Cabinet Meeting: ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್; ಮೊದಲ ಸಚಿವ ಸಂಪುಟ ಸಭೆಯಲ್ಲೇ 6 ಪ್ರಮುಖ ನಿರ್ಣಯ ಘೋಷಿಸಿದ ಸಿಎಂ ಡಿಕೆಶಿ
ವಿಧಾನಸೌಧದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಗೆ ಹಲವು ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಸಭೆಯಲ್ಲಿ ಯಾವೆಲ್ಲಾ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಸಿಎಂ ಡಿ.ಕೆ.ಶಿವಕುಮಾರ್. -
ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಸೇರಿ ಮಹತ್ವದ ನಿರ್ಣಯಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಕೈಗೊಳ್ಳಲಾಗಿದೆ. ಸಿಎಂ ಆದ ಬಳಿಕ ಡಿ.ಕೆ.ಶಿವಕುಮಾರ್ ಅವರು ಬುಧವಾರ ಸಂಜೆ ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಈ ವೇಳೆ ಮಹತ್ವದ 6 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರೂ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದರು. ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದರು.
ಸಚಿವ ಸಂಪುಟದ ಪ್ರಮುಖ ನಿರ್ಣಯಗಳು
1.ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಇನ್ನುಮುಂದೆ ಕೇವಲ ವಿದ್ಯಾರ್ಥಿನಿಯರಷ್ಟೇ ಅಲ್ಲ, ಶಾಲಾ-ಕಾಲೇಜುಗಳ ಎಲ್ಲಾ ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಸಿಎಂ ಘೋಷಿಸಿದರು.
2.ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಕ್ಷಣವೇ ಚಾಲನೆ ನೀಡಲಾಗುವುದು. ಯುವಕರಿಗೆ ಉದ್ಯೋಗ ಸೃಷ್ಟಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಭರವಸೆ ನೀಡಿದರು.
3.ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಆದ್ಯತೆ
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಲು ಮನವಿ ಮಾಡಲಾಗುವುದು. ಕಂಪನಿಗಳ ಕೌಶಲ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
4.'ಭಾರತ್ ಜೋಡೋ ಯುವಕರ ಸಂಘ' ಸ್ಥಾಪನೆ
ಗ್ರಾಮೀಣ ಪ್ರತಿಭೆಗಳ ಶೋಧ, ಯುವ ನಾಯಕತ್ವ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಸಲು ಪ್ರತಿ ಪಂಚಾಯಿತಿಗೆ ಒಂದರಂತೆ 'ಭಾರತ್ ಜೋಡೋ ಯುವಕರ ಸಂಘ' ಸ್ಥಾಪನೆ. ಪ್ರತಿ ಸಂಘಕ್ಕೆ ತಲಾ ₹10 ಲಕ್ಷ ಅನುದಾನ ನೀಡಲಾಗುವುದು
5.ಬೆಂಗಳೂರಿನ 3 ಅಂತಸ್ತಿನ ಮನೆಗಳಿಗೆ 'ಒಸಿ' ವಿನಾಯಿತಿ
ಬೆಂಗಳೂರು ನಗರದಲ್ಲಿ ನಿರ್ಮಿಸಲಾಗುವ 3 ಅಂತಸ್ತಿನ ಮನೆಗಳಿಗೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಲು ನಿರ್ಧಾರ. ಜತೆಗೆ ರಾಜ್ಯದ ಎಲ್ಲೆಡೆಯೂ ಕೂಡ ಭೂ ಗ್ಯಾರಂಟಿ ವಿಸ್ತರಣೆ.
6.ರಾಜಧಾನಿಯ ರಸ್ತೆಗಳ ಅಭಿವೃದ್ಧಿಗೆ 2,000 ಕೋಟಿ ಮೀಸಲು
ಬೆಂಗಳೂರಿನ ಬಿಡಿಎ ಮತ್ತು ಜಿಬಿಎ ವ್ಯಾಪ್ತಿಯ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಭರ್ಜರಿ 2 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲು. ಇದರೊಂದಿಗೆ 'ಭೂ ಗ್ಯಾರಂಟಿ' ಯೋಜನೆಯನ್ನು ರಾಜ್ಯದುದ್ದಗಲಕ್ಕೂ ವಿಸ್ತರಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.