Dr Sadhanshree Column: ವಸಂತ ಋತುವಿಗೆ ತಕ್ಕಂತೆ ಬಾಳುವ ಪರಿಯನ್ನು ಬಲ್ಲಿರಾ
ಸ್ನೇಹಿತರೆ, ಮಾನವನು ಪ್ರಕೃತಿಯ ಪರಮಾಂಶ ಸಂಭೂತನಾಗಿರುತ್ತಾನೆ. ಕಾರಣ, ಲೋಕ ದಲ್ಲಿ ಇರುವ ಭಾವಗಳು ಹಾಗೂ ಪುರುಷನಲ್ಲಿರುವ ಅಂಶಗಳು ಸಮನಾಗಿರುವುವು. ಬಾಹ್ಯ ಜಗತ್ತಿನಲ್ಲಿ ಆಗುವ, ಪ್ರಕೃತಿಯಲ್ಲಿ ಕಾಣುವ ಏರುಪೇರುಗಳು ಮಾನವನ ಆಂತರಿಕ ವ್ಯವಸ್ಥೆ ಯಲ್ಲಿಯೂ ಕಾಣಬಹುದು! ಋತುಗಳಲ್ಲಿ ಆಗುವ ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ನೇರ ಪ್ರಭಾವವನ್ನು ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಋತುಗಳಲ್ಲಿ ಆಗುವ ವೈಪರೀತ್ಯಗಳನ್ನು ಅರ್ಥೈಸಿಕೊಂಡು ಅದಕ್ಕೆ ಅನುಸಾರವಾಗಿ ನಮ್ಮ ಆಹಾರ ವಿಹಾರ ಕ್ರಮಗಳನ್ನು ಪ್ರತಿನಿತ್ಯ ನಮ್ಮ ದಿನಚರಿಯಲ್ಲಿ ಹೊಂದಿಸಿಕೊಂಡು ಹೋಗುವುದೇ ಋತು ಚರ್ಯೆ


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ವಸಂತ ಋತುವಿನಲ್ಲಿ ಆರೋಗ್ಯಕರವಾಗಿರಲು ಇಚ್ಛಿಸುವವರು ಜಿಡ್ಡಿನಿಂದ ಕೂಡಿದ, ಜೀರ್ಣಕ್ಕೆ ಜಡವಾದ ಆಹಾರವನ್ನು ತ್ಯಜಿಸಿ ರೂಕ್ಷಪ್ರಧಾನವಾದ ಲಘು ಆಹಾರವನ್ನು ಸೇವಿಸತಕ್ಕದ್ದು. ಶೀತಲ ಆಹಾರವನ್ನು ಬಿಟ್ಟು ಸದಾ ಉಷ್ಣ ಆಹಾರ ವನ್ನು ಬಳಸಬೇಕು. ದಿವಾಸ್ವಪ್ನ ಮತ್ತು ಆಲಸ್ಯವನ್ನು ತೊರೆದು ಮೈ ಬೆವರುಷ್ಟು ಬೆಳಗ್ಗೆ ವ್ಯಾಯಾಮ ಮಾಡ ತಕ್ಕದ್ದು. ಸಿಹಿ ಆಹಾರವನ್ನು ತ್ಯಜಿಸಿ ಖಾರ, ಕಹಿ ಮತ್ತು ಒಗರು ಪ್ರಧಾನವಾದ ಖಾದ್ಯ ಗಳನ್ನು ಸೇವಿಸಬೇಕು. ಕುಡಿಯಲು ತಂಪಾದ ಪಾನೀ ಯಗಳು, ಮಿಲ್ಕ ಶೇಕ್-ಲಸ್ಸಿಗಳನ್ನು ಬಿಟ್ಟು ಶುಂಠಿಜಲ ಅಥವಾ ಷಡಂಗ ಜಲ ವನ್ನು ಸೇವಿಸಬೇಕು.
ಈ ಶ್ಲೋಕ ನಿಮಗೆ ಗೊತ್ತಿರುವಂಥದ್ದೇ: “ಯಾವಂತೋ ಹಿ ಲೋಕೇ ಮೂರ್ತಿಮಂತೋ ಭಾವವಿಶೇಷಾಃ | ತಾವಂತಃ ಪುರುಷೇ, ಯಾವಂತಃ ಪುರುಷೇ ತಾವಂತೋ ಲೋಕೇ ||" -ಅಂದರೆ, ಜಗತ್ತಿನಲ್ಲಿ ಕಂಡುಬರುವ ಎ ಭಾವವಿಶೇಷಗಳು ವ್ಯಕ್ತಿಯಲ್ಲೂ , ವ್ಯಕ್ತಿಯಲ್ಲಿ ಕಂಡುಬರುವ ಎ ಅಂಶಗಳು ಜಗತ್ತಿನಲ್ಲಿಯೂ ಕಂಡುಬರುತ್ತವೆ ಎಂದರ್ಥ.
