Kichcha Sudeep: ಹೊಸ ಪೋಸ್ಟ್ ಮೂಲಕ 'ಬಿಲ್ಲ ರಂಗ ಬಾಷʼ ಸಿನಿಮಾ ಅಪ್‌ಡೇಟ್ ಕೊಟ್ಟ ಕಿಚ್ಚ ಸುದೀಪ್
ಕಿಚ್ಚ (Kichcha Sudeep) ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೊಸ ಅಪ್‌ಡೇಟ್ ನೀಡಿದ್ದಾರೆ. ಅದರಲ್ಲಿ ತಮ್ಮ ಕೆಲವು ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಬಾಡಿ ಬಿಲ್ಡಿಂಗ್‌ನ ಲುಕ್ ಅನ್ನು ಅವರು ಅಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ʼಬಿಲ್ಲ ರಂಗ ಬಾಷʼಕ್ಕಾಗಿ ಅವರು ಬೆವರು ಹರಿಸಿರುವುದು ಅದರಲ್ಲಿ ಕಾಣುತ್ತದೆ.

ಕಿಚ್ಚ ಸುದೀಪ್

ಬೆಂಗಳೂರು: ನಿಮ್ಮ ಹೊಸ ಫಿಲಂ ( New film) ಯಾವಾಗ ಅಂತ ಸ್ಯಾಂಡಲ್‌ವುಡ್ (Sandalwood) ನಟ ಕಿಚ್ಚ ಸುದೀಪ್ (Kichcha Sudeep) ಅವರನ್ನು ಅವರ ಅಭಿಮಾನಿಗಳು, ಕನ್ನಡ ಚಿತ್ರರಸಿಕರು ಕೇಳ್ತಾನೇ ಇದ್ದರು. ಆದರೆ ಕಿಚ್ಚ ಮೌನ ಮುರಿದಿರಲಿಲ್ಲ. ಕಳೆದ ವರ್ಷ ಬಂದ ʼಮ್ಯಾಕ್ಸ್ʼ (Max movie) ಸಿನಿಮಾನೇ ಅವರು ಕಾಣಿಸಿಕೊಂಡಿದ್ದ ಕೊನೆಯ ಫಿಲಂ ಆಗಿತ್ತು. ಹಾಗಿದ್ರೆ ಕಿಚ್ಚನ ಬಳಿ ಅವರ ಹೊಸ ಫಿಲಂ ಬಗ್ಗೆ ಯಾವುದೇ ಹೊಸ ಸುದ್ದಿ ಇಲ್ವಾ ಅಂತ ಕೇಳುವ ಹೊತ್ತಿಗೇ ಸುದೀಪ್ ತಮ್ಮ ಹೊಸ ಪೋಸ್ಟ್, ಹೊಸ ಲುಕ್, ಹೊಸ ಫೋಟೋಗಳೊಂದಿಗೆ ಪ್ರತ್ಯಕ್ಷ ಆಗಿದ್ದಾರೆ. ಆ ಮೂಲಕ ಸುದೀಪ್ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿತು. ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಕಂಡು ಭರ್ಜರಿ ಗಳಿಕೆ ಮಾಡಿತು. ಇದಾದ ಬಳಿಕ ಸುದೀಪ್ ಅವರು ಬಿಗ್ ಬಾಸ್ ಹಾಗೂ ಸಿಸಿಎಲ್ನಲ್ಲಿ ಬ್ಯುಸಿ ಆಗಿದ್ದರು. ಈಗ ಅವರು ಆ ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿ ಫ್ರೀ ಆಗಿದ್ದಾರೆ. ಈಗ ಸುದೀಪ್ ತಮ್ಮ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ರೆಡಿ ಆಗಿದ್ದಾರೆ ಅಂತ ಹೇಳಲಾಗ್ತಿದೆ. ಅದ್ಯಾವ ಫಿಲಂ ಅಂತ ಕೇಳ್ತೀರಾ? ಅದೇ ‘ಬಿಲ್ಲ ರಂಗ ಬಾಷ’ ಸಿನಿಮಾ.
ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಕಿಚ್ಚ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೊಸ ಅಪ್‌ಡೇಟ್ ನೀಡಿದ್ದಾರೆ. ಅದರಲ್ಲಿ ತಮ್ಮ ಕೆಲವು ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಬಾಡಿ ಬಿಲ್ಡಿಂಗ್‌ನ ಲುಕ್ ಅನ್ನು ಅವರು ಅಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿರೋ ಫೋಟೋದಲ್ಲಿರೋ ಸುದೀಪ್ ಅವರನು ನೋಡಿದರೆ ಯಾರೋ ಬಾಡಿ ಬಿಲ್ಡರ್ ಅಥವಾ ಕುಸ್ತಿಪಟು ಇದಾರೆ ಅಂತ ಹೇಳಬಹುದು. ಕಿಚ್ಚ ಸುದೀಪ್ ಅಲ್ಲಿ ತಮ್ಮ ಬಲಾಢ್ಯ ತೋಳುಗಳು ಹಾಗೂ ಸಿಕ್ಸ್ ಪ್ಯಾಕ್ ಅನ್ನು ಪ್ರದರ್ಶಿಸಿದ್ದಾರೆ. ಇದನ್ನು ನೋಡಿದರೆ ತಮ್ಮ ಹೊಸ ಚಿತ್ರಕ್ಕಾಗಿ ಫಿಟ್‌ನೆಸ್ ಮೇಂಟೇನ್ ಮಾಡೋದಕ್ಕಾಗಿ ಅವರು ಜಿಮ್ನಲ್ಲಿ ಎಷ್ಟು ಬೆವರು ಹರಿಸಿದ್ದಾರೆ, ಎಷ್ಟು ಕಟ್ಟುನಿಟ್ಟಾಗಿ ಡಯಟ್ ಫಾಲೋ ಮಾಡಿದ್ದಾರೆ ಎಂಬುದನ್ನು ಅವರ ಬಾಡಿಯೇ ಹೇಳುತ್ತದೆ.
