ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻತಿಥಿʼ ಚಿತ್ರದ ಸೆಂಚುರಿ ಗೌಡ ಪಾತ್ರಕ್ಕೆ ಸಿಂಗ್ರೀಗೌಡ ಆಯ್ಕೆಯಾಗಿದ್ದು ಹೇಗೆ? ಅಂದು ʻಗಾಡ್‌ಫಾದರ್‌ʼ ನಿರ್ದೇಶಕರಿಂದಲೂ ಸಿಕ್ಕಿತ್ತು ಮೆಚ್ಚುಗೆ

Century Gowda Passes Away: ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ 'ತಿಥಿ'ಯಲ್ಲಿ 'ಸೆಂಚುರಿ ಗೌಡ'ನಾಗಿ ನಟಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಸಿಂಗ್ರೀಗೌಡ (100+) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ರೈತ ಪ್ರತಿಭೆಯನ್ನು ಚಿತ್ರದ ಕಥೆಗಾರ ಈರೇಗೌಡ ಅವರು ಗುರುತಿಸಿ ಬೆಳ್ಳಿತೆರೆಗೆ ತಂದಿದ್ದರು.

ತಿಥಿ ಚಿತ್ರದ ಸೆಂಚುರಿ ಗೌಡ ಪಾತ್ರಕ್ಕೆ ಸಿಂಗ್ರೀಗೌಡ ಆಯ್ಕೆಯಾಗಿದ್ದು ಹೇಗೆ?

-

Avinash GR
Avinash GR Jan 5, 2026 11:44 AM

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕನ್ನಡದ ಜನಪ್ರಿಯ ಸಿನಿಮಾ ʻತಿಥಿʼಸಿನಿಮಾದ ನಟ 'ಸೆಂಚುರಿ ಗೌಡ' ಪಾತ್ರಧಾರಿ ಸಿಂಗ್ರೀಗೌಡ ಅವರು ಭಾನುವಾರ (ಜ.4) ನಿಧನರಾಗಿದ್ದಾರೆ. ಪಾಂಡವಪುರ ತಾಲ್ಲೂಕಿನ ಸಿಂಗರೇಗೌಡನ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಸಿಂಗ್ರೀ ಗೌಡ ಅವರು ವಯೋಸಹಜ ಕಾಖಾಯಿಲೆಯಿಂದ ಬಳಲುತ್ತಿದ್ದರು. ಅಂದಹಾಗೆ, ತಿಥಿ ಸಿನಿಮಾದಲ್ಲಿನ ಇವರ ನಟನೆಯನ್ನು ಹಾಲಿವುಡ್‌ನ ʻಗಾಡ್‌ ಫಾದರ್‌ʼ ಡೈರೆಕ್ಟರ್ ಫ್ರಾನ್ಸಿಸ್ ಫೋರ್ಡ್ ಕಪೋಲಾ ಅವರು ಮೆಚ್ಚಿಕೊಂಡಿದ್ದು ವಿಶೇಷ.

ತಿಥಿ ಚಿತ್ರಕ್ಕೆ ಸಿಂಗ್ರೀ ಗೌಡ ಆಯ್ಕೆ ಆಗಿದ್ದು ಹೇಗೆ?

ಈ ಬಗ್ಗೆ ತಿಥಿ ಚಿತ್ರದ ಬರಹಗಾರ ಈರೇ ಗೌಡ ಅವರು ಒಂದು ಪೋಸ್ಟ್‌ ಹಂಚಿಕೊಂಡಿದ್ದು, ಸೆಂಚುರಿ ಗೌಡ ಪಾತ್ರಕ್ಕೆ ಸಿಂಗ್ರೀ ಗೌಡ ಅವರ ಆಯ್ಕೆ ಆಗಿದ್ದು ಹೇಗೆ ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ. "ನೀವು ಒಬ್ಬ ಅದ್ಭುತ ನಟ. ತಿಥಿ ಚಿತ್ರದಲ್ಲಿ ನಿಮ್ಮಿಂದ ಮಾತ್ರ ನಟನೆ ಮಾಡಿಸುವುದು ನನಗೆ ತುಂಬಾ ಸುಲಭವಾಗಿತ್ತು. ಕಾರಣ ಸಣ್ಣ ಸಣ್ಣ ಸೂಕ್ಷ್ಮತೆಗಳು ನಿಮಗೆ ಅರ್ಥವಾಗುತ್ತಿತ್ತು" ಎಂದು ಈರೇ ಗೌಡ ಅವರು ಹೇಳಿದ್ದಾರೆ.

