Kantara: Chapter 1: ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ; 'ಕಾಂತಾರ: ಚಾಪ್ಟರ್ 1' ಚಿತ್ರತಂಡಕ್ಕೆ ಕ್ಲೀನ್‌ಚಿಟ್
Kantara: Chapter 1: ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸುತ್ತಿರುವ ʼಕಾಂತಾರ: ಚಾಪ್ಟರ್ 1ʼ ಚಿತ್ರತಂಡ ನಿಯಮ ಉಲ್ಲಂಘಿಸಿದೆ ಎನ್ನು ಆರೋಪ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಇದರಿಂದ ರಿಷಬ್ ಶೆಟ್ಟಿ ಸಿನಿಮಾದ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಇದೀಗ ಆತಂಕ ದೂರವಾಗಿದ್ದು, ಅಧಿಕಾರಿಗಳು ತನಿಖೆ ನಡೆಸಿ ಕ್ಲೀನ್‌ಚಿಟ್ ನೀಡಿದ್ದಾರೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishab Shetty) 2022ರಲ್ಲಿ ಆ್ಯಕ್ಷನ್ ಕಟ್ ಹೇಳಿ ನಾಯಕನಾಗಿ ಕಾಣಿಸಿಕೊಂಡಿದ್ದ ʼಕಾಂತಾರʼ (Kantara) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಯಶಸ್ಸಿನಿಂದ ಪ್ರೇರಣೆಗೊಂಡು ʼಕಾಂತಾರʼ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಪ್ರೀಕ್ವೆಲ್ ಘೋಷಿಸಿತ್ತು. ಹೀಗೆ ಕಳೆದ ವರ್ಷ ರಿಷಬ್ ಶೆಟ್ಟಿ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಆರಂಭಿಸಿದ್ದರು. ಕುಂದಾಪುರದಲ್ಲಿ ಶೂಟಿಂಗ್ ಆರಂಭಿಸಿದ ಚಿತ್ರ ಮೊದಲಿನಿಂದಲೂ ಒಂದಲ್ಲ ಒಂದು ಸಂಕಷ್ಟವನ್ನು ಎದುರಿಸಿಕೊಂಡೇ ಬಂದಿದೆ. ಇತ್ತೀಚೆಗೆ ಚಿತ್ರತಂಡ ಹಾಸನದಲ್ಲಿ ಶೂಟಿಂಗ್ ಶುರು ಮಾಡಿತ್ತು. ಆ ವೇಳೆಯೂ ಸಂಕಷ್ಟ ಬೆನ್ನು ಬಿಡದೆ ಕಾಡಿದೆ. ಶೂಟಿಂಗ್ ವೇಳೆ ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದೀಗ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಸಿನಿಮಾ ಚಿತ್ರೀಕರಣ ವೇಳೆ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಅರಣ್ಯಾಧಿಕಾರಿಗಳು ವರದಿ ನೀಡಿದ್ದಾರೆ. ಈ ಮೂಲಕ ಸಿನಿಮಾ ತಂಡದ ಜತೆಗೆ ರಿಷಬ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಸಮೀಪ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗೂ ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ನಡೆಸಲು ʼಕಾಂತಾರ: ಚಾಪ್ಟರ್ 1ʼ ತಂಡ ಅನುಮತಿ ಪಡೆದಿಕೊಂಡಿತ್ತು. ಅದರಂತೆ ಇಲ್ಲಿ ಬೀಡು ಬಿಟ್ಟ ತಂಡದವರು ಅಕ್ರಮವಾಗಿ ಮರ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪಿಸಿದ್ದರು. ಇದರಿಂದ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಆದರೆ ತನಿಖೆ ಕೈಗೊಂಡ ಅಧಿಕಾರಿಗಳು ಇದೀಗ ಕ್ಲೀನ್‌ಚಿಟ್ ನೀಡಿದ್ದಾರೆ.
ವರದಿಯಲ್ಲಿ ಏನಿದೆ ?
