Narendra Modi: ದಾರಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ; ವೈರಲ್ ವಿಡಿಯೊ ಇಲ್ಲಿದೆ
ದೇಶಾದ್ಯಂತ ಅದ್ಧೂರಿಯಾಗಿ 76ನೇ ಗಣರಾಜ್ಯೋತ್ಸವ ಆಚರಿಸಲಾಗಿದೆ. ದಿಲ್ಲಿಯ ಕರ್ತವ್ಯ ಪಥದಲ್ಲಿ ಆಯೋಜಿಸಿದ್ದ ಆಚರಣೆ ವೇಳೆ ಪ್ರದಾನಿ ಮೋದಿ ಅವರು ದಾರಿಯಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ನರೇಂದ್ರ ಮೋದಿ.

ಹೊಸದಿಲ್ಲಿ: ಭಾನುವಾರ (ಜ. 26) ಭಾರತಲ್ಲಿ ಅದ್ಧೂರಿಯಾಗಿ 76ನೇ ಗಣರಾಜ್ಯೋತ್ಸವ (Republic Day) ಆಚರಿಸಲಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯ ಕರ್ತವ್ಯ ಪಥದಲ್ಲಿ ಆಯೋಜಿಸಿದ್ದ ಸೇನೆಗಳ ಶಕ್ತಿ ಪ್ರದರ್ಶನ, ಪಥ ಸಂಚಲನ, ಸ್ತಬ್ಧ ಚಿತ್ರಗಳ ಪ್ರದರ್ಶನ, ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಗಮನ ಸೆಳೆದಿವೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರ್ತವ್ಯ ಪಥದಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛ ಭಾರತದ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Viral Video) ಭಾರಿ ಸದ್ದು ಮಾಡುತ್ತಿದೆ.
ಕರ್ತವ್ಯ ಪಥದಲ್ಲಿ ಪ್ರೋಟೋಕಾಲ್ ಪ್ರಕಾರ ಪ್ರಧಾನಿ ಮೋದಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದರು. ಈ ವೇಳೆ ಅವರು ಕೆಳಗೆ ಬಿದ್ದಿದ್ದ ಕಸವನ್ನು ಎತ್ತಿದ್ದಾರೆ. ಸದ್ಯ ಈ ವಿಡಿಯೊ ವೀಕ್ಷಿಸಿದ ನೆಟ್ಟಿಗರು ಪ್ರಧಾನಿ ಮೋದಿ ಅವರ ಸರಳತೆಗೆ ಮೆಚ್ಚುಗೆ ಸೂಚಿಸಿದ್ದಾರೆ.
𝐓𝐡𝐞 𝐁𝐫𝐚𝐧𝐝 𝐀𝐦𝐛𝐚𝐬𝐬𝐚𝐝𝐨𝐫 𝐨𝐟 𝐒𝐰𝐚𝐜𝐡𝐡 𝐁𝐡𝐚𝐫𝐚𝐭 - 𝐏𝐌 @narendramodi!
— MyGovIndia (@mygovindia) January 26, 2025
During the Republic Day event at Kartavya Path, PM Modi demonstrated the importance of cleanliness by picking up waste while receiving the Vice President. #RepublicDay2025… pic.twitter.com/LyTKvfamPM
ವಿಡಿಯೊದಲ್ಲಿ ಏನಿದೆ?
ಉಪರಾಷ್ಟ್ರಪತಿ ಅವರ ವಾಹನ ಬರುತ್ತಿರುವುದನ್ನು ಗಮನಿಸಿದ ಪಿಎಂ ಮೋದಿ ಅವರನ್ನು ಸ್ವಾಗತಿಸಲು ಮುಂದೆ ಸಾಗಿದರು. ಈ ವೇಳೆ ನೆಲದ ಮೇಲೆ ಬಿದ್ದಿದ್ದ ಕಸವನ್ನು ಗಮನಿಸಿದರು. ಕೂಡಲೇ ಅವರು ಬಾಗಿ ತ್ಯಾಜ್ಯವನ್ನು ಎತ್ತಿಕೊಂಡು ತನ್ನ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು. ಕೆಲವೇ ಸೆಕೆಂಡ್‌ಗಳ ವಿಡಿಯೊ ಇದಾಗಿದ್ದರೂ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ. ಸ್ವಚ್ಛತೆಯ ಮಹತ್ವವನ್ನು ವಿವರಿಸುವಲ್ಲಿ ಈ ವಿಡಿಯೊ ಯಶಸ್ವಿಯಾಗಿದೆ.
2014ರಲ್ಲಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದರು. ಈ ವಿಡಿಯೊ ವೀಕ್ಷಿಸಿದ ಹಲವರು ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ್ದು ಮಾತ್ರವಲ್ಲದೆ ಸ್ವತಃ ಅವರೇ ಅದನ್ನು ಜಾರಿಗೆ ತರುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಮೋದಿ ಅವರ ಸರಳತೆ ಎಲ್ಲರಿಗೂ ಮಾದರಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: 76th Republic day: ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ; ಕರ್ತವ್ಯ ಪಥದಲ್ಲಿ ಸೇನಾ ಶಕ್ತಿ ಅನಾವರಣ
ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi murmu) ಅವರು ಧ್ವಜಾರೋಹಣ ನೆರವೇರಿಸಿದರು. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಆಗಮಿಸಿದ್ದರು. ಧ್ವಜಾರೋಹಣ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಾಗೂ ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ರಾಷ್ಟ್ರಪತಿ ಮುರ್ಮು ಅವರು ಗೌರವ ವಂದನೆಯನ್ನು ಸ್ವೀಕರಿಸಿದರು.
ಕರ್ತವ್ಯ ಪಥದಲ್ಲಿ ಸೇನಾಪಡೆಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿವೆ. 52 ಸದಸ್ಯರನ್ನು ಒಳಗೊಂಡಿರುವ ಇಂಡೋನೇಷಿಯಾದ ರಾಷ್ಟ್ರೀಯ ಸಶಸ್ತ್ರ ಪಡೆಗಳ ಮೆರವಣಿಗೆಯ ತುಕಡಿ ಮತ್ತು 190 ಸದಸ್ಯರೊಂದಿಗೆ ಇಂಡೋನೇಷ್ಯಾದ ಮಿಲಿಟರಿ ಅಕಾಡೆಮಿಯ ಬ್ಯಾಂಡ್ ಪರೇಡ್‌ನಲ್ಲಿ ಭಾಗವಹಿಸಿದ್ದು ವಿಶೇಷ. ಭಾರತೀಯ ವಾಯು ಸೇನೆ ನೆರೆದಿದ್ದ ಗಣ್ಯರ ಮೇಲೆ ಪುಷ್ಪಾರ್ಚನೆಯನ್ನು ಮಾಡಿದ್ದು, ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದಲ್ಲಿ ಅಶ್ವದಳ ಪರೇಡ್ ನಡೆಸಲಾಯಿತು.