Padma Awards: ಸ್ಪಿನ್ ದಿಗ್ಗಜ ಆರ್ ಅಶ್ವಿನ್‌ಗೆ ಪದ್ಮಶ್ರೀ, ಹಾಕಿ ದಿಗ್ಗಜ ಶ್ರೀಜೇಶ್‌ಗೆ ಪದ್ಮ ಭೂಷಣ!
ವಿವಿಧ ಕ್ರೀಡೆಗಳಲ್ಲಿ ದೇಶಕ್ಕೆ ಕೊಡುಗೆ ನೀಡಿರುವ ಐವರು ಭಾರತೀಯ ಕ್ರೀಡಾಪಟುಗಳು ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಕಿ ದಿಗ್ಗಜ ಶ್ರೀಜೇಶ್‌ಗೆ ಪದ್ಮ ಭೂಷಣ ಹಾಗೂ ಆರ್ ಅಶ್ವಿನ್ ಸೇರಿದಂತೆ ನಾಲ್ಕು ಮಂದಿ ಪದ್ಮ ಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

R Ashwin-Srijesh PR

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಭಾರತ ಸರ್ಕಾರ ಗಣರಾಜ್ಯೋತ್ಸವಕ್ಕೂ ಮುನ್ನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರ ನೀಡುವ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಈ ಬಾರಿಯೂ ಕೆಲವು ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ವಿವಿಧ ಕ್ರೀಡೆಗಳಲ್ಲಿ ದೇಶಕ್ಕೆ ಕೊಡುಗೆ ನೀಡಿರುವ ಐವರು ಭಾರತೀಯ ಕ್ರೀಡಾಪಟುಗಳು ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸತತ ಎರಡು ಒಲಂಪಿಕ್ಸ್ ಪದಕಗಳನ್ನು ಗೆದ್ದ ಭಾರತದ ಹಿರಿಯ ಹಾಕಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಮೂರನೇ ಅತ್ಯುನ್ನತ ಗೌರವ ಪದ್ಮ ಭೂಷಣ ನೀಡಲಾಗುವುದು ಮತ್ತು ಭಾರತೀಯ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್‌ಗೆ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಲಾಗಿದೆ.
ಕಳೆದ ವರ್ಷವಷ್ಟೇ ಹಾಕಿಯಿಂದ ನಿವೃತ್ತರಾದ ಭಾರತದ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಪಿಆರ್ ಶ್ರೀಜೇಶ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡ, ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ಯಾರಿಸ್‌ಗೂ ಮುನ್ನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2020) ಶ್ರೀಜೇಶ್ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದರು, ಇದು 41 ವರ್ಷಗಳಲ್ಲಿ ಭಾರತಕ್ಕೆ ಮೊದಲ ಹಾಕಿ ಪದಕವಾಗಿದೆ. ಇದಲ್ಲದೆ, ಶ್ರೀಜೇಶ್ ಸತತ ಮೂರು ಬಾರಿ ಎಫ್‌ಐಎಚ್ ವರ್ಷದ ಗೋಲ್‌ಕೀಪರ್ ಆಗಿ ಆಯ್ಕೆಯಾಗಿದ್ದರು.
Padma Shri 2025: ರಿಕ್ಕಿ ಕೇಜ್, ಹಾಸನ ರಘು ಸೇರಿ ಕರ್ನಾಟಕದ 6 ಮಂದಿ ಸಾಧಕರಿಗೆ ಪದ್ಮ ಶ್ರೀ
ಆರ್ ಅಶ್ವಿನ್‌ಗೆ ಪದ್ಮ ಶ್ರೀ ಗೌರವ
ಕಳೆದ ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಶ್ವಿನ್ ನಿವೃತ್ತಿ ಪಡದಿದ್ದರು. ಅಶ್ವಿನ್ 106 ಟೆಸ್ಟ್ ಪಂದ್ಯಗಳಿಂದ 537 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ 6 ಶತಕಗಳ ಸಹಾಯದಿಂದ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಶ್ವಿನ್ 2011 ರಲ್ಲಿ ವಿಶ್ವಕಪ್ ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು.
ಹರ್ವೀಂದರ್‌ಗೆ ಪದ್ಮ ಶ್ರೀ ಪ್ರಶಸ್ತಿ
ಕಳೆದ ವರ್ಷ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ಆರ್ಚರಿ ಪಟು ಹರ್ವಿಂದರ್ ಸಿಂಗ್ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರ್ವಿಂದರ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಿಲ್ಲುಗಾರ. ಆರ್ಚರಿ ಕ್ರೀಡೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಫಲವಾಗಿ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲು ನಿರ್ಧರಿಸಲಾಗಿದೆ. ಇನ್ನು ಪ್ಯಾರಾ ಕ್ರೀಡಾಪಟು ಸತ್ಯಪಾಲ್ ಅವರು ಪದ್ಮಶ್ರೀಗೆ ಪಾತ್ರರಾಗಿದ್ದಾರೆ.
ಚಿತ್ರ ನಟ ಅನಂತ್ ನಾಗ್ ಸೇರಿದಂತೆ ಇಬ್ಬರು ಕನ್ನಡಿಗರಿಗೆ ಪದ್ಮ ಭೂಷಣ!
ಇವರಲ್ಲದೆ 1990ರ ದಶಕದಲ್ಲಿ ಭಾರತದ ಅತ್ಯುತ್ತಮ ಫುಟ್ಬಾಲ್ ಆಟಗಾರರಾಗಿದ್ದ ಕೇರಳದ ಐಎಂ ವಿಜಯನ್ ಅವರಿಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೈಚುಂಗ್ ಭುಟಿಯಾ ಮತ್ತು ಸುನಿಲ್ ಛೆಟ್ರಿಯ ಮೊದಲು, ವಿಜಯನ್ ಭಾರತೀಯ ಫುಟ್‌ಬಾಲ್‌ನ ಅತಿದೊಡ್ಡ ತಾರೆಯಾಗಿದ್ದರು.