ತಮಿಳು ಸಾಹಿತಿ ವೈರಮುತ್ತುಗೆ 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆ
Vairamuthu: ತಮಿಳು ಸಾಹಿತಿ, ಕಾದಂಬರಿಕಾರ ವೈರಮುತ್ತುಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದಿದ್ದು, ಬರೋಬ್ಬರಿ 20 ವರ್ಷಗಳ ಬಳಿಕ ತಮಿಳು ಈ ಪ್ರಶಸ್ತಿಗೆ ಭಾಜನವಾಗಿದೆ. ಭಾರತೀಯ ಸಾಹಿತ್ಯಕ್ಕೆ ಸಲ್ಲಿಸಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವೈರಮುತ್ತು (ಸಂಗ್ರಹ ಚಿತ್ರ) -
ಚೆನ್ನೈ, ಮಾ. 14: 2025ನೇ ಸಾಲಿನ ದೇಶದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದೆ. ತಮಿಳು ಸಾಹಿತಿ, ಕಾದಂಬರಿಕಾರ ವೈರಮುತ್ತು (Vairamuthu) ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದಿದ್ದು, ಬರೋಬ್ಬರಿ 2 ದಶಕಗಳ ಬಳಿಕ ತಮಿಳು ಈ ಪ್ರಶಸ್ತಿಗೆ ಭಾಜನವಾಗಿದೆ. ಭಾರತೀಯ ಸಾಹಿತ್ಯಕ್ಕೆ ಸಲ್ಲಿಸಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ (Jnanpith Award 2025). ಜ್ಞಾನಪೀಠ ಭಾರತದ ಅತಿ ದೊಡ್ಡ ಸಾಹಿತ್ಯ ಪ್ರಶಸ್ತಿ. ಕವನ, ಕಾದಂಬರಿ ಮತ್ತು ಚಲನಚಿತ್ರ ಸಾಹಿತ್ಯದಲ್ಲಿನ ವೈರಮುತ್ತು ಅವರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಖ್ಯಾತ ಲೇಖಕಿ ಪ್ರತಿಭಾ ರೇ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಜ್ಞಾನಪೀಠ ಆಯ್ಕೆ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮಿತಿಯಲ್ಲಿ ಮಾಧವ್ ಕೌಶಿಕ್, ದಾಮೋದರ್ ಮೌಜೊ, ಸುರಂಜನ್ ದಾಸ್, ಎ. ಕೃಷ್ಣ ರಾವ್, ಪ್ರಫುಲ್ಲ ಶಿಲೇದಾರ್, ಕೇಸುಭಾಯಿ ದೇಸಾಯಿ, ಜಾನಕಿ ಪ್ರಸಾದ್ ಶರ್ಮಾ, ಕೆ. ಶ್ರೀನಿವಾಸ್ ರಾವ್ ಮತ್ತು ಮಹೇಶ್ವರ್ ಮುಂತಾದ ಸಾಹಿತಿಗಳು ಮತ್ತು ವಿದ್ವಾಂಸರು ಇದ್ದರು.
1953ರ ಜುಲೈ 13ರಂದು ಜನಿಸಿದ ಆರ್. ವೈರಮುತ್ತು ಅವರನ್ನು ಸಮಕಾಲೀನ ತಮಿಳು ಸಾಹಿತ್ಯದ ಪ್ರಮುಖ ಧ್ವನಿ ಎಂದೇ ಪರಿಗಣಿಸಲಾಗುತ್ತದೆ. ಅವರ ಕೃತಿಗಳು ಮಾನವ ಭಾವನೆ ಮತ್ತು ಸಾಮಾಜಿಕ ಕಾಳಜಿಯನ್ನು ಪ್ರತಿಫಲಿಸುತ್ತವೆ.
ಎಂ.ಕೆ. ಸ್ಟಾಲಿನ್ ಅವರ ಎಕ್ಸ್ ಪೋಸ್ಟ್:
BREAKING 📚
— We Dravidians (@WeDravidians) March 14, 2026
Renowned Tamil poet & lyricist Vairamuthu has been awarded the Gynanpith Award, India’s highest literary honour.
After Akilan (1975) and Jayakanthan (2002), Vairamuthu becomes the third Tamil writer to receive this prestigious recognition.
