Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ FIR
Rahul Gandhi: ಕಾಂಗ್ರೆಸ್ ಮುಖಂಡ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದಿಲ್ಲಿ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.
Ramesh B
December 19, 2024
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಮುಖಂಡ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ದಿಲ್ಲಿ ಪೊಲೀಸರು ಗುರುವಾರ (ಡಿ. 19) ಎಫ್‌ಐಆರ್ ದಾಖಲಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ನಾಯಕರು ಗಾಯಗೊಂಡ ಹಿನ್ನೆಲೆಯಲ್ಲಿ ಅವರ ವಿರುದ್ದ ದೂರು ದಾಖಲಿಸಲಾಗಿತ್ತು.
ಸೆಕ್ಷನ್ 117 (ಸ್ವಯಂ ಪ್ರೇರಿತವಾಗಿ ತೀವ್ರ ಗಾಯ ಉಂಟು ಮಾಡುವುದು), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ), 131 (ಕ್ರಿಮಿನಲ್ ಬಲದ ಬಳಕೆ), 351 (ಕ್ರಿಮಿನಲ್ ಬೆದರಿಕೆ) ಮತ್ತು 3 (5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
Delhi Police has filed an FIR against Rahul Gandhi, the Leader of Opposition in the Lok Sabha, under multiple sections of the BNS, including causing hurt, endangering life, using criminal force, and criminal intimidation pic.twitter.com/zIFHhVxOvI— IANS (@ians_india) December 19, 2024
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಗುರುವಾರ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ್ದವು. ಈ ವೇಳೆ ನಡೆದ ಘರ್ಷಣೆಯಲ್ಲಿ ಬಿಜೆಪಿಯ ಇಬ್ಬರು ಸಂಸದರಾದ ತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದು, ಪ್ರಸ್ತುತ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಅನುರಾಗ್ ಠಾಕೂರ್ ರಾಹುಲ್ ಗಾಂಧಿ ವಿರುದ್ಧ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಬಿಜೆಪಿ ಸಂಸದರಾದ ಹೇಮಂಗ್ ಜೋಶಿ, ಬಾನ್ಸುರಿ ಸ್ವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ʼʼಹಲ್ಲೆ ಮತ್ತು ಪ್ರಚೋದನೆಗಾಗಿ ರಾಹುಲ್ ಗಾಂಧಿ ವಿರುದ್ಧ ನಾವು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಮಕರ್ ದ್ವಾರದ ಹೊರಗಡೆ ಎನ್‌ಡಿಎ ಸಂಸದರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಘರ್ಷ ನಡೆದಿದೆ. ಇದರ ವಿವರಗಳನ್ನು ನಾವು ಪೊಲೀಸರಿಗೆ ನೀಡಿದ್ದೇವೆ. ಸೆಕ್ಷನ್ 109, 115, 117, 125, 131 ಮತ್ತು 351ರ ಅಡಿ ನಾವು ದೂರು ನೀಡಿದ್ದೇವೆʼʼ ಎಂದು ವಿವರಿಸಿದ್ದರು. ಸೆಕ್ಷನ್ 109 ಕೊಲೆ ಯತ್ನವನ್ನು ಸೂಚಿಸಿದರೆ, ಸೆಕ್ಷನ್ 117 ಸ್ವಯಂಪ್ರೇರಿತವಾಗಿ ತೀವ್ರ ನೋವನ್ನು ಉಂಟು ಮಾಡುವುದಾಗಿದೆ.
ಘರ್ಷಣೆಯಲ್ಲಿ ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಅವರ ತಲೆಗೆ ಗಾಯಗಳಾಗಿದ್ದು, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಅಜಯ್ ಶುಕ್ಲಾ ತಿಳಿಸಿದ್ದಾರೆ. 69 ವರ್ಷದ ಪ್ರತಾಪ್ ಸಾರಂಗಿ ಅವರಲ್ಲಿ ತೀವ್ರ ರಕ್ತಸ್ರಾವ ಕಂಡು ಬಂದಿತ್ತು. ಮುಖೇಶ್ ರಜಪೂತ್ ಪ್ರಜ್ಞೆ ಕಳೆದುಕೊಂಡಿದ್ದರು. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸಂಸದರ ವಿರುದ್ದ ದೂರು ನೀಡಿದ್ದಾರೆ. ಬಿಜೆಪಿ ನಾಯಕರು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ದಾಖಲಿಸಿದೆ.
ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಿರುದ್ಧ ಕೊಲೆ ಯತ್ನದ ದೂರು ದಾಖಲಿಸಿದ ಬಿಜೆಪಿ