Rajendra Bhat Column: ಸುಲಗ್ನಾ ಸಾವಧಾನ! ಸುಮೂಹೂರ್ತಮ್ ಸಾವಧಾನ!
ಕಾಲ ಬದಲಾಗಿದೆ. ಆದರೆ ನಮ್ಮ ಸಂಪ್ರದಾಯಗಳು ಮತ್ತು ಭಾವನೆಗಳು ಬದಲಾಗೋದಿಲ್ಲ! ಮದುವೆಯ ವೇಳೆ ನಡೆಯುವ ಆಚರಣೆಗಳು ನಮ್ಮನ್ನು ಭಾವುಕರನ್ನಾಗಿಸುತ್ತವೆ.


- ರಾಜೇಂದ್ರ ಭಟ್ ಕೆ.

Rajendra Bhat Column: ಎಲ್ಲರೂ ಕಾಲ ಬದಲಾಗಿದೆ ಅನ್ನುತ್ತಾರೆ. ಈ ಕಾರ್ಪೊರೇಟ್ ಯುಗದಲ್ಲಿ ಎಲ್ಲವೂ ಆಧುನಿಕ ಆಗುತ್ತಾ ಮುಂದುವರೆದಿದೆ. ಆದರೆ ಈ ಅಮೃತ ಸುಮುಹೂರ್ತದಲ್ಲಿ ನಡೆಯುವ ನಮ್ಮ ಹಿಂದೂ ಸಂಪ್ರದಾಯಗಳು (Hindu Rituals) ಬದಲಾಗಿಲ್ಲ. ಬದಲಾಗುವುದು ಕೂಡ ಇಲ್ಲ.
ಸುಮೂರ್ತದ ನಿರೀಕ್ಷಣೆ, ಮಂತ್ರಾಕ್ಷತೆ ಹಿಡಿದು!
ಹುಡುಗಿಯ ಸೋದರ ಮಾವ ಅಥವಾ ಮಾವಂದಿರು ಆ ವಧುವನ್ನು ಕೈ ಹಿಡಿದು ಮದುವೆಯ ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ. ಇದು ವಧುವಿನ ತಾಯಿಯ ಮನೆಯ ಕರುಳಬಳ್ಳಿಯ ಸಂಬಂಧದ ನವೀಕರಣ. ಈ ಹಕ್ಕನ್ನು ಮಾವಂದಿರು ಎಂದಿಗೂ ಬಿಟ್ಟುಕೊಡುವುದೇ ಇಲ್ಲ. ವಧುವಿನ ಕೈಯ್ಯಲ್ಲಿ ವರಮಾಲೆ ಇರುತ್ತದೆ. ಮಂಟಪದಲ್ಲಿ ಆಗ ಪುರೋಹಿತರು ಅಂತರಪಟ ಅಡ್ಡ ಹಿಡಿದು ಸುಲಗ್ನಾ ಸಾವಧಾನ ಮಂತ್ರವನ್ನು ಹೇಳುತ್ತಾರೆ. ಹುಡುಗನ ಗೋತ್ರ ಸಹಿತ ಕುಟುಂಬದ ಹಿರಿಯರ ವಿಸ್ತಾರವಾದ ಪರಿಚಯ, ಇಂತಹವರ ಮಗ, ಇಂತಹವರ ಮೊಮ್ಮಗ..... ಇತ್ಯಾದಿ ವಿವರಗಳನ್ನು ಗಟ್ಟಿಯಾಗಿಯೇ ಹೇಳುತ್ತಾರೆ. ಹಾಗೆಯೇ ಹುಡುಗಿಯ ಗೋತ್ರಸಹಿತ ಎಲ್ಲ ಪ್ರವರಗಳೂ ಘೋಷಣೆ ಆಗುತ್ತವೆ. ಆಗ ಹಿರಿಯರು ಮಂತ್ರಾಕ್ಷತೆಯನ್ನು ಹಿಡಿದು ಸುಮುಹೂರ್ತದ ನಿರೀಕ್ಷಣೆ ಮಾಡುತ್ತಾರೆ.
