ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs PAK: ಹೈವೋಲ್ಟೇಜ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ

ದುಬೈನಲ್ಲಿ ಪಾಕಿಗಳನ್ನು ಅಷ್ಟು ಹಗುರವಾಗಿ ಕಾಣುವಂತಿಲ್ಲ. ದುಬೈ ಅಂಗಳ ಪಾಕ್‌ ಆಟಗಾರರಿಗೆ 2ನೇ ತವರು ಇದ್ದಂತೆ. ಇದಕ್ಕೆ ಉತ್ತಮ ನಿದರ್ಶನ 2021 ಟಿ20 ವಿಶ್ವಕಪ್‌ ಟೂರ್ನಿ. ಲೀಗ್‌ ಹಂತದ ಪಂದ್ಯದಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಮಗುಚಿ ಹಾಕಿತ್ತು. ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಪಾಕ್‌ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿಲ್ಲ. 5 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದಿದೆ. ಮೂರಲ್ಲಿ ಸೋಲು ಕಂಡಿದೆ. ಹೀಗಾಗಿ ಭಾರತ ಈ ಬಾರಿ ಎಚ್ಚರಿಕೆಯಿಂದ ಆಡಬೇಕು.

ಟಾಸ್‌ ಗೆದ್ದ ಪಾಕ್‌; ಭಾರತಕ್ಕೆ ಬೌಲಿಂಗ್‌ ಆಹ್ವಾನ

Profile Abhilash BC Feb 23, 2025 2:06 PM

ದುಬೈ: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಟಾಸ್‌ ಗೆದ್ದ ನಾಯಕ ಮೊಹಮ್ಮದ್‌ ರಿಜ್ವಾನ್‌ ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ. ಭಾರತ ಮೊದಲು ಬೌಲಿಂಗ್‌ ಮಾಡಲಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಮೊದಲ ಪಂದ್ಯ ಸೋತಿರುವ ಹಾಲಿ ಚಾಂಪಿಯನ್‌ ಪಾಕಿಸ್ತಾನಕ್ಕೆ, ಟೂರ್ನಿಯಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಭಾರತ ತಂಡ ಗೆದ್ದರೆ ಸೆಮಿಫೈನಲ್‌ ಪ್ರವೇಶ ಬಹುತೇಕ ಖಚಿತವಾಗಲಿದೆ. ಹೀಗಾಗಿ ಉಭಯ ತಂಡಗಳು ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಾಂಗ್ಲಾ ವಿರುದ್ಧದ ವಿನ್ನಿಂಗ್‌ ತಂಡವನ್ನೇ ಇಲ್ಲಿಯೂ ಕಣಕ್ಕಿಳಿಸಿತು. ಪಾಕಿಸ್ತಾನ ನಿರೀಕ್ಷೆಯಂತೆ ಒಂದು ಬದಲಾವಣೆ ಮಾಡಿಕೊಂಡಿತು. ಫಖರ್‌ ಜಮಾನ್‌ ಬದಲು ಇಮಾಮ್-ಉಲ್-ಹಕ್ ಆಡಲಿಳಿದರು.

ಉಭಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್(ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ,ಕುಲ್‌ದೀಪ್‌ ಯಾದವ್‌.

ಪಾಕಿಸ್ತಾನ: ಬಾಬರ್ ಅಜಂ, ಇಮಾಮ್-ಉಲ್-ಹಕ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿ.ಕೀ), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.

ಪಾಕ್‌ ವಿರುದ್ಧ ಭಾರತದ ದಾಖಲೆ ಹೇಗಿದೆ?

2004ರಲ್ಲಿ ಸೋಲು

ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪರಸ್ಪರ ಮುಖಾಮುಖಿಯಾದದ್ದು 2004ರಲ್ಲಿ. ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಮೂರು ವಿಕೆಟ್‌ ಅಂತರದಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ, ರಾಹುಲ್ ದ್ರಾವಿಡ್ (67) ಮತ್ತು ಅಜಿತ್ ಅಗರ್ಕರ್ (47) ಅವರ ಬ್ಯಾಟಿಂಗ್‌ ಸಾಹಸದಿಂದ ಅಂತಿಮವಾಗಿ 200 ರನ್‌ಗೆ ಆಲೌಟ್‌ ಆಯಿತು. ಜವಾಬಿತ್ತ ಪಾಕ್‌ ಮೊಹಮ್ಮದ್ ಯೂಸುಫ್ ಅವರ ಅಜೇಯ 81 ರನ್ ನೆರವಿನಿಂದ 7 ವಿಕೆಟ್‌ಗೆ 201 ರನ್‌ ಬಾರಿಸಿ ಗೆಲುವು ದಾಖಲಿಸಿತ್ತು.

