ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalpana Raghavendar: ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌; ಪುತ್ರಿ ಹೇಳಿದ್ದೇನು?

ತೆಲುಗಿನ ಜನಪ್ರಿಯ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಸುದ್ದಿಗೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಪುತ್ರಿ ದಯಾ ಪ್ರಸಾದ್‌ ಪ್ರಭಾಕರ್‌ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ತಮ್ಮ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಲ್ಲ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌

ಕಲ್ಪನಾ ರಾಘವೇಂದ್ರ.

Profile Ramesh B Mar 5, 2025 11:51 PM

ಹೈದರಾಬಾದ್‌: ಮಂಗಳವಾರ (ಮಾ. 4) ಸಂಜೆ ಹೈದರಾಬಾದ್‌ನ ನಿಜಾಂಪೇಟೆಯ ತಮ್ಮ ನಿವಾಸದಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ವಿವಿಧ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಜನಪ್ರಿಯ ತೆಲುಗು ಗಾಯಕಿ ಕಲ್ಪನಾ ರಾಘವೇಂದ್ರ (Kalpana Raghavenda) ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಅವರು ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಸುದ್ದಿ ಹಬ್ಬಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಪುತ್ರಿ ದಯಾ ಪ್ರಸಾದ್‌ ಪ್ರಭಾಕರ್‌ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ತಮ್ಮ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಲ್ಲ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ಕಲ್ಪನಾ ಮಗಳು ಹೇಳಿದ್ದೇನು?

ಮಾಧ್ಯಮದೊಂದಿಗೆ ಮಾತನಾಡಿದ ಅವರು, ʼʼನನ್ನ ತಾಯಿಗೆ ಆತ್ಮಹತ್ಯೆಗೆ ಯತ್ನಿಸುವಂತಹ ಯಾವುದೇ ಸಮಸ್ಯೆ ಇರಲಿಲ್ಲ. ಅವರು ಆರೋಗ್ಯವಂತರಾಗಿ, ಖುಷಿಯಾಗಿಯೇ ಇದ್ದರು. ಅವರೀಗ ಪಿಎಚ್‌ಡಿ ಮತ್ತು ಎಲ್‌ಎಲ್‌ಬಿ ಮಾಡುತ್ತಿದ್ದಾರೆ. ಇದರಿಂದ ಅವರನ್ನು ನಿದ್ರಾಹೀನತೆ ಕಾಡುತ್ತಿದೆ. ಅದಕ್ಕಾಗಿ ವೈದ್ಯರು ಕೆಲವು ಔಷಧವನ್ನು ಸೂಚಿಸಿದ್ದರು. ಒತ್ತಡದಿಂದಾಗಿ ಈ ಔಷಧಗಳು ಓವರ್‌ ಡೋಸ್‌ ಆಗಿವೆ. ಹೀಗಾಗಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅದು ಬಿಟ್ಟು ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ. ದಯವಿಟ್ಟು ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿʼʼ ಎಂದು ಮನವಿ ಮಾಡಿದ್ದಾರೆ.



ಈಗ ಹೇಗಿದ್ದಾರೆ?

ಕಲ್ಪನಾ ಅವರ ಈಗಿನ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಅವರು, ʼʼತಾಯಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಗುಣಮುಖರಾಗಲಿದ್ದಾರೆʼʼ ಎಂದು ತಿಳಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಸಂತೋಷವಾಗಿದ್ದೇವೆ ಎಂದೂ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಕಲ್ಪನಾ ಅವರ ಆರೋಗ್ಯ ಸ್ಥಿರವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. 2-3 ದಿನಗಳಲ್ಲಿ ಕಲ್ಪನಾ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Kalpana Raghavendar: ಖ್ಯಾತ ಹಿನ್ನೆಲೆ ಗಾಯಕಿ ಆತ್ಮಹತ್ಯೆಗೆ ಯತ್ನ; ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಮಂಗಳವಾರ ಏನಾಗಿತ್ತು?

ಮಂಗಳವಾರ ಕೆಪಿಎಚ್‌ಬಿ ಪೊಲೀಸ್‌ ಠಾಣೆಗೆ ಕಲ್ಪನಾ ತಂಗಿದ್ದ ಅಪಾರ್ಟ್‌ಮೆಂಟ್‌ನಿಂದ ಎಮರ್ಜೆನ್ಸಿ ಕರೆ ಬಂದಿತ್ತು. ಕೂಡಲೇ ಪೊಲೀಸರು ಅವರ ಮನೆಗೆ ಧಾವಿಸಿದಾಗ ಒಳಗಿನಿಂದ ಲಾಕ್‌ ಮಾಡಲಾಗಿತ್ತು. ಕೊನೆಗೆ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಕಲ್ಪನಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹೆಚ್ಚಿನ ಪ್ರಮಾಣದಲ್ಲಿ ನಿದ್ದೆ ಮಾತ್ರೆಯನ್ನು ಸೇವಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.

ಯಾರು ಈ ಕಲ್ಪನಾ?

1980ರಲ್ಲಿ ಚೆನ್ನೈಯಲ್ಲಿ ಜನಿಸಿದ ಕಲ್ಪನಾ ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜತೆಗೆ ಹಿನ್ನೆಲೆ ಗಾಯಕಿಯೂ ಜನಪ್ರಿಯರಾಗಿದ್ದಾರೆ. 5ನೇ ವಯಸ್ಸಿನಲ್ಲಿಯೇ ಸಂಗೀತ ಕಲಿಕೆ ಆರಂಭಿಸಿದ್ದ ಅವರು 1,500ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಅತ್ಯುತ್ತಮ ಗಾಯನಕ್ಕೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಪಡೆದುಕೊಂಡಿರುವ ಅವರು 2013ರಲ್ಲಿ ತೆರೆಕಂಡ ಕನ್ನಡದ ʼಗಲಾಟೆʼ ಚಿತ್ರದ ʼಮುದ್ದಾದ ನಗೆಯೇʼ ಹಾಡಿಗೆ ಧ್ವನಿ ನೀಡಿದ್ದಾರೆ.