Ram Gopal Varma: ಚೆಕ್ ಬೌನ್ಸ್ ಪ್ರಕರಣ: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು!
ಚೆಕ್ ಬೌನ್ಸ್ ಪ್ರಕರಣದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ಜಾಮೀನು ರಹಿತ ವಾರಂಟ್ ಅನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ 7 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮುಂಬೈ ನ್ಯಾಯಾಲಯವು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿರುವುದು ತಿಳಿದು ಬಂದಿದೆ.
ಹೈದರಾಬಾದ್: ಏಳು ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣದಲ್ಲಿ(Cheque Bounce Case) ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರಿಗೆ ಮುಂಬೈ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಣೆಗಳಾಗಿದ್ದು, ಇಂದು ಅಂತಿಮ ತೀರ್ಪು ಹೊರಬಿದ್ದಿದೆ. ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ (ಜ. 21) ಚೆಕ್ ಬೌನ್ಸ್ ಪ್ರಕರಣದ ತೀರ್ಪನ್ನು ನೀಡಬೇಕಿತ್ತು. ಆದರೆ, ರಾಮ್ ಗೋಪಾಲ್ ವರ್ಮಾ ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಜೈಲು ಶಿಕ್ಷೆಯ ಜೊತೆಗೆ, ದೂರುದಾರರಿಗೆ ಪರಿಹಾರವಾಗಿ 3.75 ಲಕ್ಷ ರೂಪಾಯಿಗಳನ್ನು ನೀಡುವಂತೆ ನ್ಯಾಯಾಲಯವು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಆದೇಶಿಸಿದೆ. ಮೂರು ತಿಂಗಳಲ್ಲಿ ಪರಿಹಾರ ಪಾವತಿಸದಿದ್ದಲ್ಲಿ, ಹೆಚ್ಚುವರಿಯಾಗಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚಿಸಿದೆ.
2018ರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಮುಂಬೈನಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಮಹೇಶ್ಚಂದ್ರ ಮಿಶ್ರಾ ಎಂಬುವವರು ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು. 2022ರ ಜೂನ್‌ನಲ್ಲಿ ವರ್ಮಾ ಅವರಿಗೆ ವೈಯಕ್ತಿಕ ಬಾಂಡ್ ಮತ್ತು 5000 ರೂ. ಭದ್ರತಾ ಠೇವಣಿ ನೀಡಿದ ನಂತರ ಜಾಮೀನು ನೀಡಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಾಕಷ್ಟು ಬಾರಿ ನೋಟಿಸ್ ನೀಡಿದ್ದರೂ, ರಾಮ್ ಗೋಪಾಲ್ ವರ್ಮಾ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಈ ಸುದ್ದಿಯನ್ನೂ ಓದಿ:Monalisa: ಕುಂಭಮೇಳದ ಸುಂದರಿಗೆ ತಪ್ಪಿದ್ದಲ್ಲ ತಾಪತ್ರಯ-ಫೋಟೊಗಾಗಿ ಟೆಂಟ್‌ಗೆ ನುಗ್ಗಿ ಕಿಡಿಗೇಡಿಯ ದಾಂಧಲೆ
ಹಲವಾರು ವಿಚಾರಣೆಗಳು ಮತ್ತು ಕಾನೂನು ಪ್ರಕ್ರಿಯೆಗಳ ನಂತರ, ನ್ಯಾಯಾಲಯವು ನಿರ್ದೇಶಕ ವರ್ಮಾ ವಿರುದ್ಧ ತೀರ್ಪು ನೀಡಿದೆ. ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದೆ.