ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ನಿರ್ಮಿಸಲು ವೇದಿಕೆಯೊಂದು ಸಿದ್ಧವಾಗುತ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಮತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ (SS Rajamouli) ಮೊದಲ ಬಾರಿಗೆ ಒಂದಾಗುತ್ತಿದ್ದು, ಈಗಾಗಲೇ ನಿರೀಕ್ಷೆ ಬೆಟ್ಟದಷ್ಟಾಗಿದೆ. ಸದ್ಯ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಎಸ್‌ಎಸ್‌ಎಂಬಿ 29ʼ (SSMB 29) ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸುತ್ತಿದ್ದಾರೆ ಎನ್ನಲಾಗಿದೆ. ಹೀಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು, ತಂತ್ರಜ್ಞರ ಸಮಾಗಮ ಒಂದೇ ಚಿತ್ರದಲ್ಲಿ ಆಗುತ್ತಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದೆ. ಬಹಭಾಷಾ ಕಲಾವಿದ, ಮಲಯಾಳಂ ಸೂಪರ್ ಸ್ಟಾರ್, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಇದೀಗ ʼಎಸ್‌ಎಸ್‌ಎಂಬಿ 29ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಶೂಟಿಂಗ್‌ಗಾಗಿ ಸಿನಿಮಾ ತಂಡದೊಂದಿಗೆ ಒಡಿಶಾಕ್ಕೆ ತೆರಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ʼಎಸ್‌ಎಸ್‌ಎಂಬಿ 29ʼ ಸಿನಿಮಾದಲ್ಲಿ ಪೃಥ್ವಿರಾಜ್ ನಟಿಸಲಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ವದಂತಿಗೆ ಇನ್ನಷ್ಟು ರೆಕ್ಕೆ ಮುಕ್ಕ ಮೂಡಿದೆ. ಅದಾಗ್ಯೂ ಚಿತ್ರತಂಡ ಅಧಿಕೃತ ಘೋಷಣೆ ಇನ್ನಷ್ಟೇ ಹೊರಡಿಸಬೇಕಿದೆ.
ಅದೂ ಅಲ್ಲದೆ ಇತ್ತೀಚೆಗೆ ಮಹೇಶ್ ಬಾಬು ಅವರ ತಾಯಿ, ಹಿರಿಯ ನಟಿ ಮಲ್ಲಿಕಾ ಸುಕುಮಾರನ್ ಕಾಮೆಂಟ್ ಒಂದರಲ್ಲಿ, ʼʼಪೃಥ್ವಿರಾಜ್ ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಇಂದು ರಾತ್ರಿ ಹೊರಡುತ್ತಿದ್ದಾರೆʼʼ ಎಂದು ತಿಳಿಸಿದ್ದರು. ಬಳಿಕ ಈ ಕಾಮೆಂಟ್ ಡಿಲೀಟ್ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಬಹು ನಿರೀಕ್ಷಿತ ಚಿತ್ರದಲ್ಲಿ ಪೃಥ್ವಿರಾಜ್ ನಟಿಸುವುದು ಪಕ್ಕಾ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Kalpana Raghavendar: ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್; ಪುತ್ರಿ ಹೇಳಿದ್ದೇನು?
ʼಬಾಹುಬಲಿʼ ಸರಣಿ, ʼಆರ್‌ಆರ್‌ಆರ್ʼ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದ ರಾಜಮೌಳಿ ಅವರ ಮಹತ್ವದ ಪ್ರಾಜೆಕ್ಟ್ ಈ ಸಿನಿಮಾ. ಚಿತ್ರದಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಾರೆ ಎಂದಷ್ಟೇ ರಾಜಮೌಳಿ ಅಧಿಕೃತವಾಗಿ ಘೋಷಿಸಿದ್ದಾರೆ. ಇನ್ನುಳಿದಂತೆ ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಮುಗಿದಿದೆ ಎನ್ನಲಾಗಿದೆ. 2ನೇ ಹಂತದ ಶೂಟಿಂಗ್ ಒಡಿಶಾದಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಚಿತ್ರತಂಡ ತೆರಳಿದೆ. ಇದು ಕಾಡಿನಲ್ಲಿ ನಡೆಯುವ ಸಾಹಸಭರಿತ ಕಥೆಯನ್ನು ಒಳಗೊಂಡಿದೆಯಂತೆ.
ಸಾವಿರ ಕೋಟಿ ರೂ. ಬಜೆಟ್?
ಈ ಚಿತ್ರ ಬರೋಬ್ಬರಿ 900-1,000 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ. ಒಂದುವೇಳೆ ಈ ಸುದ್ದಿ ನಿಜವಾದರೆ ಭಾರತದ ದುಬಾರಿ ಸಿನಿಮಾ ಎನಿಸಿಕೊಳ್ಳಲಿದೆ. ಮೂಲಗಳ ಪ್ರಕಾರ ಇದು 2 ಭಾಗಗಳಲ್ಲಿ ತೆರೆಗೆ ಬರಲಿದ್ದು, ಮುಂದಿನ ವರ್ಷದ ತನಕ ಶೂಟಿಂಗ್ ನಡೆಯಲಿದೆ. ಮೊದಲ ಭಾಗ 2027ರಲ್ಲಿ ಮತ್ತು 2ನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಸೂಚನೆ ನೀಡಿದ್ದರು. ಒಟ್ಟಿನಲ್ಲಿ ಅಧಿಕೃತ ಘೋಷಣೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.