ಸ್ನೇಹಿತರೆ, ಮಾನವನು ಪ್ರಕೃತಿಯ ಪರಮಾಂಶ ಸಂಭೂತನಾಗಿರುತ್ತಾನೆ. ಕಾರಣ, ಲೋಕ ದಲ್ಲಿ ಇರುವ ಭಾವಗಳು ಹಾಗೂ ಪುರುಷನಲ್ಲಿರುವ ಅಂಶಗಳು ಸಮನಾಗಿರುವುವು. ಬಾಹ್ಯ ಜಗತ್ತಿನಲ್ಲಿ ಆಗುವ, ಪ್ರಕೃತಿಯಲ್ಲಿ ಕಾಣುವ ಏರುಪೇರುಗಳು ಮಾನವನ ಆಂತರಿಕ ವ್ಯವಸ್ಥೆ ಯಲ್ಲಿಯೂ ಕಾಣಬಹುದು! ಋತುಗಳಲ್ಲಿ ಆಗುವ ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ನೇರ ಪ್ರಭಾವವನ್ನು ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಋತುಗಳಲ್ಲಿ ಆಗುವ ವೈಪರೀತ್ಯಗಳನ್ನು ಅರ್ಥೈಸಿಕೊಂಡು ಅದಕ್ಕೆ ಅನುಸಾರವಾಗಿ ನಮ್ಮ ಆಹಾರ ವಿಹಾರ ಕ್ರಮಗಳನ್ನು ಪ್ರತಿನಿತ್ಯ ನಮ್ಮ ದಿನಚರಿಯಲ್ಲಿ ಹೊಂದಿಸಿಕೊಂಡು ಹೋಗುವುದೇ ಋತುಚರ್ಯೆ.
ಇದನ್ನೂ ಓದಿ: Dr Sadhanashree Column: ಆಂತರಿಕ ರಿಪುಗಳು ಅರಿಷದ್ವರ್ಗವಾದರೆ, ಬಾಹ್ಯರಿಪುಗಳಾರು ಬಲ್ಲಿರಾ ?
ಆರೋಗ್ಯ ಸಂರಕ್ಷಣೆಗಾಗಿ ಪ್ರತಿನಿತ್ಯ ಪಾಲಿಸಬೇಕಾದ ನಿಯಮಗಳನ್ನು ದಿನಚರ್ಯೆ ಎಂದು ಹಾಗೂ ಋತುವಿಗೆ ತಕ್ಕಂತೆ ನಮ್ಮ ದಿನಚರ್ಯೆಯಲ್ಲಿ ಮಾಡಿಕೊಳ್ಳುವ ವ್ಯತ್ಯಾಸಗಳನ್ನು ಋತುಚರ್ಯೆ ಎಂದು ಕರೆದು, ಆಯುರ್ವೇದವು ಈ ವಿಷಯಗಳನ್ನು ಬಹಳ ವಿಸ್ತಾರವಾಗಿ ವಿವರಿಸಿದೆ. ಕಾರಣ, ದಿನಚರ್ಯೆ ಮತ್ತು ಋತುಚರ್ಯೆಗಳ ಪಾಲನೆಯು ಸ್ವಾಸ್ಥ್ಯ ಸಾಧನೆ ಗಿರುವ ಏಕೈಕ ಮಾರ್ಗ! ಈ ವಿಷಯಗಳನ್ನು ತಿಳಿದುಕೊಳ್ಳದೆ ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಕಾಯ್ದಿರಿಸಿಕೊಳ್ಳುವುದು ಅಸಾಧ್ಯವೇ. ಹಾಗಾಗಿ, ಇಂದಿನ ಈ ಲೇಖನ ದಲ್ಲಿ ಋತುಚರ್ಯೆಯ ಒಂದು ಪುಟ್ಟ ಭಾಗದ ಬಗ್ಗೆ ಚರ್ಚೆ ಮಾಡೋಣ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಸಂವತ್ಸರವನ್ನು ಆರು ಋತುಗಳನ್ನಾಗಿ ವಿಂಗಡಿ ಸಬಹುದು. ಶಿಶಿರ, ವಸಂತ, ಗ್ರೀಷ್ಮ, ವರ್ಷಾ, ಶರತ್ ಮತ್ತು ಹೇಮಂತ. ಆಯುರ್ವೇ ದವು ಈ ಪ್ರತಿಯೊಂದು ಋತುವಿನಲ್ಲೂ ನಾವು ಅನುಸರಿಸಬೇಕಾದ ಆಹಾರ-ವಿಹಾರ ಗಳನ್ನು ಎಳೆ ಎಳೆಯಾಗಿ ತಿಳಿಸಿಕೊಟ್ಟಿದೆ. ಆ ವಿವರಣೆಯ ಚೌಕಟ್ಟಿನಲ್ಲಿಯೇ ಇಂದು ವಸಂತ ಋತುವಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ವಸಂತ ಋತುವು ಉತ್ತರಾಯಣ ಕಾಲದ ಒಂದು ಭಾಗ. ಆಯುರ್ವೇದದ ಪ್ರಕಾರ ಉತ್ತರಾಯಣವು ಆದಾನ ಕಾಲ- ಅಂದರೆ, ತೀವ್ರ ವಾದ ಬಿಸಿಲು ಮತ್ತು ಗಾಳಿಯ ಕಾರಣದಿಂದ ಮರ, ಗಿಡ ಮತ್ತು ಪ್ರಾಣಿಗಳಿಂದ ಸೂರ್ಯ ನು ನೀರನ್ನು ಹೀರುತ್ತಾನೆ.
