ಹೊರ್ಮುಜ್ ಬಳಿಕ ಮತ್ತೂಂದು ಜಲಮಾರ್ಗವನ್ನು ಮುಚ್ಚುತ್ತಾ ಇರಾನ್?
ಇಸ್ರೇಲ್, ಯುಎಸ್ ಸೇನಾ ಪಡೆಯು ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದರ ಗಂಭೀರ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಬಿದ್ದಿದೆ. ವಿಶ್ವದ ಅನೇಕ ರಾಷ್ಟ್ರಗಳಿಗೆ ತೈಲ ಬಿಕ್ಕಟ್ಟು, ಸರಕು ಪೂರೈಕೆ, ಆಮದು ಸಮಸ್ಯೆ ಎದುರಾಗಿದೆ. ಆದರೆ ಇದೀಗ ಇರಾನ್ ಮತ್ತೊಂದು ಜಲಮಾರ್ಗವನ್ನು ಮುಚ್ಚಲು ನಿರ್ಧರಿಸಿದೆ. ಅದು ಯಾವುದು, ಇದರ ಪರಿಣಾಮ ಏನು? ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ಟೆಹರಾನ್: ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ (Iran war) ದಾಳಿ ನಡೆಸಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲ ಹೊರ್ಮುಜ್ ಮಾರ್ಗ (Strait of Hormuz) ಮುಚ್ಚಿ ಜಾಗತಿಕ ಮಾರುಕಟ್ಟೆಯ ಮೇಲೂ ಪರಿಣಾಮ ಬಿರುವಂತೆ ಮಾಡಿದೆ. ಯುಎಸ್ (US) ನೊಂದಿಗಿನ ಸಂಘರ್ಷದ ಪರಿಣಾಮ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು (Oil Crises) ಉಂಟಾಗುವಂತೆ ಮಾಡಿದೆ. ಅಲ್ಲದೇ ಸರಕು ಪೂರೈಕೆ, ಆಮದು ಸಮಸ್ಯೆಯನ್ನು ಕೂಡ ಸೃಷ್ಟಿಸಿದೆ. ಇದರ ನಡುವೆಯೇ ಈಗ ಮತ್ತೊಂದು ಜಲಮಾರ್ಗ (Bab el-Mandeb) ಮುಚ್ಚಲು ಇರಾನ್ ಸಿದ್ಧತೆ ನಡೆಸುತ್ತಿದೆ.
ಇರಾನ್ ಮೇಲಿನ ಯುದ್ಧದ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಈ ನಡುವೆ ಇನ್ನೊಂದು ಜಲಮಾರ್ಗ ಬಾಬ್ ಎಲ್-ಮಂಡೇಬ್ ಕೂಡ ಮುಚ್ಚಲು ಇರಾನ್ ಸಿದ್ಧತೆ ಮಾಡಿಕೊಂಡಿದೆ. ಟೆಹರಾನ್ ಮೇಲಿನ ದಾಳಿಗೆ ಪ್ರತಿಯಾಗಿ ಯೆಮೆನ್ ಹೌತಿ ಬಂಡುಕೋರರು ಇದನ್ನು ಮುಚ್ಚಿ ಜಾಗತಿಕ ವ್ಯಾಪಾರವನ್ನು ನಿಯಂತ್ರಿಸುವುದಾಗಿ ಎಚ್ಚರಿಸಿದೆ.
ಮಾತುಕತೆಗೆ ಇರಾನ್ ಸಿದ್ಧವಾದರೂ ನಮಗೆ ಯುದ್ಧ ತೃಪ್ತಿ ಕೊಟ್ಟಿಲ್ಲ ಎಂದ ದೊಡ್ಡಣ್ಣ
ಇರಾನ್ ಗೆ ಹೌತಿಗಳ ಬೆಂಬಲ?
ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಏಕಾಂಗಿಯಾಗಿ ನಿಂತು ಇವುಗಳನ್ನು ಎದುರಿಸುತ್ತಿದೆ. ದಾಳಿಗೆ ಪ್ರತಿ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಈ ನಡುವೆ ಇದೀಗ ಟೆಹರಾನ್ ಬೆಂಬಲಿತ, ಶಸ್ತ್ರಸಜ್ಜಿತ ಮತ್ತು ಪೋಷಿಸಲ್ಪಟ್ಟ ಉಗ್ರಗಾಮಿ ಗುಂಪು ಯೆಮೆನ್ ಮೂಲದ ಹೌತಿಗಳು ಸಂಘರ್ಷದಲ್ಲಿ ಇರಾನ್ ಜೊತೆ ಸೇರಿ ಬಾಬ್ ಎಲ್-ಮಂಡೇಬ್ ಜಲಸಂಧಿಯನ್ನು ಮುಚ್ಚಲು ಪ್ರಯತ್ನಿಸಲಿದೆ ಎನ್ನಲಾಗಿದೆ. ಈ ಜಲಸಂಧಿ ಮುಚ್ಚಿದರೆ ಜಾಗತಿಕ ವ್ಯಾಪಾರಕ್ಕೆ ಭಾರಿ ಅಡ್ಡಿ ಉಂಟಾಗುವ ಆತಂಕ ಎದುರಾಗಿದೆ.
ಈವರೆಗೆ ಇರಾನ್ ಮೇಲಿನ ಯುದ್ಧದಿಂದ ಹೊರಗಿದ್ದ ಹೌತಿಗಳು ಇದೀಗ ಯಾವುದೇ ಕ್ಷಣದಲ್ಲಿ ಬೇಕಾದರೂ ಹೋರಾಟಕ್ಕೆ ಇಳಿಯುವುದಾಗಿ ಹೇಳಿದೆ. ಇದಕ್ಕಾಗಿ ಇರಾನ್‌ನ ಮೂರು-ಹಂತದ ಕಾರ್ಯತಂತ್ರದ ಭಾಗವಾಗುವುದಾಗಿ ತಿಳಿಸಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಇರಾನ್ ನ ಸುದ್ದಿ ಸಂಸ್ಥೆ, ಹೌತಿಗಳು ಸಂಪೂರ್ಣ ಜಾಗರೂಕತೆಯಿಂದಿದ್ದು, ಟೆಹರಾನ್ ಜೊತೆ ಸಂಘರ್ಷಕ್ಕೆ ಇಳಿಯಲಿದ್ದಾರೆ. ಒಂದು ವೇಳೆ ಇವರು ಯುದ್ಧದಲ್ಲಿ ಪಾಲ್ಗೊಂಡರೆ ಕೆಂಪು ಸಮುದ್ರದ ಮೂಲಕ ಸೂಯೆಜ್ ಕಾಲುವೆಯನ್ನು ಪ್ರವೇಶಿಸುವ ಸಮುದ್ರ ಹಡಗುಗಳ ಸಂಚಾರವನ್ನು ನಿಯಂತ್ರಿಸುವ ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿರುವ ಕಿರಿದಾದ ಮಾರ್ಗವಾದ ಬಾಬ್ ಎಲ್-ಮಂಡೇಬ್ ಜಲಸಂಧಿಯನ್ನು ಮುಚ್ಚಲು ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಈಗಾಗಲೇ ಹಲವಾರು ಸರಕು ಹಡಗುಗಳ ಹಾದಿಯನ್ನು ಇರಾನ್ ನಿರ್ಬಂಧಿಸಿದ್ದು, ಸದ್ಯ ಬಾಬ್ ಎಲ್-ಮಂಡೇಬ್ ನಿರ್ಣಾಯಕ ದಾರಿಯಾಗಿತ್ತು. ಇದು ಕೂಡ ಮುಚ್ಚಿದರೆ ಇದರ ದೊಡ್ಡ ಮಟ್ಟದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಬೀಳುವುದು ಖಚಿತ. ಬಾಬ್ ಎಲ್-ಮಂಡೇಬ್ ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಮತ್ತು ಅಟ್ಲಾಂಟಿಕ್ ಸಾಗರಕ್ಕೆ ಸಂಪರ್ಕಿಸುತ್ತದೆ. ಇದು ಏಷ್ಯಾ-ಯುರೋಪ್ ವ್ಯಾಪಾರದ ಪ್ರಮುಖ ಮಾರ್ಗವಾಗಿದೆ. ಹೌತಿಗಳು ಹಲವು ಬಾರಿ ಇದನ್ನು ಮುಚ್ಚುವ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಒಂದು ವೇಳೆ ಹೌತಿಗಳು ಈ ಮಾರ್ಗವನ್ನು ನಿರ್ಬಂಧಿಸಲು ಮುಂದಾದರೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಾಬ್ ಎಲ್-ಮಂಡೇಬ್ ಜಲ ಮಾರ್ಗ ನಿರ್ಬಂಧವಾದರೆ ಇದು ವಿಶ್ವದ ಸಮುದ್ರದ ಮೂಲಕ ಸಾಗಿಸುವ ತೈಲದ ಸರಿಸುಮಾರು ಶೇ. 30ರ ಮೇಲೆ ಪರಿಣಾಮ ಬೀರಲಿದೆ. ಸೂಯೆಜ್ ಕಾಲುವೆಯ ಮೂಲಕ ಏಷ್ಯಾ-ಯುರೋಪ್ ಕಡಲ ವ್ಯಾಪಾರದ ಪ್ರಮುಖ ಪಾಲನ್ನು ಇದು ನಿರ್ವಹಿಸುತ್ತವೆ. ಈಗಾಗಲೇ ಸೌದಿ ಅರೇಬಿಯಾ ಕೆಂಪು ಸಮುದ್ರದ ಪ್ರವೇಶದ್ವಾರದಲ್ಲಿರುವ ಜಲಸಂಧಿಯ ಮೂಲಕ ಪರ್ಯಾಯ ತೈಲ ವಿತರಣಾ ಮಾರ್ಗವನ್ನು ಪ್ರಾರಂಭಿಸಿದ್ದು, ಇದರಿಂದ ಬಾಲ್ ಎಲ್-ಮಂಡೇಬ್ ಮುಚ್ಚುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಹೌತಿಗಳಿಂದ ಬೆದರಿಕೆ ಯಾಕೆ?
ಇರಾನ್ ಸಂಘರ್ಷ ಪ್ರಾರಂಭವಾದ ಸುಮಾರು ಹದಿನೈದು ದಿನಗಳ ಬಳಿಕ ಯೆಮೆನ್‌ನ ಹೌತಿಗಳು ಸಂಘರ್ಷಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಹೌತಿ ನಾಯಕ ಅಬ್ದುಲ್ ಮಲಿಕ್ ಅಲ್ ಅವರು ಹೌತಿ ಪಡೆಗಳು ಸಂಘರ್ಷ ಹೆಚ್ಚಾದರೆ ಮಧ್ಯಪ್ರವೇಶಿಸಲು ಸಿದ್ಧ. ಸೌದಿ ಅರೇಬಿಯಾದಂತಹ ದೇಶಗಳು ಇರಾನ್ ವಿರುದ್ಧದ ಹೋರಾಟಕ್ಕೆ ನಿಂತರೆ ಹಡಗು ಮಾರ್ಗಗಳನ್ನು ನಿರ್ಬಂಧಿಸಲು ಹೌತಿಗಳು ಸಿದ್ದರಾಗಿದ್ದಾರೆ. ಬಾಬ್ ಎಲ್-ಮಂದೇಬ್ ಯೆಮೆನ್ ಅನ್ನು ಜಿಬೌಟಿ ಮತ್ತು ಆಫ್ರಿಕಾದ ಎರಿಟ್ರಿಯಾದಿಂದ ಬೇರ್ಪಡಿಸುವ ಕಿರಿದಾದ ಕಡಲ ಚಾಕ್‌ಪಾಯಿಂಟ್ ಆಗಿದೆ ಎಂದು ಹೇಳಿದ್ದಾರೆ.
