Mahakumbh: ಕುಂಭಮೇಳ ಕಾಲ್ತುಳಿತ ದುರಂತ; ಬಾಹ್ಯಾಕಾಶದಿಂದ ಫೋಟೊ ರಿಲೀಸ್
ಮಹಾ ಕುಂಭಮೇಳದಲ್ಲಿ ಬುಧವಾರ (ಜ. 29) ಕಾಲ್ತುಳಿತದಿಂದ 30 ಜನರು ದುರ್ಮರಣ ಹೊಂದಿದ ನಂತರ ಬಾಹ್ಯಾಕಾಶದಿಂದ ತೆಗೆದ ಅಪರೂಪದ ಫೋಟೊಗಳು ಇದೀಗ ಸಖತ್ ವೈರಲ್ ಆಗಿವೆ. ಫೋಟೊಗಳನ್ನು ಹಗಲಿನಲ್ಲಿ ಸೆರೆಹಿಡಿಯಲಾಗಿದೆ.

Mahakumbh

ಲಖನೌ: ಮಹಾ ಕುಂಭಮೇಳದಲ್ಲಿ(Mahakumbh) ಬುಧವಾರ (ಜ. 29) ಕಾಲ್ತುಳಿತದಿಂದ 30 ಜನರು ದುರ್ಮರಣ ಹೊಂದಿದ ನಂತರ ಬಾಹ್ಯಾಕಾಶದಿಂದ ತೆಗೆದ ಅಪರೂಪದ ಫೋಟೊಗಳು ಇದೀಗ ಸಖತ್ ವೈರಲ್ ಆಗಿವೆ. ಫೋಟೊಗಳನ್ನು ಹಗಲಿನಲ್ಲಿ ಸೆರೆಹಿಡಿಯಲಾಗಿದ್ದು, ತ್ರಿವೇಣಿ ಸಂಗಮ ಮತ್ತು ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಿರುವ ಭಕ್ತರ ದಂಡನ್ನು ಫೋಟೊದಲ್ಲಿ ಕಾಣಬಹುದು.
ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದ ದುರಂತದಿಂದ 30 ಜನರು ಮೃತಪಟ್ಟು, 60 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಸೇರಿದ್ದರು. ಜನರು ಕಿಕ್ಕಿರಿದು ನೂಕು ನುಗ್ಗಲಾದ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು.
ಬಾಹ್ಯಾಕಾಶದಿಂದ ತೆಗೆದ ಚಿತ್ರದಲ್ಲಿ ಯಮುನಾ, ಗಂಗಾ ಮತ್ತು ಸರಸ್ವತಿಯ ಸಂಗಮವನ್ನು ನೋಡಬಹುದು. ಭಕ್ತರು ಸರದಿ ಸಾಲಿನಲ್ಲಿ ಪುಣ್ಯಸ್ನಾನ ಮಾಡಲು ಸಾಲುಗಟ್ಟಿ ನಿಂತಿರುವುದನ್ನೂ ಕಾಣಬಹುದು. ಭಕ್ತರು ಪವಿತ್ರ ಸ್ನಾನ ಮಾಡುವ ಸಂಗಮ ತೀರದಿಂದ ಕೆಲವು ಮೀಟರ್‌ಗಳ ದೂರದಲ್ಲಿ ನಿಂತಿದ್ದಾರೆ. ನದಿಯ ಬಳಿ ದೋಣಿಯಿಂದ ಸುತ್ತುವರಿದ ಆವರಣವನ್ನು ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ:Mahakumbh 2025: ಕುಂಭಮೇಳದಲ್ಲಿ VIP ಪಾಸ್ ರದ್ದು, ವಾಹನಗಳಿಗೆ ನಿರ್ಬಂಧ; ಕಾಲ್ತುಳಿತದ ಬೆನ್ನಲ್ಲೇ ರೂಲ್ ಚೇಂಜ್!
ಫೋಟೊಗಳನ್ನು ಮಧ್ಯಾಹ್ನದ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಕಾಲ್ತುಳಿತ ದುರಂತ ಘಟನೆ ನಡೆದ ಕೆಲವು ಗಂಟೆಗಳ ನಂತರ ಫೋಟೊ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ. ಜೂಮ್-ಇನ್ ಚಿತ್ರವು ನೂರಾರು ದೋಣಿಗಳು ತೀರಕ್ಕೆ ಹತ್ತಿರದಲ್ಲಿ ಲಂಗರು ಹಾಕಿರುವುದನ್ನು ತೋರಿಸುತ್ತದೆ. ಈ ದೋಣಿಗಳು ಭಕ್ತರನ್ನು ಪವಿತ್ರ ಸ್ನಾನಕ್ಕಾಗಿ 'ತ್ರಿವೇಣಿ ಸಂಗಮ'ಕ್ಕೆ ಕರೆದೊಯ್ಯಲು ಸಹಕಾರಿಯಾಗುತ್ತವೆ.
ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಹಲವರ ದುರ್ಮರಣ
ಬುಧವಾರ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಉಂಟಾದ ಕಾಲ್ತುಳಿತದಿಂದ 30 ಜನರು ಮೃತಪಟ್ಟಿದ್ದಾರೆ. ಅಧಿಕಾರಿಗಳ ಪ್ರಕಾರ ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಸೇರಿದ್ದಾಗ ಈ ಘಟನೆ ಸಂಭವಿಸಿದೆ. ಭಕ್ತರ ನೂಕುನುಗ್ಗಲಿಗೆ ಸಂಗಮ್‌ನಲ್ಲಿ ನಿರ್ಮಾಣ ಮಾಡಿದ್ದ ತಡೆಗೋಡೆ ಮುರಿದು ಹೋಗಿ ಕುಂಭ ಮೇಳದ ವಿಶೇಷ ಕರ್ತವ್ಯ ಅಧಿಕಾರಿ ಆಕಾಂಕ್ಷಾ ರಾಣಾ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.