ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rachin Ravindra injury: ಚೆಂಡು ತಗುಲಿ ಗಂಭೀರ ಗಾಯಕ್ಕೆ ತುತ್ತಾದ ರಚಿನ್‌ ರವೀಂದ್ರ! ವಿಡಿಯೊ

Rachin Ravindra Injury: ಪಾಕಿಸ್ತಾನ ವಿರುದ್ಧ ತ್ರಿಕೋನ ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲಿ ಕ್ಯಾಚ್‌ ಪಡೆಯುವ ಪ್ರಯತ್ನದಲ್ಲಿದ್ದ ನ್ಯೂಜಿಲೆಂಡ್‌ ತಂಡದ ರಚಿನ್‌ ರವೀಂದ್ರ ಅವರ ಮುಖಕ್ಕೆ ನೇರವಾಗಿ ಚೆಂಡು ಬಡಿಯಿತು. ಈ ವೇಳೆ ರಚಿನ್‌ ಅವರ ಮುಖದಿಂದ ರಕ್ತ ಹರಿಯಿತು. ಈ ವೇಳೆ ಆಟಗಾರರು ಮಾತ್ರವಲ್ಲ, ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರು ಕೂಡ ಕೆಲ ಸಮಯ ಆತಂಕಕ್ಕೆ ಒಳಗಾದರು.

ರಚಿನ್‌ ರವೀಂದ್ರ ಮುಖಕ್ಕೆ ಬಡಿದ ಚೆಂಡು, ಮೈದಾನಲ್ಲಿಯೇ ಸುರಿದ ನೆತ್ತರು!

Rachin Ravindra Injury

Profile Ramesh Kote Feb 9, 2025 11:14 AM

ಲಾಹೋರ್: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಶನಿವಾರ ಇಲ್ಲಿನ ಗಡಾಫಿ ಸ್ಟೇಡಿಯಂನಲ್ಲಿ ನಡೆದಿದ್ದ ತ್ರಿಕೋನ ಸರಣಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಿದ್ದವು. ಪಾಕಿಸ್ತಾನ ತಂಡದ ಇನಿಂಗ್ಸ್‌ನ 38ನೇ ಓವರ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದ ರಚಿನ್‌ ರವೀಂದ್ರ ಮುಖಕ್ಕೆ ಚೆಂಡು ಬಲವಾಗಿ ಬಡಿಯಿತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ ತಂಡ ನೀಡಿದ್ದ 331 ರನ್‌ಗ ಗುರಿಯನ್ನು ಹಿಂಬಾಲಿಸಿದ್ದ ಪಾಕಿಸ್ತಾನ ತಂಡ ಕೂಡ ಕೊನೆಯವರೆಗೂ ಕಠಿಣ ಹೋರಾಟ ನಡೆಸಿತ್ತು. ಆದರೆ 38ನೇ ಓವರ್‌ನಲ್ಲಿ ಖುಷ್ದಿಲ್‌ ಶಾ ಸ್ಲಾಗ್‌ ಸ್ವೀಪ್‌ ಹೊಡೆದಿದ್ದರು. ಈ ವೇಳೆ ಸ್ಕೈರ್‌ ಲೆಗ್‌ ಡೀಪ್‌ನಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದ ರಚಿನ್‌ ರವೀಂದ್ರ ಕ್ಯಾಚ್‌ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಚೆಂಡನ್ನು ಅವರು ಸರಿಯಾಗಿ ಅಂದಾಜಿಸಲು ಸಾಧ್ಯವಾಗಲಿಲ್ಲ. ಈ ಕಾರಣ ಚೆಂಡು ನೇರವಾಗಿ ಮುಖಕ್ಕೆ ಬಲವಾಗಿ ಬಡಿಯಿತು. ಈ ವೇಳೆ ಅವರ ಮುಖದಿಂದ ರಕ್ತ ಹರಿಯಿತು.

PAK vs NZ: ನ್ಯೂಜಿಲೆಂಡ್‌ ಎದುರು ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು!