ಇನ್‌ಸ್ಟಾ ಪೋಸ್ಟ್‌ನಲ್ಲಿ ತಮ್ಮ ಮೂರು ಫೋಟೋಗಳನ್ನು ಹಂಚಿಕೊಂಡಿರೋ ಸುದೀಪ್ ಅವರು ‘ಏಪ್ರಿಲ್ 16’ ಎಂದು ಅದಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ಜೊತೆಗೆ ಗಡಿಯಾರದ ಎಮೋಜಿ ಕೂಡ ಹಾಕಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡುತ್ತಾ ಇದ್ದಾರೆ. ಎಲ್ಲರೂ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಎಗ್ಸೈಟ್ ಆಗಿದ್ದಾರೆ. ಸುದೀಪ್ ಅವರು ಎಲ್ಲಿಯೂ ಇದು ‘ಬಿಲ್ಲ ರಂಗ ಬಾಷ’ ಚಿತ್ರದ ಲುಕ್ ಎಂದು ಹೇಳಿಲ್ಲ. ಆದರೆ, ಈ ಚಿತ್ರಕ್ಕಾಗಿ ಇನ್ನಷ್ಟು ಬಾಡಿ ಬಿಲ್ಡ್ ಮಾಡಿಕೊಳ್ಳಬೇಕು ಎಂದು ಸುದೀಪ್ ಈ ಮೊದಲು ಹೇಳಿಕೊಂಡಿದ್ದರು. ಈ ಕಾರಣಕ್ಕಾಗಿ ಅದೇ ಚಿತ್ರದ ತಯಾರಿ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ.
‘ಬಿಲ್ಲ ರಂಗ ಬಾಷ’ ಚಿತ್ರಕ್ಕೆ ಕಳೆದ ಕೆಲವು ತಿಂಗಳುಗಳಿಂದ ಸೆಟ್ ಹಾಕುವ ಪ್ರಕ್ರಿಯೆ ನಡೆಯುತ್ತಾ ಇತ್ತು. ಈ ಮಧ್ಯೆ ಕೆಲವು ಅಡ್ಡಿಗಳು ಉಂಟಾದಾಗ ಸುದೀಪ್ ಹಾಗೂ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಕೇಳಿದ್ದರು. ಈಗ ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಏಪ್ರಿಲ್ 16ರಂದು ಸಿನಿಮಾ ಸೆಟ್ಟೇರಲಿದೆ. ಇದೊಂದು ಆಕ್ಷನ್ ಅಡ್ವೆಂಚರ್ ಸಿನಿಮಾ. ಇದು ಬಹುದೊಡ್ಡ ಪ್ರಾಜೆಕ್ಟ್. ಇಲ್ಲಿ ಹಾಲಿವುಡ್ ಸಿನಿಮಾಗಳ ಥರ ಒಂದು ವಿಶ್ವವನ್ನೇ ಕಟ್ಟಿಕೊಡಲು ಹೊರಟಿದ್ದೇವೆ. ಈ ಸಿನಿಮಾದ ಕಥೆಗೆ ನಾನು ಬಾಲ್ಯದಲ್ಲಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಕಥೆಗಳೇ ಸ್ಫೂರ್ತಿ. ಕಾಲೇಜು ಓದುತ್ತಿದ್ದಾಗಲೇ ಈ ಸಿನಿಮಾದ ಕಥೆ ಬರೆದಿಟ್ಟಿದ್ದೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
180 ವರ್ಷಗಳ ಮುಂದಿನ ಕಥೆಯನ್ನು ಚಿತ್ರದಲ್ಲಿ ಹೇಳೋಕೆ ಅನೂಪ್ ಹೊರಟಿದ್ದಾರೆ. ಇದರಲ್ಲಿ ಕಿಚ್ಚನ ಪಾತ್ರವೇ ಬಹಳ ವಿಭಿನ್ನವಾಗಿರಲಿದ್ದು ಅದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ದ್ವಿಪಾತ್ರ ಅಥವಾ ತ್ರಿಪಾತ್ರ ಮಾಡುತ್ತಾರಾ ಎಂಬುದನ್ನು ನಿಗೂಢವಾಗಿ ಇಡಲಾಗಿದೆ. ಸುದೀಪ್ ಟ್ವೀಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ದೊಡ್ಡಮಟ್ಟದಲ್ಲಿ ಬರಲಿ ಸಿನಿಮಾ, ಆದಷ್ಟು ಬೇಗ ಮಾಡಿ ಸರ್ ಎಂದು ಕಾಮೆಂಟ್ ಹಾಕಿದ್ದಾರೆ.
ಇದನ್ನೂ ಓದಿ: Varalaxmi Sarathkumar: ಬಾಲ್ಯದಲ್ಲಿ 5-6 ಮಂದಿಯಿಂದ ಕಿರುಕುಳ; ಕಿಚ್ಚ ಸುದೀಪ್ ನಾಯಕಿ ವರಲಕ್ಷ್ಮೀಯ ಕಣ್ಣೀರ ಕಥೆ ಇದು