ಪಶ್ಚಿಮ ಬಂಗಾಳ, ಕೇರಳಂ ಸೇರಿ 5 ವಿಧಾನಸಭೆಗಳ ಚುನಾವಣೆ ದಿನಾಂಕ ಘೋಷಣೆ
ಬಹುನಿರೀಕ್ಷಿತ 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಚುನಾವಣೆಯ ದಿನಾಂಕವನ್ನು ಪ್ರತಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ಕೇರಳಂ. ಪುದುಚೆರಿ ಮತ್ತು ಅಸ್ಸಾಂನಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಆಯೋಜಿಸಲಾಗಿದೆ. ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ಜನರು ಹಕ್ಕು ಚಲಾಯಿಸಲಿದ್ದಾರೆ. ಎಲ್ಲ ಕಡೆಗಳಲ್ಲಿ ಫಲಿತಾಂಶ ಮೇ 4ರಂದು ಹೊರ ಬೀಳಲಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಮಾ. 15: ದೇಶದ ರಾಜಕೀಯ ದಿಕ್ಕನ್ನೇ ಬದಲಿಸಬಲ್ಲ, ಬಹುನಿರೀಕ್ಷಿತ 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ (Election 2026). ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಚುನಾವಣೆಯ ದಿನಾಂಕವನ್ನು ಪ್ರತಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ಚುನಾವಣೆಯ ದಿನಾಂಕ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಚುನಾವಣೆ ಏಪ್ರಿಲ್ 9ರಂದು ಆರಂಭವಾಗಿ 29ರಂದು ಮುಕ್ತಾಯವಾಗಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಅಸ್ಸಾಂ, ಕೇರಳಂ ಮತ್ತು ಪುದುಚೆರಿಯಲ್ಲಿ ಏಪ್ರಿಲ್ 9, ತಮಿಳುನಾಡಿನಲ್ಲಿ ಏಪ್ರಿಲ್ 23 ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಹಾಗೂ 29ರಂದು ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಡೆಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎನ್ನುವ ಸೂಚನೆಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ಈ ಹಿಂದೆಯೇ ನೀಡಿದ್ದರು.
ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ:
Watch live 📺
— Election Commission of India (@ECISVEEP) March 15, 2026
Press Conference by #ECI to announce the schedule for General Elections to Legislative
Assemblies of #Assam, #Kerala, #Puducherry, #TamilNadu and #WestBengal - 2026
Time: 4 PM
Date: Sunday, 15th March, 2026
Link to watch live: https://t.co/pDlLfrK6l8
ಯಾವ ರಾಜ್ಯದಲ್ಲಿ ಯಾವಾಗ?
ಅಸ್ಸಾಂ: ಅಸ್ಸಾಂನಲ್ಲಿ ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಳೆದ ಬಾರಿ ಇಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ 75 ಸೀಟ್‌ಗಳಲ್ಲಿ ಜಯ ಗಳಿಸಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ 2ನೇ ಬಾರಿಗೆ ಸಿಎಂ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದ್ದಾರೆ. ಅದಾಗ್ಯೂ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. 2011ರಲ್ಲಿ ಇಲ್ಲಿ 3 ಹಂತಗಳಲ್ಲಿ ಮತದಾನ ನಡೆದಿತ್ತು.
