಗಳೇ ಬಿಂಬಿಸುತ್ತವೆ ಎಂದರು.
ಕನ್ನಡದಲ್ಲಿ ಒಳ್ಲೆಯ ಅಭಿರುಚಿ ಇರುವ ಓದುಗರು ಇದ್ದಾರೆ. ಭೈರಪ್ಪನವರು ಕಾದಂಬರಿ ಬರೆದರೆ ಇಂದಿಗೂ 75000 ಪ್ರತಿಗಳು ಖರ್ಚಾಗುತ್ತವೆ. ಜನರ ಮನಸ್ಸಿನಲ್ಲಿ ಯಾವುದಿದೆ ಅದಕ್ಕೆ ತಕ್ಕಂಥ ಪುಸ್ತಕಗಳನ್ನು ನಾವು ಅವರಿಗೆ ನೀಡಬೇಕು. 800ಕ್ಕೂ ಅಧಿಕ ಪ್ರಕಾಶಕರು ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು ಆ ಪುಸ್ತಕಗಳು ಖರ್ಚಾಗುವ ಕಾರಣದಿಂದಲೇ ಆಗಿದೆ. ಲಕ್ಷಾಂತರ ಮಂದಿ ಓದುವ- ಬರೆಯುವ ಕ್ರಿಯೆಯಲ್ಲಿ ತೊಡಗಿದ್ದಾರೆ. ಸೋಶಿಯಲ್ ಮೀಡಿಯಾಗಳು ಕೂಡ ಪುಸ್ತಕೋದ್ಯಮಕ್ಕೆ ಪೂರಕವಾಗಿವೆ ಎಂದು ವಿವರಿಸಿದರು.
ಹಿರಿಯ ಪ್ರಕಾಶಕ ಜಮೀಲ್ ಸಾವಣ್ಣ ಅವರು ಮಾತನಾಡಿ, ಪುಸ್ತಕಗಳಿಗೆ ಹೇರಲಾಗಿರುವ ಹೆಚ್ಚಿನ ಜಿಎಸ್‌ಟಿ ಹೊರೆಯನ್ನು ಇಳಿಸಬೇಕು. ಪುಸ್ತಕೋದ್ಯಮ ಹೆಚ್ಚಿನ ಲಾಭದ ಉದ್ಯಮವಲ್ಲ ಹೀಗಾಗಿ ತೆರಿಗೆ ಭಾರ ಇಳಿಸಬೇಕು. 2020ರ ಬಳಿಕ ಲೈಬ್ರರಿಗೆ ಪುಸ್ತಕ ಖರೀದಿ ಬಹುತೇಕ ನಿಂತೇ ಹೋಗಿದೆ. ಅದಕ್ಕೆ ಚಾಲನೆ ನೀಡಬೇಕು. ಸರ್ಕಾರಿ ಪುಸ್ತಕ ಖರೀದಿಯಲ್ಲಿ ಪಾರದರ್ಶಕತೆ ಇರಬೇಕು. ನನಗಂತೂ ಪುಸ್ತಕ ಪ್ರಕಾಶನ ಆಶಾದಾಯಕವಾಗಿದೆ. ಕೊರೊನಾ ಸಮಯದಲ್ಲೂ ನಾನು ಭರವಸೆಯಿಂದ ವ್ಯವಹಾರ ನಡೆಸಿದ್ದೆ ಎಂದರು.
ನಾವು ಪ್ರತಿವರ್ಷ ಮೂರು ನಾಲ್ಕು ಹೊಸಬರ ಕೃತಿಗಳನ್ನು ಪ್ರಕಟಿಸುತ್ತೇವೆ. ಅವುಗಳಲ್ಲಿ ಕಂಟೆಂಟ್ ನೋಡಿ, ಪರಿಶೀಲಿಸಿ ಪ್ರಕಟಣೆಗೆ ಪರಿಗಣಿಸಲಾಗುತ್ತದೆ. ಕವನಗಳು ಇಂದು ಸೋಶಿಯಲ್ ಮೀಡಿಯಾ ಸರಕಾಗಿಬಿಟ್ಟಿದೆ. ಹೀಗಾಗಿ ಅವುಗಳ ಮಾರಾಟ ಬಹುತೇಕ ಕಡಿಮೆಯಾಗಿದೆ. ವರ್ಷಕ್ಕೆ ಮೂವತ್ತು ಪುಸ್ತಕಗಳನ್ನು ಒಬ್ಬ ಪ್ರಕಾಶಕ ಪ್ರಕಟಿಸಬಹುದು. ಆತನ ಆರ್ಥಿಕ ಸ್ಥಿತಿಗತಿಯನ್ನೂ ಪರಿಗಣಿಸಬೇಕು ಎಂದರು.