ಮಾಲಾಧಾರಣೆಯ ಸುಮುಹೂರ್ತ
ಆಗ ಅಂತರಪಟ ಸರಿದು ಹುಡುಗಿ ಹುಡುಗನಿಗೆ ಮಾಲೆ ಹಾಕುತ್ತಾಳೆ. ಆಗ ಹುಡುಗ ತಲೆ ತಗ್ಗಿಸಬಾರದು ಎನ್ನುತ್ತದೆ ಶಾಸ್ತ್ರ! ಒಮ್ಮೆ ತಲೆ ತಗ್ಗಿಸಿದ ಅಂತಾದರೆ ಮುಂದೆ ಎಂದಿಗೂ ಆತ ತಲೆ ಎತ್ತಲಾರನು ಎಂದು ತಮಾಶೆಗೆ ಹೇಳುವವರೂ ಇದ್ದಾರೆ. ನಂತರ ಹುಡುಗ ಹುಡುಗಿಯ ಕೊರಳಿಗೆ ಮಾಲೆ ಹಾಕುತ್ತಾನೆ. ಪುರೋಹಿತರ ಗಟ್ಟಿಯಾದ ಮಂತ್ರಘೋಷವು ಮುಂದುವರೆದ ಹಾಗೆ ಮದುವೆಗೆ ಬಂದ ಹಿರಿಯರೆಲ್ಲರೂ ಅಕ್ಷತೆಯನ್ನು ಸುರಿದು ವಧುವರರನ್ನು ಆಶೀರ್ವದಿಸುತ್ತಾರೆ. ಆಶೀರ್ವಾದ ಮಾಡಲೇ ಬೇಕು.
ತೀವ್ರ ಭಾವನಾತ್ಮಕವಾದ ಧಾರೆ ಎರೆದು ಕೊಡುವ ಶಾಸ್ತ್ರ!
ಮುಂದೆ ಬರುವುದೇ ವಧುವನ್ನು ಧಾರೆ ಎರೆದು ಕೊಡುವ ಶಾಸ್ತ್ರ. ಹುಡುಗಿಯ ಅಪ್ಪ ಮತ್ತು ಅಮ್ಮ ತಮ್ಮ ಕರುಳಿನ ತುಂಡನ್ನು ಮಂಗಲೋದಕದ ಮೂಲಕ ಧಾರೆ ಎರೆದು ಕೊಟ್ಟಷ್ಟು ದುಃಖ ಪಡುತ್ತಾರೆ. ಅವಳನ್ನು ವರನ ಸುಪರ್ದಿಗೆ ಒಪ್ಪಿಸುವ ಭಾವುಕ ಕ್ಷಣ ಅದು. ಬಾಲ್ಯದಿಂದಲೂ ತುಂಬಾ ಪ್ರೀತಿಯಿಂದ ಸಾಕಿ ಸಲಹಿದ, ತಾನು ಹುಟ್ಟಿದ ಮನೆಯನ್ನು ತನ್ನ ಬಾಲ್ಯದ ಲೀಲೆಗಳಿಂದ ನಂದನವನ ಮಾಡಿದ ತಮ್ಮ ಪ್ರೀತಿಯ ಮಗಳನ್ನು ವರನಿಗೆ ಧಾರೆ ಎರೆದು ಕೊಡುವ ಕ್ಷಣ ಇದೆಯಲ್ಲಾ.....ಓಹ್! ವಧುವಿನ ಅಪ್ಪ ಮತ್ತು ಅಮ್ಮ ಎಷ್ಟೇ ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡರೂ ಆ ಕ್ಷಣದಲ್ಲಿ ಅಪ್ಪ ಒಮ್ಮೆ ನಡುಗಿ ಹೋಗುತ್ತಾನೆ ಮತ್ತು ಮೌನವಾಗಿ ಬಿಡುತ್ತಾನೆ! ಹೆತ್ತಮ್ಮನಂತೂ ತೀವ್ರ ಸಂಕಟದಿಂದ ಕಣ್ಣೀರು ಮಿಡಿಯುತ್ತಾಳೆ!
ಕಾಲ ಎಷ್ಟೇ ಆಧುನಿಕವಾದರೂ ಈ ಕ್ಷಣದ ಭಾವತೀವ್ರತೆ ಕಡಿಮೆ ಆಗೋದಿಲ್ಲ! ಶತಮಾನಗಳ ನಂತರವೂ ಈ ದೃಶ್ಯ ಬದಲಾಗುವುದಿಲ್ಲ!
ಚಿತ್ರ: ಫೋಕಸ್ ರಘು, ಉಡುಪಿ
ಇದನ್ನೂ ಓದಿ: Rajendra Bhat Column: ಕ್ರಾಂತಿಯ ಕಿಡಿ ನೇತಾಜಿ ಸುಭಾಸ್ ಚಂದ್ರ ಬೋಸ್