ಹೌತಿಗಳ ಬೆಂಬಲದ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಇರಾನಿನ ಮಿಲಿಟರಿ ಅಧಿಕಾರಿಯೊಬ್ಬರು ಇರಾನ್ ತನ್ನ ಕಡಲ ಕಾರ್ಯಾಚರಣೆಯನ್ನು ಎರಡನೇ ಕಾರ್ಯತಂತ್ರದ ಚಾಕ್‌ಪಾಯಿಂಟ್‌ಗೆ ವಿಸ್ತರಿಸಬಹುದು. ಇದರಿಂದ ಈ ಸಂಘರ್ಷವು ಶೀಘ್ರದಲ್ಲೇ ವಿಶಾಲವಾದ ಪ್ರಾದೇಶಿಕ ಯುದ್ಧವಾಗಿ ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.
ಹೆಚ್ಚಿದ ಆತಂಕ
ಹೌತಿಗಳಿಂದ ಬೆದರಿಕೆ ಬರುವ ಮುನ್ನವೇ ಈ ಮಾರ್ಗ ಅಸುರಕ್ಷಿತವಾಗಬಹುದು ಎನ್ನುವ ಭಯ ಉಂಟಾಗಿದ್ದು, ಇದರಿಂದ ಹಲವು ಹಡಗುಗಳು ಕೆಂಪು ಸಮುದ್ರದ ಮೂಲಕ ಸಾಗಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನಲೆಯಲ್ಲಿ ಬಾಬ್ ಎಲ್-ಮಂಡೇಬ್ ಜಲಸಂಧಿಯ ಮೂಲಕ ನೌಕಾಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂಬುದಾಗಿ ಡ್ಯಾನಿಶ್ ಕಂಟೇನರ್ ಶಿಪ್ಪಿಂಗ್ ಗುಂಪು ಮೇರ್ಸ್ಕ್ ಕೆಲವು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿತ್ತು.
ಟೆಹರಾನ್ ನ ಮಿತ್ರರಾದ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ, ಇರಾಕ್‌ನಲ್ಲಿರುವ ಮಿಲಿಟಿಯಾಗಳು, ಗಾಜಾದ ಹಮಾಸ್ ಮತ್ತು ಯೆಮೆನ್ ಹೌತಿಗಳು ಸಂಘರ್ಷದಲ್ಲಿ ಸೇರಿಕೊಂಡರೆ ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಮೇಲೆ ನೇರ ಮತ್ತು ಪರೋಕ್ಷ ಒತ್ತಡ ಹೇರಿ ಯುದ್ಧದ ರೂಪುರೇಶೆಯನ್ನೇ ಬದಲಾಯಿಸಬಹದು ಎನ್ನುತ್ತಾರೆ ವಿಶ್ಲೇಷಕರು.
ಬಾಬ್ ಎಲ್-ಮಂಡೇಬ್ ಯಾಕೆ ಮುಖ್ಯ?
"ಕಣ್ಣೀರಿನ ದ್ವಾರ" ಎಂದು ಕರೆಯಲ್ಪಡುವ ಬಾಬ್ ಎಲ್-ಮಂಡೇಬ್ ವಿಶ್ವದ ಪ್ರಮುಖ ಕಡಲ ಮಾರ್ಗವಾಗಿದೆ. ಕಿರಿದಾದ ಮಾರ್ಗ ಇದಾಗಿದ್ದು, ಕೇವಲ 29 ಕಿಲೋಮೀಟರ್ ಅಗಲವಿದ್ದು, ಈ ಜಲಸಂಧಿಯು ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿ ಮತ್ತು ವಿಶಾಲವಾದ ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸುತ್ತದೆ. ಸೂಯೆಜ್ ಕಾಲುವೆಯ ಮೂಲಕ ಯುರೋಪ್ ಮತ್ತು ಏಷ್ಯಾದ ನಡುವೆ ಪ್ರಯಾಣಿಸುವ ಯಾವುದೇ ಹಡಗು ಇದರ ಮೂಲಕ ಹಾದುಹೋಗಬೇಕಿದೆ.
