ಮುಂಬಯಿ: ಮುಂಬೈ ಇಂಡಿಯನ್ಸ್(MI vs DC) ತಂಡವು ಬುಧವಾರ ತವರಿನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂ(wankhede stadium)ನಲ್ಲಿ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ನುಗಳಿಂದ ಮಣಸಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಗೆ ತೇರ್ಗಡೆಯಾಯಿತು. ತಂಡ ನಾಕೌಟ್ ಪ್ರವೇಶಿಸುತ್ತಿದ್ದಂತೆ ತಂಡದ ಮಾಲಕಿ ನೀತಾ ಅಂಬಾನಿ(Nita Ambani) ಅವರು 6 ಎಂದು ಕೈಬೆರಳುಗಳ ಸನ್ನೆಯೊಂದಿಗೆ ತಂಡ 6ನೇ ಟ್ರೋಫಿ ಗೆಲ್ಲಲಿದೆ ಎಂಬ ಸಂದೇಶ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದ್ದು ಕೆಲ ನೆಟ್ಟಿಗರು ಮುಂಬೈ ಗೆದ್ದರೆ ಫಿಕ್ಸಿಂಗ್ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ.
ಇನ್ನೊಂದೆಡೆ ಮುಂಬೈ ಪ್ಲೇ ಆಫ್ ಪ್ರವೇಶ ಪಡೆಯುತ್ತಿದ್ದಂತೆ ಈ ಬಾರಿ ಮುಂಬೈ ತಂಡ ಕಪ್ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಹೌದು, ಐಪಿಎಲ್ ಇತಿಹಾಸವನ್ನೊಮ್ಮೆ ಕೆದಕಿದರೆ, ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯ ಸೋತು, ಇನ್ನೇನು ಟೂರ್ನಿಯಿಂದ ಹೊರಬೀಳುತ್ತೆ ಎನ್ನುವಾಗ ಕೊನೆಯ ಹಂತದಲ್ಲಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟ ಆವೃತ್ತಿಯಲ್ಲಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಲಿ ಆವೃತ್ತಿಯಲ್ಲಿಯೂ ಇದೇ ರೀತಿಯ ಫಲಿತಾಂಶ ದಾಖಲಾಗಿದೆ. ಹೀಗಾಗಿ ಬಾರಿ ಮುಂಬೈ ಟ್ರೋಫಿ ಗೆದ್ದರೂ ಅಚ್ಚರಿಯಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಆಟದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 180 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು 18.2 ಓವರ್‌ಗಳಲ್ಲಿ 121 ರನ್‌ಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ತುತ್ತಾಯಿತು.
ಇದನ್ನೂ ಓದಿ IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್ ಸಿಇಒ!
ಡೆಲ್ಲಿ ಸಮೀರ್ ರಿಜ್ವಿ ಗರಿಷ್ಠ 39 ರನ್ ಹೊಡೆದರು. ಮಿಚೆಲ್ ಸ್ಯಾಂಟ್ನರ್ ಮತ್ತು ಬುಮ್ರಾ ತಲಾ ಮೂರು ವಿಕೆಟ್ ಕಿತ್ತರು. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕೆ.ಎಲ್ ರಾಹುಲ್ ಯಾವುದೇ ಇಂಪ್ಯಾಕ್ಟ್ ಮಾಡಲಿಲ್ಲ. 11 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮುಂಬೈ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.