ದುಬೈ: ಭಾನುವಾರ(ಮಾ.9)ದಂದು ನಡೆಯುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಅಜೇಯ ಭಾರತ (IND vs NZ final)ತಂಡ ಭಾರೀ ಸಿದ್ಧತೆಗಳನ್ನು ನಡೆಸುತ್ತಿದೆ. ಬುಧವಾರ ವಿಶ್ರಾಂತಿ ಪಡೆದಿದ್ದ ಟೀಮ್ ಇಂಡಿಯಾ ಆಟಗಾರರು ಗುರುವಾರದಿಂದ ಅಭ್ಯಾಸ ನಿರತರಾಗಿದ್ದಾರೆ. ಆದರೆ ಫೈನಲ್ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ 2 ಬದಲಾವಣೆ ಮಾಡಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಸೆಮಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಹೊರತಾಗಿಯೂ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಕೈ ಬಿಟ್ಟು ಯುವ ಬ್ಯಾಟರ್ ರಿಷಭ್ ಪಂತ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ರಾಹುಲ್ ಮಾತ್ರವಲ್ಲದೆ, ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೂ ಫೈನಲ್ ಪಂದ್ಯದಿಂದ ಕೊಕ್ ನೀಡಿ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್, 34 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಸದ್ಯದ ಮಾಹಿತಿ ಪ್ರಕಾರ, ರಾಹುಲ್ ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆಗಿದ್ದರೂ ಕೀಪಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಅನುಭವಿ ಕೀಪರ್ ಅಗತ್ಯವಿರುವ ಕಾರಣ ಪಂತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ IND vs NZ: ಫೈನಲ್‌ನಲ್ಲಿ ಭಾರತಕ್ಕೆ ಅಪಾಯವಿದೆ, ಒಮ್ಮೆ ಮುಖಾಮುಖಿ ದಾಖಲೆ ನೋಡಿ!
ಪಂತ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾದರೆ ಆಗ ರಾಹುಲ್ ಪಂದ್ಯದಿಂದ ಹೊರಗುಳಿಯಲೇ ಬೇಕಾಗುತ್ತದೆ. ಕಾರಣ ಅವರನ್ನು ಆಡಿಸಲು ಯಾವುದೇ ಕ್ರಮಾಂಕ ಲಭ್ಯವಿಲ್ಲ. ಶ್ರೇಯಸ್ ಅಯ್ಯರ್ ಕೂಡ ಪ್ರತಿ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಹೀಗಾಗಿ ಅವರನ್ನು ಫೈನಲ್ ಪಂದ್ಯದಿಂದ ಕೈಬಿಡುವುದು ಅನುಮಾನ. ಒಂದೊಮ್ಮೆ ಅಯ್ಯರ್ ನಿರೀಕ್ಷಿತ ಪ್ರದರ್ಶನ ತೋರದೇ ಹೋಗಿದ್ದರೆ ಆಗ ಪಂತ್ ಆಡಿದರೂ ರಾಹುಲ್‌ಗೆ ಅವಕಾಶ ನೀಡಬಹುದಿತ್ತು.
ಕುಲ್‌ದೀಪ್ ಔಟ್
ಆಡಿದ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ತೋರದ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರನ್ನು ಫೈನಲ್ ಪಂದ್ಯದಿಂದ ಕೈಬಿಡುವ ಸಾಧ್ಯತೆ ಕಂಡುಬಂದಿದೆ. ಇವರ ಸ್ಥಾನಕ್ಕೆ ವೇಗಿ ಅರ್ಶ್‌ದೀಪ್ ಸ್ಥಾನ ಪಡೆಯಬಹುದು. ಏಕೆಂದರೆ ಮೊಹಮ್ಮದ್ ಶಮಿಗೆ ಸಾಥ್ ನೀಡುವ ಅನುಭವಿ ವೇಗಿ ತಂಡದಲ್ಲಿಲ್ಲ. ಪಾಂಡ್ಯ ಇದ್ದರೂ ಕೂಡ ಅವರು ಘಾತಕ ಬೌಲರ್ ಅಲ್ಲ.
ಫೈನಲ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮ(ನಾಯಕ) ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್/ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್.