A proud moment for Tamil… pic.twitter.com/8XpLWOtehn
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ಜ್ಞಾನಪೀಠ ಪ್ರಶಸ್ತಿಯು ತಮಿಳನ್ನು ತಮ್ಮ ಕಾವ್ಯದಿಂದ ಆಳುವ ಕವಿ ವೈರಮುತ್ತು ಅವರಿಗೆ ಸಂದಿದೆ. ನಾನು ಇಂದು ಬೆಳಗ್ಗೆ ಅವರನ್ನು ಭೇಟಿಯಾಗಿ ಮಾತನಾಡುತ್ತಿದ್ದೆ. ಸ್ವಲ್ಪ ಸಮಯದ ನಂತರ ಈ ಸಿಹಿ ಸುದ್ದಿ ಬಂತು. ಇಲ್ಲಿಯವರೆಗೆ ತಮಿಳಿನಲ್ಲಿ ಅಕಿಲನ್ ಮತ್ತು ಜಯಕಾಂತನ್ ಮಾತ್ರ ಪಡೆದಿರುವ ಈ ಪ್ರಶಸ್ತಿ ಮತ್ತೊಮ್ಮೆ ನಮ್ಮ ಭಾಷೆಗೆ ಸಂದಿದೆʼʼ ಎಂದು ಬರೆದುಕೊಂಡಿದ್ದಾರೆ.
ವೈರಮುತ್ತು ಹಿನ್ನೆಲೆ
ಚಿತ್ರ ಸಾಹಿತಿಯೂ ಆಗಿರುವ ವೈರಮುತ್ತು 1972ರಲ್ಲಿ ಪ್ರಕಟಗೊಂಡ ʼವೈಗಾರೈ ಮೇಘಂಗಳ್ʼ ಕವನ ಸಂಕಲ ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಬಲಗಾಲಿಟ್ಟು ಪ್ರವೇಶಿಸಿದರು. ಅಂದಿನಿಂದ ಅವರು ಇದುವರೆಗೆ 40 ಪುಸ್ತಕ ಪ್ರಕಟಗೊಂಡಿವೆ. ಇದರಲ್ಲಿ ಕವನಗಳು ಮತ್ತು ಕಾದಂಬರಿಗಳು ಸೇರಿವೆ. ಸುಮಾರು 5 ದಶಕಗಳಿಂದ ಅವರು ತಮಿಳು ಸಾಹಿತ್ಯಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದಾರೆ.
ಅವರ ಹೆಚ್ಚಿನ ಕವನಗಳು ತಮಿಳು ಸಮಾಜದಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಯನ್ನು ಹಿಡಿದಿಡುತ್ತವೆ. ಅಲ್ಲದೆ ತಮಿಳು ಚಿತ್ರರಂಗಕ್ಕೂ ಗಣನೀಯ ಕೊಡುಗೆ ನೀಡಿದ್ದಾರೆ. ಸುಮಾರು 7,500ಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ರಚಿಸಿದ್ದಾರೆ. 'ರೋಜಾ' ಚಿತ್ರದ ʼಚಿನ್ನ ಚಿನ್ನ ಆಸೈʼ ಸೇರಿದಂತೆ ಹಲವು ಹಾಡುಗಳು ಜನಪ್ರಿಯವಾಗಿವೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಅಗ್ರಗಣ್ಯ ಸಾಹಿತಿಗಳಿವರು
ರಾಷ್ಟ್ರ ಚಲನಚಿತ್ರ ಪ್ರಶಸ್ತಿ
ವೈರಮುತ್ತು ಭಾರತೀಯ ಚಿತ್ರರಂಗದ ಅತ್ಯಂತ ಖ್ಯಾತ ಗೀತರಚನೆಕಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಅವರು ಬರೋಬ್ಬರಿ 7 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ವೈರಮುತ್ತು ಪದ್ಮಶ್ರೀ ಮತ್ತು ಪದ್ಮ ಭೂಷಣ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಕನ್ನಡಕ್ಕೆ ಇದುವರೆಗೆ 8 ಜ್ಞಾನಪೀಠ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಯು 11 ಲಕ್ಷ ರುಪಾಯಿ ನಗದು, ವಾಗ್ವಿದೇವಿ (ಸರಸ್ವತಿ) ಕಂಚಿನ ವಿಗ್ರಹ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಭಾರತದ ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲಿನ ಸಾಹಿತ್ಯ ಸೇವೆಗೆ ಇದನ್ನು ನೀಡಲಾಗುತ್ತದೆ.