Maha Kumbh Mela: ಮಹಾ ಕುಂಭವೇಳದಲ್ಲಿ ಪವಿತ್ರ ಸ್ನಾನ ಮಾಡಿದ ಸಚಿವ ರಾಜನಾಥ್ ಸಿಂಗ್
Maha Kumbh Mela: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಶನಿವಾರ (ಜ. 18) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪವಿತ್ರ ಸ್ನಾನ ಮಾಡಿದ್ದಾರೆ. ಕಳೆದ 6 ದಿನಗಳಲ್ಲಿ ಪ್ರಪಂಚದಾದ್ಯಂತದ 7.3 ಕೋಟಿಗೂ ಹೆಚ್ಚು ಭಕ್ತರು ಪ್ರಯಾಗರಾಜ್‌ನ ತ್ರಿವೇಣಿ ಸಂಗಮಕ್ಕೆ ಆಗಮಿಸಿದ್ದಾರೆ. ಕುಂಭಮೇಳ ಫೆ. 26ರ ತನಕ ನಡೆಯಲಿದೆ.
ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ (Prayagraj)ನಲ್ಲಿ ಮಹಾ ಕುಂಭಮೇಳ (Maha Kumbh Mela) ಕಳೆಗಟ್ಟಿದ್ದು, ಪ್ರತಿದಿನ ಲಕ್ಷಾಂತರ ಮಂದಿ ಆಗಮಿಸಿ ಪವಿತ್ರ ಸ್ನಾನಗೈಯ್ಯುತ್ತಿದ್ದಾರೆ. ದೇಶದ ವಿವಿಧ ಭಾಗ ಮಾತ್ರವಲ್ಲ ವಿದೇಶಗಳ ಆಸ್ತಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಮಧ್ಯೆ ಶನಿವಾರ (ಜ. 18) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಕುಂಭಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಪವಿತ್ರ ಸರಸ್ವತಿ ನದಿಯ ಸಂಗಮ ಸ್ಥಳದಲ್ಲಿ ಕುಂಭಮೇಳದ 6ನೇ ದಿನ ಅವರು ಪವಿತ್ರ ಸ್ನಾನ ಮಾಡಿದ್ದಾರೆ.
ಜತೆಗೆ ಅವರು ಅಕ್ಷಯ ವಾಟ್, ಪಟಲ್‌ಪುರಿ ದೇಗುಲ, ಸರಸ್ವತಿ ಕುಂಡ್ ಮತ್ತು ಹನುಮಾನ್ ದೇವಸ್ಥಾನಗಳಲ್ಲಿ ನಡೆದ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷದ ಕುಂಭಮೇಳ ಜ. 13ರಂದು ಆರಂಭವಾಗಿದ್ದು, ಫೆ. 26ರ ತನಕ ನಡೆಯಲಿದೆ. ಸುಮಾರು 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬೃಹತ್ ಧಾರ್ಮಿಕ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡೆಸುತ್ತಿದ್ದಾರೆ. ಸುಗಮ ಕಾರ್ಯಾಚರಣೆ ಮತ್ತು ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅವರು ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ.
गंगे च यमुने चैव गोदावरी सरस्वती ।
— Rajnath Singh (@rajnathsingh) January 18, 2025
नर्मदे सिन्धु कावेरि जलेऽस्मिन् सन्निधिं कुरु।
आज तीर्थराज प्रयागराज में, भारत की शाश्वत आध्यात्मिक विरासत और लोक आस्था के प्रतीक महाकुंभ में स्नान-ध्यान करके स्वयं को कृतार्थ अनुभव कर रहा हूँ। pic.twitter.com/ZoELPQCcRC
ಅಮೃತ ಸ್ನಾನ
ಕುಂಭಮೇಳದ 6ನೇ ದಿನವಾದ ಶನಿವಾರ ನಡೆದ ಅಮೃತ ಸ್ನಾನದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಿದ್ದಾರೆ. ಭಕ್ತರು ತಮ್ಮನ್ನು ಆಧ್ಯಾತ್ಮಿಕವಾಗಿ ಶುದ್ಧೀಕರಿಸಲು ಸಂಗಮದಲ್ಲಿ ಸ್ನಾನ ಮಾಡುತ್ತಾರೆ.
ಮೊದಲ ಅಮೃತ ಸ್ನಾನ ಮಕರ ಸಂಕ್ರಾಂತಿಯಂದು ಅಂದರೆ ಜ. 14ರಂದು ನೆರವೇರಿತ್ತು. ಇನ್ನು ಮುಂದಿನ ಅಮೃತ ಸ್ನಾನ ಮೌನಿ ಅಮಾವಾಸ್ಯೆಯಾದ ಜ. 29ರಂದು ಮತ್ತು ಬಸಂತ್ ಪಂಚಮಿಯಾದ ಫೆ. 3ರಂದು ನಡೆಯಲಿದೆ.
ಸರ್ವ ಸನ್ನದ್ಧ
ಪವಿತ್ರ ಸ್ನಾನದ ಸಮಯದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF)ಯ 220 ಮುಳುಗು ತಜ್ಞರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಅವರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ 700 ದೋಣಿಗಳನ್ನೂ ನಿಯೋಜಿಸಲಾಗಿದೆ. ʼʼಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪಿಎಸಿ, ವಾಟರ್ ಪೊಲೀಸ್ ಮತ್ತು ಆರೋಗ್ಯ ತಂಡಗಳು ಎಲ್ಲ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದವಾಗಿವೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸಲು ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (Uttar Pradesh State Tourism Development Corporation-UPSTDC) ವಸತಿ ವ್ಯವಸ್ಥೆ ಮಾಡುತ್ತಿದೆ. ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಪ್ರೀಮಿಯಂ ವಸತಿ ಸೌಕರ್ಯವನ್ನು ಒದಗಿಸಲು ಮಹಾ ಕುಂಭಮೇಳ ಪ್ರದೇಶದಲ್ಲಿ 300 ಹಾಸಿಗೆಗಳ ಡೀಲಕ್ಸ್ ಡಾರ್ಮೆಟರಿಯನ್ನೂ ಸ್ಥಾಪಿಸಲಾಗಿದೆ.
ಕಳೆದ 6 ದಿನಗಳಲ್ಲಿ ಪ್ರಪಂಚದಾದ್ಯಂತದ 7.3 ಕೋಟಿಗೂ ಹೆಚ್ಚು ಭಕ್ತರು ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.