Operation Sindoor: ಇಸ್ಲಾಮಾಬಾದ್‌ನಲ್ಲಿ ಎಲ್ಲ ಪೆಟ್ರೋಲ್ ಪಂಪ್ ಬಂದ್, ಇಂಧನಕ್ಕಾಗಿ ಹಾಹಾಕಾರ
Operation Sindoor: ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು48 ಗಂಟೆಗಳ ಕಾಲ ಹಠಾತ್ತನೆ ಮುಚ್ಚಲಾಗಿದೆ. ವಿದೇಶಿ ಮೀಸಲು ವಿನಿಮಯ ಸಂಗ್ರಹದಲ್ಲಿ ತೀವ್ರ ಕೊರತೆ ಹೊಂದಿರುವ ಪಾಕಿಸ್ತಾನದ ಬಳಿ ಗಲ್ಫ್ ರಾಷ್ಟ್ರಗಳಿಂದ ಇಂಧನ ಖರೀದಿಸಲೂ ಹಣವಿಲ್ಲದಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಆಪರೇಶನ್ ಸಿಂದೂರದ (Operation Sindoor) ಹೊಡೆತ ತಿನ್ನುತ್ತಿರುವ ನಡುವೆಯೇ ಪಾಕಿಸ್ತಾನ (pakistan) ಇದೀಗ ಇನ್ನಷ್ಟು ಬವಣೆ ಅನುಭವಿಸಬೇಕಾಗಿದೆ. ರಾಜಧಾನಿ ಪ್ರದೇಶ ಇಸ್ಲಾಮಾಬಾದ್ (Islamabad) ಆಡಳಿತವು ಮುಂದಿನ 48 ಗಂಟೆಗಳ ಕಾಲ ರಾಜಧಾನಿ ನಗರದೊಳಗಿನ ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಕೇಂದ್ರಗಳನ್ನು (Petrol pumps) ಸಂಪೂರ್ಣವಾಗಿ ಸ್ಥಗಿತಗೊಳಿಸಲು ತಕ್ಷಣದ ಆದೇಶ ಹೊರಡಿಸಿದೆ. ಶನಿವಾರ ಮುಂಜಾನೆ ಈ ನಿರ್ದೇಶನವನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ವಾಹನ ಚಾಲಕ ಮಾಲಿಕರಲ್ಲಿ ಹಾಹಾಕಾರವೇ ಎದ್ದಿದೆ.
ಇಸ್ಲಾಮಾಬಾದ್‌ನಲ್ಲಿರುವ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಹಠಾತ್ತನೆ ಮುಚ್ಚಲಾಗಿದೆ. ಅಧಿಕೃತ ಅಧಿಸೂಚನೆಯಲ್ಲಿ ಈ ಕಠಿಣ ಕ್ರಮಕ್ಕೆ ಯಾವುದೇ ಕಾರಣವನ್ನು ತಿಳಿಸಲಾಗಿಲ್ಲ ಮತ್ತು ಅಧಿಕಾರಿಗಳು ತಕ್ಷಣವೇ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಒಂದು ಸಂಭಾವ್ಯ ಕಾರಣವೆಂದರೆ ಇಂಧನ ಪೂರೈಕೆಯ ಬಗ್ಗೆ ಇರುವ ಕಳವಳವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಈ ಸಂಪೂರ್ಣ ಬಂದ್ ಆದೇಶ ತಕ್ಷಣದಿಂದ ಜಾರಿಗೆ ಬಂದಿದೆ. ಈ ಆದೇಶದ ಅವಧಿಯವರೆಗೆ ಇಸ್ಲಾಮಾಬಾದ್‌ನೊಳಗಿನ ಯಾವುದೇ ಖಾಸಗಿ ವಾಹನ, ಸಾರ್ವಜನಿಕ ಸಾರಿಗೆ ಅಥವಾ ವಾಣಿಜ್ಯ ಕಾರ್ಯಾಚರಣೆಗಳಿಗೆ ಯಾವುದೇ ಇಂಧನ ಲಭ್ಯವಿರುವುದಿಲ್ಲ. ಇದರಿಂದ ಜನರಲ್ಲಿ ಹಾಹಾಕಾರವೇ ಏಳುವ ನಿರೀಕ್ಷೆ ಇದೆ. ವಿದೇಶಿ ಮೀಸಲು ವಿನಿಮಯ ಸಂಗ್ರಹದಲ್ಲಿ ತೀವ್ರ ಕೊರತೆ ಹೊಂದಿರುವ ಪಾಕಿಸ್ತಾನದ ಬಳಿ ಗಲ್ಫ್ ರಾಷ್ಟ್ರಗಳಿಂದ ಇಂಧನ ಖರೀದಿಸಲೂ ಹಣವಿಲ್ಲದಾಗಿದೆ. ಹೀಗಾಗಿ ಆಪತ್ಕಾಲಕ್ಕೆ ಸರಕಾರ ಸಂಗ್ರಹ ಮಾಡಿ ಇಡುತ್ತಿರಬಹುದು ಎಂದು ಶಂಕಿಸಲಾಗಿದೆ.