ಇದರಿಂದಾಗಿ ಜೀವಿಗಳ ಶಕ್ತಿ, ಬಲ, ವೀರ್ಯಗಳು ಕ್ಷೀಣವಾಗುತ್ತವೆ. ಆದ್ದರಿಂದ, ಶಾರೀರಿಕ ಬಲಗಳು ಅತ್ಯಧಿಕವಾಗಿರುವ ಶಿಶಿರ ಋತುವಿಗೆ ಹೋಲಿಸಿದರೆ, ವಸಂತ ಋತುವಿನಲ್ಲಿ ನಮ್ಮ ಬಲವು ಸ್ವಲ್ಪ ಕಡಿಮೆಯಾಗುವುದನ್ನು ನಾವು ಗಮನಿಸಬಹುದು. ಈ ಋತುವಿನ ಸಾಮಾನ್ಯ ಲಕ್ಷಣಗಳ ಬಗ್ಗೆ ಹೇಳಬೇಕಾದರೆ, ಗಾಳಿಯ ಜತೆಗೆ ತಾಮ್ರವರ್ಣದ ಸೂರ್ಯನ ಕಿರಣಗಳ ಅನುಭವವನ್ನು ಪಡೆಯಬಹುದು.
ಗಿಡಮರಗಳಲ್ಲಿ ಹೊಸ ಚಿಗುರಿನ ಪಲ್ಲವಗಳನ್ನು ಕಂಡು ಆನಂದಿಸಬಹುದು. ಕೋಗಿಲೆಯ ಸುಮಧುರ ಶಬ್ದ ಮತ್ತು ದುಂಬಿಗಳ ಝೇಂಕಾರ ಮನಕ್ಕೆ ಮುದವನ್ನು ನೀಡುತ್ತವೆ. ಇಂಗ್ಲಿಷ್ ಕ್ಯಾಲೆಂಡರ್‌ನ ಯಾವ ತಿಂಗಳಲ್ಲಿ ವಸಂತದ ಲಕ್ಷಣಗಳು ಕಂಡುಬರುತ್ತವೆ ಎಂದು ಕೇಳಿದರೆ, ಸಾಮಾನ್ಯವಾಗಿ ಮಾರ್ಚ್ 15ರಿಂದ ಮೇ ವರೆಗೆ ವಸಂತ ಮಾಸವೆಂದು ಗುರುತಿಸಬಹುದು. ಆದರೂ, ಫೆಬ್ರವರಿ 15ರಿಂದಲೇ ನಾವು ವಸಂತ ಋತುವಿನ ಲಕ್ಷಣ ಗಳನ್ನು ವಾತಾವರಣದಲ್ಲಿ ಗಮನಿಸಬಹುದು.
