ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maha Kumbh 2025: ಮಹಾಕುಂಭ ಮೇಳದಲ್ಲಿ ಸಾಧ್ವಿ ಹರ್ಷ ಹವಾ; ಈಕೆಯನ್ನು ನೆಟ್ಟಿಗರು ಟ್ರೋಲ್ ಮಾಡ್ತಿರೋದ್ಯಾಕೆ..!?

Maha Kumbh 2025: ಪ್ರಯಾಗ್‌ರಾಜ್‌ನಲ್ಲಿ ಚಾಲನೆ ಪಡೆದುಕೊಂಡಿರುವ ಮಹಾಕುಂಭ ಮೇಳದಲ್ಲಿ ಹಲವು ವೈಶಿಷ್ಟ್ಯಗಳು ಗಮನ ಸೆಳೆಯುತ್ತಿವೆ. ನಟಿ ಹಾಗೂ ನಿರೂಪಕಿಯಾಗಿರುವ ಹರ್ಷ ಇದೀಗ ಸಾಧ್ವಿಯಾಗಿ ಈ ಕುಂಭಮೇಳಕ್ಕೆ ಎಂಟ್ರಿ ಕೊಟ್ಟಿದ್ದು ಅವರೀಗ ಅಲ್ಲಿಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

ಸಾಧ್ವಿ ಹರ್ಷ

ಲಖನೌ, ಜ. 16, 2025: ಮಹಾ ಕುಂಭಮೇಳ 2025 (Maha Kumbh 2025)ಕ್ಕೆ ವೈಭವದ ಚಾಲನೆ ದೊರೆತಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಗಂಗಾ-ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತೀ ನದಿಗಳ ತ್ರಿವೇಣಿ ಸಂಗಮದಲ್ಲಿ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿಯದ್ದು ಮಹಾ ಕುಂಭ ಮೇಳವಾಗಿದೆ.

ಪೌಷ ಪೌರ್ಣಮಿಯ ಶುಭ ದಿನವಾಗಿದ್ದ ಜ. 13ರಂದು ಲಕ್ಷಾಂತರ ಆಸ್ತಿಕರು ಗಂಗಾನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿ ಪುನೀತರಾದರು. ಈ ಮಹಾ ಧಾರ್ಮಿಕ ಸಮಾಗಮದಲ್ಲಿ ಭಾಗಿಯಾಗಲು ದೇಶದ ಮೂಲೆ ಮೂಲೆಗಳಿಂದ ಸಾಧು ಸಂತರು ಪ್ರಯಾಗ್‌ರಾಜ್‌ಗೆ ಈಗಾಗಲೇ ಆಗಮಿಸಿದ್ದಾರೆ. ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತರು ಈ ಮಹಾಮೇಳವನ್ನು ಕಣ್ತುಂಬಿಕೊಳ್ಳಲು ಮತ್ತು ಗಂಗಾ ಸ್ನಾನವನ್ನು ಮಾಡಲು ಆಗಮಿಸುತ್ತಿರುವುದು ವಿಶೇಷ.

ತಾನು ಉತ್ತರಾಖಂಡದವಳಾಗಿದ್ದು, ಆಚಾರ್ಯ ಮಹಾಮಂಡಲೇಶ್ವರ ಅವರ ಶಿಷ್ಯೆಯಾಗಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ತನ್ನ ಸೌಂದರ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ನಾನು ಅದೆಲ್ಲವನ್ನೂ ಬಿಟ್ಟು ಇದೀಗ ನನಗೆ ಏನು ಅಗತ್ಯವಿದೆಯೋ ಆ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ’ ಎಂದು ಮಾರ್ಮಿಕ ಉತ್ತರವನ್ನು ನೀಡಿದ್ದಾರೆ. ‘ನನ್ನೊಳಗಿನ ಶಾಂತಿಗಾಗಿ ನಾನು ಸಾಧ್ವಿ ಜೀವನವನ್ನು ಆರಿಸಿಕೊಂಡಿದ್ದೇನೆ’ ಎಂದು ಆಕೆ ಉತ್ತರಿಸಿದ್ದಾಳೆ. ನನಗೀಗ 30 ವರ್ಷ ಮತ್ತು ಕಳೆದ 2 ವರ್ಷಗಳಿಂದ ನಾನು ಸಾಧ್ವಿ ಜೀವನವನ್ನು ನಡೆಸುತ್ತಿರುವುದಾಗಿಯೂ ಹರ್ಷ ತನ್ನ ಹಿನ್ನಲೆಯನ್ನು ಬಹಿರಂಗಗೊಳಿಸಿದ್ದಾರೆ.