ಚೆಂಡನ್ನು ನೋಡದ ರಚಿನ್ ರವೀಂದ್ರ

ಖುಸ್ದಿಲ್ ಶಾ ಅವರ ಶಾಟ್ ಸಾಕಷ್ಟು ಸಮತಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಇದ್ದ ಕಾರಣ, ರಚಿನ್ ಚೆಂಡನ್ನು ನಿರ್ಣಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವರ ಮುಖಕ್ಕೆ ಹೊಡೆದ ನಂತರ ಇಡೀ ಕ್ರೀಡಾಂಗಣ ಮೌನವಾಯಿತು. ಮೈದಾನದಲ್ಲಿ ಇಂಥಾ ಘಟನೆ ನಡೆಯುವುದು ತುಂಬಾ ಅಪರೂಪ. ಚೆಂಡು ಮುಖಕ್ಕೆ ತಗುಲಿದ ತಕ್ಷಣ ರಚಿನ್‌ ರವೀಂದ್ರ ಆಘಾತಕ್ಕೀಡಾದರು ಹಾಗೂ ಏನು ಮಾಡಬೇಕೆಂದು ಅವರಿಗೆ ತೋಚಲಿಲ್ಲ. ತಕ್ಷಣ ಮೈದಾನಕ್ಕೆ ಓಡಿ ಬಂದ ಫಿಸಿಯೋ, ರಚಿನ್‌ ರವೀಂದ್ರಗೆ ಚಿಕಿತ್ಸೆ ನೀಡಿದ್ದರು. ರಚಿನ್ ರವೀಂದ್ರ ತಮ್ಮ ಮುಖಕ್ಕೆ ಟವಲ್ ಸುತ್ತಿಕೊಂಡು ಮೈದಾನದಿಂದ ಹೊರಗೆ ಕಡೆದುಕೊಂಡು ಹೋಗಲಾಯಿತು. ಇದಾದ ಬಳಿಕ ಅವರ ಮುಖಕ್ಕೆ ಐಸ್ ಪ್ಯಾಕ್ ಇಡಲಾಯಿತು.



ನ್ಯೂಜಿಲೆಂಡ್‌ ತಂಡಕ್ಕೆ ಗಾಯದ ಭೀತಿ

ರಚಿನ್ ರವೀಂದ್ರ ನ್ಯೂಜಿಲೆಂಡ್‌ನ ಪ್ರಮುಖ ಆಟಗಾರ. 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಇದುವರೆಗೂ ಅವರು ಆಡಿದ 29 ಏಕದಿನ ಪಂದ್ಯಗಳಲ್ಲಿ 40ರ ಸರಾಸರಿ ಮತ್ತು 110 ಸ್ಟ್ರೈಕ್ ರೇಟ್‌ನೊಂದಿಗೆ 970 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿಯೂ ಅವರು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಇವೆ. ಒಂದು ವೇಳೆ ರಚಿನ್‌ ರವೀಂದ್ರ ಅವರ ಗಾಯ ಗಂಭೀರವಾಗಿದ್ದರೆ, ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿಬೇಕಾಗಬಹುದು.



ತ್ರಿಕೋನ ಸರಣಿಯಲ್ಲಿ ಕಿವೀಸ್‌ ಶುಭಾರಂಭ

ರಚಿನ್‌ ರವೀಂದ್ರ ಅವರ ಗಾಯದ ಬೇಸರ ಹೊರತುಪಡಿಸಿದರೆ, ಪಾಕಿಸ್ತಾನ ವಿರುದ್ದ ಮೊದಲನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 78 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ನಡುವಣ ತ್ರಿಕೋನ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡ ತನ್ನ ಪಾಲಿನ 50 ಓವರ್‌ಗಳಿಂದ 6 ವಿಕೆಟ್‌ಗಳ ನಷ್ಟಕ್ಕೆ 330 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ ತಂಡ 47.5 ಓವರ್‌ಗಳಿಗೆ 252 ರನ್‌ಗಳಿಗೆ ಆಲ್‌ಔಟ್‌ ಆಯಿತು. ಕಿವೀಸ್‌ ಪರ 106 ರನ್‌ಗಳನ್ನು ಕಲೆ ಹಾಕಿದ ಗ್ಲೆನ್‌ ಫಿಲಿಪ್ಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.