2009ರಲ್ಲಿಯೂ ಸೋಲು

ದ್ವಿತೀಯ ಬಾರಿಗೆ ಭಾರತ ತಂಡ ಪಾಕ್‌ ವಿರುದ್ಧ ಆಡಿದ್ದು 2009ರಲ್ಲಿ. ಸೆಂಚುರಿಯನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಶೋಯೆಬ್ ಮಲಿಕ್ ಶತಕ ಬಾರಿಸಿ ಮಿಂಚಿದ್ದರು. ಭಾರತಕ್ಕೆ 54 ರನ್‌ ಸೋಲು ಎದುರಾಗಿತ್ತು.ಅಂದು ಭಾರತ ಪರ ಗಂಭೀರ್‌ 87 ರನ್ ಗಳಿಸಿದ್ದರು. ಪಾಕಿಸ್ತಾನ 9 ವಿಕೆಟ್‌ಗೆ 302 ರನ್‌ ಬಾರಿಸಿದರೆ, ಭಾರತ 248 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

2013ರಲ್ಲಿ ಗೆಲುವು ಕಂಡ ಭಾರತ

ಹಿಂದಿನ ಎರಡು ಮುಖಾಮುಖಿಯಲ್ಲಿ ಪಾಕ್‌ ವಿರುದ್ಧ ಸೋಲು ಕಂಡಿದ್ದ ಭಾರತ, 2013ರಲ್ಲಿ ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 165 ರನ್‌ಗೆ ಆಲೌಟ್‌ ಆಯಿತು. ಭಾರತದ ಬ್ಯಾಟಿಂಗ್‌ ವೇಳೆ ಮಳೆಯಿಂದ ಅಡಚಣೆ ಉಂಟು ಮಾಡಿತು. ಹೀಗಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಅನುಸಾರ ಭಾರತಕ್ಕೆ 22 ಓವರ್‌ಗಳಲ್ಲಿ 102 ರನ್‌ ನಿಗದಿಪಡಿಸಲಾಯಿತು. ಭಾರತ ಇದನ್ನು 19.1 ಓವರ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 102 ರನ್‌ ಬಾರಿಸಿ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

2017ರಲ್ಲಿ ಫೈನಲ್‌ನಲ್ಲಿ ಸೋಲು

ಹಾಲಿ ಚಾಂಪಿಯನ್‌ ಆಗಿದ್ದ ಭಾರತ ತಂಡ 2017ರ ಆವೃತ್ತಿಯಲ್ಲಿ ಲೀಗ್‌ ಹಂತದಲ್ಲಿ ಪಾಕಿಸ್ತಾನಕ್ಕೆ 8 ವಿಕೆಟ್‌ ಸೋಲುಣಿಸಿತ್ತು. ಫೈನಲ್‌ನಲ್ಲಿ ಇತ್ತಂಡಗಳು ಮತ್ತೆ ಮುಖಾಮುಖಿಯಾಗಿತ್ತು. ಭಾರತೀಯ ಅಭಿಮಾನಿಗಳು ಕೊಹ್ಲಿ ಪಡೆ ಪಾಕ್‌ ಸದೆಬಡಿದು ಕಪ್‌ ಗೆಲ್ಲಬಹುದೆಂದು ಬಾರೀ ನಿರೀಕ್ಷೆ ಮಾಡಿದ್ದರು. ಆದರೆ ಎಲ್ಲ ನಿರೀಕ್ಷೆ ಹುಸಿಯಾಯಿತು.ಭಾರತ 180 ರನ್‌ ಅಂತರದ ಹೀನಾಯ ಸೋಲು ಕಂಡಿತ್ತು. ಈ ಬಾರಿಯ ಕಾದಾಟದಲ್ಲಿ ಯಾರು ಗೆಲುವು ಸಾಧಿಸಬಹುದು ಎಂದು ಕಾದು ನೋಡಬೇಕಿದೆ.