Century Gowda Passes Away: 'ತಿಥಿ' ಸಿನಿಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ

"ನೀವು ಆ ವಯಸ್ಸಿನಲ್ಲೂ ಕೂಡ ಜಾಗರೂಕಾರಾಗಿದ್ದಿರಿ, ನಿಮ್ಮ ಮೊದಲ ಚಿತ್ರದಲ್ಲೇ ಜಗತ್ತಿನಾದ್ಯಂತ ನೀವು ಪಡೆದ ಅಭಿಮಾನ ಸಂಪೂರ್ಣವಾಗಿ ನಿಮಗೆ ಸಲ್ಲಬೇಕು! ವಿಶೇಷವಾಗಿ ಗಾಡ್‌ಫಾದರ್ ಚಿತ್ರದ ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕಪೋಲಾ ಅವರ ಮೆಚ್ಚುಗೆಯೂ ನಿಮಗೆ ಸಿಕ್ಕಿದ್ದು ನಮಗೆಲ್ಲ ಹೆಮ್ಮೆಯ ವಿಷಯ" ಎಂದು ಬರೆದುಕೊಂಡಿದ್ದಾರೆ ಈರೇ ಗೌಡ.

ಸೆಂಚುರಿ ಗೌಡರ ಪಾತ್ರ ಹುಟ್ಟಲು ನಿಮ್ಮ ಅಣ್ಣ ಕಾರಣ

"ತಿಥಿ ಚಿತ್ರದಲ್ಲಿನ ಸೆಂಚುರಿ ಗೌಡರ ಪಾತ್ರ ಹುಟ್ಟಲು ಕಾರಣ ನಿಮ್ಮ ಅಣ್ಣ ಬುಡಿಯಪ್ಪನವರು. ಮಾರ್ಚ್ 2013ರಲ್ಲಿ ಮಂಡ್ಯದ ಮದುವೆ ಮನೆಯಲ್ಲಿ ಅವರನ್ನು ಮೊದಲ ಬಾರಿ ಭೇಟಿಯಾದ ಕ್ಷಣ ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ, ಆ ಭೇಟಿಯಾದ ಕ್ಷಣವೇ ನಮ್ಮಿಬ್ಬರ ನಡುವೆ ಸ್ನೇಹವಾಗಿ ಬದಲಾಗಿತ್ತು. ಅಲ್ಲಿಂದ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗುವಾಗ ತಮ್ಮ 101 ವರ್ಷದ ಜೀವನಾನುಭವ, ಬದುಕಿನ ಕಥೆಗಳು ಎಲ್ಲವನ್ನೂ ಅವರು ತುಂಬಾ ಸರಳವಾಗಿ ನನ್ನ ಜೊತೆ ಹಂಚಿಕೊಂಡರು. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ನಾನು ಊರು ತಲುಪಿದಾಗ ನಮ್ಮ ಊರಿನ ಬಹುತೇಕ ಎಲ್ಲಾ ಹಿರಿಯರಿಗೆ ಅವರು ಮೊದಲಿನಿಂದಲೇ ಪರಿಚಿತರಾಗಿದ್ದರು" ಎಂದಿದ್ದಾರೆ ಈರೇ ಗೌಡ.

