ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Padma Shri 2025: ರಿಕ್ಕಿ ಕೇಜ್‌, ಹಾಸನ ರಘು ಸೇರಿ ಕರ್ನಾಟಕದ 6 ಮಂದಿ ಸಾಧಕರಿಗೆ ಪದ್ಮ ಶ್ರೀ

ಕೇಂದ್ರ ಸರ್ಕಾರವು ಗಣ ರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ (ಜ. 25) ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 7 ಪದ್ಮ ವಿಭೂಷಣ, 19 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಪ್ರಶಸ್ತಿ ಘೋಷಿಸಲಾಗಿದ್ದು, 3 ವಿಭಾಗಗಳಲ್ಲಿ ಕರ್ನಾಟಕದ ಸಾಧಕರಿದ್ದಾರೆ. ಇಲ್ಲಿದೆ ಪದ್ಮ ಶ್ರೀ ಪುರಸ್ಕೃತ ಕರ್ನಾಟಕ ಸಾಧಕರ ಸಂಕ್ಷಿಪ್ತ ಪರಿಚಯ.

ರಿಕ್ಕಿ ಕೇಜ್‌, ಹಾಸನ ರಘು ಸೇರಿ ಕರ್ನಾಟಕದ 6 ಮಂದಿ ಸಾಧಕರಿಗೆ ಪದ್ಮ ಶ್ರೀ

ರಿಕ್ಕಿ ಕೇಜ್‌

Profile Ramesh B Jan 25, 2025 10:29 PM

ಬೆಂಗಳೂರು: ಕೇಂದ್ರ ಸರ್ಕಾರವು ಗಣ ರಾಜ್ಯೋತ್ಸವದ ಮುನ್ನಾದಿನವಾದ ಶನಿವಾರ (ಜ. 25) ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 7 ಪದ್ಮ ವಿಭೂಷಣ, 19 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಪ್ರಶಸ್ತಿ ಘೋಷಿಸಲಾಗಿದ್ದು, ಮೂರು ವಿಭಾಗಗಳಲ್ಲಿ ಕರ್ನಾಟಕದ ಸಾಧಕರಿದ್ದಾರೆ. ಕರ್ನಾಟಕದ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಕಲೆಯಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಪಡೆದರೆ ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ವಿಭಾಗದಲ್ಲಿ ಎ.ಸೂರ್ಯ ಪ್ರಕಾಶ್‌, ಕಲೆಯಲ್ಲಿ ಅನಂತ್‌ನಾಗ್‌ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕರ್ನಾಟಕದ 6 ಮಂದಿಗೆ ಪದ್ಮ ಶ್ರೀ (Padma Shri 2025) ಲಭಿಸಿದೆ. ಕಲೆ ವಿಭಾಗದಲ್ಲಿ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌, ಹಾಸನ ರಘು, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಶಾಂತ್‌ ಪ್ರಕಾಶ್‌ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯಲಕ್ಷ್ಮೀ ದೇಶಮಾನೆ ಪದ್ಮ ಶ್ರೀ ಪಡೆದುಕೊಂಡಿದ್ದಾರೆ. ಇಲ್ಲಿದೆ ಪದ್ಮ ಶ್ರೀ ಪುರಸ್ಕೃತರ ಸಂಕ್ಷಿಪ್ತ ಪರಿಚಯ.

ರಿಕ್ಕಿ ಕೇಜ್‌: ಪ್ರತಿಷ್ಠಿತ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಪದ್ಮ ಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪಂಜಾಬ್‌ ಕುಟುಂಬ ಮೂಲದ ಅವರು 1981ರಲ್ಲಿ ಅಮೆರಿಕದಲ್ಲಿ ಜನಿಸಿದರು. ಅವರು 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದ್ದಾರೆ. 43 ವರ್ಷದ ಅವರು ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ರಮೇಶ್ ಅರವಿಂದ್ ಅವರ 'ಆಕ್ಸಿಡೆಂಟ್', 'ವೆಂಕಟ ಇನ್ ಸಂಕಟ' ಹಾಗೂ 'ಕ್ರೇಜಿ ಕುಟುಂಬ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. 30 ದೇಶಗಳಲ್ಲಿ 100 ಮ್ಯೂಸಿಕ್ ಅವಾರ್ಡ್ಸ್‌ಗಳನ್ನು ಪಡೆದ ಅವರು 3,000ಕ್ಕೂ ಅಧಿಕ ಜಿಂಗಲ್ಸ್ ಮಾಡಿದ್ದಾರೆ.



