ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Vishwavani Editorial: ಮೊದಲು ಸರಕಾರಿ ಆಸ್ತಿ ಜಪ್ತಿ ಆಗಲಿ

ನರಲ್ಲಿ ಇರುವ ಕನಿಷ್ಠ ನೈತಿಕತೆ, ಆದರ್ಶಗಳು ಸರಕಾರದ ಬಳಿ ಇಲ್ಲ ಎನ್ನುವುದು ಸದ್ಯದ ವಾಸ್ತವ. ಹಣಕಾಸಿನ ಅಡಚಣೆಯಿಂದಲೋ, ಮರೆವಿನಿಂದಲೋ ಒಂದು ತಿಂಗಳ ನೀರಿನ ಬಿಲ್, ವಿದ್ಯುತ್ ಬಿಲ್ ಕಟ್ಟಲು ತಡ ಮಾಡುವ ಜನಸಾಮಾನ್ಯರ ಮೇಲೆ ದಂಡ ಹೇರುವ ಸರಕಾರ, ಸ್ವತ: ಹಲವು ವರ್ಷಗಳಿಂದ ಕೋಟಿ ಗಟ್ಟಲೆ ಮೊತ್ತದ ವಿದ್ಯುತ್ ಬಿಲ್, ನೀರಿನ ಬಿಲ್, ಆಸ್ತಿತೆರಿಗೆ ಉಳಿಸಿಕೊಂಡಿರುವುದು ಬಯ ಲಾಗಿದೆ.

ಮೊದಲು ಸರಕಾರಿ ಆಸ್ತಿ ಜಪ್ತಿ ಆಗಲಿ

Profile Ashok Nayak Mar 4, 2025 5:31 AM

ಸೀಸರ ಹೆಂಡತಿ ಸಂಶಯಾತೀತಳಾಗಿರಬೇಕು ಎನ್ನುವುದು ರಾಜಕೀಯದಲ್ಲಿ ಆಗಾಗ ಕೇಳಿ ಬರುವ ಮಾತು. ರಾಜಕೀಯದಲ್ಲಿ ಆಯಕಟ್ಟಿನ ಜಾಗದಲ್ಲಿರುವವರ ನಡೆ ತಮ್ಮತ್ತ ಬೊಟ್ಟು ಮಾಡುವ ರೀತಿಯಲ್ಲಿ ಇರಬಾರದು ಎನ್ನಲು ಈ ಮಾತನ್ನು ಆಗಾಗ ಉಲ್ಲೇಖಿಸ ಲಾಗುತ್ತದೆ. ಇಂಥದ್ದೇ ಸನ್ನಿವೇಶದಲ್ಲಿ ಶ್ರೀರಾಮಚಂದ್ರ ಜನಸಾಮಾನ್ಯರ ಅಪವಾದದಿಂದ ಪಾರಾ ಗಲು ಸೀತೆಯನ್ನು ದೂರ ಮಾಡಿ ತಾನು ಸಂಕಟ ಅನುಭವಿಸುತ್ತಾನೆ. ಇದರ ಅರ್ಥ ಆಡಳಿತ ನಡೆಸುವವರ ನಡೆ, ನುಡಿ ಎಲ್ಲರಿಗೂ ಆದರ್ಶಪ್ರಾಯವಾಗಿರಬೇಕು. ಪ್ರಜಾ ಪ್ರಭುತ್ವವನ್ನು ಅಪ್ಪಿಕೊಂಡಿರುವ, ಎಲ್ಲೆಡೆ ಭ್ರಷ್ಟತೆ ಆವರಿಸಿಕೊಂಡಿರುವ ಈ ಜಮಾನ ದಲ್ಲಿ ಜನನಾಯಕರಲ್ಲಿ ಮೌಲ್ಯ, ಆದರ್ಶಗಳನ್ನು ಹುಡುಕುವುದು ಸಾವಿಲ್ಲದ ಮನೆಯಲ್ಲಿ ಸಾಸಿವೆ ಹುಡುಕಿದಂತಾಗಬಹುದು. ಆದರೆ ಕನಿಷ್ಠ ಪಕ್ಷ ಸರಕಾರದ ನಡೆ, ಧೋರಣೆಗಳು ಪ್ರಜೆಗಳಿಗೆ ಮಾದರಿಯಾಗಿರಬೇಕು.

