Mukesh Ambani: ವಿಶ್ವದ ಅತಿ ದೊಡ್ಡ ಡೇಟಾ ಸೆಂಟರ್ ಸ್ಥಾಪನೆಗೆ ಅಂಬಾನಿ ಜಾಮ್‌ನಗರವನ್ನೇ ಆಯ್ದುಕೊಂಡಿದ್ದೇಕೆ?
ರಿಲಯನ್ಸ್ ಇಂಡಸ್ಟ್ರೀಸ್ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ ಅವರು ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಡೇಟಾ ಸೆಂಟರ್ ತೆರೆಯಲು ಮುಂದಾಗಿದ್ದಾರೆ. ಜಾಮ್‌ನಗರದಲ್ಲಿ ಈ ಹಿಂದೆ ಮುಕೇಶ್ ಅಂಬಾನಿ ಅವರ ತಂದೆ ಧೀರೂಭಾಯ್ ಅಂಬಾನಿ ಜಗತ್ತಿನ ದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದರು.


ಗಾಂಧಿನಗರ: ರಿಲಯನ್ಸ್ ಇಂಡಸ್ಟ್ರೀಸ್ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ (Mukesh Ambani) ಮತ್ತೊಂದು ದೊಡ್ಡ ಕನಸಿನೊಂದಿಗೆ ಬರುತ್ತಿದ್ದಾರೆ! The businessman of big things is back! ಈ ಸಲ ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಡೇಟಾ ಸೆಂಟರ್ (Data Centre) ಅನ್ನು ತೆರೆಯುತ್ತಿದ್ದಾರೆ.
ಜಾಮ್‌ನಗರದಲ್ಲಿ ಈ ಹಿಂದೆ ಮುಕೇಶ್ ಅಂಬಾನಿ ಅವರ ತಂದೆ ಧೀರೂಭಾಯ್ ಅಂಬಾನಿ ಜಗತ್ತಿನ ದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದರು. ಮಗ ಮುಕೇಶ್ ಅಂಬಾನಿ ಅವರೂ ಭವಿಷ್ಯದ ತೈಲ ಡೇಟಾ ಎಂದು ದೃಢವಾಗಿ ನಂಬಿದ್ದಾರೆ, ಪ್ರತಿಪಾದಿಸಿದ್ದಾರೆ ಮತ್ತು ಅದರ ಪ್ರಯೋಜನ ಪಡೆಯಲು ದೈತ್ಯ ಉದ್ದಿಮೆಗೆ ತೊಡಗಿಸಿಕೊಂಡಿದ್ದಾರೆ.
ಡೇಟಾ ಎಂದರೆ ಹೊಸ ತೈಲ. ಆದರೆ ಈ ತೈಲವು ಸಾಂಪ್ರದಾಯಿಕ ತೈಲದಂತೆ ಅಲ್ಲ. ಸಾಂಪ್ರದಾಯಿಕ ತೈಲವನ್ನು ಕೆಲವು ಕಡೆಗಳಲ್ಲಿ ಮಾತ್ರ ಭೂಮಿಯಿಂದ ತೆಗೆಯಬಹುದು. ಆದ್ದರಿಂದ ಕೆಲವು ದೇಶಗಳು ಮಾತ್ರ ಶ್ರೀಮಂತವಾಗುತ್ತವೆ. ಆದರೆ ಈ ಹೊಸ ಡೇಟಾ ತೈಲದ ಹಾಗಲ್ಲ, ಇದನ್ನು ಎಲ್ಲಿ ಬೇಕಾದರೂ ಸೃಷ್ಟಿಸಿ ಬಳಸಬಹುದು. ಪ್ರತಿಯೊಬ್ಬರೂ ಡೇಟಾ ಸೃಷ್ಟಿಸಬಹುದು ಮತ್ತು ಬಳಸಬಹುದು. ಆದ್ದರಿಂದ ಇದು ಪ್ರಜಾಸತ್ತಾತ್ಮಕ. ಅದರಲ್ಲೂ ಭಾರತದಲ್ಲಿ ಇಲ್ಲಿನ ಜನಸಂಖ್ಯೆಯಿಂದಾಗಿ ವಿಶಿಷ್ಟ ಅನುಕೂಲ ಇದೆ ಎಂದು ನಾಲ್ಕು ವರ್ಷಗಳ ಮೊದಲೇ ಮುಕೇಶ್ ಅಂಬಾನಿ ಹೇಳಿದ್ದರು. ಅದನ್ನೀಗ ಸ್ವತಃ ಕಾರ್ಯಗತಗೊಳಿಸುತ್ತಿದ್ದಾರೆ ಕೂಡ.