ಈಗ ವಸಂತ ಋತುವಿನ ಆಗಮನದಿಂದ ಶರೀರದಲ್ಲಿ ಆಗುವ ಏರುಪೇರುಗಳ ಬಗ್ಗೆ ಸ್ವಲ್ಪ ಗಮನಹರಿಸೋಣ. ಹೇಮಂತ ಮತ್ತು ಶಿಶಿರ ಋತುಗಳಲ್ಲಿ ನಮ್ಮ ಜೀರ್ಣಶಕ್ತಿ ಹಾಗೂ ಹಸಿವೆ ಅತ್ಯುತ್ತಮವಾಗಿರುತ್ತವೆ. ಅಗ್ನಿ ಅತಿ ತೀಕ್ಷ್ಣ. ಆದ್ದರಿಂದ ಜಿಡ್ಡಿನಿಂದ ಕೂಡಿದ, ಜೀರ್ಣಕ್ಕೆ ಜಡವಾದ ಭೋಜನವನ್ನು ನಾವು ಸ್ವಲ್ಪ ಹೆಚ್ಚಾಗಿಯೇ ಈ ಚಳಿಗಾಲದಲ್ಲಿ ಸೇವಿಸಿರುತ್ತೇವೆ. ಹೀಗಾಗಿ, ಈ ತಂಪಾದ ಋತುಗಳಲ್ಲಿ ಸಹಜವಾಗಿಯೇ ದೇಹದಲ್ಲಿ ಕಫದ ಶೇಖರಣೆಯನ್ನು ನಾವು ಗಮನಿಸಬಹುದು.
ಚಳಿಗಾಲದಲ್ಲಿ ಸಂಚಿತಗೊಂಡ ಈ ಕಫವು ಬಿಸಿಲುಗಾಲ ಬರುವವರೆಗೂ ವಾತಾವರಣದ ಪ್ರಭಾವದಿಂದ ಗಟ್ಟಿಯಾಗಿದ್ದು, ಚಳಿಗಾಲ ಮುಗಿದು ವಸಂತ ಪ್ರಾರಂಭವಾದೊಡನೆಯೇ ಗಟ್ಟಿ ಕಫವು ಉಷ್ಣದ ಪ್ರಭಾವದಿಂದ ದೇಹದಲ್ಲಿ ಕರಗಲು ಪ್ರಾರಂಭವಾಗುತ್ತದೆ. ಆದ್ದ ರಿಂದ, ವಸಂತ ಋತುವಿನಲ್ಲಿ ಸಾಮಾನ್ಯವಾಗಿ ಶರೀರದಲ್ಲಿ ಕಫ ದೋಷದ ಪ್ರಕೋಪ ವನ್ನು ನೋಡಬಹುದು.
ಹೇಗೆ ನೀರು ಅಗ್ನಿಯನ್ನು ಶಮನ ಮಾಡಬಹುದೋ, ಅಂತೆಯೇ ಈ ಕರಗಿದ ಕಫವು ನೇರ ವಾಗಿ ನಮ್ಮ ಜಠರಾಗ್ನಿಯ ಮೇಲೆ ದಾಳಿ ಮಾಡಿ ಅಗ್ನಿಯ ಪ್ರಭಾವವನ್ನು ಕಡಿಮೆ ಮಾಡು ತ್ತದೆ. ಆದ್ದರಿಂದ, ಇದು ಸ್ವಾಭಾವಿಕವಾಗಿ ಹಸಿವು ಮತ್ತು ಜೀರ್ಣಶಕ್ತಿಗಳನ್ನು ಹಾಳು ಮಾಡುತ್ತದೆ.
ಕರಗುವ ಕಫದ ಪ್ರಭಾವದಿಂದ ಮತ್ತು ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಕೆಮ್ಮು, ನೆಗಡಿ, ಉಬ್ಬಸ, ಕಫ ಜ್ವರ, ಕಾಲುನೋವು, ತಲೆನೋವು, ಸಕ್ಕರೆ ಕಾಯಿಲೆ ಹೆಚ್ಚಾಗುತ್ತವೆ, ಬಾವುಗಳು ಕಾಣಿಸಿಕೊಳ್ಳುತ್ತವೆ. ಋತು ಬದಲಾವಣೆಯಿಂದ ಬರುವ ಕಾಯಿಲೆಗಳನ್ನು ನಿವಾರಿಸಲು ಹಾಗೂ ಋತುವಿನ ಉದ್ದಕ್ಕೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಪರಿಹಾರ ಉಪಾಯಗಳೇ ವಸಂತ ಋತುಚರ್ಯೆಯ ಉದ್ದೇಶ.
