Maoists Killed: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಯ ಭರ್ಜರಿ ಬೇಟೆ; ಮೂವರು ಮಾವೋವಾದಿಗಳ ಹತ್ಯೆ
Maoists Killed: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಯ ಭರ್ಜರಿ ಬೇಟೆ; ಮೂವರು ಮಾವೋವಾದಿಗಳ ಹತ್ಯೆ


ರಾಯ್‌ಪುರ: ಛತ್ತೀಸ್‌ಗಢ (Chhattisgarh)ದಲ್ಲಿ ಭಾನುವಾರ (ಜ. 12) ಭದ್ರತಾ ಪಡೆಯ ಸಿಬ್ಬಂದಿ ಭರ್ಜರಿ ಬೇಟೆಯಾಡಿದ್ದು, ಮೂವರು ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ. ಛತ್ತೀಸ್‌ಗಢದ ಬಿಜಾಪುರ (Bijapur) ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ʼʼಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ಪ್ರಾರಂಭವಾಯಿತುʼʼ ಎಂದು ಬಸ್ತಾರ್ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರ್‌ರಾಜ್ ಪಿ. ಮಾಹಿತಿ ನೀಡಿದ್ದಾರೆ (Maoists Killed).
ʼʼಜಿಲ್ಲಾ ರಿಸರ್ವ್ ಗಾರ್ಡ್ (District Reserve Guard), ವಿಶೇಷ ಕಾರ್ಯಪಡೆ (Special Task Force) ಮತ್ತು ಜಿಲ್ಲಾ ಪಡೆ (District Force)ಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ. ಗುಂಡಿನ ಚಕಮಕಿ ಬಳಿಕ ಸ್ಥಳದಲ್ಲಿ ಬಂದೂಕು ಮತ್ತು ಸ್ಫೋಟಕ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಕಂಡು ಬಂದಿದೆ. ಸಮವಸ್ತ್ರ ಧರಿಸಿದ ಮೂವರು ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
In a Naxal encounter in Bijapur district of Chhattisgarh National Park area on January 12, 2025, three Maoists in uniform were killed. Weapons, explosives, and Naxal materials were recovered. The search operation is ongoing, and identification of the deceased Maoists is underway pic.twitter.com/pNHjbplBRm— IANS (@ians_india) January 12, 2025
ಸದ್ಯ ಅಧಿಕಾರಿಗಳು ಸ್ಥಳದಲ್ಲೇ ಬೀಡಿ ಬಿಟ್ಟಿದ್ದು, ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ವರ್ಷ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 12 ಮಾವೋವಾದಿಗಳು ಹತರಾಗಿದ್ದಾರೆ. ನಾರಾಯಣಪುರ-ದಾಂತೇವಾಡ-ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅಬುಜ್ಮದ್‌ನಲ್ಲಿ ಭದ್ರತಾ ಪಡೆಗಳು 3 ದಿನಗಳ ಕಾಲ ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಜ. 6ರಂದು ಇಬ್ಬರು ಮಹಿಳೆಯರು ಸೇರಿದಂತೆ ಐವರು ಮಾವೋವಾದಿಗಳು ಸಾವನ್ನಪ್ಪಿದ್ದರು.
ಇನ್ನು ಜ. 9ರಂದು ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಾವೋವಾದಿಗಳು ಅಸುನೀಗಿದ್ದರು. ಜ. 3ರಂದು ರಾಯ್‌ಪುರ ವಿಭಾಗದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಕಳೆದ ವರ್ಷ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ 219 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.
ಐಇಡಿ ಸ್ಫೋಟಿಸಿದ್ದ ನಕ್ಸಲರು
ಛತ್ತೀಸ್‌ಗಢದ ಬಿಜಾಪುರದಲ್ಲಿ ಜ. 6ರಂದು ನಕ್ಸಲರು ಐಇಡಿ (IED) ಸ್ಫೋಟಿಸಿದ್ದು, ಭದ್ರತಾ ಪಡೆಯ ಸಿಬ್ಬಂದಿ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಭದ್ರತಾ ಪಡೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ನಕ್ಸಲರು ದಾಳಿ ನಡೆಸಿದ್ದು, 8 ದಾಂತೇವಾಡ ಡಿಆರ್‌ಜಿ ಜವಾನರು ಮತ್ತು ಓರ್ವ ಚಾಲಕ ಸೇರಿ 9 ಹುತಾತ್ಮರಾಗಿದ್ದರು. ದಾಂತೇವಾಡ, ನಾರಾಯಣಪುರ ಮತ್ತು ಬಿಜಾಪುರಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಡಿಆರ್‌ಜಿ ಜವಾನರು ಹಿಂದಿರುಗುತ್ತಿದ್ದ ವೇಳೆ ನಕ್ಸಲರು ಸ್ಫೋಟ ನಡೆಸಿದ್ದರು. ಬಿಜಾಪುರ ಜಿಲ್ಲೆಯ ಬೆದ್ರೆ-ಕುಟ್ರು ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿತ್ತು.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾವೋವಾದಿ ಗುಂಪುಗಳನ್ನು ಉದ್ದೇಶಿಸಿ ಮಾತನಾಡಿ, ಶರಣಾಗತ ಮಾವೋವಾದಿಗಳ ಗುಂಪಿಗೆ ನರೇಂದ್ರ ಮೋದಿ ಅವರ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ಮಾಡುತ್ತದೆ ಎಂದು ಭರವಸೆ ನೀಡಿದ್ದರು.
ಈ ಸುದ್ದಿಯನ್ನೂ ಓದಿ: ಮುಂದುವರಿದ ನಕ್ಸಲರ ಅಟ್ಟಹಾಸ; 8 ಭದ್ರತಾ ಸಿಬ್ಬಂದಿ ಹುತಾತ್ಮ