Kantara Chapter 1: ಅರಣ್ಯ ನಾಶ ಆರೋಪ, ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಂಕಷ್ಟ; ಅರಣ್ಯ ಸಚಿವ ಖಂಡ್ರೆ ಹೇಳಿದ್ದೇನು?
Kantara Chapter 1: ಶೂಟಿಂಗ್ ವೇಳೆ ಸ್ಫೋಟಕ ವಸ್ತುಗಳ ಬಳಕೆ ಮಾಡಿದ್ದು, ಅರಣ್ಯ ನಾಶ ಮಾಡಿದ್ದಾರೆ ಎಂಬ ಆರೋಪ ಕಾಂತಾರ ಚಾಪ್ಟರ್ 1 ಚಿತ್ರತಂಡದ ವಿರುದ್ಧ ಕೇಳಿ ಬಂದಿದೆ.
ಬೆಂಗಳೂರು: ಅರಣ್ಯ ನಾಶದ ಆರೋಪದಲ್ಲಿ ಟಾಕ್ಸಿಕ್ ಬಳಿಕ ಇದೀಗ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಶೂಟಿಂಗ್ ಸಮಯದಲ್ಲಿ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಚಿತ್ರತಂಡದ ವಿರುದ್ಧ ಕೇಳಿಬಂದಿದ್ದು, ಚಿತ್ರತಂಡದ (Kantara Chapter 1) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಾಪ್ಟರ್ 1 ಬಿಗ್ ಬಜೆಟ್ ಸಿನಿಮಾ ಆಗಿದ್ದು, ಈ ಸಿನಿಮಾದ ಶೂಟಿಂಗ್ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಹೆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರೂರು ಗ್ರಾಮದ ಬಳಿ ನಡೆದಿದೆ. ಶೂಟಿಂಗ್ ವೇಳೆ ಸ್ಫೋಟಕ ವಸ್ತುಗಳ ಬಳಕೆ ಮಾಡಿದ್ದು, ಅರಣ್ಯ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೆರೂರು ಗ್ರಾಮದ ಹೊರವಲಯದಲ್ಲಿ ಶೂಟಿಂಗ್ ಮಾಡಲು ಕಾಂತಾರ ಚಿತ್ರ ತಂಡ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿತ್ತು. ಇದೀಗ ಅರಣ್ಯ ಜಾಗದಲ್ಲಿ ಮರಗಳನ್ನು ಕಡಿದು, ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಯಮ ಉಲ್ಲಂಘನೆಯಾಗಿಲ್ಲ: ಈಶ್ವರ್ ಖಂಡ್ರೆ
ಕಾಂತಾರ-ಚಾಪ್ಟರ್ 1 ಶೂಟಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಪ್ರಾಥಮಿಕ ವರದಿ ಎಂದು ತಿಳಿಸಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗಿದೆ. ನಮ್ಮ ಅರಣ್ಯ ಭೂಮಿಯಲ್ಲಿ ಚಿತ್ರೀಕರಣ ಮಾಡಿಲ್ಲ, ಕಂದಾಯ ಜಮೀನಿನಲ್ಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ಎಂಬುದು ಪ್ರಾಥಮಿಕ ವರದಿ. ಆದರೂ ಸಂಪೂರ್ಣ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾಧ್ಯಮಗಳಲ್ಲಿ ಬಂದ ವರದಿಯ ಅನ್ವಯ ಸೂಚನೆ ಕೊಟ್ಟಿದ್ದೇನೆ. ನಿಯಮಗಳ ಪ್ರಕಾರ ಅನುಮತಿ ಕೊಡಲಾಗಿತ್ತು. ಆದರೆ, ಅದು ಕಂದಾಯ ಭೂಮಿ, ಗೋಮಾಳ ಎನ್ನಲಾಗಿದೆ. ಅರಣ್ಯ ಭೂಮಿಯಲ್ಲಿ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ಯಸಳೂರು ಭಾಗದಲ್ಲಿ ತಾತ್ಕಾಲಿಕವಾಗಿ ಸೆಟ್ ನಿರ್ಮಾಣ ಮಾಡಲು ಜ.3 ರಿಂದ ಜ.15 ರವರೆಗೆ ಅವಕಾಶ ನೀಡಲಾಗಿತ್ತು. ಜತೆಗೆ ಜ.15 ರಿಂದ ಜ.25 ರ ವರೆಗೆ 23 ದಿನ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ಆದರೆ, ಕಾಂತಾರ ಚಿತ್ರತಂಡ ಕಾಡಿನಂಚಿನ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಕೆಯ ಬಗ್ಗೆ ಆರೋಪ ಕೇಳಿಬಂದಿದೆ.
ಈ ಸುದ್ದಿಯನ್ನೂ ಓದಿ | Kannappa Movie: ಕರ್ನಾಟಕದಿಂದ ಪ್ರಾರಂಭವಾಯಿತು ಬಹು ನಿರೀಕ್ಷಿತ 'ಕಣ್ಣಪ್ಪ' ಚಿತ್ರದ ಪ್ರಚಾರ
ಈ ಸುದ್ದಿಯನ್ನೂ ಓದಿ | Kiccha Sudeep: ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಅಧಿಕೃತ ವಿದಾಯ; ಈ ಬಾರಿಯ ಫಿನಾಲೆಯೇ ಕೊನೆಯ ನಿರೂಪಣೆ