ನಾನು ಆಗಲೇ ಹೇಳಿದ ಹಾಗೆ ಹಿಂದಿನ ಹೇಮಂತ-ಶಿಶಿರ ಋತುಗಳಲ್ಲಿ ಅಗ್ನಿಶಾಂತಿಗಾಗಿ ಸೇವಿಸಲ್ಪಟ್ಟ ಸಿಹಿ-ಜಿಡ್ಡಿನಾಂಶಗಳಿಂದ ಕೂಡಿದ ಆಹಾರಗಳಿಂದ ಮತ್ತು ಶೀತಕಾಲದ ಸ್ವಭಾವದಿಂದ ಹೆಪ್ಪುಗಟ್ಟುವ ಕ-ವು ವಸಂತ ಋತುವಿನಲ್ಲಿ ಸೂರ್ಯ ಕಿರಣಗಳಿಂದ ಕಾದು ಕರಗಿ ಅತಿಯಾಗಿ ಪ್ರಕೋಪಗೊಳ್ಳುತ್ತದೆ. ನೀರು ಬೆಂಕಿಯನ್ನು ಶಮನ ಮಾಡುವಂತೆಯೇ ಪ್ರಕುಪಿತವಾದ ಕಫವು ಅಗ್ನಿ ಮಾಂದ್ಯವನ್ನು ಉಂಟುಮಾಡುವುದರಿಂದ ರೋಗಗಳು ಉದ್ಭವಿಸುತ್ತವೆ. ಆದಕಾರಣ, ರೋಗ ಬರುವ ಮೊದಲೇ ಕಫಹರಣವನ್ನು ಮಾಡಬೇಕು.
ಸಾಮಾನ್ಯವಾಗಿ, ಆಯುರ್ವೇದ ವೈದ್ಯರ ಸಲಹೆಯೊಂದಿಗೆ ತೀಕ್ಷ್ಣ ದ್ರವ್ಯಗಳಿಂದ ತಯಾರಿಸಿದ ಔಷಧಗಳಿಂದ ‘ವಮನ’ ಕರ್ಮವೆಂಬ ಶೋಧನವನ್ನು ಮಾಡಲಾಗುತ್ತದೆ. ಅಂದರೆ ಪ್ರಕುಪಿತ ಕ-ವನ್ನು ವಾಂತಿ ಮಾಡಿಸುವುದು. ಅಂತೆಯೇ, ಮೂಗಿನಲ್ಲಿ ಔಷಧ ದ್ರವ್ಯಗಳನ್ನು ಹಾಕಿ ಶುದ್ಧಿ ಮಾಡುವುದನ್ನು ‘ನಸ್ಯ’ವೆಂದು ಕರೆಯಲಾಗುತ್ತದೆ. ಇದರ ಜತೆಗೆ, ಔಷಧಿಯುತವಾದ ‘ಧೂಮಪಾನ’, ಔಷಧ ದ್ರವ್ಯಗಳನ್ನು ಬಾಯಲ್ಲಿ ತುಂಬಿ ಕೊಳ್ಳುವ ‘ಗಂಡೂಷ’ ಚಿಕಿತ್ಸೆ, ಚೂರ್ಣಗಳಿಂದ ಶರೀರವನ್ನು ಉಜ್ಜುವ ‘ಉದ್ವರ್ತನ’ ಚಿಕಿತ್ಸೆ, ಪಾದಗಳಿಂದ ಶರೀರವನ್ನು ತುಳಿಯುವ ‘ಪಾದಾಘಾತ’ ಚಿಕಿತ್ಸೆಗಳನ್ನು ವೈದ್ಯರ ಸಮ್ಮುಖದಲ್ಲಿ ವಸಂತ ಋತುವಿನ ಪರಿಹಾರಕ್ಕಾಗಿ ಮಾಡಿಸಿಕೊಳ್ಳಬಹುದು.
ವಸಂತ ಋತುವಿನಲ್ಲಿ ಖಾರ, ಕಹಿ ಮತ್ತು ಒಗರು ರಸಗಳು ಹೆಚ್ಚಾಗಿರುವ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ಕಫ ಶಮನವಾಗಲು ಸಹಾಯಕಾರಿಯಾಗುತ್ತದೆ. ಅಂತೆಯೇ, ಸದಾ ಉಷ್ಣವಾಗಿರುವ ಆಹಾರವನ್ನೇ ಸೇವಿಸತಕ್ಕದ್ದು. ಸಿಹಿ ಪದಾರ್ಥಗಳು, ಜಿಡ್ಡಿನಿಂದ ಕೂಡಿದ ಪದಾರ್ಥಗಳು ಮತ್ತು ಪಚನಕ್ಕೆ ಜಡವಾದ ಪದಾರ್ಥಗಳನ್ನು ವರ್ಜಿಸಬೇಕು. ಉದಾ ಹರಣೆಗೆ- ಮಿಲ್ಕ್ ಶೇಕ್, ಚಿಪ್ಸ್, ಪಿಜ್ಜಾ, ಐಸ್ ಕ್ರೀಮ್ ಇತ್ಯಾದಿ. ಅತಿಯಾದ ದ್ರವದ ಸೇವನೆ ಯೂ ವಸಂತ ಋತುವಿನಲ್ಲಿ ಪ್ರಶಸ್ತವಲ್ಲ. ಸ್ವಾಭಾವಿಕವಾಗಿ ಒಣಗಿಸುವ ಗುಣವಿರುವ ಪದಾರ್ಥಗಳನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಕಫವನ್ನು ಕಡಿಮೆ ಮಾಡುವುದರಲ್ಲಿ ಲಾಭಕಾರಿ.
