ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

White T-shirt Movement: ವೈಟ್‌ ಟೀ ಶರ್ಟ್‌ ಅಭಿಯಾನ ಆರಂಭಿಸಿದ ರಾಹುಲ್‌ ಗಾಂಧಿ; ಏನಿದರ ಉದ್ದೇಶ?

White T-shirt Movement: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಡವರು ಮತ್ತು ಕಾರ್ಮಿಕ ವರ್ಗಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಇದರ ವಿರುದ್ಧ ʼವೈಟ್‌ ಟೀ ಶರ್ಟ್‌ ಅಭಿಯಾನʼ ಆರಂಭಿಸಿದ್ದಾರೆ.

ವೈಟ್‌ ಟೀ ಶರ್ಟ್‌ ಅಭಿಯಾನ ಆರಂಭಿಸಿದ ರಾಹುಲ್‌ ಗಾಂಧಿ; ಏನಿದರ ಉದ್ದೇಶ?

ರಾಹುಲ್‌ ಗಾಂಧಿ.

Profile Ramesh B Jan 19, 2025 9:37 PM

ಹೊಸದಿಲ್ಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಬಡವರು ಮತ್ತು ಕಾರ್ಮಿಕ ವರ್ಗಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಇದರ ವಿರುದ್ಧ ʼವೈಟ್‌ ಟೀ ಶರ್ಟ್‌ ಅಭಿಯಾನʼ (White T-shirt Movement)ಯನ್ನು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಆಯ್ದ ಕೆಲವು ಬಂಡವಾಳಶಾಹಿಗಳನ್ನು ಶ್ರೀಮಂತಗೊಳಿಸುವಲ್ಲಿ ನಿರತವಾಗಿರುವುದರಿಂದ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರವು ಬಡವರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದ ರಾಹುಲ್ ಗಾಂಧಿ, ಕಾರ್ಮಿಕ ವರ್ಗದ ಸಹೋದ್ಯೋಗಿಗಳು ಮತ್ತು ಯುವಕರು ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ʼʼಮೋದಿ ಸರ್ಕಾರವು ಬಡವರು ಮತ್ತು ಕಾರ್ಮಿಕ ವರ್ಗಕ್ಕೆ ಬೆನ್ನು ತೋರಿಸಿದೆ. ಸರ್ಕಾರವು ಕೆಲವು ಬಂಡವಾಳಶಾಹಿಗಳನ್ನು ಶ್ರೀಮಂತಗೊಳಿಸುವಲ್ಲಿ ತನ್ನ ಗಮನ ಕೇಂದ್ರೀಕರಿಸುತ್ತಿದೆ. ಇದರಿಂದಾಗಿ ಅಸಮಾನತೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ನ್ಯಾಯ ಮತ್ತು ಹಕ್ಕುಗಳನ್ನು ಪಡೆಯಲು ಬಲವಾಗಿ ಧ್ವನಿ ಎತ್ತುವುದು ನಮ್ಮೆಲ್ಲರ ಜಬಾಬ್ದಾರಿ. ಹೀಗಾಗಿ #WhiteTshirtMovement ಪ್ರಾರಂಭಿಸುತ್ತಿದ್ದೇವೆʼʼ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಚಳುವಳಿಯಲ್ಲಿ ಭಾಗವಹಿಸಲು 9999812024ಕ್ಕೆ ಮಿಸ್ಡ್‌ ಕಾಲ್‌ ಕೊಡಿ ಅಥವಾ ಇಲ್ಲಿ ಕ್ಲಿಕ್‌ ಮಾಡಿ ಮನವಿ ಮಾಡಿದ್ದಾರೆ.



ಏನಿದು ವೈಟ್‌ ಟೀ ಶರ್ಟ್‌ ಅಭಿಯಾನ?