ಧೀರೂಭಾಯ್ ಅಂಬಾನಿ ಅವರು ಜಾಮ್ ನಗರದಲ್ಲಿ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾಗಾರ ನಿರ್ಮಿಸಲು ಹೊರಟಾಗ ಹಲವಾರು ಮಂದಿ, ಭಾರತೀಯ ಕಂಪನಿಯಿಂದ ಇದೆಲ್ಲ ಅಸಾಧ್ಯ ಎಂದು ಭಾವಿಸಿದ್ದರು. ಆದರೆ ಎಲ್ಲ ಮಿಥ್ಯೆಗಳನ್ನು ದಾಟಿ ಧೀರೂಬಾಯ್ ಅಂಬಾನಿ ತೋರಿಸಿದ್ದರು. ಇದೀಗ ಮುಕೇಶ್ ಅಂಬಾನಿ ಅವರು ಸನ್ ರೈಸ್ ಸೆಕ್ಟರ್ ಎಂದು ಜನಪ್ರಿಯವಾಗಿರುವ ಡೇಟಾ ಬಿಸಿನೆಸ್‌ಗೆ ಮುನ್ನುಗ್ಗುತ್ತಿದ್ದಾರೆ. ಈಗ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ವಿಶ್ವದ ಅತಿ ದೊಡ್ಡದಾಗಿದ್ದರೆ, 3 ಗಿಗಾ ವ್ಯಾಟ್‌ಗಳ ಡೇಟಾ ಸೆಂಟರ್ ಅನ್ನು ನಿರ್ಮಿಸಲು ಅಂಬಾನಿ ಹೊರಟಿದ್ದಾರೆ. ಇದರಿಂದಾಗಿ ಭಾರತದ ಒಟ್ಟಾರೆ ಡೇಟಾ ಸೆಂಟರ್ ಸಾಮರ್ಥ್ಯ ಕೂಡ ಮೂರು ಪಟ್ಟು ಹೆಚ್ಚಲಿದೆ.
ಆರ್ಥಿಕತೆಯ ಡಿಜಿಟಲೀಕರಣ, ಇ-ಕಾಮರ್ಸ್ ಮತ್ತು ಲೋಕಲ್ ಡೇಟಾ ಸ್ಟೋರೇಜ್‌ಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಅವರ ಈ ಬಿಸಿನೆಸ್ ಘಟಕ ದೇಶದ ಸೇವೆಯನ್ನೂ ಮಾಡಿದಂತಾಗಲಿದೆ. ಬಡತನ ನಿರ್ಮೂಲನೆಯ ನಿಟ್ಟಿನಲ್ಲೂ ಸಹಕರಿಸಲಿದೆ. ಕೃತಕ ಬುದ್ಧಿಮತ್ತೆ, ಜನರೇಟಿವ್ ಎಐ ಅಭಿವೃದ್ಧಿಗೆ ಇದು ನಿರ್ಣಾಯಕವಾಗಲಿದೆ. ತೈಲ ಸಂಸ್ಕರಣೆಗೆ ಹೆಸರಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್, ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿ ಜಿಯೊ ಮೂಲಕ ಕ್ರಾಂತಿ ಸೃಷ್ಟಿಸಿತ್ತು.