ಉದಾಹರಣೆಗೆ, ಕನಿಷ್ಠಪಕ್ಷ ಒಂದು ವರ್ಷ ಹಳೆಯದಾದ ಧಾನ್ಯಗಳು, ಬಾರ್ಲಿ, ಗೋಧಿ, ಕೆಂಪಕ್ಕಿ, ರಾಗಿ, ಜೋಳ, ಹೆಸರುಕಾಳು, ಜವೆ ಗೋಧಿ ಇತ್ಯಾದಿ. ಸಿರಿಧಾನ್ಯಗಳನ್ನು ಸಹ ಹೇರಳವಾಗಿ ಬಳಸಬಹುದು. ಜೀರ್ಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವ ಗುರು ಆಹಾರ ವನ್ನು ಸಂಪೂರ್ಣವಾಗಿ ವರ್ಜಿಸಬೇಕು. ಉದಾಹರಣೆಗೆ- ಉದ್ದಿನ ಪದಾರ್ಥಗಳು, ಮೈದಾ, ಪನೀರ್, ಚೀಸ್, ಅತಿಯಾದ ಮಾಂಸದ ಸೇವನೆ, ಮಿಲ್ಕ ಶೇಕ್, ಐಸ್ ಕ್ರೀಮ್ ಇತ್ಯಾದಿ.
ತರಕಾರಿಗಳಲ್ಲಿ ಪಡವಲಕಾಯಿ, ಬೇವು, ಎಳೆ ಬದನೆ ಕಾಯಿ, ಮೆಂತ್ಯ ಸೊಪ್ಪು, ಹಾಗಲ ಕಾಯಿ, ಎಳೆ ಮೂಲಂಗಿ, ನುಗ್ಗೆಸೊಪ್ಪು, ಮುಳ್ಳು ಹರಿವೆ. ಮಾಂಸ ಸೇವನೆ ಮಾಡುವವರು ಜಾಂಗಲ/ಬಯಲು ಪ್ರದೇಶದ ಪಶು-ಪಕ್ಷಿಗಳ ಮಾಂಸ, ಮೊಲ, ಕಪ್ಪು ಜಿಂಕೆ, ಕೋಳಿ ಮಾಂಸಗಳನ್ನು ಸೇವಿಸಬಹುದು. ಈ ಋತುವಿನಲ್ಲಿ ಆಹಾರವಾಗಿ ಕೆಂಡದ ಮೇಲೆ ಕಾಯಿ ಸಿದ ರೊಟ್ಟಿ ಚಪಾತಿ, ಅನ್ನ, ಮೆಣಸಿನ ಸಾರು, ಹುರುಳಿಕಟ್ಟು ಸಾರು, ಮೆಂತ್ಯದ ತಂಬುಳಿ ಇತ್ಯಾದಿ ಜಿಡ್ಡಿನ ಅಂಶ ಇಲ್ಲದ, ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರವನ್ನು ಸೇವಿಸಬೇಕು.
ಈ ಋತುವಿನಲ್ಲಿ ಜೇನಿನಿಂದ ತಯಾರಿಸಿದ ಪಾನೀಯಗಳನ್ನು ಅಥವಾ ಶುಂಠಿ/ಭದ್ರ ಮುಷ್ಟಿ ಜಲ, ಜೇನು ಬೆರೆಸಿದ ನೀರುಗಳನ್ನು ಸೇವಿಸಬಹುದು. ಜೇನುತುಪ್ಪದ ವಿಶೇಷ ಪ್ರಯೋಗವನ್ನು ಈ ಋತುವಿನಲ್ಲಿ ಮಾಡಬಹುದು. ಕಾದಾರಿದ ನೀರಿಗೆ ಸ್ವಲ್ಪ ಜೇನನ್ನು ಬೆರೆಸಿ ಕುಡಿಯುವುದು ಅಥವಾ ಉಷ್ಣವಿಲ್ಲದ ಆಹಾರದೊಟ್ಟಿಗೆ ಜೇನುತುಪ್ಪವನ್ನು ಸೇವಿಸುವುದು ಹಿತಕರ.