ಇಂಧನದ ಹಠಾತ್ ಅಲಭ್ಯತೆಯಿಂದ ಇಸ್ಲಾಮಾಬಾದ್‌ನಲ್ಲಿ ಸಾರಿಗೆ, ಉದ್ಯಮಗಳು ಮತ್ತು ಒಟ್ಟಾರೆ ಸಂಪರ್ಕದ ಮೇಲೆಯೇ ಹೊಡೆತ ಬೀಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಈಗ ಇರುವ ಮೀಸಲು ಇಂಧನ ಲಭ್ಯತೆಯನ್ನು ರಕ್ಷಿಸಲಾಗಿದೆ. ಯುದ್ಧದ ಆತಂಕಭರಿತ ಖರೀದಿ ಅಥವಾ ಸಂಗ್ರಹಣೆಯನ್ನು ತಡೆಯಲು ಪೆಟ್ರೋಲ್ ಪಂಪ್‌ಗಳನ್ನು ನಿರ್ದಿಷ್ಟ ಕಾಲ ಸ್ಥಗಿತಗೊಳಿಸಲು ಆದೇಶಿಸಿರಬಹುದು. ಸರಬರಾಜು ಆದ ಬಳಿಕ ನಿಯಂತ್ರಿತ ವಿತರಣೆ ಆರಂಭಿಸಬಹುದು ಎನ್ನಲಾಗಿದೆ.
ದೇಶಾದ್ಯಂತ ಅನೇಕ ವಾಯುನೆಲೆಗಳಲ್ಲಿ ಸ್ಫೋಟಗಳು, ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಿದ ವರದಿಗಳ ನಂತರ ಪೆಟ್ರೋಲ್ ಪಂಪ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರ ಮುಂಜಾನೆ ಪಾಕಿಸ್ತಾನದ ಅನೇಕ ವಾಯುಪಡೆಯ ನೆಲೆಗಳು ದಾಳಿಗೊಳಗಾದವು, ಇದರಲ್ಲಿ ರಾಷ್ಟ್ರದ ರಾಜಧಾನಿ ಇಸ್ಲಾಮಾಬಾದ್ ಬಳಿ ಇರುವ ನಿರ್ಣಾಯಕ ನೆಲೆಯಾದ ನೂರ್ ಖಾನ್ ವಾಯುನೆಲೆಯೂ ಸೇರಿದೆ. ಇದರ ನಂತರ, ಪಾಕಿಸ್ತಾನ ಸರ್ಕಾರವು ತನ್ನ ಸಂಪೂರ್ಣ ವಾಯುಪ್ರದೇಶವನ್ನು ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಾಯು ಸಂಚಾರಕ್ಕೆ ತಕ್ಷಣ ಮುಚ್ಚುವಂತೆ ಆದೇಶಿಸಿತು. ಪಾಕಿಸ್ತಾನ ಸೇನೆಯು ಸ್ಫೋಟಗಳನ್ನು ದೃಢಪಡಿಸಿದೆ.
ಇದನ್ನೂ ಓದಿ: Operation Sindoor: ಪಾಕಿಸ್ತಾನದ ಎರಡು ಯುದ್ಧವಿಮಾನ ಹೊಡೆದುರುಳಿಸಿದ ಭಾರತ