* ವೆಬ್‌ಸೈಟ್‌ ಪ್ರಕಾರ ಬಿಳಿ ಟೀ ಶರ್ಟ್‌ ಕೇವಲ ಬಟ್ಟೆಯಲ್ಲ; ಇದು ಅಭಿಯಾನದ ಐದು ಮಾರ್ಗದರ್ಶಿ ತತ್ವಗಳನ್ನು ಸಂಕೇತಿಸುತ್ತದೆ: ಸಹಾನುಭೂತಿ, ಏಕತೆ, ಅಹಿಂಸೆ, ಸಮಾನತೆ ಮತ್ತು ಪ್ರಗತಿ.

* ಈ ಮೌಲ್ಯಗಳು ಸಾಮರಸ್ಯ ಮತ್ತು ವೈವಿಧ್ಯತೆಯ ಮೇಲೆ ನಿರ್ಮಿಸಲಾದ ಭಾರತದ 8,000 ವರ್ಷಗಳಷ್ಟು ಹಳೆಯ ನಾಗರಿಕತೆಯ ಸ್ಫೂರ್ತಿಯನ್ನು ಪ್ರತಿಧ್ವನಿಸುತ್ತವೆ ಎಂದು ವೆಬ್‌ಸೈಟ್‌ ಹೇಳಿದೆ.

* ಆದಾಯ, ಜಾತಿ ಮತ್ತು ಧರ್ಮದಲ್ಲಿ ಬೇರೂರಿರುವ ಅಸಮಾನತೆಗಳು ಸಿದ್ಧಾಂತವನ್ನು ಮೀರಿದ ಕ್ರಮಗಳನ್ನು ಬಯಸುತ್ತದೆ.

* ಬಿಳಿ ಟೀ ಶರ್ಟ್ 'ನ್ಯಾಯಯುತ ಮತ್ತು ಏಕೀಕೃತ ಭಾರತ'ದ ಸಂಕೇತ. ರಾಹುಲ್‌ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮತ್ತು ಅದರ ಮುಂದುವರಿದ ಭಾಗವಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸ್ಫೂರ್ತಿಯನ್ನು ಇದು ಒಳಗೊಂಡಿದೆ.

* ಈ ಎರಡು ಯಾತ್ರೆಗಳ ಗುರಿಗಳನ್ನು ವೈಟ್‌ ಟೀ ಶರ್ಟ್ ಪ್ರತಿಧ್ವನಿಸುತ್ತದೆ - ವಿಭಜನೆಗಳನ್ನು ನಿವಾರಿಸುವುದು ಮತ್ತು ಭಾರತವನ್ನು 'ಒಗ್ಗಟ್ಟಿನ' ಮತ್ತು 'ಸಮಾನ' ರಾಷ್ಟ್ರವನ್ನಾಗಿ ಮಾಡುವುದು ಮುಖ್ಯ ಉದ್ದೇಶ.

ಈ ಸುದ್ದಿಯನ್ನೂ ಓದಿ: Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ FIR

ರಾಹುಲ್‌ ಗಾಂಧಿ ಅವರು ಸಾಮಾನ್ಯವಾಗಿ ಬಿಳಿ ಟೀ ಶರ್ಟ್‌ ಅನ್ನೇ ಧರಿಸುತ್ತಾರೆ. ಇದರ ಹಿಂದಿನ ಕಾರಣವನ್ನು ಅವರು ಕಳೆದ ವರ್ಷ ಬಹಿರಂಗಪಡಿಸಿದ್ದರು. ಬಿಳಿ ಟೀ ಶರ್ಟ್ ಪಾರದರ್ಶಕತೆ, ದೃಢತೆ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಹಾಗಾಗಿ ಬಿಳಿ ಟೀ ಶರ್ಟ್ ಅನ್ನು ಹಾಕಿಕೊಳ್ಳಲು ಬಯಸುತ್ತೇನೆ ಎಂದು ಅವರು ಹೇಳಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಬಿಳಿ ಟೀ ಶರ್ಟ್ ಧರಿಸಲು ಆರಂಭಿಸಿದ್ದರು.