‘ನಟಿಯಾಗಿ, ನಿರುಪಕಿಯಾಗಿ, ವಿಶ್ವ ಪರ್ಯಟನೆ ಮಾಡಿ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದರೂ ಇದ್ಯಾವುದೂ ನಿಜವಾದ ಶಾಂತಿಯನ್ನು ನೀಡುವುದಿಲ್ಲ ಎಂಬುದು ನಿಮಗೆ ತಿಳಿಯುತ್ತದೆ. ಯಾವಾಗ ಆಧ್ಯಾತ್ಮ ನಿಮ್ಮನ್ನು ಸೆಳೆಯುತ್ತದೋ, ಆವಾಗ ನೀವು ಈ ಪ್ರಾಪಂಚಿಕ ಬಂಧವನ್ನೆಲ್ಲ ಕಳಚಿಕೊಂಡು, ಭಗವಂತನ ನಾಮಸ್ಮರಣೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ’ ಎಂದು ಆಧ್ಯಾತ್ಮದ ನುಡಿಗಳನ್ನಾಡಿರುವ ಈ ಸಾಧ್ವಿ, ತಾನು ಈ ಹಿಂದೆ ನಟಿಯಾಗಿದ್ದೆ ಎಂದೂ ಹೇಳಿಕೊಂಡಿದ್ದಾರೆ.





ವಿದೇಶಿ ಆಸಕ್ತರ ಕುಂಭ ಮೇಳದ ಅನುಭವಗಳ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜತೆಗೆ ವೈರಲ್ ಆಗುತ್ತಿದೆ. ಈ ಸಂರ್ಭದಲ್ಲಿ ತಮ್ಮ ಚೆಲುವಿನಂದಲೇ ಸಾಧ್ವು ಹರ್ಷ ಕುಂಭಮೇಳದ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದ್ದಾರೆ.

ಸಾಧ್ವಿ ಹರ್ಷ ಈ ಮಹಾ ಕುಂಭಮೇಳಕ್ಕೆ ರಥವನ್ನೇರಿ ಆಗಮಿಸಿದ ಸಂದರ್ಭದಲ್ಲಿ ಆಕೆಯನ್ನು ಯೂಟ್ಯೂಬರ್ ಒಬ್ಬರು ಮಾತನಾಡಿಸಿದ್ದು, ಈ ವಿಡಿಯೋ ಇದೀಗ ನೆಟ್ ಲೋಕದ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಇಷ್ಟು ಸಣ್ಣ ಪ್ರಾಯದಲ್ಲೇ ತಾನೇಕೆ ಸಾಧ್ವಿ ಜಿವನವನ್ನು ಆರಿಸಿಕೊಂಡೆ ಎಂಬ ಪ್ರಶ್ನೆಗೆ ಈ ಸಾಧ್ವಿ ನೀಡಿರುವ ಉತ್ತರವೂ ಸಹ ಇದೀಗ ವೈರಲ್‌ ಆಗಿದೆ.