ಒಂದು ವೇಳೆ ಇಲ್ಲಿಂದ ಹಡಗು ಹೋಗಲು ಸಾಧ್ಯವಾಗದೇ ಇದ್ದರೆ ಕೇಪ್ ಆಫ್ ಗುಡ್ ಹೋಪ್ ಆಫ್ರಿಕನ್ ಪರ್ಯಾಯ ದ್ವೀಪದ ದಕ್ಷಿಣ ತುದಿಯನ್ನು ಸುತ್ತು ಬಳಸಿ ವ್ಯಾಪಾರ ನಡೆಸಬೇಕಾಗುತ್ತದೆ. ಇದರಿಂದ ಸಾಮಾನ್ಯವಾಗಿ 20-25 ದಿನಗಳ ಏಷ್ಯಾ-ಯುರೋಪ್ ಪ್ರಯಾಣ ಸಮಯ ಸರಿಸುಮಾರು 30-40 ದಿನಗಳಾಗಿ ಪರಿವರ್ತನೆಯಾಗಲಿದೆ.
ಈ ದಾರಿಯಲ್ಲಿ ಜಾಗತಿಕ ವ್ಯಾಪಾರದ ಸರಿಸುಮಾರು ಶೇ. 12ರಷ್ಟು ತೈಲದಲ್ಲಿ ಶೇ. 10 ಮತ್ತು ದ್ರವೀಕೃತ ನೈಸರ್ಗಿಕ ಅನಿಲ (ಎಲ್ ಎನ್ ಜಿ) ಸಾಗಿಸಲ್ಪಡುತ್ತದೆ. 2023ರಲ್ಲಿ ದಿನಕ್ಕೆ ಸುಮಾರು 8.8 ಮಿಲಿಯನ್ ಬ್ಯಾರೆಲ್ ತೈಲ ಮತ್ತು ದೊಡ್ಡ ಎಲ್‌ಎನ್‌ಜಿ ಸಾಗಣೆಗಳು ಈ ಮಾರ್ಗದಲ್ಲಿ ನಡೆದಿತ್ತು ಎಂದು ಯುಎಸ್ ಇಂಧನ ಇಲಾಖೆ ತಿಳಿಸಿದೆ.
2014ರಲ್ಲಿ ಸನಾವನ್ನು ವಶಪಡಿಸಿಕೊಂಡ ಬಳಿಕ ಯೆಮೆನ್‌ನ ಕೆಂಪು ಸಮುದ್ರದ ಕರಾವಳಿಯನ್ನು ಹೌತಿಗಳು ನಿಯಂತ್ರಿಸುತ್ತಿದ್ದಾರೆ. ಇವರು ಇಲ್ಲಿ ಪದೇ ಪದೇ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. 2023 ರಲ್ಲಿ ಗಾಜಾ ಯುದ್ಧದ ಸಮಯದಲ್ಲೂ ಕೂಡ ಹೌತಿಗಳು ವಾಣಿಜ್ಯ ಹಡಗುಗಳ ಮೇಲೆ 100 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದರು. ಇದರಿಂದ ಅನೇಕ ಹಡಗು ಕಂಪನಿಗಳು ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಜಲ ಮಾರ್ಗಕ್ಕೆ ತಿರುಗಿದ್ದವು. ಇದರಿಂದ ಹೆಚ್ಚುವರಿ ಸಮಯ ಮತ್ತು ವೆಚ್ಚಕ್ಕೆ ಕಾರಣವಾಗಿತ್ತು.