ಉಪವಾಸವನ್ನು ಮಾಡಲು ಇಚ್ಛಿಸುವವರಿಗೆ ವಸಂತ ಋತುವು ಸೂಕ್ತವಾದ ಸಮಯ. ಆದರೆ ನೆನಪಿಡಿ- ಇಂಧನ ಅತಿಯಾದರೂ ಅಥವಾ ಇಲ್ಲದಿದ್ದರೂ ಅಗ್ನಿ ಮಂದವಾಗು ವಂತೆ ಅತಿ ಆಹಾರ ಸೇವನೆಯಿಂದಲೂ ಹಾಗೆಯೇ ಉಪವಾಸದಿಂದಲೂ ಜಠರಾಗ್ನಿ ಮಂದವಾಗುತ್ತದೆ. ಹಾಗಾಗಿ ಕ್ರಮರಹಿತ ಉಪವಾಸವೂ ತೊಂದರೆತರಬಹುದು, ಎಚ್ಚರಿಕೆ ಇನ್ನು ವಸಂತ ಋತುವಿನ ವಿಹಾರಗಳ ಬಗ್ಗೆ ವಿಶೇಷವಾಗಿ ಹೇಳಲು ಇಚ್ಛಿಸುತ್ತೇನೆ.
ವಸಂತ ಋತುವಿನಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಏಳತಕ್ಕದ್ದು. ಅಥವಾ ಕನಿಷ್ಠ ಪಕ್ಷ ಸೂರ್ಯೋದಯ ಆಗುವ ಮುನ್ನ ಹಾಸಿಗೆಯಿಂದ ಮೇಲೇಳುವುದು ಸದಾ ಆರೋಗ್ಯಕರ. ವಸಂತದಲ್ಲಿ ದೈಹಿಕ ಬಲವು ಚೆನ್ನಾಗಿರುವುದರಿಂದ ಮಧ್ಯಮ ಬಲ ವ್ಯಾಯಾಮವನ್ನು ಮಾಡಲೇಬೇಕು. ಇದರಿಂದ ಕಫದ ಪ್ರಕೋಪದಿಂದ ಆಗುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು.
ಪ್ರತಿನಿತ್ಯ ಅಭ್ಯಂಜನವನ್ನು ಮಾಡಿ ಸ್ನಾನ ಮಾಡುವುದು ಸೂಕ್ತ. ಅಂತೆಯೇ, ಬೇರೆ ಬೇರೆ ರೀತಿಯ ಚೂರ್ಣಗಳನ್ನು ಮೈಯಿಗೆ ತಿಕ್ಕಿ ಸ್ನಾನ ಮಾಡುವುದು ಸಹ ಕ-ವನ್ನು ನಿವಾರಿಸಿ ಬಲವನ್ನು ನೀಡುತ್ತದೆ.
ಇನ್ನು ನಿದ್ರೆಯ ವಿಷಯಕ್ಕೆ ಬರುವುದಾದರೆ ಹಗಲು ನಿದ್ರೆ ವಸಂತ ಋತುವಿನಲ್ಲಿ ಸುತರಾಂ ವರ್ಜ್ಯ. ಕಾರಣ, ಇದು ಕಫ ಪ್ರಧಾನವಾದ ತ್ರಿದೋಷಗಳನ್ನು ದೇಹದಲ್ಲಿ ಪ್ರಕುಪಿತಗೊಳಿಸಿ ಅನೇಕ ರೀತಿಯ ತೊಂದರೆಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗಾಗಿ, ರಾತ್ರಿ ಬೇಗ ಮಲಗಿ ಸೂರ್ಯೋದಯದ ಮುನ್ನ ಏಳುವಂಥ ನಿದ್ರೆಯ ಅಭ್ಯಾಸವನ್ನು ಮಾಡಿಕೊಳ್ಳತಕ್ಕದ್ದು. ಆದರೆ, ಬಿಸಿಲು ಹೆಚ್ಚಿರುವ ಕಾರಣ ಬಹಳ ಬೇಗ ಶರೀರ ದಣಿಯುವ ಸಾಧ್ಯತೆಗಳಿರುವ ಇಂಥ ಸಮಯದಲ್ಲಿ ಸಕ್ರಮವಾಗಿ ಹಗಲು ನಿದ್ರೆಯನ್ನು ಮಾಡಬಹುದು.
ಬೆಳಗ್ಗೆ ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾದ ನಂತರ ಹೊಟ್ಟೆ ಖಾಲಿ ಎನಿಸಿ ದಾಗ, ಮಧ್ಯಾಹ್ನ ಊಟ ಸೇವಿಸುವ ಮುನ್ನ ಸ್ವಲ್ಪ ಸಮಯ ಆರಾಮ ಕುರ್ಚಿಯ ಮೇಲೆ ಕುಳಿತು ವಿಶ್ರಾಂತಿ ಪಡೆಯಬಹುದು. ಆದರೆ ಊಟ ಮಾಡಿದ ಮೇಲೆ ಹಾಸಿಗೆಯ ಮೇಲೆ ಮಲಗಿ ಗಡzದ ನಿದ್ರೆ ಮಾಡುವುದು ಯಾವತ್ತಿದ್ದರೂ ತೊಂದರೆಯನ್ನು ತರುವು ದರಲ್ಲಿ ಸಂಶಯವಿಲ್ಲ.
