IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್ ಸಿಇಒ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಪಿಎಲ್ ನಿಯಮಗಳನ್ನು ಬದಲಾಯಿಸಿದೆ. ಮಳೆ ಬಾಧಿತ ಪಂದ್ಯಗಳಿಗೆ ಈಗ 120 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ಈ ನಿರ್ಧಾರವನ್ನು ಪ್ರಶ್ನಿಸಿದೆ. ಟೂರ್ನಿಯು ಪುನರಾರಂಭಗೊಂಡ ತಕ್ಷಣ ಈ ನಿಯಮವನ್ನು ಜಾರಿಗೆ ತರಬೇಕಿತ್ತು ಎಂದು ಕೆಕೆಆರ್ ಸಿಇಓ ಮೈಸೂರು ವೆಂಕಿ ತಿಳಿಸಿದ್ದಾರೆ.

ಬಿಸಿಸಿಐ ವಿರುದ್ಧ ತಿರುಗಿಬಿದ್ದ ಮೈಸೂರು ವೆಂಕಿ.

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಿಯಮಗಳನ್ನು ಬದಲಾಯಿಸಿದೆ. ಮಳೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್(RCB vs SRH) ನಡುವಣ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ. ಇದಲ್ಲದೆ, ಇನ್ನುಳಿದ ಪಂದ್ಯಗಳ ಮೇಲೆ ಪ್ರಭಾವ ಬೀರಿದರೆ, ಅವುಗಳನ್ನು ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಮೊದಲು ಈ ಸಮಯ ಕೇವಲ 60 ನಿಮಿಷಗಳಿಗೆ ನಿಗದಿಪಡಿಸಲಾಗಿತ್ತು. ಅಂದರೆ ಒಂದು ಗಂಟೆಯ ನಂತರ ಓವರ್‌ಗಳು ಕಡಿತಗೊಳಿಸಲಾಗುತ್ತಿತ್ತು. ಐಪಿಎಲ್ ಸಿಒಒ ಹೇಮಾಂಗ್ ಆಮಿನ್, ಎಲ್ಲಾ ಹತ್ತು ತಂಡಗಳಿಗೆ ಇಮೇಲ್ ಕಳುಹಿಸಿದ್ದರು. ಮಳೆಯ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಬಿಸಿಸಿಐನ ಈ ಹೊಸ ನಿರ್ಧಾರ ಕೆಕೆಆರ್‌ಗೆ ಇಷ್ಟವಾಗಲಿಲ್ಲ. ಟೂರ್ನಿಯ ಪುನರಾರಂಭವಾದ ತಕ್ಷಣ ಈ ನಿಯಮವನ್ನು ಏಕೆ ಜಾರಿಗೆ ತರಲಿಲ್ಲ ಎಂದು ಕೋಲ್ಕತಾ ಫ್ರಾಂಚೈಸಿ ಸಿಇಒ ವೆಂಕಿ ಮೈಸೂರು ಪ್ರಶ್ನಿಸಿದ್ದಾರೆ. "ಐಪಿಎಲ್ ಪುನರಾರಂಭವಾದಾಗ ಅಂದರೆ, ಮೇ 17 ರಂದು ಬೆಂಗಳೂರಿನಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ನಡುವಣ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಅಪಾಯವಿದೆ ಎಂಬುದು ಸ್ಪಷ್ಟವಾಗಿತ್ತು. ಮಳೆಯ ಮುನ್ಸೂಚನೆಯು ಎಲ್ಲರಿಗೂ ಕಾಣುವಂತೆ ಇತ್ತು. ಅದರಂತೆ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಆದರೆ, ಈಗ ಹೆಚ್ಚುವರಿಯಾಗಿ ನೀಡಲಾಗುತ್ತಿರುವ 120 ನಿಮಿಷಗಳ ನೀಡಿದ್ದರೆ, ಅಂದು ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲು ಸಾಧ್ಯವಾಗುತ್ತಿತ್ತು"ಎಂದು ಅವರು ಹೇಳಿದ್ದಾರೆ.
IPL 2025: ರಾಜಸ್ಥಾನ್ ರಾಯಲ್ಸ್ ಪರ 4000 ರನ್ ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್!
"ಮಳೆಯಿಂದಾಗಿ ಕೆಕೆಆರ್ ಪ್ಲೇಆಫ್ ತಲುಪುವ ಸಾಧ್ಯತೆಗಳು ಮುಗಿದಿವೆ. ಇಂತಹ ತಾತ್ಕಾಲಿಕ ನಿರ್ಧಾರಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿನ ಅಸಂಗತತೆ ಈ ಮಟ್ಟದ ಟೂರ್ನಿಗಳಿಗೆ ಸೂಕ್ತವಲ್ಲ. ನಾವು ಯಾಕೆ ದುಃಖಿತರಾಗಿದ್ದೇವೆಂದು ನಿಮಗೂ ಅರ್ಥವಾಗಿದೆ ಎಂದು ನನಗೆ ಖಾತ್ರಿಯಿದೆ. ನಿಯಮಗಳಲ್ಲಿ ಈ ಬದಲಾವಣೆ ಅಗತ್ಯವಾಗಿದ್ದರೂ, ಅಂತಹ ಬದಲಾವಣೆಗಳನ್ನು ಜಾರಿಗೆ ತರುವಲ್ಲಿ ಹೆಚ್ಚಿನ ಏಕರೂಪತೆ ಇರುತ್ತದೆ ಎಂದು ಆಶಿಸಲಾಗಿತ್ತು," ಎಂದು ಮೈಸೂರು ವೆಂಕಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
IPL 2025: ಸಿಎಸ್‌ಕೆ ಎದುರು ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ವೈಭವ್ ಸೂರ್ಯವಂಶಿ!
ಕೆಕೆಆರ್‌ನ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು
ಮಳೆಯಿಂದಾಗಿ 2025ರ ಐಪಿಎಲ್ ಟೂರ್ನಿಯಲ್ಲಿ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಇದರಲ್ಲಿ ಕೆಕೆಆರ್‌ನ ಎರಡು ಪಂದ್ಯಗಳು ಮಳೆಗೆ ಬಲಿಯಾಗಿದ್ದವು. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದಾದ ನಂತರ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಕೆಕೆಆರ್ 13 ಪಂದ್ಯಗಳಲ್ಲಿ 5 ಗೆಲುವು ಮತ್ತು 6 ಸೋಲುಗಳೊಂದಿಗೆ 12 ಅಂಕಗಳನ್ನು ಕಳೆ ಹಾಕಿದೆ. ಕೆಕೆಆರ್ ಪ್ರಸ್ತುತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕಳೆದ ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.