ಅಂಬಾನಿ ಅವರ ಡೇಟಾ ಸೆಂಟರ್ ಏಕೆ ನಿರ್ಣಾಯಕ ಎಂಬುದನ್ನು ಗಮನಿಸಬೇಕು. ಮೊದಲನೆಯದಾಗಿ ಭಾರತದ ಡಿಜಿಟಲ್ ಮೂಲ ಸೌಕರ್ಯ ವೃದ್ಧಿಗೆ ಇದು ಅತ್ಯಗತ್ಯ. ಎರಡನೆಯದಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೃತಕ ಬುದ್ಧಿಮತ್ತೆ ಅಥವಾ ಎಐ ಕ್ಷೇತ್ರಕ್ಕೆ ಖಾಸಗಿ ವಲಯದಿಂದ 500 ಶತಕೋಟಿ ಡಾಲರ್ ಹೂಡಿಕೆ ಹರಿದು ಬರಲಿದೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿಯವರ ನಿರ್ಧಾರ ಮಹತ್ವ ಪಡೆದಿದೆ. ಜಾಮ್ ನಗರದ ಡೇಟಾ ಸೆಂಟರ್ 30 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅಮೆರಿಕವು ಎಐ ತಂತ್ರಜ್ಞಾನದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳಿಗೂ ಸವಾಲು ಹಾಕುವ ಸಿದ್ಧತೆಯಲ್ಲಿ ಇರುವಾಗ, ಭಾರತದಲ್ಲಿ ಮುಕೇಶ್ ಅಂಬಾನಿಯವರು ದಿಗ್ಗಜ ಡೇಟಾ ಸೆಂಟರ್ ಸ್ಥಾಪಿಸುತ್ತಿರುವುದು ಕುತೂಹಲಕರ ಬೆಳವಣಿಗೆಯಾಗಿದೆ. ಭಾರತದ ಎಐ ಮಹತ್ತ್ವಾಕಾಂಕ್ಷೆಗೆ ಇದು ಪುಷ್ಟಿ ನೀಡಲಿದೆ.
ಭಾರತದಲ್ಲಿ 5ಜಿ ಕ್ರಾಂತಿ ನಡೆಯುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಡೇಟಾ ಸೆಂಟರ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಂಚೂಣಿಯಲ್ಲಿರುವ ಎಐ ಟೆಕ್ನಾಲಜಿ ಡೆವಲಪರ್ ಸಂಸ್ಥೆಯಾದ NVIDIA ದಿಂದ ಅತ್ಯಾಧುನಿಕ ಸೆಮಿಕಂಡಕ್ಟರ್‌ಗಳನ್ನು ಖರೀದಿಸುತ್ತಿದೆ ಎಂದು ವರದಿಯಾಗಿದೆ.
ಪ್ರಸ್ತುತ ಅತಿ ದೊಡ್ಡ ಡೇಟಾ ಸೆಂಟರ್‌ಗಳು ಅಮೆರಿಕದಲ್ಲಿವೆ. ಅಲ್ಲಿನ ದೊಡ್ಡ ಉದ್ಯಮಿಗಳ ಕೈಯಲ್ಲಿವೆ. ಮೈಕ್ರೊಸಾಫ್ಟ್ 600 ಮೆಗಾ ವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಹೊಂದಿದೆ. ಹೀಗಾಗಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಭವಿಷ್ಯದಲ್ಲಿ ಮೈಕ್ರೊಸಾಫ್ಟ್, ಅಮೆಜಾನ್‌ಗೆ ಡೇಟಾ ಸೆಂಟರ್ ವಿಚಾರದಲ್ಲಿ ಸಡ್ಡು ಹೊಡೆಯಲಿದೆ. ಡೇಟಾ ಸೆಂಟರ್‌ಗಳು ಸಾವಿರಾರು ಉದ್ಯೋಗಗಳನ್ನೂ ಸೃಷ್ಟಿಸಲಿವೆ. ಅಮೆಜಾನ್, ಫೇಸ್‌ಬುಕ್, ಮೈಕ್ರೊಸಾಫ್ಟ್, ಟ್ವಿಟರ್ ಎಲ್ಲವೂ ಬೃಹತ್ ಡೇಟಾ ಸೆಂಟರ್‌ಗಳನ್ನು ಹೊಂದಿವೆ. ಆದರೆ ಎಐ ತಂತ್ರಜ್ಞಾನದ ಅಭಿವೃದ್ಧಿಯಿಂದ ಭಾರಿ ಬೇಡಿಕೆ ಉಂಟಾಗಿದೆ.
