ಬೆಂಗಳೂರು: ತವರಿನ ಚಿನ್ನಸ್ವಾಮಿ ಸ್ಟೇಡಿಯಂ(m chinnaswamy stadium)ನಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs PBKS) ತಂಡ ಇದೀಗ ತನ್ನ ಮನೆಯಂಗಳಲ್ಲಿ ಮೊದಲ ಗೆಲುವು ಸಾಧಿಸುವ ಹಂಬಲದಲ್ಲಿದೆ. ಐಪಿಎಲ್(IPL 2025) 18ನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಇಲ್ಲಿ ನಡೆದಿದ್ದ ಕಳೆದ ಎರಡು ಪಂದ್ಯಗಳಲ್ಲಿಯೂ ಆರ್‌ಸಿಬಿ ಟಾಸ್ ಸೋತು ಪಂದ್ಯ ಕಳೆದುಕೊಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದರೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ಪಂದ್ಯಕ್ಕೆ ಮಳೆ ಭೀತಿ ಕೂಡ ಇದೆ.
ಆರ್‌ಸಿಬಿ ಮತ್ತು ಪಂಜಾಬ್ ತಂಡಗಳು ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ತಲಾ 4 ಜಯ, 2 ಸೋಲಿನೊಂದಿಗೆ 8 ಅಂಕ ಕಲೆಹಾಕಿವೆ. ರನ್ರೇಟ್ ಲೆಕ್ಕಾಚಾರದಲ್ಲಿ ಆರ್‌ಸಿಬಿ ತುಸು ಮೇಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಒಲಿಯಬಹುದು. ಕರ್ನಾಟಕದ ವೇಗಿ ವೈಶಾಕ್ ವಿಜಯ್ಕುಮಾರ್ ಈ ಬಾರಿ ಪಂಜಾಬ್ ತಂಡದಲ್ಲಿದ್ದು, ತವರಿನ ಅಂಗಣದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಆರ್‌ಸಿಬಿ ಪರ ಆಡಿದ್ದರು.
ಅಪಾಯಕಾರಿ ಚಹಲ್
ಉತ್ತಮ ಬೌಲಿಂಗ್ ಲಯದಲ್ಲಿರುವ ಚಹಲ್ ಪಂಜಾಬ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಅದರಲ್ಲೂ ಅವರು ಚಿನ್ನಸ್ವಾಮಿ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಹಿಂದೆ ಆರ್‌ಸಿಬಿ ತಂಡದ ಪರವೇ ಆಡಿದ್ದ ಚಹಲ್ ಈ ಮೈದಾನದಲ್ಲಿ ಸರ್ವಾಧಿಕ 139 ವಿಕೆಟ್ ಕಬಳಿಸಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ನಲ್ಲಿ ಅವರು ಹಿಡಿತ ಸಾಧಿಸಬಹುದು. ಇದರಿಂದ ಆರ್‌ಸಿಬಿ ಬ್ಯಾಟರ್ಗಳು ಚಾಹಲ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ.
ಪಿಚ್ ರಿಪೋರ್ಟ್
ಬ್ಯಾಟಿಂಗ್ ಸ್ನೇಹಿ ಚಿನ್ನಸ್ವಾಮಿಯಲ್ಲಿ ಇಂದು ರನ್ ಮಳೆ ಹರಿಯುವ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ದೊಡ್ಡ ಮೊತ್ತ ಪೇರಿಸುವ ಸವಾಲು ಎದುರಾಗಲಿದೆ. ಜತೆಗೆ ಬೌಲರ್ಗಳಿಗೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಂಜಾಬ್ 17 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 16 ಪಂದ್ಯಗಳಲ್ಲಿ ಜಯಿಸಿದೆ. ಕಳೆದ ಎರಡು ವರ್ಷಗಳಿಂದ ಪಂಜಾಬ್ ಆರ್‌ಸಿಬಿ ವಿರುದ್ಧ ಪಂದ್ಯ ಗೆದ್ದಿಲ್ಲ.
ಇದನ್ನೂ ಓದಿ IPL 2025: ಸಿಕ್ಸರ್ ಮೂಲಕ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್
ಸಂಭಾವ್ಯ ತಂಡಗಳು
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ಸಿ), ನೆಹಾಲ್ ವಧೇರಾ, ಜೋಶ್ ಇಂಗ್ಲಿಸ್ (ವಿ. ಕೀ), ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಷ್‌ದೀಪ್ ಸಿಂಗ್, ಯಜುವೇಂದ್ರ ಚಾಹಲ್.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್