Lakshmi Hebbalkrar: ಆಸ್ಪತ್ರೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಡಿಸ್ಚಾರ್ಜ್; ವೈದ್ಯರಿಗೆ ಪತ್ರ
ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಡಿಸ್ಚಾರ್ಜ್ ಆಗ್ತಿದ್ದಂತೆ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಅವರು ಕೃತಜ್ಞತೆ ತಿಳಿಸಿದ್ದಾರೆ. ಆಸ್ಪತ್ರೆಗೆ ವೈದ್ಯರಿಗೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ಧನ್ಯವಾದ ತಿಳಿಸಿದ್ದಾರೆ.


ಬೆಳಗಾವಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್(Lakshmi Hebbalkrar) ಇಂದು ಭಾನುವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ. ಅವರು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಡಿಸ್ಚಾರ್ಜ್ ಆಗ್ತಿದ್ದಂತೆ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಕೃತಜ್ಞತೆ ತಿಳಿಸಿದ್ದಾರೆ. ಆಸ್ಪತ್ರೆಗೆ ವೈದ್ಯರಿಗೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ಹೆಬ್ಬಾಳ್ಕರ್ ಧನ್ಯವಾದ ತಿಳಿಸಿದ್ದಾರೆ.
ಹೆಬ್ಬಾಳಕರ್ ಪತ್ರದಲ್ಲೇನಿದೆ?
ಪ್ರಿಯ ವೈದ್ಯರೇ,
ಕಳೆದ 13 ದಿನಗಳು ಇಲ್ಲಿ ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು, ನೀವು ನನ್ನ ಕುಟುಂಬಕ್ಕಿಂತ ಕಡಿಮೆಯಿಲ್ಲದಂತೆ ನನ್ನನ್ನು ನೋಡಿಕೊಂಡಿದ್ದೀರಿ. ನನ್ನ ಕಷ್ಟದ ಸಮಯದಲ್ಲಿ, ನೀವು ನನ್ನ ಪಕ್ಕದಲ್ಲಿ ನಿಂತು, ಪ್ರಬಲವಾದ ಬೆಂಬಲ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು. ನೀವು ಹಗಲಿರುಳು ನನ್ನೊಂದಿಗೆ ಇದ್ದು ನಾನು ಸದೃಢವಾಗಲು ಕಾರಣರಾಗಿದ್ದೀರಿ ಮತ್ತು ಧೈರ್ಯ ಕಳೆದುಕೊಳ್ಳದಂತೆ ಪ್ರೇರೇಪಿಸಿದ್ದೀರಿ. ನಿಮ್ಮ ಪ್ರೋತ್ಸಾಹ ನನಗೆ ಶೀಘ್ರ ಗುಣಮುಖನಾಗಲು ಶಕ್ತಿಯನ್ನು ನೀಡಿತು ಮತ್ತು ನಿಮ್ಮ ಸಹಾನುಭೂತಿ ಮತ್ತು ಪರಿಣತಿಗೆ ನಾನು ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶ ಸಿಗಲಿ, ನಿಮಗೆ ಅತ್ಯಂತ ಉಜ್ವಲ ಭವಿಷ್ಯ ಮತ್ತು ಯಶಸ್ಸನ್ನು ಹಾರೈಸುತ್ತೇನೆ.
ಹೃತ್ಪೂರ್ವಕ ಕೃತಜ್ಞತೆಯೊಂದಿಗೆ,
ಲಕ್ಷ್ಮೀ ಹೆಬ್ಬಾಳಕರ್
ಈ ಸುದ್ದಿಯನ್ನೂ ಓದಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ, ಟ್ರಕ್ ಚಾಲಕನ ಮೇಲೆ ಹಿಟ್ ಆಂಡ್ ರನ್ ಕೇಸು
ಇನ್ನು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮೂರು ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ಆಗಬಾರದ ದುರ್ಘಟನೆ ಆಯಿತು. ಕೊನೇ ಹಂತ ನೋಡಿ ಹೋರಾಟ ಮಾಡಿ ಬಂದಿದ್ದೇನೆ. ಇದು ಪುನರ್ಜನ್ಮ ಅನಿಸುತ್ತೆ. ಹಿರಿಯರ ಆಶೀರ್ವಾದ, ತಂದೆ ತಾಯಿ ಆಶೀರ್ವಾದ, ಮುಖ್ಯಮಂತ್ರಿ, ಸಚಿವರು, ಶಾಸಕರು, ಡಿಸಿಎಂ ಮತ್ತು ಸುರ್ಜೇವಾಲ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು. ಕ್ಷೇತ್ರದ ಎಲ್ಲ ಮತದಾರರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.