ಹೌತಿಗಳು ಸಾಮಾನ್ಯವಾಗಿ ಡ್ರೋನ್, ಹಡಗು ವಿರೋಧಿ ಕ್ಷಿಪಣಿ ಮತ್ತು ವೇಗದ ದೋಣಿಗಳನ್ನು ಬಳಸಿ ದಾಳಿ ಮಾಡುತ್ತಾರೆ. ಇವರದ್ದು ಸಮೂಹ ತಂತ್ರವಾಗಿರುತ್ತದೆ. ಇದಕ್ಕಾಗಿ ಅವರು ಇರಾನ್‌ನಿಂದ ಗುಪ್ತಚರ ಮತ್ತು ಶಸ್ತ್ರಾಸ್ತ್ರಗಳ ಬೆಂಬಲವನ್ನು ಪಡೆಯುತ್ತಾರೆ ಎನ್ನುತ್ತಾರೆ ಪಾಶ್ಚಿಮಾತ್ಯ ಅಧಿಕಾರಿಗಳು.
ಬಾಬ್ ಎಲ್-ಮಂಡೇಬ್ ಮುಚ್ಚಿದರೆ ಏನು ಪರಿಣಾಮ?
ಹೊರ್ಮುಜ್ ಜಲಸಂಧಿಯೊಂದಿಗೆ ಬಾಬ್ ಎಲ್-ಮಂಡೇಬ್ ಜಲಸಂಧಿಯು ಕೂಡ ಮುಚ್ಚಿದರೆ ಇದು ಜಾಗತಿಕ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನೇ ಉಂಟು ಮಾಡಲಿದೆ. ಹೊರ್ಮುಜ್ ಜಲ ಸಂಧಿ ಮುಚ್ಚಿ ಈಗಾಗಲೇ ತೈಲ ರಫ್ತು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಒಂದು ವೇಳೆ ಬಾಬ್ ಎಲ್-ಮಂಡೇಬ್‌ನಲ್ಲಿ ಯಾವುದೇ ರೀತಿಯ ಅಸ್ಥಿರತೆ ಉಂಟಾದರೂ ಇಂಧನ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ದಾಳಿಯಲ್ಲಿ ನೆತನ್ಯಾಹು ಹತ್ಯೆ? ಹಿಂಸಿಸಿ ಕೊಲ್ಲುತ್ತೇವೆ ಎಂದ ಇರಾನ್‌ಗೆ ಇಸ್ರೇಲ್ ಪಿಎಂ ಕಚೇರಿ ಹೇಳಿದ್ದೇನು?
ಇರಾನ್ ಸಂಘರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಹೌತಿಗಳು ಸೇರಿಕೊಂಡರೆ ಕೆಂಪು ಸಮುದ್ರವು ಸಂಪೂರ್ಣ ನಿಷೇಧಿತ ವಲಯವಾಗುತ್ತದೆ. ಇದರಿಂದ ಜಾಗತಿಕ ವ್ಯಾಪಾರ ಚಟುವಟಿಕೆಯು ಮತ್ತಷ್ಟು ಕಠಿಣವಾಗಲಿದೆ . ಮುಖ್ಯವಾಗಿ ಏಷ್ಯಾ ಮತ್ತು ಯುರೋಪ್ ನಡುವೆ ಸಾಗುವ ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ಆಹಾರ ಉತ್ಪನ್ನಗಳು ಮತ್ತು ಗ್ರಾಹಕ ಸರಕುಗಳು ತಲುಪುವುದು ವಿಳಂಬವಾಗುತ್ತದೆ ಮತ್ತು ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗುತ್ತದೆ.
ಬಾಬ್ ಎಲ್-ಮಂಡೇಬ್ ನಲ್ಲಿ ಹೌತಿಗಳು ಭೌಗೋಳಿಕ ಹತೋಟಿ ಹೊಂದಿದ್ದಾರೆ. ಒಂದು ವೇಳೆ ಇದು ನಿರ್ಬಂಧವಾದರೆ ಅವರಿಗೆ ರಾಜಕೀಯವಾಗಿ ಮಹತ್ವ ಸಿಗಲಿದೆ ಎನ್ನುತ್ತಾರೆ ಅನೇಕ ವಿಶ್ಲೇಷಕರು.