ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ದ ಗೆದ್ದ ಎಂಐ ಕೇಪ್ ಟೌನ್‌ಗೆ ಚೊಚ್ಚಲ ಎಸ್‌ಎ20 ಗರಿ!
MI Cape Town maiden SA20: ಕಳೆದ ಎರಡು ಆವೃತ್ತಿಗಳಲ್ಲಿ ವೈಫಲ್ಯ ಅನುಭವಿಸಿದ್ದ ಎಂಐ ಕೇಪ್ ಟೌನ್ ತಂಡ ದಕ್ಷಿಣ ಆಫ್ರಿಕಾ20 ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಫೆಬ್ರವರಿ 8 ರಂದು ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಫ್ ವಿರುದ್ಧ 76 ರನ್‌ಗಳಿಂದ ಗೆದ್ದು, ರಶೀದ್ ಖಾನ್ ಪಡೆ ಚಾಂಪಿಯನ್ ಆಗಿದೆ.

MI Cape Town maiden SA20 title

ಜೋಹಾನ್ಸ್‌ಬರ್ಗ್: ಕಳೆದ ಎರಡು ಆವೃತ್ತಿಗಳಲ್ಲಿ ವೈಫಲ್ಯ ಕಂಡಿದ್ದ ರಶೀದ್ ಖಾನ್ ನಾಯಕತ್ವದ ಎಂಐ ಕೇಪ್ ಟೌನ್ ತಂಡ, 2025ರ ದಕ್ಷಿಣ ಆಫ್ರಿಕಾ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೆಬ್ರವರಿ 8 ರಂದು ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಸಂಘಟಿತ ಪ್ರದರ್ಶನ ತೋರಿದ ಎಂಐ ಕೇಪ್ ಟೌನ್, ಎದುರಾಳಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ಧ 76 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಚೊಚ್ಚಲ ಎಸ್‌ಎ20 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಎಂಐ ಕೇಪ್‌ಟೌನ್ ತಂಡದ ಪರ ಕಗಿಸೊ ರಬಾಡ 4 ವಿಕೆಟ್‌ಗಳನ್ನು ಕಬಳಿಸಿದರೆ, ಟ್ರೆಂಟ್ ಬೌಲ್ಟ್ ಮತ್ತು ಜಾರ್ಜ್ ಲಿಂಡ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಎಂಐ ಕೇಪ್ ಟೌನ್ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಆ ಮೂಲಕ ಇಲ್ಲಿನ ಬ್ಯಾಟಿಂಗ್ ಕಂಡೀಷನ್ಸ್ ಅನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ಡೆವಾಲ್ಡ್ ಬ್ರೆವಿಸ್ ಹಾಗೂ ಜಾರ್ಜ್ ಲಿಂಡೆ ಅವರು ಎಂಐ ತಂಡದ ಪರ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು.
Rashid Khan: ಟಿ20ಯಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
ಡೆವಾಲ್ಡ್ ಬ್ರೆವಿಸ್ ಅವರು ಕೇವಲ 18 ಎಸೆತಗಳಲ್ಲಿ 38 ರನ್ ಗಳಿಸಿದರೆ, ರಿಕಲ್ಟನ್ 15 ಎಸೆತಗಳಲ್ಲಿ 33 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಎಂಐ ಕೇಪ್ ಟೌನ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ಗೆ 182 ರನ್‌ಗಳ ಗುರಿಯನ್ನು ನೀಡಿತು. ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮಾರ್ಕೊ ಯೆನ್ಸನ್, ಲಿಯಾಮ್ ಡಾಸನ್ ಹಾಗೂ ರಿಚರ್ಡ್ ಗ್ಲೀಸನ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
HISTORY WRITTEN IN GOLD! 🏆💙 @MICapeTown reign supreme as the new Betway SA20 champions! What a season, what a final!#BetwaySA20Final #MICTvSEC #WelcomeToIncredible pic.twitter.com/UQPoK3fCNN
— Betway SA20 (@SA20_League) February 8, 2025
ಸನ್‌ರೈಸರ್ಸ್‌ಗೆ ಶಾಕ್ ನೀಡಿದ ಕಗಿಸೊ ರಬಾಡ
ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಎಂಐ ಕೇಪ್ ಟೌನ್ ಬೌಲರ್‌ಗಳು ಬೇಟೆಯಾಡಿದರು. ಅದರಲ್ಲಿಯೂ ವಿಶೇಷವಾಗಿ ಕಗಿಸೊ ರಬಾಡ ತಮ್ಮ ಮಾರಕ ಬೌಲಿಂಗ್ ದಾಳಿಯನ್ನು ನಡೆಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದರು. ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ 25 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಇವರಿಗೆ ಚೆಂಡಿನಲ್ಲಿ ಸಾಥ್ ನೀಡಿದ್ದ ಟ್ರೆಂಟ್ ಬೌಲ್ಡ್ ಬೌಲ್ ಮಾಡಿದ್ದ 4 ಓವರ್‌ಗಳಲ್ಲಿ ಕೇವಲ 9 ರನ್ ನೀಡಿ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು. ಅಂತಿಮವಾಗಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ 18.4 ಓವರ್‌ಗಳಿಗೆ 105 ರನ್‌ಗಳಿಗೆ ಆಲ್‌ಔಟ್ ಆಯಿತು.
ಕಳೆದ ಎರಡು ಆವೃತ್ತಿಗಳಲ್ಲಿ ವೈಫಲ್ಯ ಅನುಭವಿಸಿದ್ದ ಎಂಐ ಕೇಪ್ ಟೌನ್
ಕಳೆದ ಎರಡು ಆವೃತ್ತಿಗಳಲ್ಲಿ ಎಂಐ ಕೇಪ್‌ಟೌನ್ ಕಳಪೆ ಪ್ರದರ್ಶನವನ್ನು ತೋರಿತ್ತು. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಆವೃತ್ತಿಯಲ್ಲಿ ರಶೀದ್ ಖಾನ್ ಪಡೆ, ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಚೊಚ್ಚಲ ಎಸ್‌ಎ20 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಆವೃತ್ತಿಯ ಉದಯೋನ್ಮುಖ ಆಟಗಾರ ಎನಿಸಿಕೊಂಡಿರುವ ಡೆವಾಲ್ಡ್ ಬ್ರೆವಿಸ್, ಎಂಐ ಕೇಪ್ ಟೌನ್ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.