ಸೆಂಚುರಿ ಗೌಡ ಪಾತ್ರಕ್ಕೆ ಕಲಾವಿದರನ್ನು ಹುಡುಕುವುದು ಕಷ್ಟವಾಗಿತ್ತು

"ನಾನು ಅವರನ್ನು ಮೂವತ್ತು ವರ್ಷಗಳ ನಂತರ ನಮ್ಮ ಊರಿಗೆ ಕರೆದುಕೊಂಡು ಬಂದರೂ, ಯಾರೂ ಅವರನ್ನು ಮರೆತಿರಲಿಲ್ಲ. ನನ್ನ ಚಿಕ್ಕಪ್ಪ ಸೇರಿ ಎಲ್ಲರಲ್ಲೂ ಅವರ ಬಗ್ಗೆ ಒಂದು ಆತ್ಮೀಯತೆ ಇತ್ತು. ಅದು ನನಗೆ ಇನ್ನೊಂದು ಅಚ್ಚರಿ! ಜೊತೆಗೆ ನಿಜವಾದ ಸೆಂಚುರಿ ಗೌಡರ ಪಾತ್ರದ ಸೃಷ್ಟಿಗೆ ಮೂಲವಾಯಿತು. ಚಿತ್ರ ಮಾಡುವ ಮೊದಲೇ ಬುಡಿಯಪ್ಪರವರು ವಿಧಿವಶರಾದಾಗ ಆ ಪಾತ್ರಕ್ಕೆ ಮತ್ತೊಬ್ಬರನ್ನು ಹುಡುಕುವುದು ನನಗೆ ತುಂಬಾ ಕಷ್ಟವಾಗಿತ್ತು. ತಿಂಗಳುಗಳ ಕಾಲ ಮಂಡ್ಯ ಜಿಲ್ಲೇಯಾದ್ಯಂತ ಹುಡುಕಿದರೂ ಎಲ್ಲೆಡೆ ನಿರಾಶೆಯೇ" ಎಂದಿದ್ದಾರೆ ಈರೇಗೌಡ.

ನಿಮ್ಮ ಸರಳತೆ ನಮ್ಮ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು

"ಒಂದು ದಿನ ನನ್ನ ಭಾಮೈದ ಮಂಜುನಾಥ್ ಎಲ್, "ಭಾವ, ಬುಡಿಯಪ್ಪರವರ ತಮ್ಮ ಒಬ್ಬರು ಇದ್ದಾರೆ, ಯಾಕೆ ಒಮ್ಮೆ ಅವರನ್ನು ನೋಡಬಾರದು” ಎಂದು ನೀಡಿದ ಸಲಹೆ ಈಗ ನೋಡಿ ನಿಮ್ಮನ್ನು ಜಗತ್ತಿಗೆ ಪರಿಚಯಿಸಿತು. ಇದೆಲ್ಲವೂ ಮೊದಲೇ ವಿಧಿಯ ಯೋಜನೆಯಾಗಿತ್ತೋ ಏನೋ ಅನಿಸುತ್ತದೆ. ಏಕೆಂದರೆ, ನೀವು ನಾ ಕಂಡ ಒಬ್ಬ ಅದ್ಬುತ ಕಲಾವಿದರು. ನೀವು ಸಿಕ್ಕದ್ದು ನಮ್ಮ ಜೀವನದ ದೊಡ್ಡ ಅದ್ಭುತ ಕೊಡುಗೆ. ಅಷ್ಟೊಂದು ಇಳಿ ವಯಸ್ಸಿನಲ್ಲಿಯೂ ನಿಮ್ಮಲ್ಲಿ ಇದ್ದ ಆಲೋಚನೆಯ ಸ್ಪಷ್ಟತೆ, ಸರಳತೆ ನಮ್ಮ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು. ನೀವು ನಮ್ಮ ಮಧ್ಯೆ ಇಲ್ಲದಿದ್ದರೂ, ನಿಮ್ಮ ನಟನೆ, ನಿಮ್ಮ ಬದುಕು, ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಸ್ಮರಣೆ ಸದಾ ನಮ್ಮ ಜೊತೆ ಇರುತ್ತದೆ. ಶಾಂತಿಯಲ್ಲಿ ವಿಶ್ರಾಂತಿ ಪಡೆಯಲಿ ಸೆಂಚುರಿಗೌಡ್ರೇ! (ಸಿಂಗ್ರೀಗೌಡ್ರೇ)" ಎಂದು ಬರೆದುಕೊಂಡಿದ್ದಾರೆ ಈರೇಗೌಡ.