Ranji Trophy: ಸೌರಾಷ್ಟ್ರ ಪರ ರಣಜಿ ಆಡಲು ಮುಂದಾದ ಜಡೇಜಾ
Ranji Trophy: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆದಿರುವ ಜಡೇಜಾ ಈ ಟೂರ್ನಿ ಆರಂಭಕ್ಕೂ ಮುನ್ನ, ಮತ್ತೆ ಹಳೆಯ ಫಾರ್ಮ್ ಕಂಡುಕೊಳ್ಳುವ ನಿಟ್ಟಿನಲ್ಲಿ ರಣಜಿ ಆಡುವ ನಿರ್ಧಾರ ಕೈಗೊಂಡಂತಿದೆ.
ಅಹಮದಾಬಾದ್: ಶನಿವಾರದಂದು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ರಣಜಿ(Ranji Trophy) ಆಡುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಇದೀಗ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಕೂಡ ಜ.23ರಿಂದ ದೆಹಲಿ ವಿರುದ್ಧ ಆರಂಭವಾಗುವ ಪಂದ್ಯದಲ್ಲಿ ಸೌರಾಷ್ಟ್ರ ಪರ ಆಡುವುದಾಗಿ ತಿಳಿಸಿದ್ದಾರೆ. ಜಡೇಜಾ ಲಭ್ಯತೆಯನ್ನು ಎಸ್‌ಸಿಎ ಕಾರ್ಯದರ್ಶಿ ಹಿಮಾಂಶು ಶಾ ಖಚಿತಪಡಿಸಿದ್ದಾರೆ.
ಸೌರಾಷ್ಟ್ರ ಜನವರಿ 13 ರಂದು ರಣಜಿ ಟ್ರೋಫಿಯ ಮುಂದಿನ ಲೀಗ್‌ಗೆ 17 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಜಡೇಜಾ ಹೆಸರು ಇರಲಿಲ್ಲ. ಜಡೇಜಾ ಸ್ವ-ಇಚ್ಛೆಯಿಂದ ರಣಜಿ ಆಡುದಾಗಿ ಕೇಳಿಕೊಂಡ ಕಾರಣ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಯಿತು ಎಂದು ಹಿಮಾಂಶು ಶಾ ಹೇಳಿದರು.
ಜಡೇಜಾ 2023ರ ಜನವರಿಯಲ್ಲಿ ತಮಿಳುನಾಡು ವಿರುದ್ಧ ಸೌರಾಷ್ಟ್ರ ಪರ ತಮ್ಮ ಕೊನೆಯ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಅವರು ಎಂಟು ವಿಕೆಟ್‌ಗಳನ್ನು ಕಬಳಿಸಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇತ್ತೀಚೆಗೆ ಮುಕ್ತಾಯ ಕಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಜಡೇಜಾ ಘೋರ ವೈಫಲ್ಯ ಕಂಡಿದ್ದರು.
ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆದಿರುವ ಜಡೇಜಾ ಈ ಟೂರ್ನಿ ಆರಂಭಕ್ಕೂ ಮುನ್ನ, ಮತ್ತೆ ಹಳೆಯ ಫಾರ್ಮ್ ಕಂಡುಕೊಳ್ಳುವ ನಿಟ್ಟಿನಲ್ಲಿ ರಣಜಿ ಆಡುವ ನಿರ್ಧಾರ ಕೈಗೊಂಡಂತಿದೆ.
ಇದನ್ನೂ ಓದಿ Rohit Sharma: ಮುಂಬೈ ಪರ ರಣಜಿ ಆಡುವೆ ಎಂದ ರೋಹಿತ್
ರೋಹಿತ್ ಜಮ್ಮುಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕಣಕಿಳಿಯಲಿದ್ದಾರೆ. ಇದು 10 ವರ್ಷದ ಬಳಿಕ ಅವರು ಆಡುವ ದೇಶೀಯ ಕ್ರಿಕೆಟ್ ಪಂದ್ಯವಾಗಿದೆ. ಡೆಲ್ಲಿ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರೂ ಅವರು ಕುತ್ತಿಗೆ ನೋವಿನ ಕಾರಣ ನೀಡಿ ಆಡುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಕೆ.ಎಲ್.ರಾಹುಲ್ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕದ ಪರ ಆಡುವುದು ಅನುಮಾನ ಎನ್ನಲಾಗಿದೆ. ರಾಹುಲ್ ಮೊಣಕೈ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.