ಪಶ್ಚಿಮ ಬಂಗಾಳ: ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿಬಲ್ಲ ಸಾಮರ್ಥ್ಯ ಹೊಂದಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ 2 ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 23 ಹಾಗೂ 29ರಂದು ಮತದಾನ ನಿಗದಿಯಾಗಿದೆ. ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. 2011ರಲ್ಲಿ 8 ಹಂತಗಳಲ್ಲಿ ಮತದಾನ ಆಯೋಜಿಸಲಾಗಿತ್ತು. ಭದ್ರತೆಯ ಕಾರಣಕ್ಕೆ ರಾಜಕೀಯವಾಗಿ ಸೂಕ್ಷ್ಮ ಪರಿಸ್ಥಿತಿ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಸಲಾಗುತ್ತದೆ. ತೃಣಮೂಲ ಕಾಂಗ್ರೆಸ್ (TMC) ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸತತ 4ನೇ ಬಾರಿಗೆ ಅಧಿಕಾರಕ್ಕೆ ಬರಲು ಮುಂದಾಗಿದ್ದಾರೆ. ವಿಪಕ್ಷ ಬಿಜೆಪಿ ಈ ಬಾರಿ ಟಿಎಂಸಿ ಭದ್ರಕೋಟೆಗೆ ಲಗ್ಗೆ ಇಡಲು ಭರ್ಜರಿ ಯೋಜನೆ ರೂಪಿಸುತ್ತಿದೆ.
ತಮಿಳುನಾಡು: ದಕ್ಷಿಣ ಭಾರತದ ಬಹುಮುಖ್ಯ ರಾಜ್ಯ ತಮಿಳುನಾಡಿನಲ್ಲಿ ಎಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ಆಯೋಜಿಸಲಾಗಿದೆ. ಮತ ಎಣಿಕೆ ಮೇ 4ರಂದು ನಡೆಯಲಿದೆ. ಡಿಎಂಕೆ ನಾಯಕ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಇತ್ತ ಪ್ರಮುಖ ವಿಪಕ್ಷಗಳಾದ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದ್ದು, ಡಿಎಂಕೆಯಿಂದ ಅಧಿಕಾರ ಕಸಿದುಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ರಾಜಕೀಯಕ್ಕೆ ಕಾಲಿವುಡ್ ನಟ ದಳಪತಿ ವಿಜಯ್ ಎಂಟ್ರಿಯಾಗಿದ್ದು, ಟಿವಿಕೆ ಪಕ್ಷದ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಬಾರಿ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
ಸೋನಮ್ ವಾಂಗ್‌ಚುಕ್ ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿದ ಗೃಹ ಸಚಿವಾಲಯ
ಕೇರಳಂ: ದಕ್ಷಿಣ ಮತ್ತೊಂದು ಪ್ರಮುಖ ರಾಜ್ಯ ಕೇರಳಂನಲ್ಲೂ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮತ ಎಣಿಕೆ ಮೇ 4ರಂದು ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಕೇರಳಂ ವಿಧಾನಸಭಾ ಚುನಾವಣೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಎಡಪಕ್ಷದ ಎಲ್‌ಡಿಎಫ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಸಿಪಿಎಂ ನಾಯಕ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬರುವ ಗುರಿ ಹೊಂದಿದ್ದಾರೆ. ಯುಡಿಎಫ್ ಈ ಬಾರಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಕಳೆದ ಬಾರಿಯೂ ಕೇರಳಂನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
ಪುದುಚೆರಿ: ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಮತದಾರರು ಏಪ್ರಿಲ್ 9ರಂದು ಹಕ್ಕು ಚಲಾಯಿಸಲಿದ್ದಾರೆ. ಮೇ 4ರಂದು ಮತ ಎಣಿಸಲಾಗುತ್ತದೆ. ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಎನ್. ರಂಗಸ್ವಾಮಿ 3ನೇ ಬಾರಿಗೆ ಅಧಿಕಾರಕ್ಕೆ ಬರಲು ಯೋಜನೆ ರೂಪಿಸುತ್ತಿದ್ದರೆ ವಿಪಕ್ಷ ಡಿಎಂಕೆ ಇದಕ್ಕೆ ಅಡ್ಡಗಾಲು ಹಾಕಲು ಮುಂದಾಗಿದೆ. 2021ರಲ್ಲಿ ಇಲ್ಲಿ ಒಂದೇ ಹಂತದ ಮತದಾನ ನಡೆದಿತ್ತು.