ಮುಂಬಯಿ: ರಾಹುಲ್ ದ್ರಾವಿಡ್ ಬಳಿಕ ಭಾರತೀಯ ಟೆಸ್ಟ್ ತಂಡದಲ್ಲಿ ಭಾರತದ 'ಗೋಡೆ' ಎಂಬ ಖ್ಯಾತಿಯನ್ನು ಗಳಿಸಿದ ಆಟಗಾರನೆಂದರೆ ಅದು ಚೇತೇಶ್ವರ ಪೂಜಾರ(Cheteshwar Pujara). ತಮ್ಮ ಶಾಂತ ಸ್ವರೂಪದ ಆಟದ ಮೂಲಕ ಹಲವು ಸರಣಿ ಗೆಲುವಿನಲ್ಲಿ ಕೊಡುಗೆ ನೀಡಿದ್ದರು. ಆದರೆ ಅವರು ಭಾನುವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಪೂಜಾರ ಎಂದರೆ ನೆನಪಿಗೆ ಬರುವುದೇ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2018 ಮತ್ತು 2012ರ ಎರಡು ಬಾರ್ಡರ್-ಗಾವಸ್ಕರ್ ಟ್ರೋಫಿ. ಈ ಎರಡು ಸರಣಿಯಲ್ಲಿ ಟೀಮ್ ಇಂಡಿಯಾ ಗೆಲ್ಲಲು ಮಹತ್ವದ ಕೊಡುಗೆ ನೀಡಿದ್ದರು. ಗಾಯಗೊಂಡಿದ್ದರೂ, ಛಲದಿಂದ ಆಡಿದ್ದರು.
ಚೇತೇಶ್ವರ ಪೂಜಾರ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿದ 11 ಟೆಸ್ಟ್ ಪಂದ್ಯಗಳಲ್ಲಿ 47.28 ಸರಾಸರಿಯಲ್ಲಿ ಒಟ್ಟು 993 ರನ್‌ಗಳನ್ನು ಗಳಿಸಿದ್ದಾರೆ. ಆಸೀಸ್ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದ ಭಾರತದ ಆಟಗಾರರಲ್ಲಿ ಇವರು ಒಬ್ಬರು. ಆಸ್ಟ್ರೇಲಿಯಾ ವಿರುದ್ಧ 200 ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಏಕೈಕ ಭಾರತೀಯ ಆಟಗಾರ ಇವರಾಗಿದ್ದಾರೆ.
37 ವರ್ಷದ ಪೂಜಾರ, 2010 ರಲ್ಲಿ ಭಾರತ ಪರ ಪದಾರ್ಪಣೆ ಮಾಡಿದ ನಂತರ ಪೂಜಾರ 103 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 43.60 ಸರಾಸರಿಯಲ್ಲಿ 7,195 ಟೆಸ್ಟ್ ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳಿವೆ. ತವರಿನಲ್ಲಿ, ಅವರು ತಮ್ಮ ಒಟ್ಟು ಟೆಸ್ಟ್ ಗಳಿಕೆಯಲ್ಲಿ 3839 ರನ್ ಗಳಿಸಿದ್ದಾರೆ.
52.58 ಸರಾಸರಿಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ, ಅವರು ಭಾರತದ ಅತ್ಯಂತ ವಿಶ್ವಾಸಾರ್ಹ ನಂಬರ್ 3 ಬ್ಯಾಟರ್ ಆಗಿದ್ದರು. ಸ್ವದೇಶ ಮತ್ತು ವಿದೇಶಗಳಲ್ಲಿ ತಂಡದ ಕೆಲವು ಮಹತ್ವದ ಟೆಸ್ಟ್ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕೊನೆಯ ಟೆಸ್ಟ್ ಪಂದ್ಯವು ಜೂನ್ 2023 ರಲ್ಲಿ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಗಿತ್ತು. ಆ ಪಂದ್ಯದ ನಂತರ ಭಾರತವು ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾರಂಭಿಸಿದ ಕಾರಣ ಪೂಜಾರಗೆ ಅವಕಾಶ ಲಭಿಸಲಿಲ್ಲ.