Mahakumbh 2025: ಕುಂಭಮೇಳದಲ್ಲಿ VIP ಪಾಸ್ ರದ್ದು, ವಾಹನಗಳಿಗೆ ನಿರ್ಬಂಧ; ಕಾಲ್ತುಳಿತದ ಬೆನ್ನಲ್ಲೇ ರೂಲ್ ಚೇಂಜ್!
ಉತ್ತರ ಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತದ ನಂತರ ಕೆಲ ಬದಲಾವಣೆಗಳನ್ನು ತಂದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಕೆಲ ಮಾರ್ಗಸೂಚಿಗಳನ್ನು ಪ್ರಕಟ ಮಾಡಲಾಗಿದೆ. ಇನ್ನು ಮುಂದೆ ಕುಂಭ ಮೇಳದಲ್ಲಿ ವಿವಿಐಪಿ ಪಾಸ್‌ಗಳು ರದ್ದಾಗಲಿವೆ.
![ಕಾಲ್ತುಳಿತದ ನಂತರ ಮಹಾಕುಂಭ ಮೇಳದಲ್ಲಿ ಹೊಸ ರೂಲ್ಸ್ !](https://cdn-vishwavani-prod.hindverse.com/media/original_images/mahakmbh_Mela.jpg)
mahakmbh Mela 2025
![Profile](https://vishwavani.news/static/img/user.png)
ಲಖನೌ: ಉತ್ತರ ಪ್ರದೇಶದಲ್ಲಿ(Uttar Pradesh) ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ(Mahakumbh 2025) ಭಾರೀ ಅನಾಹುತವೊಂದು ನಡೆದಿದ್ದು, ಮೌನಿ ಅಮವಾಸ್ಯೆಯಂದು ಕಾಲ್ತುಳಿತ ಉಂಟಾಗಿ 30 ಜನರು ಮೃತ ಪಟ್ಟಿದ್ದರೆ, ಹಲವಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲ್ತುಳಿತದ ನಂತರ ಎಚ್ಚೆತ್ತ ಉತ್ತರ ಪ್ರದೇಶ ಸರ್ಕಾರ ಜನಸಂದಣಿಯನ್ನು ನಿಯಂತ್ರಿಸಲು ಹಾಗೂ ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ನೇತೃತ್ವದಲ್ಲಿ ವಿಶೇಷ ಸಭೆಯಲ್ಲಿ ಆಡಳಿತ ವರ್ಗಕ್ಕೆ ಸೂಚನೆ ನೀಡಿದ್ದಾರೆ.
ಪ್ರಮುಖ ಮಾರ್ಗ ಸೂಚಿಗಳೇನು?
ಸಂಪೂರ್ಣ ವಾಹನ ರಹಿತ ವಲಯ: ಮಹಾ ಕುಂಭ ಜಾತ್ರೆ ಪ್ರದೇಶದಲ್ಲಿ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವಿವಿಐಪಿ ಪಾಸ್‌ಗಳನ್ನು ರದ್ದು: ಇನ್ನು ಮುಂದೆ ಕುಂಭ ಮೇಳದಲ್ಲಿ ಯಾವುದೇ ವಿವಿಐಪಿ ಪಾಸ್‌ಗಳು ಮಾನ್ಯವಾಗಿರುವುದಿಲ್ಲ. ವಿವಿಐಪಿ ಪಾಸ್‌ಗಳನ್ನು ತೋರಿಸಿದರೆ ವಾಹನ ಪ್ರವೇಶವಕ್ಕೆ ಅನುಮತಿ ಇರುವುದಿಲ್ಲ.
ಏಕಮುಖ ಮಾರ್ಗ ವ್ಯವಸ್ಥೆ: ಭಕ್ತಾದಿಗಳ ಸಂಚಾರ ಸುಗಮಗೊಳಿಸಲು ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪುಣ್ಯ ಸ್ನಾನಕ್ಕೆ ಹೋಗುವವರು ಹಾಗೂ ಬರುವವರಿಗೆ ಪ್ರತ್ಯೇಕ ಮಾರ್ಗವನ್ನು ಮಾಡಲಾಗಿದೆ. ಇದರಿಂದ ಘರ್ಷಣೆಯನ್ನು ತಪ್ಪಿಸಬಹುದಾಗಿದೆ.
ರೈಲು, ಬಸ್‌ಗಳ ಮೇಲೆ ನಿಗಾ: ಕುಂಭ ಮೇಳಕ್ಕೆ ಕೋಟ್ಯಾಂತರ ಜನರು ಬರುತ್ತಿದ್ದು, ಅವರ ರಕ್ಷಣೆಗಾಗಿ ಯೋಗಿ ಸರ್ಕಾರ ಬಸ್ ಹಾಗೂ ರೈಲು ಮಾರ್ಗಗಳ ಮೇಲೆ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಸಾರಿಗೆ ನಿಗಮಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡವಂತೆ ಸೂಚನೆ ನೀಡಲಾಗಿದೆ.
ಫೆ.4ರವರೆಗೆ ಕಟ್ಟುನಿಟ್ಟಿನ ನಿರ್ಬಂಧ: ಸದ್ಯ ಕಾಲ್ತುಳಿತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಫೆ 4 ರವರೆಗೆ ನಾಲ್ಕು ಚಕ್ರದ ವಾಹನಗಳ ನಗರದ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೆಚ್ಚಿನ ಭದ್ರತೆಯನ್ನು ಒದಗಿಸಲು ಇಬ್ಬರು ಅನುಭವಿ ಅಧಿಕಾರಿಗಳಾದ ಆಶಿಶ್ ಗೋಯಲ್ ಮತ್ತು ಭಾನು ಗೋಸ್ವಾಮಿ ಅವರನ್ನು ಕುಂಭ ಮೇಳದಲ್ಲಿ ನಿಯೋಜಿಸಲಾಗಿದೆ. ಇಬ್ಬರೂ ಅಧಿಕಾರಿಗಳು 2019 ರಲ್ಲಿ ನಡೆದಿದ್ದ ಕುಂಭಮೇಳ ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಈ ಸುದ್ದಿಯನ್ನೂ ಓದಿ: Mahakumbh 2025 : ಮಹಾಕುಂಭ ಮೇಳಕ್ಕೆ ಹೋಗುವವರಿಗೆ ಸಿಹಿ ಸುದ್ದಿ; ವಿಮಾನ ಟಿಕೆಟ್ ದರ ಅರ್ಧದಷ್ಟು ಇಳಿಕೆ!
ನ್ಯಾಯಾಂಗ ಆಯೋಗ ಸ್ಥಾಪನೆ
ಕಾಲ್ತುಳಿತಕ್ಕೆ ಕಾರಣಗಳ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ನೇಮಿಸಲಾಗಿದೆ. ಸಮಿತಿಯಲ್ಲಿ ನ್ಯಾಯಮೂರ್ತಿ ಹರ್ಷ್ ಕುಮಾರ್, ಮಾಜಿ ಮಹಾನಿರ್ದೇಶಕ ವಿಕೆ ಗುಪ್ತಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಿಕೆ ಸಿಂಗ್ ಇದ್ದಾರೆ. ನ್ಯಾಯಾಂಗ ತನಿಖೆಯ ಜೊತೆಗೆ ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.