ಸ್ಥಳ ಪರಿಶೀಲಿಸಿದ ಸಕಲೇಶಪುರ ಎಸಿಎಫ್ ಮಧು ಮತ್ತು ಯಸಳೂರು ಆರ್‌ಎಫ್‌ಒ ಕೃಷ್ಣ ಸದ್ಯ ಡಿಸಿಎಫ್ಗೆ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಚಿತ್ರತಂಡ ಯಾವುದೇ ಸ್ಫೋಟ ನಡೆಸಿಲ್ಲ. ಮರಗಳನ್ನು ಕಡಿದಿಲ್ಲ ಎಂದು ಉಲ್ಲೇಖಿಸಲಾಗಿದೆ. ಸ್ಥಳ ಮಹಜರು ನಡೆಸಿದ ಅರಣ್ಯಾಧಿಕಾರಿಗಳು ಈ ವರದಿ ಸಿದ್ಧಪಡಿಸಿದ್ದಾರೆ. ಕೃತಕ ಮರಗಳನ್ನು ಚಿತ್ರೀಕರಣಕ್ಕೆ ಬಳಸಲಾಗಿದೆ. ಚಿತ್ರೀಕರಣದಿಂದ ಅರಣ್ಯ, ಮರಗಳಿಗೆ ಯಾವುದೇ ಹಾನಿ ಆಗಿಲ್ಲ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಮರದ ಬಣ್ಣ ಬಳಿದ ಕೃತಕ ಮರಗಳನ್ನು ಚಿತ್ರೀಕರಣಕ್ಕೆ ಬಳಸಲಾಗಿದೆ. ಇದರಿಂದ ಚಿತ್ರೀಕರಣದಿಂದ ಅರಣ್ಯ ಹಾಗೂ ಮರಗಳಿಗೆ ಯಾವುದೇ ಹಾನಿ ಆಗಿಲ್ಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara Chapter 1: ಅರಣ್ಯ ನಾಶ ಆರೋಪ, ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಂಕಷ್ಟ; ಅರಣ್ಯ ಸಚಿವ ಖಂಡ್ರೆ ಹೇಳಿದ್ದೇನು?
𝐓𝐇𝐄 𝐌𝐎𝐌𝐄𝐍𝐓 𝐇𝐀𝐒 𝐀𝐑𝐑𝐈𝐕𝐄𝐃 🔥
— Hombale Films (@hombalefilms) November 17, 2024
𝐓𝐇𝐄 𝐃𝐈𝐕𝐈𝐍𝐄 𝐅𝐎𝐑𝐄𝐒𝐓 𝐖𝐇𝐈𝐒𝐏𝐄𝐑𝐒 🕉️#KantaraChapter1 Worldwide Grand Release on 𝐎𝐂𝐓𝐎𝐁𝐄𝐑 𝟐, 𝟐𝟎𝟐𝟓.#KantaraChapter1onOct2 #Kantara@shetty_rishab @VKiragandur @hombalefilms @HombaleGroup @ChaluveG… pic.twitter.com/VoehP4xW96
ಸ್ಥಳೀಯರ ಆರೋಪವೇನು?
ಹಾಸನ ಜಿಲ್ಲೆಯ ಸಕಲೇಶಪುರ ಯಸಳೂರು ಭಾಗದಲ್ಲಿ ತಾತ್ಕಾಲಿಕವಾಗಿ ಸೆಟ್ ನಿರ್ಮಾಣ ಮಾಡಲು ಜ. 3ರಿಂದ ಜ.15ರವರೆಗೆ ಚಿತ್ರತಂಡಕ್ಕೆ ಅವಕಾಶ ನೀಡಲಾಗಿತ್ತು. ಜತೆಗೆ ಜ.15ರಿಂದ ಜ. 25ರವರೆಗೆ 23 ದಿನ ಶೂಟಿಂಗ್‌ಗೆ ಅನುಮತಿ ಒದಗಿಸಲಾಗಿತ್ತು. ಆದರೆ ʼಕಾಂತಾರʼ ಚಿತ್ರತಂಡ ಕಾಡಿನಂಚಿನ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಕೆ ಮಾಡಿದೆ ಬಗ್ಗೆ ಆರೋಪ ಕೇಳಿ ಬಂದಿತ್ತು. ಚಿತ್ರೀಕರಣದ ವೇಳೆ ಸ್ಫೋಟ ನಡೆದಿದೆ, ಮರ ಕಡಿಯಲಾಗಿದೆ, ಇದರಿಂದ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗಿ ಬರುತ್ತಿವೆ ಎಂದು ಕೆಲವರು ಆರೋಪಿಸಿದ್ದರು. ಹೀಗಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆ ಆದೇಶ ಹೊರಡಿಸಿದ್ದರು. ಸದ್ಯ ಕ್ಲೀನ್‌ಚಿಟ್ ದೊರೆತಿರುವುದರಿಂದ ಚಿತ್ರತಂಡ ನಿರಾಳವಾಗಿದೆ.