Physical Abuse: ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪಾತಕಿಗಳ ಬಂಧನ
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು ಆಕೆಯ ಬಳಿ ಇದ್ದ ಮೊಬೈಲ್, ಹಣ, ತಾಳಿ, ಚಿನ್ನ ಕದ್ದು ಪರಾರಿಯಾಗಿದ್ದರು. ಸದ್ಯ ಇಬ್ಬರು ಆರೋಪಿಗಳ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ (Bengaluru Crime News) ಬಸ್ಸಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ಎಸಗಿದ್ದ ಇಬ್ಬರು ಪಾತಕಿಗಳನ್ನು ಸೆಂಟ್ರಲ್ ಮಹಿಳಾ ಠಾಣೆಯ ಪೊಲೀಸರು (Bengaluru police) ಹೆಡೆಮುರಿ ಕಟ್ಟಿದ್ದಾರೆ.
ಯಲಹಂಕಕ್ಕೆ ಹೋಗಲು ರಾತ್ರಿ 11.30ರ ಸುಮಾರಿಗೆ ಬಸ್ಗಾಗಿ ಮಹಿಳೆ ಕೆಆರ್ ಮಾರುಕಟ್ಟೆಯಲ್ಲಿ ಕಾಯುತ್ತಿರುವಾಗ ಕಾರಿನಲ್ಲಿ ಬಂದ ಇಬ್ಬರು ಯುವಕರು ಬಸ್ ತೋರಿಸುತ್ತೇವೆಂದು ಗೋಡೌನ್ ಸ್ಟ್ರೀಟ್ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದರು ಎಂದು ಯುವತಿ ದೂರು ದಾಖಲಿಸಿದ್ದರು.
ಬಂಧಿತ ಆರೋಪಿಗಳು ಕೆ ಆರ್ ಮಾರ್ಕೆಟ್ನಲ್ಲಿ (KR Market) ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು ಆಕೆಯ ಬಳಿ ಇದ್ದ ಮೊಬೈಲ್, ಹಣ, ತಾಳಿ, ಚಿನ್ನ ಕದ್ದು ಪರಾರಿಯಾಗಿದ್ದರು. ಸದ್ಯ ಇಬ್ಬರು ಆರೋಪಿಗಳ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅತ್ಯಾಚಾರ ನಡೆಸಿ ನನ್ನ ಬಳಿ ಇದ್ದ ಚಿನ್ನಾಭರಣ, ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಯುವತಿ ಬೆಂಗಳೂರಿನ ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ದೂರು ದಾಖಲಾಗುತ್ತಿದ್ದಂತೆ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ಎರಡು ತಂಡ ರಚನೆ ಮಾಡಿ ಶೋಧ ಕಾರ್ಯ ಶುರು ಮಾಡಿದ್ದರು.
ಯುವತಿ ಬಸ್ಗಾಗಿ ಕೆಆರ್ ಮಾರುಕಟ್ಟೆಯಲ್ಲಿ ಕಾಯುತ್ತಿರುವಾಗ ಕಾರಿನಲ್ಲಿ ಬಂದ ಯುವಕರು ಡ್ರಾಪ್ ಕೊಡಬೇಕಾ ಎಂದು ಕೇಳಿದ್ದರಂತೆ. ಈ ವೇಳೆ ಯುವತಿ ಬಸ್ ನಿಲ್ದಾಣ ಎಲ್ಲಿದೆ ಎಂದು ಕೇಳಿದ್ದರು. ಈ ವೇಳೆ ಬಸ್ ಸ್ಟ್ಯಾಂಡ್ಗೆ ಬಿಡುತ್ತೇವೆ ಬನ್ನಿ ಎಂದು ಕಾರಿನಲ್ಲಿ ಹತ್ತಿಸಿಕೊಂಡು ಬೇರೊಂದು ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದರು ಎಂದು ಯುವತಿ ಆರೋಪಿಸಿದ್ದರು.
ತಮಿಳುನಾಡಿನಿಂದ ಅಣ್ಣನ ಮನೆಗೆಂದು ಬಂದಿದ್ದ ಯುವತಿ, ಯಲಹಂಕ ಬಸ್ಸಿಗಾಗಿ ಕೆಆರ್ ಮಾರುಕಟ್ಟೆಯಲ್ಲಿ ಕಾಯುತ್ತಿದ್ದರು. ಕೆ ಆರ್ ಮಾರ್ಕೆಟ್ ಬಳಿ ಗೋಡೌನ್ ಸ್ಟ್ರೀಟ್ ರಸ್ತೆಯಲ್ಲಿ ಈ ಘಟನೆ ಜರುಗಿದ್ದು, ಸಿಸಿಟಿವಿ ಇರದ ಸ್ಥಳದಲ್ಲಿ ಇಬ್ಬರು ದುಷ್ಕರ್ಮಿಗಳು ಕೃತ್ಯವೆಸಗಿ ಪರಾರಿಯಾಗಿದ್ದರು. ಅಪರಾಧ ನಡೆದ ಸ್ಥಳದಲ್ಲಿ ಈ ಹಿಂದೆ ಸರಗಳ್ಳತನ, ಮೊಬೈಲ್, ಬೈಕ್, ಆಟೋ ಕಳ್ಳತನಗಳು ಆಗಿವೆ. ಇದೇ ಮೊದಲ ಬಾರಿಗೆ ಇಲ್ಲಿ ಅತ್ಯಾಚಾರ ಎಸಗಲಾಗಿದೆ.
ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ
ಸಮಾಜಘಾತಕ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆಯುತ್ತವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮಾಜಘಾತುಕ ಶಕ್ತಿಗಳಿಂದ ಇಂತಹ ಕೃತ್ಯಗಳು ನಡೆಯುತ್ತವೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಪೊಲೀಸರು ಬಂಧಿಸುತ್ತಾರೆ. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: PhysicalAbuse: ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲೇ ಮಹಿಳೆ ಮೇಲೆ ಅತ್ಯಾಚಾರ, ದರೋಡೆ