Maha Kumbh 2025: ತ್ರಿವೇಣಿ ಸಂಗಮದಲ್ಲಿ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಪುಣ್ಯ ಸ್ನಾನ
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹಲವು ಖ್ಯಾತನಾಮರು ಪುಣ್ಯಸ್ನಾನವನ್ನು ಕೈಗೊಳ್ಳುತ್ತಿದ್ದಾರೆ. ಇದಿಗ ಅವರ ಸಾಲಿಗೆ ಬಾಲಿವುಡ್ ನ ಖ್ಯಾತ ಕೊರಿಯಾಗ್ರಾಫರ್ ಸೇರಿಕೊಂಡಿದ್ದಾರೆ.
ಪ್ರಯಾಗ್‌ರಾಜ್: ಜ.13ರಿಂದ ಉತ್ತರಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ಪ್ರಾರಂಭಗೊಂಡಿರುವ ಮಹಾಕುಂಭ ಮೇಳದಲ್ಲಿ (Maha Kumbh) ಈಗಾಗಲೇ ಹಲವಾರು ಕ್ಷೇತ್ರಗಳ ಖ್ಯಾತನಾಮರು ಪುಣ್ಯ ಸ್ನಾನವನ್ನು ಕೈಗೊಂಡಿರುವುದು ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ತಮ್ಮ ಸಚಿವ ಸಂಪುಟ ಸದಸ್ಯರ ಜೊತೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನು ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮ ಕುಟುಂಬ ಸದಸ್ಯರ ಜೊತೆ ಪುಣ್ಯ ಸ್ನಾನವನ್ನು ಕೈಗೊಂಡಿದ್ದರು.
ಇದೀಗ ಬಾಲಿವುಡ್ ನ (Bollywood) ಕೊರಿಯೊಗ್ರಾಫರ್ ರೆಮೋ ಡಿ’ಸೋಜಾ ತನ್ನ ಪತ್ನಿ ಜೊತೆ ಬಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನು ಕೈಗೊಂಡಿರುವುದು ಮಾತ್ರವಲ್ಲದೇ ನದಿ ಮಧ್ಯದಲ್ಲಿ ದೋಣಿಯಲ್ಲಿ ಕುಳಿತು ಧ್ಯಾನವನ್ನೂ ಸಹ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ರೆಮೋ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಪಾಕಿಸ್ಥಾನದಿಂದ (Pakistan) ಬೆದರಿಕೆ ಕರೆಗಳು ಬಂದಿತ್ತು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ರೆಮೋ ಅವರು ಪತ್ನಿ ಲಿಝೆಲ್ಲಾ ಡಿ’ಸೋಜಾ ಸಹಿತ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ರೆಮೋ ಅವರು ತಾವು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನದ ಮೂಲಕ ಆಶೀರ್ವಾದವನ್ನು ಪಡೆದುಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಕಪ್ಪು ವಸ್ತ್ರವನ್ನು ಧರಿಸಿ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ವಿಡಿಯೋ ಒಂದನ್ನು ರೆಮೋ ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡು ಲಕ್ಷಾಂತರ ಭಕ್ತರ ನಡುವೆ ನಡೆಯುತ್ತಿರುವ ಮತ್ತು ನದಿ ಮಧ್ಯಕ್ಕಿಳಿದು ಸ್ನಾನವನ್ನು ಕೈಗೊಳ್ಳುತ್ತಿರುವ ಹಾಗು ದೋಣಿಯಲ್ಲಿ ಕುಳಿತು ಧ್ಯಾನವನ್ನು ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರೆಮೋ ಅವರು ಸ್ವಾಮಿ ಕೈಲಾಶಾನಂದ ಅವರ ಆಶೀರ್ವಾದವನ್ನೂ ಸಹ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Maha Kumbh: ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ! ವಿಡಿಯೊ
ರೆಮೋ ಅವರಿಗೆ ಬೆದರಿಕೆ ಇ-ಮೇಲ್ ಒಂದು ಬಂದಿದ್ದು ಅದರ ಮೂಲ ಪಾಕಿಸ್ಥಾನ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದ ಒಂದು ದಿನದ ಬಳಿಕ ರೆಮೋ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ‘ನಿಮ್ಮ ಇತ್ತಿಚಿನ ನಡವಳಿಕೆಗಳನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ. ಈ ಸೂಕ್ಷ್ಮ ವಿಚಾರವನ್ನು ನಿಮ್ಮ ಗಮನಕ್ಕೆ ತರುವುದು ಅಗತ್ಯವೆಂದು ನಾವು ಭಾವಿಸುತ್ತಿದ್ದೇವೆ. ಇದು ಯಾವುದೇ ಪಬ್ಲಿಕ್ ಸ್ಟಂಟ್ ಆಗಲಿ ಅಥವಾ ನಿಮಗೆ ಹಿಂಸೆ ಕೊಡುವ ಉದ್ದೇಶವಾಗಲಿ ನಮಗಿಲ್ಲ. ನೀವು ಈ ಸಂದೇಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಹಾಗೂ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.’ ಎಂಬ ಸಂದೇಶವುಳ್ಳ ಇಮೇಲ್ ರೆಮೋ ಅವರಿಗೆ ಬಂದಿತ್ತು.
ಈ ಇ-ಮೇಲ್ ಕಳುಹಿಸಿದವರು ತನ್ನನ್ನು ತಾನು ‘ವಿಷ್ಣು’ ಎಂದು ನಮೂದಿಸಿದ್ದರು ಹಾಗೂ ಇಮೇಲ್ ವಿಳಾಸ ‘ಡಾನ್99284’ ಎಂದಿತ್ತು. ರೆಮೋ ಅವರಿಗೆ ಮಾತ್ರವಲ್ಲದೇ ಹಾಸ್ಯನಟ ಕಪಿಲ್ ಶರ್ಮ, ನಟ ರಾಜ್ ಪಾಲ್ ಯಾದವ್ ಮತ್ತು ಹಾಸ್ಯನಟ ಸುಗಂಧ ಮಿಶ್ರ ಅವರಿಗೂ ಈ ರೀತಿಯ ಬೆದರಿಕೆ ಕರೆ ಬಂದಿರುವುದಾಗಿ ವರದಿಯಾಗಿದೆ.
ಆದರೆ ರೆಮೋ ಅವರ ಪತ್ನಿ ಲಿಝಿಲ್ಲೆ ಈ ಇ-ಮೇಲ್ ಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನಿಡಿದ್ದು, ರೆಮೋ ಅವರಿಗೆ ಯಾವುದೇ ರಿತಿಯ ಬೆದರಿಕೆ ಮೇಲ್ ಬಂದಿಲ್ಲ, ಬದಲಾಗಿ ಅದೊಂದು ಸ್ಪ್ಯಾಮ್ ಸಂದೇಶವಾಗಿತ್ತು ಹಾಗೂ ಈ ಬಗ್ಗೆ ಸೈಬರ್ ಸೆಲ್ ಅನ್ನು ಸಂಪರ್ಕಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.