ಇನ್ನು ಮೂರರಿಂದ ಐದು ದಿನಗಳಿಗೊಮ್ಮೆ ವಸಂತ ಋತುವಿನಲ್ಲಿ ರಾತ್ರಿಸಮಯದಲ್ಲಿ ಮೈಥುನದಲ್ಲಿ ತೊಡಗಬಹುದು. ಮೈಥುನವಾದ ಮೇಲೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಸ್ವಲ್ಪ ಹಾಲು ಸಕ್ಕರೆಯನ್ನು ಸೇವಿಸಿ ಮಲಗುವುದು ಸದಾ ಒಳ್ಳೆಯ ಅಭ್ಯಾಸ. ಒಟ್ಟಾರೆ ಹೇಳಬೇಕಾದರೆ, ವಸಂತ ಋತುವಿನಲ್ಲಿ ಆರೋಗ್ಯಕರವಾಗಿರಲು ಇಚ್ಛಿಸುವವರು ಜಿಡ್ಡಿನಿಂದ ಕೂಡಿದ, ಜೀರ್ಣಕ್ಕೆ ಜಡವಾದ ಆಹಾರವನ್ನು ತ್ಯಜಿಸಿ ರೂಕ್ಷಪ್ರಧಾನವಾದ ಲಘು ಆಹಾರವನ್ನು ಸೇವಿಸತಕ್ಕದ್ದು.
ಶೀತಲ ಆಹಾರವನ್ನು ಬಿಟ್ಟು ಸದಾ ಉಷ್ಣ ಆಹಾರವನ್ನು ಬಳಸಬೇಕು. ದಿವಾಸ್ವಪ್ನ ಮತ್ತು ಆಲಸ್ಯವನ್ನು ತೊರೆದು ಮೈ ಬೆವರುಷ್ಟು ಬೆಳಗ್ಗೆ ವ್ಯಾಯಾಮ ಮಾಡತಕ್ಕದ್ದು. ಸಿಹಿ ಆಹಾರವನ್ನು ತ್ಯಜಿಸಿ ಖಾರ, ಕಹಿ ಮತ್ತು ಒಗರು ಪ್ರಧಾನವಾದ ಖಾದ್ಯಗಳನ್ನು ಸೇವಿಸ ಬೇಕು. ಕುಡಿಯಲು ತಂಪಾದ ಪಾನೀಯಗಳು, ಮಿಲ್ಕ ಶೇಕ್-ಲಸ್ಸಿಗಳನ್ನು ಬಿಟ್ಟು ಶುಂಠಿ ಜಲ ಅಥವಾ ಷಡಂಗ ಜಲವನ್ನು ಸೇವಿಸಬೇಕು.
ದೇಹದಲ್ಲಿ ಪ್ರಕುಪಿತಗೊಂಡಿರುವ ಕಫವನ್ನು ಹೊರಗೆ ಹಾಕಲು ಆಗುವಂತೆ ಮಾಡುವ ಆಹಾರ ವಿಹಾರಗಳಲ್ಲಿ ತೊಡಗಿ ಸ್ವಾಭಾವಿಕವಾಗಿ ಈ ಋತುವಿನಲ್ಲಿ ಹೆಚ್ಚಾಗುವ ಕಫ ವನ್ನು ಶರೀರದಲ್ಲಿ ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಇದು ನಿಜವಾದ ‘ಹೆಲ್ತ ಕೇರ್’ ಆಗುತ್ತದೆ. ಈ ಋತುವಿನಲ್ಲಿ ಸದಾ ಪಾಲಿಸಬೇಕಾದ ಮಂತ್ರವೆಂದರೆ- ‘ಹಿತಂ ಜೀರ್ಣೇ ಮಿತಂ ಚಾಶ್ನಂಶ್ಚಿರಮಾರೋಗ್ಯಮಶ್ನುತೇ’ ಅಂದರೆ, ಹಸಿವೆಯಾದಾಗ ಮಾತ್ರ ಹಿತ-ಮಿತ ಆಹಾರವನ್ನು ಸೇವಿಸುವುದರಿಂದ ಸದಾ ಆರೋಗ್ಯವಿರುತ್ತದೆ.