ಆಕೃತಿ ಪ್ರಕಾಶನದ ಗುರುಪ್ರಸಾದ್ ಮಾತನಾಡಿ, ಕನ್ನಡ ಪುಸ್ತಕಲೋಕವನ್ನು ಬೌದ್ಧಿಕವಾಗಿ ಶ್ರೀಮಂತಗೊಳಿಸುವ ಪುಸ್ತಕಗಳು ಹಾಗೂ ಲೇಖಕರು ಬರಬೇಕಾಗಿದೆ. ಇಂಗ್ಲಿಷ್‌ನಲ್ಲಿ, ತಮಿಳು- ಮಲೆಯಾಳಂನಲ್ಲಿ ಇಂಥ ಕೃತಿಗಳು ಸಾಕಷ್ಟು ಬರುತ್ತಿವೆ. ಸಂವಿಧಾನದ ಬಗ್ಗೆ, ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ, ಇಸ್ರೇಲ್, ಫೆಮಿನಿಸಂ, ಇತ್ಯಾದಿ ಪ್ರಗತಿಪರ ವಿಚಾರಗಳ ಬಗ್ಗೆ ಜಾಗತಿಕ ಸಾಹಿತ್ಯದಲ್ಲಿ ಪ್ರಕಾಶನದ ಪ್ರಯೋಗಗಳು ಸಾಕಷ್ಟು ಮುಂದುವರಿದಿವೆ. ಕನ್ನಡದಲ್ಲಿಯೂ ಇವನ್ನು ತರುವ, ಸ್ವೀಕರಿಸುವ ಬೌದ್ಧಿಕ ವಾತಾವರಣ ಬೆಳೆಯಬೇಕು ಎಂದು ನುಡಿದರು.
ಅಕಾಡೆಮಿ, ಪ್ರಾಧಿಕಾರದಂಥ ಸರ್ಕಾರಿ ಸಂಘಸಂಸ್ಥೆಗಳು ತಂತ್ರಜ್ಞಾನದ ಹೊಸ ಮಾದರಿಗಳನ್ನು ಬಳಸುವತ್ತ ಗಮನಹರಿಸಬೇಕು. ಇ- ಬುಕ್‌ಗಳ ಹೊರತರುವಿಕೆ ಹಾಗೂ ಖರೀದಿ ಹೆಚ್ಚಬೇಕು. ಅಮೆಜಾನ್‌ನಂಥ ಇ- ಮಾರಾಟ ಸಂಸ್ಥೆಗಳ ಏಕಸ್ವಾಮ್ಯ ಕನ್ನಡದಲ್ಲೂ ಬರುವ ದಿನ ದೂರವಿಲ್ಲ. ಅದನ್ನು ಎದುರಿಸುವ ಕ್ರಿಯೇಟಿವ್ ಮಾರ್ಗಗಳನ್ನು ಸಣ್ಣ ಪ್ರಕಾಶಕರು ಹುಡುಕಿಕೊಳ್ಳಬೇಕು. ಕನ್ನಡದಲ್ಲಿ ಪುಸ್ತಕಮೇಳಗಳು ಹೆಚ್ಚಬೇಕು. ಚೆನ್ನೈ, ಕೋಲ್ಕತ್ತಾದಲ್ಲಿ ಮಾದರಿ ಪುಸ್ತಕ ಮೇಳಗಳನ್ನು ಸಂಘಟಿಸಲಾಗುತ್ತಿದೆ. ಪ್ರಸಿದ್ಧ ಲೇಖಕರ ಪುಸ್ತಕಗಳ ಕಾಪಿರೈಟ್ ಸರ್ಕಾರವೇ ಖರೀದಿಸಿ ಮುಕ್ತವಾಗಿಸಬೇಕು. ಲೈಬ್ರರಿ ಖರೀದಿಯಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಬರಬೇಕು. ಇದಕ್ಕೆಲ್ಲ ಹಕ್ಕೊತ್ತಾಯ ಮಾಡಬೇಕಾದ ಪ್ರಕಾಶಕರ ಸಂಘಟನೆ ಏನು ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಗೋಷ್ಠಿಯಲ್ಲಿ ಕೆಲಕಾಲ ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಪುಸ್ತಕ ಮೇಳ ಫೆಬ್ರವರಿ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದ್ದು, ಮಾರ್ಚ್ 03 ರವರೆಗೆ ನಾಲ್ಕು ದಿನಗಳ ದಿನಗಳ ಕಾಲ ನಡೆಯಲಿದೆ. 120ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಇಲ್ಲಿವೆ. ನಾಡಿನ ಮುಖ್ಯ ಪುಸ್ತಕ ಪ್ರಕಾಶಕರು ತಮ್ಮ ಸ್ಟಾಲ್‌ಗಳನ್ನು ತೆರೆದಿದ್ದಾರೆ. ʼವಿಶ್ವವಾಣಿʼ ಪುಸ್ತಕ ಮಳಿಗೆ ಕೂಡ ಇಲ್ಲಿದೆ.
ಈ ಬೃಹತ್ ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ವಿಧಾನಸೌಧದ ನಾಲ್ಕು ಗೇಟುಗಳಿಂದ ಉಚಿತ ಪ್ರವೇಶ ಇರಲಿದೆ. ನಾಲ್ಕು ದಿನವೂ ನಿತ್ಯ ಸಂಜೆ 5 ಗಂಟೆಗೆ ಮನರಂಜನಾ ಕಾರ್ಯಕ್ರಮಗಳು ಸಹ ನಡೆಯಲಿವೆ. ಭಾನುವಾರ (ಮಾರ್ಚ್ 2) ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನೇತೃತ್ವದಲ್ಲಿ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಇಂದಿನಿಂದ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