Rohit Sharma: ಮುಂಬೈ ಪರ ರಣಜಿ ಆಡುವೆ ಎಂದ ರೋಹಿತ್
Rohit Sharma: ಕುತ್ತಿಗೆ ನೋವಿನ ಕಾರಣದಿಂದ ವಿರಾಟ್ ಕೊಹ್ಲಿ ಅವರು ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧದ ದೆಹಲಿಯ ಪಂದ್ಯ ಆಡುವುದಿಲ್ಲ ಎಂದು ತಿಳಿಸಿದ್ದಾರೆ.
ಮುಂಬಯಿ: ಕಳಪೆ ಫಾರ್ಮ್‌ನಲ್ಲಿರುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಲು ದೇಶಿಯ ಟೂರ್ನಿಯತ್ತ ಮುಖಮಾಡಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಸ್ವತಃ ರೋಹಿತ್ ಅವರೇ ಮುಂಬೈ ಪರ ರಣಜಿ(ranji trophy) ಆಡುವುದನ್ನು ಖಚಿತಪಡಿಸಿದ್ದಾರೆ. ಜಮ್ಮು ಕಾಶ್ಮೀರದ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಬಾರ್ಡರ್-ಗಾವಸ್ಕರ್ ಸರಣಿಯ ಸೋಲಿನ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಭವಿಷ್ಯದ ಮೇಲೆ ಹಲವು ಪ್ರಶ್ನೆಗಳು ಮೂಡಿತ್ತು. ಅನೇಕ ಹಿರಿಯ ಆಟಗಾರರು ಕೂಡ ರೋಹಿತ್ ನಿವೃತ್ತಿಯಾಗಲಿ ಎಂದು ಹೇಳಿದ್ದರು. ಇತ್ತೀಚೆಗೆ ಮುಕ್ತಾಯ ಕಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5 ಇನಿಂಗ್ಸ್ ನಲ್ಲಿ ರೋಹಿತ್ ಕಲೆಹಾಕಿದ್ದು ಕೇವಲ 31 ರನ್ಗಳು ಮಾತ್ರ. ಇದೀಗ ರಣಜಿ ಆಡಿ ಮತ್ತೆ ಫಾರ್ಮ್ ಕಂಡುಕೊಳ್ಳಲು ಮುಂದಾಗಿದ್ದಾರೆ. ರೋಹಿತ್ ಕೊನೆಯ ಬಾರಿಗೆ ರಣಜಿ ಆಡಿದ್ದು 2015ರಲ್ಲಿ. ಇದಾದ ಬಳಿಕ ಅವರು ದೇಶೀಯ ಕ್ರಿಕೆಟ್ ಟೂರ್ನಿ ಆಡಿಲ್ಲ.
ಶನಿವಾರ ಚಾಂಪಿಯನ್ಸ್ ಟ್ರೋಫಿ ತಂಡ ಪ್ರಕಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಜಮ್ಮು ಕಾಶ್ಮೀರದ ವಿರುದ್ಧ ನಡೆಯುವ ಪಂದ್ಯದಲ್ಲಿ ನಾನು ಕೂಡ ಮುಂಬೈ ಪರ ಆಡಲಿದ್ದೇನೆ ಎಂದರು. ಜ. 23ರಂದು ಈ ಪಂದ್ಯ ಆರಂಭವಾಗಲಿದೆ.
'ಯಾವ ಆಟಗಾರನೂ ಕೂಡ ದೇಶೀ ಕೆಂಪು ಬಾಲ್ ಕ್ರಿಕೆಟ್ ಆಡುವುದನ್ನು ಲಘುವಾಗಿ ಪರಿಗಣಿಸುವುದಿಲ್ಲ. ವರ್ಷಪೂರ್ತಿ ಇರುವ ಬಿಡುವಿಲ್ಲದ ವೇಳಾಪಟ್ಟಿಯಿಂದ ಆಟಗಾರರಿಗೆ ವಿಶ್ರಾಂತಿಯೂ ಬೇಕು. ಕಳೆದ 6–7 ವರ್ಷಗಳ ಋತುವನ್ನು ನೋಡಿದರೆ, ನಾವು 45 ದಿನ ಕೂಡ ಮನೆಯಲ್ಲಿ ಇರಲು ಆಗಲಿಲ್ಲ. ಹೀಗಾಗಿ ದೇಶೀಯ ಟೂರ್ನಿಯನ್ನು ಆಡಲು ಸಾಧ್ಯವಾಗಲಿಲ್ಲ' ಎಂದರು.
ಇದನ್ನೂ ಓದಿ Rohit Sharma: ಮಾಧ್ಯಮದವರ ಮೇಲೆ ಗರಂ ಆದ ಟೀಮ್ ಇಂಡಿಯಾ ನಾಯಕ ರೋಹಿತ್
'2019ರಿಂದ ನಾನು ನಿಯಮಿತವಾಗಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇನೆ. ಹೀಗಾಗಿ ಸಮಯ ಸಿಗುತ್ತಿರಲಿಲ್ಲ. ನೀವು ಸತತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಾಗ ನಿಮಗೆ ದಣಿವಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ' ಎಂದರು.
ಕುತ್ತಿಗೆ ನೋವಿನ ಕಾರಣದಿಂದ ವಿರಾಟ್ ಕೊಹ್ಲಿ ಅವರು ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧದ ದೆಹಲಿಯ ಪಂದ್ಯ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಕೆ.ಎಲ್ ರಾಹುಲ್ ಕೂಡ ಕರ್ನಾಟಕ ತಂಡದ ಪರ ಪಂದ್ಯವನ್ನಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.