ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೋನಮ್ ವಾಂಗ್‌ಚುಕ್ ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿದ ಗೃಹ ಸಚಿವಾಲಯ

ಲಡಾಖ್‌ನ ಲೇಹ್‌ನಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಪ್ರತಿಭಟನೆ ಬಳಿಕ ಬಂಧನಕ್ಕೆ ಒಳಗಾಗಿದ್ದ ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಗೃಹ ಸಚಿವಾಲಯ ಹೇಳಿದೆ. ಲೇಹ್ ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಸಂಬಂಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಭದ್ರತಾ ಸಿಬ್ಬಂದಿ ಸೇರಿದಂತೆ 50 ಜನರು ಗಾಯಗೊಂಡಿದ್ದರು.

ಸೋನಮ್ ವಾಂಗ್‌ಚುಕ್ ಬಂಧನ ರದ್ದು

ಸಂಗ್ರಹ ಚಿತ್ರ -

ನವದೆಹಲಿ: ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ (Climate activist Sonam Wangchuk) ಅವರನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ಗೃಹ ಸಚಿವಾಲಯ (Ministry of Home Affairs) ತಿಳಿಸಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ (National Security Act) ಅಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ಸುಮಾರು ಆರು ತಿಂಗಳ ಕಾಲ ಅವರು ಬಂಧನದಲ್ಲಿದ್ದರು. ಲಡಾಖ್‌ನ ಲೇಹ್‌ನಲ್ಲಿ (Ladakh's Leh) ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಸಂಬಂಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ವಾಂಗ್‌ಚುಕ್ ಅವರ ಪ್ರಚೋದನಕಾರಿ ಹೇಳಿಕೆ ಕಾರಣ ಎಂದು ಆರೋಪಿಸಲಾಗಿತ್ತು.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಲಡಾಖ್ ನ ಲೇಹ್‌ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಯ ಕುರಿತಾದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಭದ್ರತಾ ಸಿಬ್ಬಂದಿ ಸೇರಿದಂತೆ 50 ಮಂದಿ ಗಾಯಗೊಂಡಿದ್ದರು. ಇದಾದ ಎರಡು ದಿನಗಳ ಬಳಿಕ ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರನ್ನು ಸೆಪ್ಟೆಂಬರ್ 26 ರಂದು ಬಂಧಿಸಲಾಗಿತ್ತು.

ಪಶ್ಚಿಮ ಏಷ್ಯಾ ಉದ್ವಿಗ್ನತೆ; ಭಾರತದಲ್ಲಿರುವ ವಿದೇಶಿಗರಿಗೆ 30 ದಿನಗಳ ವೀಸಾ ವಿಸ್ತರಣೆ ಮತ್ತು ದಂಡ ವಿನಾಯಿತಿ