ಹಾಗಾದರೆ ಡೇಟಾ ಸೆಂಟರ್ ಎಂದರೇನು? ಇವುಗಳೇಕೆ ಬೇಕು? ಡೇಟಾ ಸೆಂಟರ್ ಎಂದರೆ ಡಿಜಿಟಲ್ ಡೇಟಾಗಳನ್ನು ಸಂಗ್ರಹಿಸಿಡುವ ಮೂಲಸೌಕರ್ಯ ವ್ಯವಸ್ಥೆ. ಇಲ್ಲಿ ಸರ್ವರ್‌ಗಳು, ಸ್ಟೋರೇಜ್ ಸಿಸ್ಟಮ್, ನೆಟ್ ವರ್ಕಿಂಗ್ ಎಕ್ವಿಪ್‌ಮೆಂಟ್‌ಗಳು, ಫೈರ್‌ವಾಲ್ಸ್, ಸೆಕ್ಯುರುಟಿ ಸಿಸ್ಟಮ್ಸ್, ಅಪ್ಲಿಕೇಶನ್ ಡೆಲಿವರಿ ಕಂಟ್ರೋಲರ್ಸ್, ಎನ್ವಾರ್ನ್‌ಮೆಂಟಲ್ ಇನ್‌ಫ್ರಾಸ್ಟ್ರಕ್ಚರ್ಸ್ ಇರುತ್ತವೆ. ಇಲ್ಲಿ ಹೆಚ್ಚು ಪವರ್‌ಫುಲ್ ಪ್ರೊಸೆಸರ್ಸ್ ಇರುತ್ತವೆ. ಹಾರ್ಡ್ ಡಿಸ್ಕ್, ರೊಬಾಟಿಕ್ ಟೇಪ್ ಡ್ರೈವ್ಸ್ ಮುಂತಾದವುಗಳು ಈ ಸರ್ವರ್‌ಗಳಿಗೆ ಅಗತ್ಯ. ರೂಟರ್ಸ್, ನೆಟ್‌ವರ್ಕ್ ಇಂಟರ್‌ಫೇಸ್ ಕಂಟ್ರೋಲರ್ಸ್, ಮೈಲಿಗಟ್ಟಲೆ ಕೇಬಲ್‌ಗಳು ಇಂಥ ಡೇಟಾ ಸೆಂಟರ್‌ಗಳಿಗೆ ಬೇಕು.
ಈ ಸುದ್ದಿಯನ್ನೂ ಓದಿ: Mukesh Ambani : ರಿಲಯನ್ಸ್ ಮಹತ್ವದ ಯೋಜನೆ - ವಿಶ್ವದ ಅತಿದೊಡ್ಡ AI ಡೇಟಾ ಸೆಂಟರ್ ನಿರ್ಮಾಣ
ಭಾರಿ ಸಂಖ್ಯೆಯಲ್ಲಿ ದಿನ ನಿತ್ಯ ಸೃಷ್ಟಿಯಾಗುವ ಬಿಸಿನೆಸ್ ಡೇಟಾಗಳು, ಅಪ್ಲಿಕೇಶನ್‌ಗಳ ನಿರ್ವಹಣೆಗೆ ಡೇಟಾ ಸ್ಟೋರೇಜ್‌ಗಳು ಬೇಕು. ಹೀಗಾಗಿ ಬೃಹತ್ ಡೇಟಾ ಸೆಂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.