ಇದನ್ನೂ ಓದಿ: Vishwavani Editorial: ಭಾಷಾ ವಿದ್ವೇಷಕ್ಕೆ ಅವಕಾಶ ಬೇಡ

ಆದರೆ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಜನರಲ್ಲಿ ಇರುವ ಕನಿಷ್ಠ ನೈತಿಕತೆ, ಆದರ್ಶಗಳು ಸರಕಾರದ ಬಳಿ ಇಲ್ಲ ಎನ್ನುವುದು ಸದ್ಯದ ವಾಸ್ತವ. ಹಣಕಾಸಿನ ಅಡಚಣೆಯಿಂದಲೋ, ಮರೆವಿನಿಂದಲೋ ಒಂದು ತಿಂಗಳ ನೀರಿನ ಬಿಲ್, ವಿದ್ಯುತ್ ಬಿಲ್ ಕಟ್ಟಲು ತಡ ಮಾಡುವ ಜನಸಾಮಾನ್ಯರ ಮೇಲೆ ದಂಡ ಹೇರುವ ಸರಕಾರ, ಸ್ವತ: ಹಲವು ವರ್ಷಗಳಿಂದ ಕೋಟಿ ಗಟ್ಟಲೆ ಮೊತ್ತದ ವಿದ್ಯುತ್ ಬಿಲ್, ನೀರಿನ ಬಿಲ್, ಆಸ್ತಿತೆರಿಗೆ ಉಳಿಸಿಕೊಂಡಿರುವುದು ಬಯ ಲಾಗಿದೆ.

ರಾಜ್ಯದ 250ಕ್ಕೂ ಹೆಚ್ಚು ಸರಕಾರಿ ಕಟ್ಟಡಗಳ ಆಸ್ತಿ ತೆರಿಗೆ ಇದುವರೆಗೂ ಸರಕಾರಕ್ಕೆ ಪಾವತಿಯಾಗಿಲ್ಲ. ವಿಧಾನಮಂಡಲ ಅಧಿವೇಶನದ ಹೊತ್ತಿನಲ್ಲಿ ಬಿಬಿಎಂಪಿ ಇವಕ್ಕೆ ನೋಟಿಸ್ ಜಾರಿ ಮಾಡಿರುವುದು ಆಡಳಿತದ ದೃಷ್ಟಿಯಿಂದ ದಿಟ್ಟ ಬೆಳವಣಿಗೆ. ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸುವಂತೆ ಸರಕಾರಿ ಕಚೇರಿಗಳಿಗೆ ಪದೇ ಪದೆ ಜ್ಞಾಪನಾ ಪತ್ರಗಳನ್ನು ಕಳುಹಿಸಿದರೂ ಪ್ರತಿಕ್ರಿಯೆ ಬಂದಿಲ್ಲ.

ಬಾಕಿ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ, ದಂಡವನ್ನು ಶೇ.50ರಷ್ಟು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡುವ ಒನ್ ಟೈಂ ಸೆಟಲಮೆಂಟ್ ಯೋಜನೆ ಸರಕಾರಿ ಕಚೇರಿಗಳಿಗೂ ಮುಕ್ತವಾಗಿತ್ತು. ಆದರೂ ಸರಕಾರಿ ಕಚೇರಿಗಳು ಇದರ ಪ್ರಯೋ ಜನ ಪಡೆದಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ‌

ಆಸ್ತಿ ತೆರಿಗೆ ಪಾವತಿಸದವರ ಸ್ಥಿರಾಸ್ತಿಯ ಹರಾಜಿಗೆ ಮುಂದಾಗಿರುವ ಮಹಾನಗರಪಾಲಿಕೆ ಮೊದಲು ಸರಕಾರಿ ಕಚೇರಿಗಳನ್ನೇ ಹರಾಜಿಗಿಡುವ ಮೂಲಕ ತನ್ನ ನ್ಯಾಯತತ್ಪರತೆ ಯನ್ನು ಎತ್ತಿ ಹಿಡಿಯಬೇಕು. ಈ ಮೂಲಕ ಸರಕಾರ ಮತ್ತು ಜನಸಾಮಾನ್ಯರಿಗೆ ಎಚ್ಚರಿ ಕೆಯ ಸಂದೇಶ ರವಾನಿಸಬೇಕು.