ಪ್ರಚೋದನಕಾರಿ ಹೇಳಿಕೆ ನೀಡಿ ಜನಸಮೂಹವನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಸುಮಾರು ಆರು ತಿಂಗಳ ಕಾಲ ಬಂಧನದಲ್ಲಿದ್ದ ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರನ್ನು ಇದೀಗ ಬಿಡುಗಡೆಗೆ ಪರಿಗಣಿಸಲಾಗಿದೆ. ಇದಕ್ಕಾಗಿ ಎನ್‌ಎಸ್‌ಎ ಅಡಿಯಲ್ಲಿ ಲಭ್ಯವಿರುವ ಅಧಿಕಾರವನ್ನು ಬಳಸಿಕೊಂಡಿರುವುದಾಗಿ ಸಚಿವಾಲಯ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವಾಲಯ ವಾಂಗ್‌ಚುಕ್ ಅವರು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧನದ ಅವಧಿಯ ಅರ್ಧದಷ್ಟು ಅವಧಿಯನ್ನು ಅನುಭವಿಸಿದ್ದಾರೆ. ಲಡಾಖ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಪರಸ್ಪರ ನಂಬಿಕೆಯ ವಾತಾವರಣವನ್ನು ಬೆಳೆಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಮಾತುಕತೆಯನ್ನು ಮುಂದುವರಿಸುವ ಸಲುವಾಗಿ ಸೂಕ್ತವೆಂದು ಪರಿಗಣಿಸಿ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಲಡಾಖ್‌ಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒದಗಿಸುವುದಾಗಿ ಹೇಳಿರುವ ಸಚಿವಾಲಯ, ಈ ಪ್ರದೇಶದ ಜನರ ಆಕಾಂಕ್ಷೆಗಳು ಮತ್ತು ಕಳವಳಗಳನ್ನು ಪರಿಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಲಡಾಖ್‌ನಲ್ಲಿನ ಸಮುದಾಯ ನಾಯಕರೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ಇಲ್ಲಿ ಬಂದ್, ಪ್ರತಿಭಟನೆಗಳ ಸದ್ಯದ ಪರಿಸ್ಥಿತಿಯಲ್ಲಿ ಸಮಾಜದ ಶಾಂತಿಗೆ ಹಾನಿಕಾರಕವಾಗಿದೆ. ಇದು ಇಲ್ಲಿನ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ. ಉನ್ನತ ಅಧಿಕಾರ ಸಮಿತಿಯ ಕಾರ್ಯವಿಧಾನ ಮತ್ತು ಇತರ ಸೂಕ್ತ ವೇದಿಕೆಗಳ ಮೂಲಕ ಈ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸಲಾಗುವುದು ಎಂಬ ಭರವಸೆ ಇದೆ ಎಂದು ಹೇಳಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಲಡಾಖ್‌ನ ಲೇಹ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಸೆಪ್ಟೆಂಬರ್ 26 ರಂದು ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಅವರನ್ನು ಲೇಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಜೋಧ್‌ಪುರ ಜೈಲಿಗೆ ವರ್ಗಾಯಿಸಲಾಗಿತ್ತು. ವಾಂಗ್‌ಚುಕ್ ಅವರು ಲಡಾಖ್‌ನ ದುರ್ಬಲ ಪರಿಸರ ವ್ಯವಸ್ಥೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಮತ್ತು ಸಂವಿಧಾನದ ಆರನೇ ವೇಳಾಪಟ್ಟಿಯ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ರಕ್ಷಣೆ ಒದಗಿಸಬೇಕೆಂದು 2023 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸ್ಥಾನಮಾನಕ್ಕಾಗಿ ಆಗ್ರಹಿಸಿ ಅವರು 35 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಮೇಲೆ ಬಂಧನಕ್ಕೆ ಒಳಗಾಗಿದ್ದರು. ಅವರ ಬಂಧನ ವಿರೋಧ ಪಕ್ಷದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

ಈ ಕುರಿತು ಅವರ ಪತ್ನಿ ಮತ್ತು ಶಿಕ್ಷಕಿ ಗೀತಾಂಜಲಿ ಆಂಗ್ಮೋ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಇರಾನ್ ಸಂಘರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡದೇ ಇದ್ದರೂ ಎಲ್‌ಪಿಜಿಗೆ ಕೊರತೆಯಾಗಿರುವುದೇಕೆ?

ವಾಂಗ್‌ಚುಕ್ ಬಿಡುಗಡೆಗೆ ಶಶಿ ತರೂರ್ ಸಂತಸ

ವಾಂಗ್‌ಚುಕ್ ಅವರ ಬಿಡುಗಡೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಂತಸ ವ್ಯಕ್ತಪಡಿಸಿದ್ದು, ವಾಂಗ್‌ಚುಕ್ ಅವರನ್ನು 169 ದಿನಗಳ ಕಾಲ ಬಂಧಿಸಿರುವುದು ಅತಿ ದೀರ್ಘ ಸಮಯವಾಯಿತು. ಇದೀಗ ಕೇಂದ್ರವು ಅವರ ಬಂಧನವನ್ನು ರದ್ದುಗೊಳಿಸಿದೆ ಎಂದು ಸಂತೋಷವಾಗಿದೆ. ವಿಚಾರಣೆಯಿಲ್ಲದೆ ಗರಿಷ್ಠ ಅವಧಿಯ ಬಂಧನಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾದ ಮಾನದಂಡವನ್ನು ರೂಪಿಸಬೇಕಾಗಿದೆ ಎಂದು ಸಾಮಾಜಿಕ ಮಾಧ್ಯಮ ಖಾತೆಯ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.