ಹಾಸನ ರಘು: ಸೈನ್ಯದಲ್ಲಿದ್ದು ಸ್ವಯಂ ನಿವೃತ್ತಿಯ ನಂತರ ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಲು ಆರಂಭಿಸಿದವರು ಹಾಸನ ರಘು. ನೂರಾರು ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡುವ ಮೂಲಕ ಇವರು ಜನಪ್ರಿಯರಾಗಿದ್ದಾರೆ. ರಾಮನಗರದಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು ನೂರಾರು ಸಾಹಸ ಕಲಾವಿದರನ್ನು ತಯಾರು ಮಾಡಿದ್ದಾರೆ. ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ವೆಂಕಪ್ಪ ಅಂಬಾಜಿ ಸುಗಟೇಕರ್‌: ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿದ ಜಾನಪದ ಗಾಯಕ, ಬಾಗಲೋಕಟೆಯ ಅವರಿಗೆ ಪದ್ಮಶ್ರೀ ಪ್ರಕಟವಾಗಿದೆ. ಔಪಚಾರಿಕ ಶಿಕ್ಷಣ ಪಡೆಯದ ಅವರಿಗೆ ಈಗ 81 ವರ್ಷ. ಅಜ್ಜನಿಂದ ಬಳುವಳಿಯಾಗಿ ಬಂದ ಕಲೆಯನ್ನು ಅವರು ಮುಂದುವಿಸುತ್ತಿರುವುದು ವಿಶೇಷ. ಜತೆಗೆ ಉಚಿತವಾಗಿ ಸಾವಿರಾರು ಜನರಿಗೆ ಅವರು ಗೊಂದಲಿ ಹಾಡುವುದನ್ನು ಕಲಿಸಿದ್ದಾರೆ. ತಮ್ಮ 10ನೇ ವಯಸ್ಸಿನಲ್ಲಿ ಕಲಾಸೇವೆಗೆ ತೊಡಗಿದ ಅವರು 71 ವರ್ಷಗಳಿಂದ ಪದ ಹಾಡುತ್ತಿದ್ದಾರೆ. 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರ. ಕರ್ನಾಟಕ ಸರ್ಕಾರ 2022ರಲ್ಲಿ ಗೊಂದಲಿ ಪದ ಸೇವೆಗೆ ಜಾನಪದ ವಿವಿಯಿಂದ ಗೌರವ ಡಾಕ್ಟರೇಟ್ ಕೂಡ ಪ್ರದಾನ ಮಾಡಿದೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ವೆಂಕಪ್ಪ ಬಂದಿವೆ.

ಭೀಮವ್ವ ಶಿಳ್ಳೇಕ್ಯಾತ: ಕೊಪ್ಪಳದ ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದ ಭೀಮವ್ವ ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 96 ವರ್ಷ ವಯಸ್ಸು. ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಭೀಮವ್ವ ಅವರು ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್, ಜಪಾನ್‌, ಜರ್ಮನಿ ಮೊದಲಾದ ಕಡೆ ತೊಗಲು ಗೊಂಬೆಯಾಟದ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದ್ದು. ಇವರು ಮಹಾಭಾರತ ಮತ್ತು ರಾಮಾಯಣವನ್ನು ಮನಮುಟ್ಟುವಂತೆ ನಿರೂಪಿಸುತ್ತಾರೆ. ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿ ಬೆಳೆಸುವಲ್ಲಿ ಇವರ ಕೊಡುಗೆ ಅಪಾರ. ಕೊಪ್ಪಳ ತಾಲೂಕಿನ‌ ಮೊರನಾಳ ಗ್ರಾಮ ಇವರ ಹುಟ್ಟೂರು. 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Padma awards 2025: ರಾಜ್ಯದ ಪ್ರಸಿದ್ಧ ಪಿಟೀಲು ವಾದಕ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ

ಡಾ. ವಿಜಯಲಕ್ಷ್ಮೀ ದೇಶಮಾನೆ: ಕಲಬುರಗಿ ಮೂಲದ, 70 ವರ್ಷದ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ಸುಮಾರು 2 ದಶಕಗಳಿಂದ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿದ್ದಾರೆ. ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ), ಎಫ್.ಎ.ಐ.ಎಸ್. ಪದವಿ ಪಡೆದಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.