ಹರ್ಷ ರಿಚ್ಚಾರಿಯಾ ತಾನೇ ಹೇಳಿಕೊಂಡಿರುವಂತೆ ಆಕೆ ಒಬ್ಬ ನಟಿ, ನಿರೂಪಕಿ ಮತ್ತು ಈಗಾಗಲೇ ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ. ಸಾಧ್ವಿ ಜೀವನವನ್ನು ಆರಿಸಿಕೊಂಡ ಬಳಿಕವೂ ಹರ್ಷ ಅವರು ಈಗಲೂ ಮದುವೆ ಸಮಾರಂಭಗಳಲ್ಲಿ ನಿರೂಪಕಿಯಾಗಿ ಭಾಗವಹಿಸುತ್ತಿದ್ದಾರೆ ಎಂಬುದು ಆಕೆಯ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಂದ ತಿಳಿಯುತ್ತದೆ. ಆಕೆಯ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ ಎಂದರೆ ಆಕೆ ಮಹಾಕುಂಭ ಮೇಳಕ್ಕೆ ಎಲ್ಲರನ್ನೂ ಆಹ್ವಾನಿಸುತ್ತಿರುವುದಾಗಿತ್ತು. ಈಕೆಗೆ ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷದ 90 ಸಾವಿರ ಫಾಲೋವರ್ಸ್‌ಗಳಿದ್ದು, ಈಗಾಗಲೇ 2,500 ಪೋಸ್ಟ್ ಗಳನ್ನು ಹಾಕಿದ್ದಾರೆ.

ಸಾಧ್ವಿ ಹರ್ಷ ಮಹಾಕುಂಭ ಮೇಳಕ್ಕೆ ಆಗಮಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿರುವಂತೆ ನೆಟ್ಟಿಗರ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದೆ. ಹೆಚ್ಚಿನವರು ಆಕೆ ಒಬ್ಬ ನಟಿ ಎಂಬುದನ್ನೇ ಹೈಲೈಟ್ ಮಾಡುತ್ತಿದ್ದಾರೆ. ‘ಈ ಮಹಾಕುಂಭದಲ್ಲಿ ತನ್ನನ್ನು ತಾನು ಸಾಧ್ವಿ ಎಂದು ಹೇಳಿಕೊಳ್ಳುತ್ತಿರುವ ಈ ಮಹಿಳೆಯ ಬಗ್ಗೆ ಸತ್ಯವನ್ನು ನಾನು ಹೇಳುತ್ತೇನೆ. ಈಕೆ ಒಬ್ಬ ನಿರೂಪಕಿ, ಬ್ಲಾಗರ್, ಫಿಟ್ನೆಸ್ ಟ್ರೈನರ್, ಈಕೆಯನ್ನು ಒಬ್ಬ ಮಹಾತ್ಮ ಎಂಬಂತೆ ಗೌರವಿಸಲಾಗುತ್ತಿದೆ. ಈಕೆ ತನ್ನನ್ನು ಆಚಾರ್ಯ ಮಹಾಮಂಡಲೇಶ್ವರ ಅವರ ಶಿಷ್ಯೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಎಲ್ಲ ಶಿಷ್ಯರಿಗೂ ಇದೇ ರೀತಿಯ ಮರ್ಯಾದೆ ಸಿಗುವುದೇ? ಇಂತವರ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್‌ನಲ್ಲಿ ಸರ್ಚ್ ಮಾಡಿ. ಸತ್ಯಾಂಶವಿಲ್ಲದೇ ನಾನು ಏನನ್ನೂ ಬರೆಯೋದಿಲ್ಲ’ ಎಂದು ಒಬ್ಬರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೊಬ್ಬ ಪತ್ರಕರ್ತರು ಈಕೆ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೊವನ್ನು ಶೇರ್ ಮಾಡಿ, ‘ಈಕೆ ಆಕೆಯೇ ಹೌದಾ..? ಹೌದೆಂದಾಗಿದ್ದಲ್ಲಿ, ಇಂತವರ ಬಗ್ಗೆ ಎಚ್ಚರಿಕೆಯಿಂದಿರಿ’ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನವರು ಈಕೆಯ ಹಿಂದಿನ ಗ್ಲ್ಯಾಮರಸ್ ಫೊಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದು, ಇದೀಗ ಈಕೆ ಕೇವಲ ಪ್ರಚಾರಕ್ಕಾಗಿ ಮಾತ್ರವೇ ಮಹಾಕುಂಭ ಮೇಳಕ್ಕೆ ಬಂದಿದ್ದಾರೆ, ಆಧ್ಯಾತ್ಮ ಸಾಧನೆಗಲ್ಲ ಎಂದು ಕಮೆಂಟ್ ಹಾಕುತ್ತಿದ್ದಾರೆ.