ಬಿಸಿಸಿಐಗೆ ರಿಲೀಫ್; ಆರ್‌ಟಿಐ ನಿರ್ಧಾರ ಕೈಬಿಟ್ಟ ಕೇಂದ್ರ ಸರ್ಕಾರ
ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಪಡೆಯದ ಬಿಸಿಸಿಐ, ಆರ್ಥಿಕ ಸ್ವಾವಲಂಬನೆ ಹೊಂದಿದೆ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಬರಲು ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು. ಸದ್ಯ ಕ್ರೀಡಾ ಸಚಿವಾಲಯ ತನ್ನ ನಿಯಮದಲ್ಲಿ ಪರಿಷ್ಕರಣೆ ಮಾಡಿದ್ದು, ಸರ್ಕಾರದಿಂದ ನೆರವು ಪಡೆಯುವ ಸಂಸ್ಥೆಗಳನ್ನು ಮಾತ್ರ ಆರ್‌ಟಿಐ ವ್ಯಾಪ್ತಿಗೆ ತರಲು ನಿರ್ಧರಿಸಿದೆ.


ಮುಂಬಯಿ: ಸ್ಥಾಪನೆಯಾದಾಗಿನಿಂದಲೂ ಖಾಸಗಿ ಸಂಸ್ಥೆಯಾಗಿಯೇ ಉಳಿದುಕೊಂಡಿರುವ, ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ನಿಯಂತ್ರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ, ತನ್ನ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಿಸುವ ನಿರ್ಧಾರವನ್ನು ಕೈಬಿಟ್ಟಿದೆ. ಇದರಿಂದ ಬಿಸಿಸಿಐ(BCCI)ಗೆ ರಿಲೀಫ್ ಸಿಕ್ಕಿದೆ.
ಇತ್ತೀಚೆಗಷ್ಟೇ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ ಅವರು ಸಂಸತ್‌ನಲ್ಲಿ ಬಿಸಿಸಿಐಅನ್ನು ಆರ್‌ಟಿಐ ವ್ಯಾಪ್ತಿಗೆ ಸೇರಿಸಲು ಮಸೂದೆ ಮಂಡಿಸಿದ್ದರು. ಮಸೂದೆ ಪ್ರಕಾರ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐ ವ್ಯಾಪ್ತಿಗೆ ಬರಲಿದ್ದು, ಇದರಿಂದ ಬಿಸಿಸಿಐ ಕೂಡಾ ಹೊರತಾಗಿಲ್ಲ ಎಂದು ಸಚಿವರು ಹೇಳಿದ್ದರು.
ಈ ಮಸೂದೆಯ ನಿಯಮ 15 (2)ರ ಪ್ರಕಾರ ಮಾನ್ಯತೆ ಪಡೆದಿರುವ ಎಲ್ಲ ಕ್ರೀಡಾ ಸಂಸ್ಥೆಗಳೂ, ಸಾರ್ವುಜನಿಕ ಸಂಸ್ಥೆಗಳಾಗಲಿದ್ದು, ಅದರ ಕರ್ತವ್ಯ, ಅಧಿಕಾರ ಚಲಾವಣೆ ಎಲ್ಲವೂ 2005ರ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಬರಲಿವೆ.
ಆದರೆ ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಪಡೆಯದ ಬಿಸಿಸಿಐ, ಆರ್ಥಿಕ ಸ್ವಾವಲಂಬನೆ ಹೊಂದಿದೆ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಬರಲು ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು. ಸದ್ಯ ಕ್ರೀಡಾ ಸಚಿವಾಲಯ ತನ್ನ ನಿಯಮದಲ್ಲಿ ಪರಿಷ್ಕರಣೆ ಮಾಡಿದ್ದು, ಸರ್ಕಾರದಿಂದ ನೆರವು ಪಡೆಯುವ ಸಂಸ್ಥೆಗಳನ್ನು ಮಾತ್ರ ಆರ್‌ಟಿಐ ವ್ಯಾಪ್ತಿಗೆ ತರಲು ನಿರ್ಧರಿಸಿದೆ. ಇದರೊಂದಿಗೆ ಬಿಸಿಸಿಐ ವ್ಯಾಪ್ತಿಯಿಂದ ಹೊರಗುಳಿಯಲಿದೆ.
ಇದನ್ನೂ ಓದಿ ಕ್ರಿಕೆಟಿಗರ ವಯಸ್ಸಿನ ವಂಚನೆಗೆ ಬ್ರೇಕ್ ಹಾಕಲು ಬಿಸಿಸಿಐ ಮತ್ತಷ್ಟು ಬಿಗಿ ನಿಯ
ಒಂದು ವೇಳೆ ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐಗೆ ಸೇರಿದ್ದರೆ ಆಗ ಕೇಂದ್ರ ಸರಕಾರ ಮೂಗುದಾರ ಹಾಕುತ್ತಿತ್ತು. ಹಣಕಾಸು ದಾಖಲೆಗಳ ನಿರ್ವಹಣೆ ಹಾಗೂ ಅವುಗಳಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಕಟಣೆ ಹೊರಡಿಸುವಾಗ ಎಚ್ಚರಿಕೆ ವಹಿಸಬೇಕಿತ್ತು. ತಂಡಗಳ ಆಯ್ಕೆಗೆ ಅನುಸರಿಸುವ ಮಾದರಿ ಹಾಗೂ ಮಾನದಂಡ, ಆಂತರಿಕ ಆಡಳಿತ ರಚನೆ ವಿಚಾರದಲ್ಲೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಿತ್ತು. ಇದೀಗ ಈ ಎಲ್ಲ ಸಂಕಷ್ಟದಿಂದ ಪಾರಾಗಿದೆ.